More

    ಪೋಲಿಯೋ ಲಸಿಕೆ ವಿತರಣೆ ಇಂದು

    ಹಾವೇರಿ: ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದಡಿ ಜ. 31ರಂದು ಜಿಲ್ಲೆಯಾದ್ಯಂತ ಶೂನ್ಯದಿಂದ 5 ವರ್ಷದೊಳಗಿನ 1,67,117 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಲಸಿಕಾ ಕಾರ್ಯಕ್ರಮಕ್ಕೆ ಸಹಕರಿಸಬೇಕು ಎಂದು ಪ್ರಭಾರ ಡಿಎಚ್​ಒ ಡಾ. ಎಂ. ಜಯಾನಂದ ಹೇಳಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪಲ್ಸ್ ಪೋಲಿಯೋ ಜಿಲ್ಲಾಮಟ್ಟದ ಎರಡನೇ ಟಾಸ್ಕ್​ಫೋರ್ಸ್ ಸಮಿತಿ ಸಭೆಯಲ್ಲಿ ಲಸಿಕಾ ಕಾರ್ಯಕ್ರಮ ಪೂರ್ವ ಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿದರು. ಕೋವಿಡ್ ಲಸಿಕೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜ. 17ರಂದು ನಿಗದಿಯಾಗಿದ್ದ ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಜ. 31ರಂದು ಆಯೋಜಿಸಲಾಗಿದೆ. ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಬೂತ್​ಗಳಿಗೆ ಮಕ್ಕಳನ್ನು ಕರೆತಂದು ಲಸಿಕೆ ಹಾಕಿಸಬೇಕು. ಕೋವಿಡ್ ಹಿನ್ನೆಲೆಯಲ್ಲಿ ಗರಿಷ್ಠ 200 ಮಕ್ಕಳಿಗೆ ಒಂದು ಬೂತ್​ನಂತೆ ವ್ಯವಸ್ಥೆ ಮಾಡಬೇಕು. ಮಕ್ಕಳಿಗೆ ಅನುಗುಣವಾಗಿ ಬೂತ್​ಗಳ ಸಂಖ್ಯೆಗಳನ್ನು ಹೆಚ್ಚಳ ಮಾಡಿಕೊಳ್ಳಬೇಕು. ನಿಗದಿತ ಗುರಿಯಂತೆ ನೂರಕ್ಕೆ ನೂರರಷ್ಟು ಅರ್ಹ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದರು.

    ಜಿಲ್ಲೆಯಾದ್ಯಂತ ಒಟ್ಟು 971 ಬೂತ್​ಗಳಲ್ಲಿ ಲಸಿಕೆ ಹಾಕಲಾಗುವುದು. 33 ಸಂಚಾರಿ ತಂಡಗಳನ್ನು ರಚಿಸಲಾಗಿದ್ದು, 2.16 ಲಕ್ಷ ಡೋಸ್ ಪೋಲಿಯೋ ಲಸಿಕೆ ಪೂರೈಕೆಯಾಗಿದೆ. ಮೊದಲ ದಿನ ಬೂತ್ ಮಟ್ಟದಲ್ಲಿ ಗರಿಷ್ಠ ಮಟ್ಟದ ಲಸಿಕೆ ಹಾಕಲಾಗುವುದು. ಇಲ್ಲಿ ಕೈಬಿಟ್ಟುಹೋದ ಮಕ್ಕಳಿಗೆ ಫೆ. 1ರಿಂದ 3 ದಿನ ಮನೆಮನೆಗೆ ತೆರಳಿ ಶೇ. 100ರಷ್ಟು ಮಕ್ಕಳಿಗೆ ಲಸಿಕೆ ಹಾಕಲು ಯೋಜಿಸಲಾಗಿದೆ. ಇಟ್ಟಿಗೆ ಭಟ್ಟಿಗಳು ಸೇರಿದಂತೆ ಹೈರಿಸ್ಕ್ ಏರಿಯಾ, ಬಸ್, ರೈಲು ನಿಲ್ದಾಣಗಳಲ್ಲಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ 1,860 ವ್ಯಾಕ್ಸಿನೇಟರ್, 186 ಮೇಲುಸ್ತುವಾರಿ ಅಧಿಕಾರಿಗಳು, 1,466 ಆಶಾ ಕಾರ್ಯಕರ್ತೆಯರು, 1,918 ಅಂಗನವಾಡಿ ಕಾರ್ಯಕರ್ತೆಯರನ್ನು ಕಾರ್ಯಕ್ರಮಕ್ಕೆ ನಿಯೋಜಿಸಲಾಗಿದೆ ಎಂದರು.

    ಭಾನುವಾರ ರಜೆ ಎಂದು ಈ ಕಾರ್ಯಕ್ಕೆ ನಿಯೋಜಿತ ಅಧಿಕಾರಿ, ಸಿಬ್ಬಂದಿ ಪೋಲಿಯೋ ಕರ್ತವ್ಯದಿಂದ ವಿಮುಖವಾಗಬಾರದು. ಬೂತ್​ಗಳ ವ್ಯವಸ್ಥೆಗಾಗಿ ಶಾಲೆಗಳನ್ನು ತೆರೆಯಬೇಕು. ವಿವಿಧ ಇಲಾಖಾ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿ ಉಸ್ತುವಾರಿ ವಹಿಸಲಾಗಿದೆ. ಈ ಬಾರಿ ಪೋಲಿಯೋ ಜಾಗೃತಿ ಜಾಥಾ ಮಾಡುವ ಅವಕಾಶವಿಲ್ಲದೇ ಇರುವುದರಿಂದ ಶಾಲಾ ಮಕ್ಕಳ ಮೂಲಕ ಅಕ್ಕಪಕ್ಕದ ಮನೆಯ ಶೂನ್ಯದಿಂದ 5 ವರ್ಷದ ಮಕ್ಕಳಿಗೆ ಪೋಲಿಯೋ ಕುರಿತಂತೆ ಜಾಗೃತಿ ಮೂಡಿಸಬೇಕು ಎಂದರು.

    ಸಭೆಯಲ್ಲಿ ಡಾ. ಪ್ರಭಾಕರ ಕುಂದೂರ, ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಪಿ.ವೈ. ಶೆಟ್ಟೆಪ್ಪನವರ, ವಾರ್ತಾಧಿಕಾರಿ ಬಿ.ಆರ್. ರಂಗನಾಥ, ಡಿಯುಡಿಸಿ ಯೋಜನಾಧಿಕಾರಿ ವಿರಕ್ತಿಮಠ, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.

    ಜಿಲ್ಲೆಯಲ್ಲಿ 17,46,115 ಜನಸಂಖ್ಯೆಯಲ್ಲಿ 1,67,117 ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಬೇಕಾಗಿದೆ. ಇದರಲ್ಲಿ 3,326 ವಲಸೆ ಬಂದ ಮಕ್ಕಳಿದ್ದಾರೆ. 34,442 ಮಕ್ಕಳನ್ನು ಹೈರಿಸ್ಕ್ ಏರಿಯಾದಲ್ಲಿರುವ ಗುರುತಿಸಲಾಗಿದೆ. ಈ ಎಲ್ಲ ಮಕ್ಕಳಿಗೂ ಶೇ. 100ರಷ್ಟು ಲಸಿಕೆ ತಲುಪಬೇಕು.
    | ಡಾ. ಸಿದ್ದಲಿಂಗಯ್ಯ, ನೋಡಲ್ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts