More

    ಸಂಸದೆಗಾಗಿ ಅಶೋಕ್ ರಾಜಕೀಯ ಬಲಿ?: ಮಂಡ್ಯದಿಂದ ಸ್ಪರ್ಧಿಸಲು ಸಿದ್ಧವಂತೆ ಸುಮಲತಾ

    ಮಂಡ್ಯ: ಅವಕಾಶವಾದಿ ರಾಜಕಾರಣ ಮಾಡಿಕೊಂಡೇ ಬರುತ್ತಿರುವ ಸಂಸದೆ ಸುಮಲತಾ ಇದೀಗ ‘ಜಿಲ್ಲೆಯ ಅಸ್ಮಿತೆ’ ಹೆಸರಿನಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಇದರ ಬಗ್ಗೆ ಅವರ ಆಪ್ತ ಬಳಗ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ಮಾಜಿ ಸಚಿವ ಎಸ್.ಡಿ.ಜಯರಾಂ ಅವರ ಮಗ ಅಶೋಕ್ ಜಯರಾಂ ರಾಜಕೀಯ ಜೀವನವನ್ನು ಬಲಿಕೊಡಲು ಸಜ್ಜಾಗಿದ್ದಾರೆನ್ನುವ ಚರ್ಚೆ ನಡೆಯುತ್ತಿದೆ.
    ಕೆಲ ತಿಂಗಳ ಹಿಂದೆ ರಾಜ್ಯ ರಾಜಕೀಯ ಪ್ರವೇಶದ ಬಗ್ಗೆ ಸಂಸದೆ ಸ್ಪಷ್ಟತೆ ನೀಡಿರಲಿಲ್ಲ. ಆದರೆ ಬದಲಾದ ರಾಜಕೀಯ ಬೆಳವಣಿಗೆಯಿಂದಾಗಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡುತ್ತಾರೆನ್ನುವ ಹಿನ್ನೆಲೆಯಲ್ಲಿ ಸಂಸದೆ ಕೂಡ ಚುನಾವಣಾ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರಂತೆ. ಅದಕ್ಕೆ ಪೂರಕವಾಗಿ ಅಶೋಕನಗರ ಬ್ಯಾಂಕ್ ಆ್ ಬರೋಡಾದಲ್ಲಿ ಖಾತೆ ತೆರೆದಿದ್ದಾರೆ. ಮಾತ್ರವಲ್ಲದೆ ಬಿಜೆಪಿ ಹೈಕಮಾಂಡ್ ಕೂಡ ಸಕಾರಾತ್ಮಕವಾಗಿ ಸ್ಪಂದನೆ ನೀಡಿದೆ. ಸಂಸದೆಯೂ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಂದು ಆಪ್ತಬಳಗ ಹೇಳಿಕೊಳ್ಳುತ್ತಿದೆ. ಈ ಎಲ್ಲದರ ನಡುವೆ ಅಶೋಕ್ ಜಯರಾಂ ರಾಜಕೀಯ ಭವಿಷ್ಯದ ಕಥೆ ಏನೆಂಬ ಪ್ರಶ್ನೆ ಬೆಂಬಲಿಗರಲ್ಲಿ ಉದ್ಭವಿಸಿದೆ.
    ಪಕ್ಷ ಸಂಘಟಿಸಿರುವ ಅಶೋಕ್: ಜೆಡಿಎಸ್‌ನಿಂದ ಹೊರಬಂದ ನಂತರ ಬಿಜೆಪಿ ಸೇರಿದ ಅಶೋಕ್ ಜಯರಾಂ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಜತೆಗೆ ಅವರ ತಂದೆಯ ಸಮಾಜಮುಖಿ ಕೆಲಸಗಳು ಜನರ ಮನಸ್ಸಿನಲ್ಲಿ ಇಂದಿಗೂ ಉಳಿದುಕೊಂಡಿವೆ. ಈ ಹಿನ್ನೆಲೆಯಲ್ಲಿ ಪೈಪೋಟಿಯ ನಡುವೆ ಬಿಜೆಪಿ ಹೈಕಮಾಂಡ್ ಅಶೋಕ್ ಅವರಿಗೆ ಅವಕಾಶ ನೀಡಿದೆ. ಅಂತೆಯೇ ಅವರು ಕೂಡ ಕ್ಷೇತ್ರದಲ್ಲಿ ಸಂಚಾರ ನಡೆಸುತ್ತಾ ಮತಯಾಚನೆ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಎರಡು ಬಾರಿ ನಾಮಪತ್ರವನ್ನು ಸಲ್ಲಿಕೆ ಮಾಡಿದ್ದಾರೆ. ಹೀಗಿರುವಾಗ ಸಂಸದೆ ಬೆಂಬಲಿಗರಿಂದ ಕೇಳಿಬರುತ್ತಿವ ಮಾತು ಅಶೋಕ್ ಜಯರಾಂ ಕುಟುಂಬದ ಆಪ್ತರಲ್ಲಿ ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಗೊಂದಲ ಸೃಷ್ಟಿಸಿದೆ.
    ಸ್ಪರ್ಧೆ ತಪ್ಪಿಸಿದರೆ ಮೋಸವಲ್ಲವೇ?: ಮಂಡ್ಯದಿಂದ ಸ್ಪರ್ಧೆ ಮಾಡುವುದಿಲ್ಲವೆಂದು ಎಚ್‌ಡಿಕೆ ಈಗಾಗಲೇ ೋಷಣೆ ಮಾಡಿದ್ದಾರೆ. ಆದಾಗ್ಯೂ ಮಂಗಳವಾರದ ಬೆಳವಣಿಗೆ ಎಂಬಂತೆ ಸಂಸದೆ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದಿರುವುದು ಹಾಗೂ ಸ್ಪರ್ಧೆ ವಿಚಾರದ ಬಗ್ಗೆ ಬೆಂಬಲಿಗ ಸೋಮಶೇಖರ್ ನೀಡಿರುವ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಲಾರಂಭಿಸಿದೆ.
    ವಿಡಿಯೋದಲ್ಲಿ ಹೇಳಿರುವಂತೆ ಸಂಸದೆ ಈಗಾಗಲೇ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಫಿಡವಿಟ್ ಸೇರಿದಂತೆ ಅಗತ್ಯ ಕ್ರಮದ ಬಗ್ಗೆ ಗಮನಹರಿಸಲಾಗುತ್ತಿದೆ. ಅಶೋಕ್ ಜಯರಾಂ ಅವರಿಗೆ ಜೆಡಿಎಸ್‌ನಿಂದ ಅನ್ಯಾಯವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಗೆ ಕರೆತಂದು ಸ್ಪರ್ಧೆಗೆ ಅವಕಾಶ ಕೊಟ್ಟು ಅದನ್ನು ಸರಿಪಡಿಸುವ ಕೆಲಸ ಮಾಡಲಾಗುತ್ತಿದೆ. ಆದರೂ ಮಂಡ್ಯದ ಅಸ್ಮಿತೆಗಾಗಿ ಎಚ್‌ಡಿಕೆ ವಿರುದ್ಧ ಸಂಸದೆ ಸ್ಪರ್ಧೆ ಮಾಡುವುದು ಖಚಿತ. ಬಿಜೆಪಿ ಹೈಕಮಾಂಡ್ ಕೂಡ ಒಪ್ಪಿಗೆ ನೀಡಿದೆ ಎಂದಿದ್ದಾರೆ.
    ಈ ಹೇಳಿಕೆ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಅಸ್ಮಿತೆ ಹೆಸರಿನಲ್ಲಿ ಸಂಸದೆ ಸ್ಪರ್ಧೆ ಮಾಡಿದರೆ ಅಶೋಕ್ ಜಯರಾಂ ಏನು ಮಾಡಬೇಕು. ಜೆಡಿಎಸ್ ಅವಕಾಶ ಕೊಡದೇ ವಂಚಿಸಿದ್ದಾರೆಂದು ಟೀಕಿಸುತ್ತಿರುವ ಸಂಸದೆ ಬೆಂಬಲಿಗರು, ಇದೀಗ ಬಿಜೆಪಿಯಿಂದಲೂ ಸ್ಪರ್ಧೆಗಿಳಿಯದಂತೆ ಮಾಡಿದರೆ ಮೋಸವಲ್ಲವೇ?. ಹಾಗಿದ್ದರೆ ಅಶೋಕ್ ಸಮರ್ಥ ಅಭ್ಯರ್ಥಿಯಲ್ಲವೇ ಎನ್ನುವ ಪ್ರಶ್ನೆ ಉದ್ಭವಿಸಿದೆ. ಮಾತ್ರವಲ್ಲದೆ ಚುನಾವಣೆಯ ಹೊಸ್ತಿಲಿನಲ್ಲಿ ಸಂಸದೆ ಬೆಂಬಲಿಗರು ಹುಟ್ಟುಹಾಕುತ್ತಿರುವ ಚರ್ಚೆ ಬಿಜೆಪಿ ಕಾರ್ಯಕರ್ತರಿಗೆ ಇರಿಸುಮುರಿಸು ತರಿಸುವಂತಾಗಿದೆ.
    ಹಿಂದೆ ನಡೆದಿತ್ತು ಸಭೆ: ಚುನಾವಣೆಗೆ ಕೆಲ ದಿನ ಬಾಕಿ ಇರುವಂತೆ ಸಂಸದೆ ಸ್ಪರ್ಧೆ ಮಾಡುವ ವಿಚಾರದ ಬಗ್ಗೆ ಚರ್ಚಿಸಲು ಆಪ್ತ ಬಳಗ ನಗರದಲ್ಲಿ ಸಭೆಯೊಂದನ್ನು ಆಯೋಜಿಸಿತ್ತು. ಕಾಂಗ್ರೆಸ್ ಹಾಗೂ ಬಿಜೆಪಿಯ ಕೆಲ ಮುಖಂಡರು ಭಾಗವಹಿಸಿದ್ದರು. ಆದರೆ ಅಂದು ಭಾಗವಹಿಸಿದ್ದ ಕೆಲವರಿಗೆ ಅಲ್ಲಿ ಏನು ಚರ್ಚೆ ನಡೆಯುತ್ತಿದೆ ಎಂಬುದೇ ತಿಳಿದಿರಲಿಲ್ಲ ಎನ್ನುವುದು ಹೊರಗೆ ತಿಳಿಯದ ವಿಷಯವೇನಲ್ಲ.
    ಅಂದು ಕೆಲ ಕಾಂಗ್ರೆಸ್ ಮುಖಂಡರು ಸಂಸದೆ ಪರ ಬ್ಯಾಟಿಂಗ್ ಮಾಡಿದ್ದರು. ಅದರ ಹಿಂದೆ ಅವರು ತಮ್ಮ ಪಕ್ಷ ಸೇರುತ್ತಾರೆನ್ನುವುದಿತ್ತು. ಈ ಎಲ್ಲವನ್ನು ತಲೆಕೆಳಗೆ ಮಾಡಿದ್ದ ಸುಮಲತಾ ಬಿಜೆಪಿಗೆ ಬೆಂಬಲ ೋಷಣೆ ಮಾಡಿದ್ದರು. ಮಾತ್ರವಲ್ಲದೆ ಮಂಡ್ಯ, ಮದ್ದೂರು ಅಥವಾ ಮೇಲುಕೋಟೆಯಿಂದ ಸ್ಪರ್ಧೆ ಮಾಡುವಂತೆ ಸಲಹೆ ಕೇಳಿಬಂದಿತ್ತು. ಬಳಿಕದ ದಿನದಲ್ಲಿ ಯಾವುದೇ ಬೆಳವಣಿಗೆಯಾಗಿರಲಿಲ್ಲ. ಆದರೆ ಇದೀಗ ಸ್ಪರ್ಧೆ ಮಾಡಲು ಸಜ್ಜಾಗಿರುವುದು ಗಮನಾರ್ಹ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts