More

    ಮಂಡ್ಯ ಹೊರೆ, ‘ಕೈ’ನಲ್ಲಿ ಹೈಡ್ರಾಮಾ: ಅಳಿಯನ ಪರ ಶಾಸಕ ಎಂ.ಶ್ರೀನಿವಾಸ್ ಬ್ಯಾಟಿಂಗ್

    ಮಂಡ್ಯ: ವಿಧಾನಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಆದರೂ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಪಕ್ಷದಲ್ಲಿಯೂ ದಿನವೂ ಹೈಡ್ರಾಮಾ ನಡೆಯುತ್ತಿದೆ.
    ದಳದಿಂದ ಹಾಲಿ ಶಾಸಕ ಎಂ.ಶ್ರೀನಿವಾಸ್ ಹಾಗೂ ಕಾಂಗ್ರೆಸ್‌ನಿಂದ ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ರವಿಕುಮಾರ್ ಗಣಿಗ ಹೆಸರನ್ನು ಅಂತಿಮಗೊಳಿಸಲಾಗಿದೆ. ಆದರೂ ಎರಡು ಪಕ್ಷದ ಉಳಿದ ಸ್ಪರ್ಧಾಕಾಂಕ್ಷಿಗಳು ಛಲ ಬಿಡದವರಂತೆ ಬಿ ಫಾರ್ಮ್ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ.
    ಅಳಿಯನ ಬೆನ್ನಿಗೆ ನಿಂತ ಶ್ರೀನಿವಾಸ್: ಈ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಶ್ರೀನಿವಾಸ್‌ಗೆ ಅವಕಾಶ ಸಿಗುವುದಿಲ್ಲವೆಂದೇ ಭಾವಿಸಲಾಗಿತ್ತು. ಅದರಂತೆ ನಿತ್ಯಸಚಿವ ಕೆ.ವಿ.ಶಂಕರಗೌಡ ಅವರ ಮೊಮ್ಮಗ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಶಾಸಕರ ಅಳಿಯ ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಜಿಲ್ಲಾ ವಕ್ತಾರ ಮಹಾಲಿಂಗೇಗೌಡ ರೇಸ್‌ಗೆ ಬಂದರು. ಆದರೆ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದ ದಳಪತಿಗಳು, ಹಾಲಿ ಶಾಸಕರಿಗೆ ಮಣೆ ಹಾಕಿದರು.
    ಅಲ್ಲಿಯವರಿಗೆ ಸ್ಪರ್ಧೆ ಬಗ್ಗೆ ತುಟಿ ಬಿಚ್ಚದ ಶ್ರೀನಿವಾಸ್, ತಮ್ಮ ಹೆಸರು ಘೋಷಣೆಯಾಗುತ್ತಿದ್ದಂತೆ ಅಲರ್ಟ್ ಆದರು. ಅಳಿಯ ಹಾಗೂ ಬೆಂಬಲಗರೊಂದಿಗೆ ಕ್ಷೇತ್ರದಲ್ಲಿ ಮತಯಾಚನೆ ಪ್ರಾರಂಭಿಸಿದರು. ಆದರೆ ಅತ್ತ ಪ್ರಬಲ ಆಕಾಂಕ್ಷಿಯಾಗಿದ್ದ ಕೆ.ಎಸ್.ವಿಜಯಾನಂದ ಮತ್ತು ಬಿ.ಆರ್.ರಾಮಚಂದ್ರು ಶಾಸಕರಿಂದ ಅಂತರ ಕಾಯ್ದುಕೊಂಡರು. ಇದು ಜೆಡಿಎಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ತೋರಿಸಿತ್ತು. ಅಂತೆಯೇ ಶಾಸಕರ ನೇತೃತ್ವದ ತಂಡ ಕೂಡ ಒಂದಷ್ಟು ದಿನ ಅಬ್ಬರಿಸಿ ಸುಮ್ಮನಾಯಿತು.
    ಈ ನಡುವೆ ದಿಢೀರ್ ಬೆಳವಣಿಗೆ ಎಂಬಂತೆ ಎಂ.ಶ್ರೀನಿವಾಸ್ ಸೇರಿದಂತೆ ನಾಲ್ವರು ಆಕಾಂಕ್ಷಿತರನ್ನು ಎಚ್.ಡಿ.ಕುಮಾರಸ್ವಾಮಿ ಕರೆಸಿಕೊಂಡು ಬಿಡದಿಯ ಕೇತಗಾನಹಳ್ಳಿಯಲ್ಲಿ ಶನಿವಾರ ಮಾತುಕತೆ ನಡೆಸಿದ್ದಾರೆ. ಈ ವೇಳೆಯೇ ಅಭ್ಯರ್ಥಿ ಬದಲಾವಣೆಯ ಸೂಕ್ಷ್ಮತೆಯನ್ನು ಬಿಟ್ಟುಕೊಟ್ಟಿದ್ದಾರೆನ್ನಲಾಗಿದೆ. ಜತೆಗೆ ಒಗ್ಗಟ್ಟಿನ ಕುರಿತು ಒಂದಷ್ಟು ಬೋದನೆ ಮಾಡಿದ್ದಾರೆ. ಕೊನೆಗೆ ಎಲ್ಲರೂ ಒಂದೆಡೆ ನಿಂತು ಫೋಟೋ ತೆಗೆಸಿಕೊಂಡು ಒಗ್ಗಟ್ಟಿನ ಪ್ರದರ್ಶನ ಮಾಡುವ ಯತ್ನ ಮಾಡಿದ್ದಾರೆ. ಆದರೆ ಸ್ಪರ್ಧೆ ವಿಚಾರಕ್ಕೆ ಬಂದರೆ ಒಗ್ಗಟ್ಟು ಲೆಕ್ಕಕ್ಕೆ ಬರುವುದಿಲ್ಲ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.
    ಇದಲ್ಲದೆ ಅಚ್ಚರಿ ಎನ್ನುವಂತೆ ಬಿ ಫಾರ್ಮ್ ರೇಸ್‌ನಲ್ಲಿ ಶಾಸಕರ ಜತೆಗಿದ್ದ ನಾಲ್ವರೊಂದಿಗೆ ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ಕೂಡ ಸೇರಿಕೊಂಡಿದ್ದಾರೆ. ತಮಗೊಂದು ಅವಕಾಶ ನೀಡುವಂತೆ ಅಫೀಲು ಸಲ್ಲಿಸಿದ್ದಾರೆ. ಆದರೆ ಇದರ ಹಿಂದೆ ಶಾಸಕರ ಮತ್ತೊಂದು ಲೆಕ್ಕಾಚಾರವೇ ಇದೆ ಎನ್ನುವ ಗುಸುಗುಸು ಮಾತಿದೆ. ಅದೆಂದರೆ ತಾವು ಸ್ಪರ್ಧೆಯಿಂದ ಹಿಂದೆ ಸರಿದರೆ ಅಳಿಯನಿಗೆ ಮಣೆ ಹಾಕುವಂತೆ ಹಕ್ಕೊತ್ತಾಯ ಮಂಡಿಸಿದ್ದಾರೆನ್ನಲಾಗಿದೆ. ಒಂದು ವೇಳೆ ಪೈಪೋಟಿ ಎದುರಾಗಿ ಯೋಗೇಶ್ ಪರ ಬ್ಯಾಟಿಂಗ್ ಮಾಡುವಂತಹ ಅನಿವಾರ್ಯತೆ ಎದುರಾದರೆ ಸಂಖ್ಯಾಬಲ ತೋರಿಸಲು ನಗರಸಭೆ ಅಧ್ಯಕ್ಷರಿಂದ ಬಿ ಫಾರ್ಮ್ ಕೇಳಿಸುವ ತಂತ್ರಗಾರಿಕೆ ನಡೆದಿದೆ. ಮಹಾಲಿಂಗೇಗೌಡ ಈಗಾಗಲೇ ಶಾಸಕರ ಬಣದಲ್ಲಿರುವುದರಿಂದ ಸ್ಪರ್ಧಾಕಾಂಕ್ಷಿತರ ಪೈಕಿ ಶಾಸಕರು ಸೇರಿದಂತೆ ಮೂವರು ಯೋಗೇಶ್‌ಗೆ ಬೆಂಬಲ ನೀಡಿದರೆ ವರಿಷ್ಠರಿಗೆ ಒತ್ತಡ ಬೀಳಬಹುದೆನ್ನುವ ಪ್ಲಾೃನ್ ಮಾಡಲಾಗಿದೆ ಎನ್ನುವ ಮಾತು ಕೇಳಿಬರುತ್ತಿವೆ.
    ಆದರೆ ಸದ್ಯಕ್ಕೆ ಶಾಸಕರನ್ನು ಬಿಟ್ಟರೆ ಬಿ ಫಾರ್ಮ್ ರೇಸ್‌ನಲ್ಲಿ ಕೆ.ಎಸ್.ವಿಜಯಾನಂದ ಮತ್ತು ಬಿ.ಆರ್.ರಾಮಚಂದ್ರು ಮುಂಚೂಣಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಒಂದು ವೇಳೆ ಈ ಇಬ್ಬರಲ್ಲಿ ಯಾರಿಗೆ ಅವಕಾಶ ಕೊಟ್ಟರೂ ಶಾಸಕರ ನಡೆ ಏನು ಹಾಗೂ ಯೋಗೇಶ್ ಅಥವಾ ಎಂ.ಶ್ರೀನಿವಾಸ್‌ಗೆ ಬಿ ಫಾರ್ಮ್ ಫೈನಲ್ ಆದರೆ ವಿಜಯಾನಂದ, ರಾಮಚಂದ್ರು ನಿರ್ಧಾರವೆನ್ನುಂಬುದರ ಕುತೂಹಲವಿದೆ.
    ಈ ಎಲ್ಲದರ ನಡುವೆ ಮಂಡ್ಯಕ್ಕೆ ಅನಿತಾ ಕುಮಾರಸ್ವಾಮಿ ಬರಬಹುದೆನ್ನುವ ಮಾತು ಕೇಳಿಬರುತ್ತಿದೆ. ಈ ಮೊದಲು ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆಗೆ ಬರಬಹುದೆನ್ನಲಾಗುತ್ತಿತ್ತು. ಒಂದು ವೇಳೆ ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಖಚಿತವಾದರೆ ಮಂಡ್ಯದಿಂದ ಅನಿತಾ ಅವರನ್ನು ಕಣಕ್ಕಿಳಿಸಿದರೂ ಅಚ್ಚರಿಯಿಲ.
    ಸಲಹೆ ಕೊಟ್ಟು ಕೆಟ್ಟ ಹಿರಿಯರು: ಇತ್ತ ಕಾಂಗ್ರೆಸ್‌ನಲ್ಲಿ ರವಿಕುಮಾರ್ ಗಣಿಗ ಅವರ ಹೆಸರು ಘೋಷಣೆಯಾಗಿರುವುದರಿಂದ ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ಮಾಜಿ ಶಾಸಕ ಎಚ್.ಬಿ.ರಾಮು ನೇತೃತ್ವದ ಹಿರಿಯ ಮುಖಂಡರಿಗೆ ಸಹಜವಾಗಿಯೇ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಬಿ ಫಾರ್ಮ್ ವಿಚಾರದಲ್ಲಿ ತಂತ್ರಗಾರಿಕೆ ಮಾಡಲೋಗಿ ಇದೀಗ ಹೈಕಮಾಂಡ್ ಕೊಟ್ಟ ತಿರುಗೇಟನ್ನು ಸಹಿಸಿಕೊಳ್ಳಲಾಗದ ಸ್ಥಿತಿಯಂತಾಗಿದೆ.
    ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಬಯಸಿ 16 ಜನರು ಅರ್ಜಿ ಸಲ್ಲಿಸಿದರು. ಪ್ರಾರಂಭದಿಂದಲೂ ರವಿಕುಮಾರ್ ಹೆಸರೇ ಮುಂಚೂಣಿಯಲ್ಲಿತ್ತು. ಅಲ್ಲಿಯವರೆಗೆ ಹಿರಿಯರು ಹೆಚ್ಚಿನ ತಲೆಕೆಡಿಸಿಕೊಂಡಿರಲಿಲ್ಲ. ಕೆಲ ದಿನ ಕಳೆಯುತ್ತಿದ್ದಂತೆ ಮನ್‌ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಪ್ಪ, ಕೆ.ಕೆ.ರಾಧಾಕೃಷ್ಣ ಕೀಲಾರ, ಇತ್ತೀಚೆಗೆ ಡಾ.ಕೃಷ್ಣ ಹೆಸರು ಕೂಡ ಕೇಳಲಾರಂಭಿಸಿತು. ಆದರೆ ಇದು ಹಿರಿಯರಿಗೆ ತಲೆಬಿಸಿ ತರಿಸಿತು. ಈ ಹಿನ್ನೆಲೆಯಲ್ಲಿ ಇದ್ದಕ್ಕಿದ್ದಂತೆ ಎಚ್ಚೆತ್ತುಕೊಂಡು ತಾಲೂಕಿನ ಹುಲಿವಾನದಲ್ಲಿ ಕಾರ್ಯಕರ್ತರ ಸಭೆ ಮಾಡಿದರು.
    ಇದಾದ ನಂತರ ಬೆಂಗಳೂರು, ದೆಹಲಿಗೆ ಪರೇಡ್ ನಡೆಸಿ ಹೈಕಮಾಂಡ್ ನಾಯಕರಿಗೆ ದುಂಬಾಲು ಬೀಳುವ ಪ್ರಯತ್ನ ನಡೆಯಿತು. ಈ ಸಂದರ್ಭದಲ್ಲಿ ಉರುಳಿಸಿದ ದಾಳ ಅವರಿಗೆ ಮುಳ್ಳಾಗಿ ಪರಿಣಮಿಸಿತು. ಅದೆಂದರೆ ರಾಧಾಕೃಷ್ಣ ಹಾಗೂ ಡಾ.ಕೃಷ್ಣ ಅವರಿಗೆ ಅವಕಾಶ ಸಿಕ್ಕಿದರೆ ಪಕ್ಷದಲ್ಲಿ ಅಸ್ಥಿತ್ವ ಇಲ್ಲದಾಗುತ್ತದೆ ಎಂದು ಮನವರಿಕೆ ಮಾಡಿಕೊಂಡ ಹಿರಿಯರ ತಂಡ, ಸ್ಪರ್ಧೆಗೆ ಅವಕಾಶ ನೀಡುವುದಾದರೆ ಪಕ್ಷಕ್ಕೆ ದುಡಿದವರನ್ನೇ ಪರಿಗಣಿಸುವಂತೆ ಕೇಳಿಕೊಂಡರು. ಇದು ಕೆಕೆಆರ್ ಹಾಗೂ ಡಾ.ಕೃಷ್ಣ ಅವರನ್ನು ಸ್ಪರ್ಧೆಯಿಂದ ದೂರವಿರುವಂತೆ ಮಾಡುವುದರ ಜತೆಗೆ ಒಂದು ವೇಳೆ ರವಿಕುಮಾರ್‌ಗೆ ಅವಕಾಶ ಸಿಗದಿದ್ದರೆ ತಮ್ಮಲ್ಲಿಯೇ ಯಾರಿಗಾದರೂ ಬಿ ಫಾರ್ಮ್ ಕೊಡಬಹುದೆನ್ನುವ ಲೆಕ್ಕಾಚಾರವಿತ್ತು. ಆದರೆ ಹಿರಿಯರ ದಾಳಕ್ಕೆ ತಕ್ಕ ಉತ್ತರ ಕೊಟ್ಟ ಹೈಕಮಾಂಡ್ ರವಿಕುಮಾರ್ ಹೆಸರು ಘೋಷಣೆ ಮಾಡಿತು. ಸಮೀಕ್ಷೆಯಲ್ಲಿಯೂ ಅವರ ಪರವಾಗಿಯೇ ಒಲವು ಇರುವ ಮಾಹಿತಿ ಲಭ್ಯವಾಗಿರುವುದರಿಂದ ಅವಕಾಶ ನೀಡಲಾಗಿದೆ.
    ಇದರಿಂದಾಗಿ ತಮ್ಮ ಬಾಣ ತಮಗೆ ತಿರುಗುಬಾಣವಾಗಿದ್ದು, ಪಕ್ಷದೊಳಗೆ ಅಸ್ಥಿತ್ವದ ಚಿಂತೆ ಕಾಡುವಂತಾಗಿದೆ. ಆದ್ದರಿಂದ ಭಿನ್ನಮತವನ್ನು ವ್ಯಕ್ತಪಡಿಸುತ್ತಿದ್ದಾರೆ. ಹಿರಿಯರಿಗೆ ಅವಕಾಶ ಕೊಡದಿದ್ದರೆ ಮುಂದಿನ ನಡೆ ತಿಳಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷ ತೊರೆಯುತ್ತಾರೋ ಅಥವಾ ಹೈಕಮಾಂಡ್ ಸೂಚನೆಗೆ ತಲೆಬಾಗುತ್ತಾರೋ ಎನ್ನುವುದನ್ನು ಕಾದುನೋಡಬೇಕಿದೆ.
    ಕೆಕೆಆರ್ ಸಿಕ್ಕಿಲ್ಲ ಭರವಸೆ?: ಬಿ ಫಾರ್ಮ್ ‘ಕೈ’ ತಪ್ಪಿದ ಹಿನ್ನೆಲೆಯಲ್ಲಿ ಬಂಡೆದ್ದಿರುವ ರಾಧಾಕೃಷ್ಣ, ಪಕ್ಷಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅವಕಾಶ ನೀಡುವಂತೆ ಒತ್ತಡ ಹಾಕುವ ಕೆಲಸ ಮಾಡುತ್ತಿದ್ದಾರೆ. ಆದರೆ ಇದಕ್ಕೆ ಸೂಕ್ತ ಭರವಸೆ ಸಿಕ್ಕಿಲ್ಲ ಎನ್ನಲಾಗುತ್ತಿದೆ. ಆದ್ದರಿಂದ ಕೆಕೆಆರ್ ಮುಂದಿನ ನಡೆ ಏನೆಂಬುದರ ಕುತೂಹಲವಿದೆ. ಅತ್ತ ಬಿ ಫಾರ್ಮ್ ಸಿಗಲಿದೆ ಎನ್ನುವ ಖಚಿತತೆಯಿಂದ ಪಕ್ಷದ ಚಟುವಟಿಕೆ ಮಾಡುತ್ತಿದ್ದ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಕೃಷ್ಣ, ರವಿಕುಮಾರ್‌ಗೆ ಬಿ ಫಾರ್ಮ್ ಘೋಷಣೆಯಾದ ಬಳಿಕ ಸದ್ದಿಲ್ಲದಂತಾಗಿದ್ದಾರೆ. ಮಾತ್ರವಲ್ಲದೆ ಕಾರ್ಯ ಚಟುವಟಿಕೆ ಕೇಂದ್ರವಾಗಿದ್ದ ಕೃಷ್ಣ ಅವರ ಸ್ವಂತ ಕಚೇರಿಯಲ್ಲಿ ಮೌನ ಆವರಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts