More

    ವೃದ್ಧ ದಂಪತಿಯ ಮನೆ ತಲುಪಿಸಿದ ಪೊಲೀಸರು

    ಮಂಗಳೂರು: ಅಗತ್ಯ ವಸ್ತು ಖರೀದಿಗಾಗಿ ನಗರಕ್ಕೆ ಬಂದಿದ್ದ ವೃದ್ಧ ದಂಪತಿ ಕುಲಶೇಖರದ ತಮ್ಮ ಮನೆಗೆ ತೆರಳಲು ಪರದಾಡುತ್ತಿದ್ದು, ಪೊಲೀಸರು ದಂಪತಿಯನ್ನು ಮನೆಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ವಸ್ತುಗಳ ಖರೀದಿಗೆ ನಗರಕ್ಕೆ ಬಂದಿದ್ದ ಹಿರಿಯ ನಾಗರಿಕರಾದ ರಾಮದಾಸ್ ಕಾಮತ್ ಹಾಗೂ ಅವರ ಪತ್ನಿ ಕುಲಶೇಖರದ ಮನೆಗೆ ಹಿಂತಿರುಗಲು ಸುಮಾರು ಎರಡು ಗಂಟೆ ಕಾಲ ಆಟೋ ರಿಕ್ಷಾಕ್ಕಾಗಿ ಕಾದರೂ ಯಾರೊಬ್ಬರೂ ಅಲ್ಲಿಗೆ ಬಾಡಿಗೆ ಬರಲು ಒಪ್ಪದಿದ್ದಾಗ ಕಮಿಷನರ್ ಬಳಿ ಸಮಸ್ಯೆ ತೋಡಿಕೊಂಡರು. ಈ ವೇಳೆ ದಂಪತಿಯನ್ನು ಪೊಲೀಸ್ ವಾಹನದಲ್ಲೇ ಮನೆಗೆ ತಲುಪಿಸುವಲ್ಲಿ ಆಯುಕ್ತರು ಸಹಕರಿಸಿದರು. ಆಟೋರಿಕ್ಷಾಗಳವರು ಕೆಲವೊಂದು ನಿಗದಿತ ರೂಟ್‌ಗಳಲ್ಲಿ ಮಾತ್ರ ಸಂಚರಿಸುತ್ತಾರೆ. ಆದರೆ ಹಿರಿಯ ನಾಗರಿಕರು, ಮಹಿಳೆಯರು, ಮಕ್ಕಳ ಜತೆ ಇರುವಾಗ ಚಾಲಕರು ತಮ್ಮ ರೂಟ್ ಬದಲಾವಣೆ ಮಾಡಿಕೊಂಡು ಅವರನ್ನು ಕರೆದೊಯ್ಯಬೇಕು ಎಂದು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮನವಿ ಮಾಡಿದರು.

    ನಗರದಲ್ಲಿ ಲಾಕ್‌ಡೌನ್ ಅವಧಿಯಲ್ಲಿ ವಾಹನಗಳ ದಟ್ಟಣೆ ಕಂಡು ಬರುತ್ತಿದ್ದ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಕ್ಲಾಕ್ ಟವರ್ ಬಳಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಪೊಲೀಸರು ದಿಢೀರ್ ತಪಾಸಣೆ ನಡೆಸಿದರು.

    ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ಎಸಿಪಿಗಳಾದ ರಂಜಿತ್ ಕುಮಾರ್ ಹಾಗೂ ನಟರಾಜ್ ನೇತೃತ್ವದಲ್ಲಿ ಕ್ಲಾಕ್ ಟವರ್ ಬಳಿ ವಾಹನಗಳನ್ನು ತಡೆದು ತಪಾಸಣೆ ನಡೆಸಿದರು. ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತಿದ್ದವರ ಮೇಲೆ ದಂಡ ಹಾಕಿದರೆ, ಕಾರುಗಳಲ್ಲಿ ನಿಷೇಧಿತ ಟಿಂಟ್‌ಗಳನ್ನು ಹಾಕಿದ್ದನ್ನು ಪೊಲೀಸರೇ ತೆಗೆದು ದಂಡ ವಿಧಿಸಿದರು.

    ವಿನಾಯಿತಿ ಅವಧಿಯಲ್ಲೇ ತಡೆದರು!: ಅಗತ್ಯ ವಸ್ತುಗಳ ಖರೀದಿಗೆ ದ.ಕ ಜಿಲ್ಲಾಡಳಿತ 2 ಗಂಟೆಯವರೆಗೂ ಸಮಯ ನೀಡಿದ್ದರೂ, ಪೊಲೀಸರು ಮಧ್ಯಾಹ್ನ 12.15ರ ವೇಳೆಗೆ ವಾಹನಗಳನ್ನು ತಡೆದು ದಂಡ ವಿಧಿಸುತ್ತಿದ್ದಾರೆ ಎಂಬ ಆಕ್ಷೇಪವೂ ಈ ಸಂದರ್ಭ ವಾಹನ ಸವಾರರಿಂದ ವ್ಯಕ್ತವಾಯಿತು. ನಗರದ ಪುರಭವನದ ಎದುರಿನಿಂದ ಕ್ಲಾಕ್ ಟವರ್‌ಗೆ ಸಾಗುವ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವುದರಿಂದ ಒಂದು ರಸ್ತೆಯಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಇರುವ ಕಾರಣ ಪೊಲೀಸರ ತಪಾಸಣೆ ವೇಳೆ ವಾಹನಗಳು ಈ ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಲ್ಲಬೇಕಾಯಿತು.

    3 ಸಾವಿರದಷ್ಟು ವಾಹನ ಮುಟ್ಟುಗೋಳು: ಲಾಕ್‌ಡೌನ್ ವಿನಾಯಿತಿ ಅವಧಿಯಲ್ಲಿಯೂ ಅನಗತ್ಯವಾಗಿ ವಾಹನಗಳಲ್ಲಿ ತಿರುಗಾಡುವಂತಿಲ್ಲ ಎಂಬ ಕಟ್ಟುನಿಟ್ಟಿನ ನಿರ್ದೇಶನವನ್ನು ಸರ್ಕಾರ ನೀಡಿದೆ. ಅದನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಮೂಲಕ ತಪಾಸಣೆ ಮಾಡಲಾಗುತ್ತಿದೆ. ಒಳರಸ್ತೆಗಳಲ್ಲಿ ಅನಗತ್ಯವಾಗಿ ಓಡಾಡುವರನ್ನು ಕೂಡಾ ಮೊಬೈಲ್ ಸ್ಕ್ವಾಡ್‌ಗಳ ಮೂಲಕ ತಪಾಸಣೆ ನಡೆಸಲಾಗುತ್ತಿದೆ. ಕರೊನಾ 2ನೇ ಅಲೆ ಲಾಕ್‌ಡೌನ್ ಬಳಿಕ ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ 22 ಸಾವಿರಕ್ಕೂ ಅಧಿಕ ಮಾಸ್ಕ್ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಲಾಗಿದೆ. ಸುಮಾರು 300ಕ್ಕೂ ಅಧಿಕ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 3 ಸಾವಿರದಷ್ಟು ವಾಹನಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts