More

    ನಕಲಿ ಚಿನ್ನ ಅಡವಿಟ್ಟು ಸಾಲ ಪಡೆದು ವಂಚಿಸುತ್ತಿದ್ದವರ ಬಂಧಿಸಿದ ಬೆಂಗಳೂರು ಪೊಲೀಸರು…

    ಬೆಂಗಳೂರು: ನಕಲಿ ಚಿನ್ನಾಭರಣಗಳನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಅಡವಿಟ್ಟು ಕೋಟ್ಯಂತರ ರೂ. ಸಾಲ ಪಡೆದುಕೊಂಡು ಬ್ಯಾಂಕ್‌ಗಳಿಗೆ ವಂಚಿಸುತ್ತಿದ್ದ ಮೂವರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

    ಶಿವಮೊಗ್ಗ ಮೂಲದ ಅರುಣ್ ರಾಜು ಕಾನಡೆ(30), ಉಡುಪಿ ಮೂಲದ ಸತ್ಯಾನಂದ (28) ಮತ್ತು ಗದಗ ಮೂಲದ ದತ್ತಾತ್ರೇಯ ಬಾಕಳೆ (28) ಬಂಧಿತರು. ಬ್ಯಾಂಕ್ ಆಪ್ ಬರೋಡಾ ಮ್ಯಾನೇಜರ್ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸೆಪ್ಟೆಂಬರ್ 23ರಂದು ಮಧ್ಯಾಹ್ನ 12.30ರ ಸುಮಾರಿನಲ್ಲಿ ವಿಜಯನಗರ ಠಾಣೆ ವ್ಯಾಪ್ತಿಯ ಬ್ಯಾಂಕ್ ಆಪ್ ಬರೋಡಾ ಶಾಖೆಗೆ ಸತ್ಯಾನಂದ ಮತ್ತು ಜಯಲಕ್ಷ್ಮೀ ಎಂಬುವರು ಸುಮಾರು 235.6 ಗ್ರಾಂ ನಕಲಿ ಚಿನ್ನಾಭರಣಗಳನ್ನು ತೆಗೆದುಕೊಂಡು ಬಂದಿದ್ದಾರೆ. ಜಯಲಕ್ಷ್ಮೀ ಹೆಸರಿನಲ್ಲಿ ಇವರು ಚಿನ್ನವನ್ನು ಅಡವಿಟ್ಟು 7.15 ಲಕ್ಷ ರೂ.ಗಳನ್ನು ಸಾಲವಾಗಿ ಪಡೆದುಕೊಂಡು ವಂಚಿಸಲು ಪ್ರಯತ್ನಿಸಿದ್ದರು. ಈ ಬಗ್ಗೆ ಬ್ಯಾಂಕ್‌ನ ಅಪ್ರೈಸರ್ ಮತ್ತು ಮ್ಯಾನೇಜರ್‌ಗೆ ಅನುಮಾನ ಬಂದು ಅವರು ತಂದಿದ್ದ ಚಿನ್ನಾಭರಣಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅದು ನಕಲಿ ಚಿನ್ನಾಭರಣಗಳು ಎಂಬುದು ಖಚಿತವಾಯಿತು.

    ತಕ್ಷಣ ಬ್ಯಾಂಕ್ ಮ್ಯಾನೇಜರ್ ಮಹೇಶ್ ಸಿ ಹೂಗಾರ್, ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ತಾಮ್ರದ ಮೇಲೆ ಚಿನ್ನವನ್ನು ಲೇಪನ ಮಾಡಿ ಹಾಲ್ ಮಾರ್ಕ್ ಗುರುತನ್ನು ಮುದ್ರಿಸಿರುವ ನಕಲಿ ಚಿನ್ನಾಭರಣಗಳನ್ನು ಪಶ್ಚಿಮ ಬಂಗಾಳದಿಂದ ಕೊರಿಯರ್ ಮೂಲಕ ತರಿಸಿಕೊಳ್ಳುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ನಂತರ ಆ ಚಿನ್ನವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಅಡವಿಟ್ಟು ಸಾಲವನ್ನು ಪಡೆದುಕೊಂಡು ವಾಪಸ್ ಕಟ್ಟದೆ ವಂಚಿಸುತ್ತಿದ್ದರು ಎಂದು ತಿಳಿದು ಬಂದಿದೆ. ಆರೋಪಿಗಳು ಗುಜರಾತ್ ರಾಜ್ಯದ ಸೂರತ್, ಕರ್ನಾಟಕದ ಬೆಂಗಳೂರು, ಉಡುಪಿ, ಗದಗ, ಕೊಪ್ಪಳ, ಹುಬ್ಬಳ್ಳಿ ಜಿಲ್ಲೆಗಳಲ್ಲಿನ ವಿವಿಧ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸುಮಾರು 15 ಕೆ.ಜಿಗಳಷ್ಟು ನಕಲಿ ಚಿನ್ನಾಭರಣಗಳನ್ನು ಅಡ ಇಟ್ಟು ಕೋಟ್ಯಂತರ ರೂಪಾಯಿಗಳನ್ನು ಸಾಲವಾಗಿ ಪಡೆದಿದ್ದಾರೆ. ಈ ಹಣವನ್ನು ಇವರು ವಾಪಸ್ ಕಟ್ಟದೇ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ. ಇದುವರೆಗೂ 1425.640 ಗ್ರಾಂ ನಕಲಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದು ಸಂಬಂಧಪಟ್ಟ ಬ್ಯಾಂಕುಗಳವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    5 ಕೋಟಿಯಷ್ಟು ವಂಚನೆ:
    ದತ್ತಾತ್ರೇಯ ಬಾಕಳೆ ಗದಗಿನ ಬಿಜೆಪಿ ಪಕ್ಷದ ನಗರ ಸಭೆ ಸದಸ್ಯನ ಪುತ್ರನಾಗಿದ್ದು, ಈತ ಜಿಮ್‌ನ ಮಾಲೀಕನಾಗಿದ್ದಾನೆ. ಜಿಮ್‌ನಲ್ಲಿ ಟ್ರೈನರ್ ಆಗಿ ಅರುಣ್ ರಾಜು ಕಾನಡೆ ಕೆಲಸ ಮಾಡುತ್ತಿದ್ದ. ಬಾಕಳೆ ಕಲ್ಕತ್ತಾ ಸೂರತ್‌ವರೆಗೂ ನೆಟ್‌ವರ್ಕ್ ಇಟ್ಟುಕೊಂಡಿದ್ದ ನಕಲಿ ಚಿನ್ನಾಭರಣವನ್ನು ತರಿಸಿಕೊಂಡು ಅದಕ್ಕೆ ತಾಮ್ರದ ಮೇಲೆ ಲೇಪನ ಮಾಡಿಸಿ ಅದಕ್ಕೆ ಹಾಲ್‌ಮಾರ್ಕ್ ಸೀಲ್ ಹಾಕಿಸಿ ಮಾರಾಟ ಮಾಡುತ್ತಿದ್ದ. ಇದರಲ್ಲಿ ಶೇ.30 ರಷ್ಟು ಚಿನ್ನವಿದ್ದು ಉಳಿದದ್ದೆಲ್ಲ ನಕಲಿಯಾಗಿರುತ್ತಿತ್ತು.

    ಇದರ ಮಾಹಿತಿ ಅರಿತ ಅರುಣ್ ಕೂಡ ದತ್ತಾತ್ರೇಯಗೆ ತಿಳಿಯದ ಹಾಗೆ ನೇರವಾಗಿ ಕಲ್ಕತ್ತಾ ಮತ್ತು ಸೂರತ್‌ನಿಂದ ಕೊರಿಯರ್ ಮೂಲಕ ನಕಲಿ ಚಿನ್ನಾಭರಣವನ್ನು ತರಿಸಿ ಅಮಾಯಕರ ಮೂಲಕ ಬ್ಯಾಂಕ್‌ಗಳಲ್ಲಿ ಅಡವಿರಿಸಿ ಸಾಲಪಡೆದು ವಂಚಿಸುತ್ತಿದ್ದ. ಇದೇ ರೀತಿ ಆರೋಪಿಗಳು ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 15 ಕೆ.ಜಿಯಷ್ಟು ನಕಲಿ ಚಿನ್ನವನ್ನು ಅಡವಿಟ್ಟು ಸುಮಾರು 4 ರಿಂದ 5 ಕೋಟಿಯಷ್ಟು ಹಣವನ್ನು ಬ್ಯಾಂಕಿನವರಿಗೆ ವಂಚಿಸಿದ್ದಾರೆ. ಬೆಂಗಳೂರಿನಲ್ಲಿ ಬ್ಯಾಂಕ್ ಆಫ್​ ಬರೋಡಾ, ಗದಗಿನಲ್ಲಿ ಎಸ್‌ಬಿಐ, ಐಸಿಐಸಿಐ, ಹುಬ್ಬಳ್ಳಿಯಲ್ಲಿ ಎಚ್‌ಡಿಎಫ್​ಸಿ ಸೇರಿ ವಿವಿಧ ಬ್ಯಾಂಕ್‌ಗಳಲ್ಲಿ ಮತ್ತು ಗಿರಿವಿ ಅಂಗಡಿಗಳಲ್ಲಿಯೂ ನಕಲಿ ಚಿನ್ನವನ್ನು ಅಡವಿಟ್ಟಿದ್ದಾರೆ. ಗದಗಿನಲ್ಲಿ ಬ್ಯಾಂಕ್‌ನ ಅಪ್ರೈಸರ್ ಅನ್ನು ಡೀಲ್ ಮಾಡಿಕೊಂಡಿದ್ದಾರೆ. ಈ ಸಂಬಂಧ ಬ್ಯಾಂಕ್‌ಗಳಿಗೆ ಮಾಹಿತಿ ನೀಡಲಾಗಿದ್ದು, ಬ್ಯಾಂಕಿನವರು ಠಾಣೆ ತೆರಳಿ ದೂರು ನೀಡುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts