More

    ಕಾಂಗ್ರೆಸ್​ನಿಂದ ಎರಡು ಮುಸ್ಲಿಂ ರಾಷ್ಟ್ರ ಸೃಷ್ಟಿ: ಪ್ರಧಾನಿ ಮೋದಿ ವಾಗ್ದಾಳಿ

    ಮಹೇಂದ್ರಘಡ, ಹರಿಯಾಣ: ರಾಮ ರಾಮ ಎನ್ನುವವರನ್ನೆಲ್ಲ ಕಾಂಗ್ರೆಸ್ ಬಂಧಿಸಲಿದೆ. ತನ್ನ ಮತಬ್ಯಾಂಕನ್ನು ರಕ್ಷಿಸಲು, ಸಮಾಧಾನಪಡಿಸಲು ಭಾರತವನ್ನು ವಿಭಜಿಸಿ ಎರಡು ಮುಸ್ಲಿಂ ರಾಷ್ಟ್ರಗಳನ್ನು ಸೃಷ್ಟಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

    ಹರಿಯಾಣದ ಮಹೇಂದ್ರಗಢದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಹಸು ಹಾಲು ಕೊಡುವ ಮುನ್ನವೇ ಇಂಡಿಯಾ ಮೈತ್ರಿಕೂಟದಲ್ಲಿ ತುಪ್ಪದ ಜಗಳ ಆರಂಭವಾಗಿದೆ ಎಂದು ಟೀಕಿಸಿದರು.

    ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಗುರಿಯಾಗಿಸಿದ ಅವರು, ಕಾಂಗ್ರೆಸ್​ನಂತಿರುವ ಟಿಎಂಸಿ ಇಂಡಿ ಮೈತ್ರಿಕೂಟದ ಭಾಗ. ಕಳೆದ 10-12 ವರ್ಷಗಳಲ್ಲಿ ಮುಸ್ಲಿಮರಿಗೆ ನೀಡಲಾದ ಒಬಿಸಿ ಪ್ರಮಾಣಪತ್ರಗಳನ್ನು ಕಲ್ಕತಾ ಹೈಕೋರ್ಟ್ ರದ್ದುಗೊಳಿಸಿದ್ದರೂ ಅದನ್ನು ಒಪ್ಪಿಕೊಳ್ಳಲು ಮಮತಾ ಬ್ಯಾನರ್ಜಿ ಸಿದ್ಧರಿಲ್ಲ. ನಾನು ಬದುಕಿರುವವರೆಗೂ ದಲಿತರು, ಬುಡಕಟ್ಟು ಜನಾಂಗದವರ ಮೀಸಲಾತಿಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಮೋದಿ ಪ್ರತಿಪಾದಿಸಿದರು.

    ಹರಿಯಾಣದಲ್ಲಿ ಎಲ್ಲರೂ ‘ರಾಮ್ ರಾಮ್ ಎನ್ನುತ್ತಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇರುವವರೆಗೂ ರಾಮ ಮಂದಿರ ನಿರ್ವಣಕ್ಕೆ ಅವಕಾಶ ನೀಡಿರಲಿಲ್ಲ. ಅಯೋಧ್ಯೆಯಲ್ಲಿ ಮಂದಿರದ ಪ್ರಾಣಪ್ರತಿಷ್ಠೆ ಆಹ್ವಾನ ತಿರಸ್ಕರಿಸಿ ಭಕ್ತರಿಗೆ ಅವಮಾನ ಮಾಡಿತು ಎಂದು ವಾಗ್ದಾಳಿ ನಡೆಸಿದರು.

    ಐದು ವರ್ಷಗಳಲ್ಲಿ ಐದು ಪ್ರಧಾನಿಗಳನ್ನು ಹೊಂದುವ ಬಗ್ಗೆ ಮೈತ್ರಿಕೂಟ ಮಾತನಾಡುತ್ತಿದೆ. ಅಂದರೆ ಪ್ರತಿ ವರ್ಷಕ್ಕೆ ಒಬ್ಬ ಪ್ರಧಾನಿ. ದೇಶವೊಂದನ್ನು ಹೀಗೆ ನಡೆಸಬಹುದೇ? ಎಂದು ಪ್ರಶ್ನಿಸಿದ ಅವರು, ಕಲ್ಕತ್ತಾ ಹೈಕೋರ್ಟ್ ತೀರ್ಪನ್ನು ನೀವು ನೋಡಿರಬಹುದು. ಇಂಡಿಯಾ ಮೈತ್ರಿಕೂಟದವರು ಎಸ್​ಸಿ-ಎಸ್​ಟಿ, ಒಬಿಸಿಗಳ ಮೀಸಲಾತಿ ವಿರುದ್ಧ ಪಿತೂರಿ ಮಾಡಿದ್ದಾರೆ. ಬಂಗಾಳದಲ್ಲಿ ಟಿಎಂಸಿ ಮಾಡಿದ್ದೇನು? ರಾತ್ರೋರಾತ್ರಿ ಮುಸ್ಲಿಮರಿಗೆ ಒಬಿಸಿ ಪ್ರಮಾಣಪತ್ರ ಹಂಚಿದರು. ಒಬಿಸಿಗಳಿಗೆ ನೀಡಬೇಕಾಗಿದ್ದ ಮೀಸಲಾತಿ ಮುಸ್ಲಿಮರಿಗೆ ನೀಡಲಾಯ್ತು. ದುರಂತವೆಂದರೆ ನುಸುಳುಕೋರರಿಗೂ ನೀಡಲಾಗುತ್ತಿದೆ ಎಂದು ಪ್ರಧಾನಿ ಮೋದಿ ಕಿಡಿಕಾರಿದರು. ನ್ಯಾಯಾಲಯ ಇಲ್ಲದಿದ್ದರೆ ಏನಾಗುತ್ತಿತ್ತು? ನಮ್ಮ ದೀನ ದಲಿತರು, ಆದಿವಾಸಿ ಸಹೋದರ ಸಹೋದರಿಯರೇನು ಮಾಡಲು ಸಾಧ್ಯ? ಹೈಕೋರ್ಟ್ ತೀರ್ಪನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಬಂಗಾಳ ಸಿಎಂ ಘೊಷಿಸಿದ್ದಾರೆ. ಇದು ಇಂಡಿಯಾ ಮೈತ್ರಿಕೂಟದ ಮನಸ್ಥಿತಿ ಎಂದು ಆಕ್ರೋಶ ಹೊರಹಾಕಿದರು.

    ಪಾಕ್​ಗೆ ಹೋಗಿ ಅದರ ಶಕ್ತಿ ಪರೀಕ್ಷಿಸಿದ್ದೆ: ‘ಪಾಕಿಸ್ತಾನದವರು ಎಷ್ಟು ಶಕ್ತಿಶಾಲಿ ಎಂಬುವುದನ್ನು ನಾನೇ ಅಲ್ಲಿಗೆ ಹೋಗಿ ಪರೀಕ್ಷಿಸಿ ಬಂದಿದ್ದೇನೆ..’ ಎಂಬುದಾಗಿ ಹೇಳುವ ಮೂಲಕ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಹೇಳಿಕೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

    ‘ಪಾಕಿಸ್ತಾನದ ಬಳಿ ಅಣುಬಾಂಬ್ ಇರುವುದರಿಂದ ಭಾರತ ಪಾಕ್​ಗೆ ಗೌರವ ನೀಡಬೇಕು’ ಎಂದು ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಇತ್ತೀಚೆಗೆ ನೀಡಿದ್ದ ಹೇಳಿಕೆಗೆ ಸಂಬಂಧಿಸಿ ಪ್ರಧಾನಿ ಮೋದಿ ಮಾಧ್ಯಮಸಂಸ್ಥೆಯ ಸಂದರ್ಶನವೊಂದರಲ್ಲಿ ಈ ಪ್ರತಿಕ್ರಿಯೆ ನೀಡಿದ್ದಾರೆ. ಮಣಿಶಂಕರ್ ಅಯ್ಯರ್ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮೋದಿ, ‘ಅವರ(ಪಾಕ್) ತಾಕತ್ ಏನು ಎನ್ನುವುದನ್ನು ನಾನೇ ಅಲ್ಲಿಗೆ ಹೋಗಿ ನೋಡಿ ಬಂದಿದ್ದೇನೆ’ ಎನ್ನುತ್ತ ತಾವು 2015ರಲ್ಲಿ ಲಾಹೋರ್​ಗೆ ನೀಡಿದ್ದ ಭೇಟಿ ಕುರಿತು ಪ್ರಸ್ತಾಪಿಸಿದರು. ನಾನು ಅಂದು ಪಾಕ್​ಗೆ ಭೇಟಿ ನೀಡಿದ್ದಾಗ, ಓ ದೇವ್ರೇ.. ವೀಸಾ ಇಲ್ಲದೆ ಬಂದಿರಾ? ಎಂದು ಕೆಲವು ಪತ್ರಕರ್ತರು ಪ್ರಶ್ನಿಸಿದ್ದರು. ‘ಇದು ಕೆಲವು ಸಮಯದ ಮಟ್ಟಿಗೆ ನನ್ನ ದೇಶವೇ ಆಗಿತ್ತು ಎಂದು ನಾನು ಅವರಿಗೆ ಉತ್ತರಿಸಿದ್ದೆ’ ಎಂದು ಮೋದಿ ಹೇಳಿದರು.

    ನುಡಿದಂತೆ ನಡೆದಿದ್ದೇನೆ: ನಿಮ್ಮ ಒಂದು ಮತ ಭ್ರಷ್ಟರನ್ನು ಜೈಲಿನ ಬಾಗಿಲಿಗೆ ತಂದಿದೆ. ನಿಮ್ಮ ಮುಂದಿನ ಮತ ಭ್ರಷ್ಟರನ್ನು ಜೈಲಿಗೆ ಹಾಕಿದ್ದನ್ನು ಖಚಿತಪಡಿಸುತ್ತದೆ ಎಂಬುದಾಗಿ 2019ರಲ್ಲೇ ಹೇಳಿದ್ದೆ. ಆ ಮಾತನ್ನು ನಾನು ಉಳಿಸಿಕೊಂಡಿದ್ದೇನೆ ಎಂದು ಪ್ರಧಾನಿ ಮೋದಿ ಇನ್ನೊಂದು ಸಂದರ್ಶನದಲ್ಲಿ ಹೇಳಿದ್ದಾರೆ. ಈ ಮೂಲಕ ಅವರು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಅವರನ್ನು ಜೈಲಿಗೆ ಹಾಕಲ್ಪಟ್ಟಿದ್ದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts