ಮಂಗಳೂರು: ನಿನ್ನೆಯಷ್ಟೇ ಕೊಲೆ ಮಾಡಿದ್ದ ಆರೋಪಿ ಮೇಲೆ ಇಂದು ಪೊಲೀಸರು ಫೈರಿಂಗ್ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಗುಂಡ್ಯ ಬಳಿ ಈ ಫೈರಿಂಗ್ ನಡೆದಿದೆ. ನಿನ್ನೆ ಬಂಟ್ವಾಳದ ಮೇಲ್ಕಾರ್ ಬಳಿ ನಡೆದಿದ್ದ ಉಮಾರ್ ಫಾರೂಕ್ ಕೊಲೆ ಆರೋಪಿ ಖಲೀಲ್ ಮತ್ತು ತಂಡ ಕಾರಿನಲ್ಲಿ ತೆರಳುತ್ತಿತ್ತು. ಇದನ್ನು ತಿಳಿದ ಪೊಲೀಸರು ಚೇಸ್ ಮಾಡಿ ಕಾರಿಗೆ ಅಡ್ಡ ಹಾಕಿದ್ದಾರೆ.
ಆದರೆ ಚೇಸ್ ಮಾಡಿರುವ ಬಂಟ್ವಾಳ ಎಸ್ಐಗಳಾದ ಅವಿನಾಶ್ ಮತ್ತು ಪ್ರಸನ್ನ ಟೀಂ ಮೇಲೆ ಆರೋಪಿ ಖಲೀಲ್ ತಲವಾರ್ ಬೀಸಿದ್ದಾನೆ. ಆಗ ಎಸ್ಐ ಅವಿನಾಶ್ ಆತನ ಕಾಲಿಗೆ ಗುಂಡು ಹೊಡೆದಿದ್ದಾರೆ. ಗಾಯಗೊಂಡ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂದರ್ಭ ಮತ್ತೊಬ್ಬ ಎಸ್ಐ ಪ್ರಸನ್ನ ಅವರಿಗೆ ಸಣ್ಣ ಗಾಯವಾಗಿದ್ದು, ಈ ವೇಳೆ ಹಫೀಜ್ ಹಾಗೂ ಇನ್ನೊಬ್ಬ ಆರೋಪಿ ಪರಾರಿ ಆಗಿದ್ದಾರೆ.
ಆರೋಪಿಗಳು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ರೌಡಿ ಶೀಟರ್ ಫಾರೂಕ್ನನ್ನು ನಿನ್ನೆ ಬಂಟ್ವಾಳ ತಾಲೂಕಿನ ಮೇಲ್ಕಾರ್ ಸಮೀಪದ ಬೊಂಡೋಡಿ ಎಂಬಲ್ಲಿ ಹಾಡಹಗಲೇ ಹತ್ಯೆ ಮಾಡಿದ್ದರು. ಮಾರಕಾಯುಧಗಳಿಂದ ದಾಳಿ ಮಾಡಿ ಅವರು ಕೊಲೆ ಮಾಡುತ್ತಿರುವ ದೃಶ್ಯದ ವಿಡಿಯೋ ತುಣುಕು ಕೂಡ ಪೊಲೀಸರಿಗೆ ಲಭಿಸಿದೆ.