More

    ಎತ್ತಿನಗಾಡಿಗಳಲ್ಲಿ ತಾಲೂಕಿನಾದ್ಯಂತ ಸಂಚರಿಸಿ ಚುನಾವಣಾ ಕರಪತ್ರ ಹಂಚುತ್ತಿದ್ದೆವು!

    ಐದಾರು ದಶಕಗಳ ಹಿಂದೆ ಚುನಾವಣಾ ಪ್ರಚಾರ ಹೇಗಿರುತಿತ್ತು ಎಂಬುದು ಈಗಿನವರಿಗೆ ಖಂಡಿತವಾಗಿಯೂ ಕುತೂಹಲದ ಸಂಗತಿ. ಈ ಹಿನ್ನೆಲೆಯಲ್ಲಿ ‘ವಿಜಯವಾಣಿ’ ಆ ಕಾಲದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಮೈಸೂರಿನ ವಿಧಾನ ಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ ಅವರನ್ನು ಮಾತನಾಡಿಸಿದಾಗ ಅವರು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದು ಹೀಗೆ.

    ‘‘ನಮ್ಮ ತಂದೆ ದೊಡ್ಡತಮ್ಮಯ್ಯ ಅವರನ್ನು ಕುಂಬಾರಕೊಪ್ಪಲು ಗ್ರಾಮಸ್ಥರು ಒಮ್ಮತದಿಂದ ಐವತ್ತರ ದಶಕದಲ್ಲಿ ಅಂದಿನ ಮೈಸೂರು ಪುರಸಭೆ ಚುನಾವಣೆಗೆ ನಿಲ್ಲಿಸಿದ್ದರಿಂದ ಅದೇ ನನ್ನ ಮೊದಲ ಚುನಾವಣಾ ಪ್ರಚಾರ. ಎಲ್ಲರೂ ತಮ್ಮ ಮನೆಗಳಲ್ಲಿಯೇ ಊಟ ಮಾಡಿಕೊಂಡು ಬಂದು, ಕರಪತ್ರ ಪಡೆದು ಕಾಲ್ನಡಿಗೆಯಲ್ಲಿಯೇ ಮನೆ ಮನೆಗೆ ಹಂಚಲು ಹೋಗುತ್ತಿದ್ದರು. 200 ರೂ. ಠೇವಣಿ ಕೂಡ ಗ್ರಾಮಸ್ಥರೇ ಸಂಗ್ರಹಿಸಿ ಕಟ್ಟಿದ್ದರು. ಹಾಗಾಗಿ ಅಭ್ಯರ್ಥಿ ಹಣ ಖರ್ಚು ಮಾಡುವ ಪ್ರಮೇಯವೇ ಇರಲಿಲ್ಲ. ಬಳಿಕ ಕೆ.ಪುಟ್ಟಸ್ವಾಮಿ ಅವರು ಮೈಸೂರು ತಾಲೂಕು ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿದಾಗ ಬಸ್, ಕಾರು, ಬೈಕ್ ಇಲ್ಲದಿದ್ದರಿಂದ ಎತ್ತಿನಗಾಡಿಗಳಲ್ಲಿ ತಾಲೂಕಿನಾದ್ಯಂತ ಸಂಚರಿಸಿ ಕರಪತ್ರಗಳನ್ನು ಹಂಚುತ್ತಿದ್ದೆವು. ಈಗಿನಂತೆ ಬಹಿರಂಗ ಸಭೆ, ಅಭ್ಯರ್ಥಿಗಳು ಮನೆಗಳಿಗೆ ಹೋಗುವುದು ಇರಲಿಲ್ಲ. ಅಭ್ಯರ್ಥಿಯಾಗಿದ್ದವರು ಗ್ರಾಮದ ಮುಖ್ಯಸ್ಥರ ಮನೆಗಳಿಗೆ ಮಾತ್ರ ತೆರಳಿ ಬೆಂಬಲ ನೀಡುವಂತೆ ಕೋರುತ್ತಿದ್ದರು. ಪುಟ್ಟಸ್ವಾಮಿ ಅವರಿಗೂ ಕ್ಷೇತ್ರದ ಜನರೇ ಚಂದಾ ಎತ್ತಿ ಚುನಾವಣೆ ವೆಚ್ಚಕ್ಕೆ ಹಣ ನೀಡಿದ್ದರು.’’

    ‘‘ಚುನಾವಣೆ ಖರ್ಚು ಎಲ್ಲ ಮುಗಿದರೂ ಇನ್ನೂ ಹಣ ಉಳಿದಿದ್ದನ್ನು ನಾನು ಖುದ್ದು ಕಂಡಿದ್ದೇನೆ. ಹಿಂದೆ ಜನರು ಹಣದ ನಿರೀಕ್ಷೆ ಇಲ್ಲದೆ, ಸ್ವಯಂ ಪ್ರೇರಿತವಾಗಿ ಬಂದು ಮತದಾನ ಮಾಡುತ್ತಿದ್ದರು. ಕರಪತ್ರ ಹಂಚುವವರಿಗೆ ಊಟ, ತಿಂಡಿ ಬಿಟ್ಟರೆ ಇನ್ನೇನನ್ನೂ ನೀಡುತ್ತಿರಲಿಲ್ಲ. ಹಾಗಾಗಿ ಅಭ್ಯರ್ಥಿಗಳಿಗೆ ಖರ್ಚು ಎನ್ನುವುದೇ ಇರುತ್ತಿರಲಿಲ್ಲ. 1983ರಲ್ಲಿ ಚಾಮರಾಜ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಹೆಚ್ಚಿನ ಹಣ ನೀಡಲಾಗಿತ್ತೇ ವಿನಹ ಮತದಾರರಿಗೆ ಹಣ ಹಂಚಿಕೆ ಮಾಡಿರಲಿಲ್ಲ. ಕಾಲ್ನಡಿಗೆ, ಸೈಕಲ್, ಕೆಲವೊಬ್ಬರು ಬೈಕ್, ಸ್ಕೂಟರ್‌ನಲ್ಲಿ ಪ್ರಚಾರ ಮಾಡುತ್ತಿದ್ದರು. ಮತದಾರರು ಕೂಡ ಯಾವುದೇ ಅಪೇಕ್ಷೆ ಇಲ್ಲದೆ ಮತ ಚಲಾಯಿಸುತ್ತಿದ್ದರು. ಆದರೆ ಈಗ ಹಣ ನೀರಿನಂತೆ ಖರ್ಚು ಮಾಡಲಾಗುತ್ತಿದ್ದು ಜನರು, ಕಾರ್ಯಕರ್ತರು ಸೇರಿದಂತೆ ಎಲ್ಲದಕ್ಕೂ ಹಣ ನೀಡಬೇಕು. ಹಿಂದಿನ ಚುನಾವಣೆಗಳನ್ನು ಕಂಡವರಿಗೆ ಈಗಿನ ಚುನಾವಣೆ ನೆನೆಸಿಕೊಂಡರೆನೇ ಭಯವಾಗುತ್ತದೆ.’’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts