ಚೆನ್ನೈ: ಮಣಿರತ್ನಂ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ತಮ್ಮ ಮಹತ್ವಾಕಾಂಕ್ಷೆಯ ‘ಪೊನ್ನಿಯನ್ ಸೆಲ್ವನ್’ ಚಿತ್ರದ ಮೊದಲ ಭಾಗವನ್ನು ಈ ವರ್ಷ ಮತ್ತು ಕೊನೆಯ ಭಾಗವನ್ನು ಮುಂದಿನ ವರ್ಷ ಬಿಡುಗಡೆ ಮಾಡುವುದಾಗಿ ಅವರು ಹೇಳಿದ್ದರು. ಅದರಂತೆ ಮೊದಲ ಭಾಗ ಈ ವರ್ಷ ಸೆ. 30ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಈಗ ಎರಡನೆಯ ಭಾಗದ ಬಿಡುಗಡೆ ದಿನಾಂಕ ಸಹ ಹೊರಬಿದ್ದಿದೆ.
ಇದನ್ನೂ ಓದಿ: ‘ನಾಗಕನ್ಯೆ ಶ್ರೀವಾಸವಿ’ಯಾದ ನಿಮಿಕಾ ರತ್ನಾಕರ್; ಕಿರುಚಿತ್ರದಲ್ಲಿ ನಟನೆ …
ಸಾಮಾನ್ಯವಾಗಿ ಇದುವರೆಗೂ ಮೊದಲ ಭಾಗ ಬಿಡುಗಡೆ ಮಾಡಿ, ಆ ನಂತರ ಎರಡನೆಯ ಭಾಗದ ಚಿತ್ರೀಕರಣ ಮಾಡಿ ಅದನ್ನು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ, ಮಣಿರತ್ನಂ ಮೊದಲೇ ‘ಪೊನ್ನಿಯನ್ ಸೆಲ್ವನ್’ ಚಿತ್ರವನ್ನು ಎರಡು ಭಾಗಗಳಲ್ಲಿ ಮಾಡಬೇಕು ಎಂದು ತೀರ್ಮಾನಿಸಿ, ಅದರಂತೆ ಚಿತ್ರೀಕರಣ ಮಾಡಿ, ಮೊದಲ ಭಾಗವನ್ನು ಬಿಡುಗಡೆ ಮಾಡಿದ್ದರು. ಮೊದಲ ಭಾಗ ಬಿಡುಗಡೆಯಾಗಿ ಆರು ತಿಂಗಳ ನಂತರ ಎರಡನೆಯ ಭಾಗ ಬಿಡುಗಡೆ ಮಾಡುವುದಾಗಿಯೂ ಘೋಷಿಸಿದ್ದರು. ಅದರಂತೆ, ‘ಪೊನ್ನಿಯನ್ ಸೆಲ್ವನ್ 1’ ಹೊರಬಂದು ಆರು ತಿಂಗಳ ನಂತರ, ಅಂದರೆ ಏ. 28ಕ್ಕೆ ಚಿತ್ರದ ಎರಡನೆಯ ಭಾಗ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಈ ಕುರಿತು ಚಿತ್ರ ನಿರ್ಮಿಸುತ್ತಿರುವ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯು ಘೋಷಿಸಿದ್ದು, ಏ. 28ರಂದು ಜಗತ್ತಿನಾದ್ಯಂತೆ ‘ಪೊನ್ನಿಯನ್ ಸೆಲ್ವನ್ 2’ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.
ಇದನ್ನೂ ಓದಿ: ಜುಲಾನ್ ಗೋಸ್ವಾಮಿ ಬಯೋಪಿಕ್ ಮುಗಿಸಿದ ಅನುಷ್ಕಾ …
ಈ ಚಿತ್ರದಲ್ಲಿ ವಿಕ್ರಮ್, ಐಶ್ವರ್ಯಾ ರೈ, ಕಾರ್ತಿ, ತ್ರಿಷಾ, ಜಯಂ ರವಿ, ಪ್ರಕಾಶ್ ರೈ, ಶರತ್ ಕುಮಾರ್ ಮುಂತಾದವರು ನಟಿಸಿದ್ದಾರೆ. ಇದೊಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ.