More

    ಚಿನ್ನಾಭರಣದಾಸೆಗೆ ಮನೆ ಮಾಲಕಿಯನ್ನೇ ಕೊಂದಳು

    ಬೆಂಗಳೂರು: ಮನೆ ಮಾಲಕಿಯನ್ನು ಕೊಂದು, ಚಿನ್ನ ದೋಚಿ ಅಮಾಯಕಿಯಂತೆ ನಟಿಸಿದ್ದ ಯುವತಿಯನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.
    ಕೆಂಗೇರಿಯ ಕೋನಸಂದ್ರ ನಿವಾಸಿ ಮೋನಿಕಾ (24) ಬಂಧಿತೆ. 10ರಂದು ಮನೆ ಮಾಲಕಿ ದಿವ್ಯಾ ಎಂಬಾಕೆಯನ್ನು ಹತ್ಯೆ ಮಾಡಿ 36 ಗ್ರಾಂ ಚಿನ್ನದ ಸರ ದೋಚಿದ್ದಳು. ಈ ಕುರಿತು ಮೃತಳ ಪತಿ ಗುರುಮೂರ್ತಿ ಎಂಬಾತ ದೂರು ನೀಡಿದ್ದ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ದಿವ್ಯಾ- ಗುರುಮೂರ್ತಿ ದಂಪತಿ ಎರಡು ವರ್ಷದ ಮಗುವಿನ ಜತೆಗೆ ಕೋನಸಂದ್ರದಲ್ಲಿ ನೆಲೆಸಿದ್ದರು. ಜತೆಗೆ ದಿವ್ಯಾ ಅತ್ತೆ, ಮಾವ ಸಹ ಇದ್ದರು. ಗುರುಮೂರ್ತಿ ಮತ್ತು ತಂದೆ ಕೆಂಗೇರಿ ಉಪನಗರದ ಶಿವನಪಾಳ್ಯದಲ್ಲಿ ಸಲೂನ್ ಶಾಪ್ ಇಟ್ಟುಕೊಂಡಿದ್ದರು. 8 ತಿಂಗಳ ಹಿಂದಷ್ಟೇ ಸ್ವಂತ ಮನೆಗೆ ಸ್ಥಳಾಂತರವಾಗಿದ್ದರು. ಇತ್ತ, ಕೋಲಾರ ಮೂಲದ ಮೋನಿಕಾಗೆ 4 ವರ್ಷ ಹಿಂದೆ ಮದುವೆಯಾಗಿದ್ದು, ಕೆಲವೇ ತಿಂಗಳಿಗೆ ಪತಿ ಸಾವನ್ನಪ್ಪಿದ್ದ. ಪಾಲಕರನ್ನು ಬಿಟ್ಟು 3 ತಿಂಗಳ ಹಿಂದೆ ಪ್ರಿಯಕರನ ಜತೆಗೆ ಬಂದು ಪತಿ ಎಂದು ಪರಿಚಯ ಮಾಡಿಕೊಂಡು ದಿವ್ಯಾ ಮನೆಯಲ್ಲಿ 6 ಸಾವಿರ ರೂ.ಗೆ ಬಾಡಿಗೆ ಮನೆ ಪಡೆದಿದ್ದಳು. ಟಾಟಾ ಏಸ್ ಓಡಿಸುತ್ತಿದ್ದ ಪ್ರಿಯಕರ ಬಂದು ಹೋಗುತ್ತಿದ್ದ.

    ಕಂಪನಿಯೊಂದರಲ್ಲಿ ಡೇಟಾ ಎಂಟ್ರಿ ಕೆಲಸ ಮಾಡುತ್ತಿದ್ದ ಮೋನಿಕಾ, ಇತ್ತೀಚೆಗೆ ಕೆಲಸ ತೊರೆದಿದ್ದಳು. ಒಂಟಿಯಾಗಿ ವಾಸವಾಗಿದ್ದ ಆಕೆ, 6-7 ಲಕ್ಷ ರೂ. ಸಾಲ ಮಾಡಿಕೊಂಡಿದ್ದಳು. ಸಾಲಗಾರರ ಒತ್ತಡ ಹೆಚ್ಚಾಗಿತ್ತು. ದಿವ್ಯಾಳ ಆಗಾಗ ಮಗುವನ್ನು ಆಟವಾಡಿಸಿ, ಮನೆಗೆ ಕರೆದು ತಿಂಡಿ ತಿನ್ನಿಸಿ ವಿಶ್ವಾಸ ಗಳಿಸಿದ್ದಳು. ಈ ವೇಳೆ ದಿವ್ಯಾಳ ಮೈಮೇಲಿದ್ದ ಒಡವೆ ಮೇಲೆ ಮೋನಿಕಾಳ ಕಣ್ಣು ಬಿದ್ದಿತ್ತು. ಮನೆ ಮಾಲೀಕರ ಚಲನವಲನ ಗಮನಿಸಿ ಹತ್ಯೆಗೆ ಸಂಚು ರೂಪಿಸಿದ್ದಳು.

    ಮೇ 10ರ ಬೆಳಗ್ಗೆ ಮಾಲೀಕ ಗುರುಮೂರ್ತಿ ಮತ್ತು ಅವರ ತಂದೆ ಶಾಪ್‌ಗೆ ಹೋಗಿದ್ದರು. ಅತ್ತೆ ಹೊರಗಡೆ ಹೋಗಿದ್ದರು. ದಿವ್ಯಾ ಮತ್ತು ಆಕೆಯ ಮಗು ಮಾತ್ರ ಮನೆಯಲ್ಲಿದ್ದರು. ಕೆಲಸ ಮಾಡುತ್ತಿದ್ದಾಗ ದಿವ್ಯಾಗೆ ಮೋನಿಕಾ ಹಿಂದಿನಿಂದ ಲಾಡಿ ದಾರದಿಂದ ಕುತ್ತಿಗೆ ಬಿಗಿದು ಎಳೆದಿದ್ದಳು. ಆಗ ದಿವ್ಯಾ ಹಿಂದಕ್ಕೆ ಬಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಳು. ಬಳಿಕ ದಿವ್ಯಾಳ ಮೈಮೇಲಿದ್ದ ಚಿನ್ನದ ಸರವನ್ನು ಮೋನಿಕಾ ಕದ್ದಿದ್ದಳು. ಸಲೂನ್ ಶಾಪ್‌ನಿಂದ ಗುರುಮೂರ್ತಿ ಪತ್ನಿಗೆ ಪೋನ್ ಕರೆ ಮಾಡಿದಾಗ ಪ್ರತಿಪ್ರಕ್ರಿಯೆ ಬಾರದೆ ಇದ್ದಾಗ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಗುರುಮೂರ್ತಿ ಕೊಟ್ಟ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಮೋನಿಕಾಳ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts