More

    ವಿದೇಶದಲ್ಲೇ ಉಳಿದುಕೊಂಡ ಪ್ರಜ್ವಲ್

    ಬೆಂಗಳೂರು: ಲೈಂಗಿಕ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ಬುಧವಾರ ಕೊನೆಗೂ ವಿದೇಶದಿಂದ ಬರಲೇ ಇಲ್ಲ. ಎಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ. ಮತ್ತೊಂದೆಡೆ ವಿಶೇಷ ತನಿಖಾ ದಳ (ಎಸ್‌ಐಟಿ)ದ ನಡೆ ಕುತೂಹಲ ಮೂಡಿಸಿದೆ.

    ಪೆನ್‌ಡ್ರೈವ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ, ಜರ್ಮನಿಗೆ ಹಾರಿದ್ದರು. ಮೇ 15ಕ್ಕೆ ವಾಪಸ್ ಬರಲು ವಿಮಾನ ಟಿಕೆಟ್ ಸಹ ಬುಕ್ ಮಾಡಿದ್ದರು ಎನ್ನಲಾಗಿತ್ತು. ಇದೀಗ ಜರ್ಮನಿ ಮ್ಯೂನಿಚ್ ಏರ್‌ಪೋರ್ಟ್‌ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ (ಕೆಐಎ) ಹತ್ತಲಿದ್ದಾರೆ ಎಂದೇ ಹೇಳಲಾಗಿತ್ತು. ಕೊನೇ ಗಳಿಗೆಯಲ್ಲಿ ಪ್ರಜ್ವಲ್ ವಿಮಾನ ಏರಿಲ್ಲ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಪೂರಕ ಎಂಬಂತೆ ಪ್ರಯಾಣದ ಟಿಕೆಟ್ ಜಾಲತಾಣದಲ್ಲಿ ವೈರಲ್ ಕೂಡ ಆಗಿತ್ತು.

    ಬೆಂಗಳೂರಿಗೆ ಪ್ರಜ್ವಲ್ ಬರುತ್ತಾರೆ ಎಂಬ ನಿರೀಕ್ಷೆಯನ್ನು ಎಸ್‌ಐಟಿ ಸಹ ಹೊಂದಿತ್ತು ಎಂದು ಹೇಳಲಾಗುತ್ತಿದೆ. ಬೆಂಗಳೂರಿಗೆ ಸಂಸದ ಬಂದ ಬಳಿಕ ಮುಂದೆ ಕೈಗೊಳ್ಳಬೇಕಾದ ಕಾನೂನು ಕ್ರಮಗಳ ಬಗ್ಗೆ ಎಸ್‌ಐಟಿ ಸಿದ್ಧತೆ ಮಾಡಿಕೊಂಡಿತ್ತು ಎಂಬ ಮಾತುಗಳು ಕೇಳಿ ಬಂದಿವೆ. ಜರ್ಮನಿಯಿಂದ ಬೆಂಗಳೂರಿಗೆ ಟೇಕಾಫ್ ಆದ ಲುಫ್ತಾನ್ಸ್ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಪ್ರಜ್ವಲ್ ಇಲ್ಲ ಎಂಬ ಮಾಹಿತಿ ಕೂಡ ಬಂದಿದೆ.

    ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಮಾನ ಟಿಕೆಟ್‌ನಲ್ಲಿ ಭಾರತೀಯ ಕಾಲಮಾನದಂತೆ ಬುಧವಾರ ಮಧ್ಯಾಹ್ನ 3.30ಕ್ಕೆ ಮ್ಯೂನಿಚ್ ವಿಮಾನ ನಿಲ್ದಾಣದಿಂದ ಹೊರಟು ತಡರಾತ್ರಿ ಕೆಐಎಗೆ ಬಂದಿಳಿಯಬೇಕಿತ್ತು. ಕೆಲ ದಿನಗಳ ಹಿಂದೆಯೇ ಟಿಕೆಟ್ ಬುಕಿಂಗ್ ರದ್ದು ಮಾಡಲಾಗಿದೆ.
    ಪ್ರಜ್ವಲ್ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಏಪ್ರಿಲ್ 30ರಂದು ನೋಟಿಸ್ ಜಾರಿ ಮಾಡಿತ್ತು. ಮರು ದಿನ ವಿದೇಶದಲ್ಲಿ ಇದ್ದುಕೊಂಡೇ ಪ್ರಜ್ವಲ್, 7 ದಿನ ಸಮಯಾವಕಾಶ ಕೋರಿದ್ದರು. ಎಸ್‌ಐಟಿ 2ನೇ ನೋಟಿಸ್ ಸಹ ಜಾರಿ ಮಾಡಿದೆ. 15 ದಿನಗಳಾದರೂ ಪ್ರಜ್ವಲ್ ಹಾಜರಾಗಿಲ್ಲ. ಎಲ್ಲಿದ್ದಾರೆ ಎಂಬುದರ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts