More

    ತೆಂಗು ಬೆಳೆಗಾರರ ಹಿತಕಾಯಲು ಬದ್ಧ : ಪ್ರಧಾನಿ ಮೋದಿ ಭರವಸೆ

    ತುಮಕೂರು: ದಕ್ಷಿಣ ಭಾರತದ ತೆಂಗುಬೆಳೆಗಾರರ ಹಿತ ಕಾಪಾಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

    ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಗುರುವಾರ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಲೋಕಾರ್ಪಣೆ, 2016-17 ಹಾಗೂ 2017-18ನೇ ಸಾಲಿನ ಕೃಷಿ ಕರ್ಮಣ್ಯ ಪ್ರಶಸ್ತಿ ವಿತರಣೆ ಹಾಗೂ ಮೀನುಗಾರರಿಗೆ ಸೌಲಭ್ಯ ವಿತರಣೆ ಮಾಡಿ ರೈತರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ದಕ್ಷಿಣ ಭಾರತದಲ್ಲಿ ವಾಣಿಜ್ಯಬೆಳೆಗಳಾದ ತೆಂಗು, ಗೋಡಂಬಿ ಬೆಳೆಗಳನ್ನು ಬೆಳೆಯುತ್ತಿದ್ದು, ತೆಂಗುಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ತೆಂಗು ಬೆಳೆಯುವ ರೈತರ ಹಿತರಕ್ಷಣೆಗೆ ಬದ್ಧ ಎಂದರು. ಕರ್ನಾಟಕ ರಾಜ್ಯವೊಂದರಲ್ಲೇ ಸುಮಾರು 550ಕ್ಕೂ ಹೆಚ್ಚು ತೆಂಗುಬೆಳೆಗಾರರ ಕಂಪನಿಗಳಿವೆ. ತೆಂಗು ಬೆಳೆಯುವ ರೈತರಿಗೆ ಸೂಕ್ತ ಬೆಲೆ ಸಿಗದೆ ನಷ್ಟ ಅನುಭವಿಸಿದ್ದು, ಇತರೆ ರೈತರಿಗೆ ಸಿಗುವಂತೆ ಪ್ರೋತ್ಸಾಹಧನ, ಬೆಂಬಲ ಬೆಲೆಯನ್ನು ತೆಂಗುಬೆಳೆಗಾರರಿಗೂ ನೀಡುವ ಚಿಂತನೆ ಇದೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ತೆಂಗು ಬೆಳೆಗೆ ಸೂಕ್ತ ಬೆಲೆ ನೀಡಲಾಗುವುದು ಎಂದು ಮೋದಿ ಭರವಸೆ ನೀಡಿದರು.

    ಸಚಿವರ ಕಾರು ಪ್ರವೇಶಕ್ಕೆ ರಾಮನಗರ ಎಸ್ಪಿ ಗರಂ !: ಸಿದ್ಧಗಂಗಾ ಮಠದ ಆವರಣಕ್ಕೆ ಸಚಿವ ವಿ.ಸೋಮಣ್ಣ ಅವರ ಕಾರಿಗೆ ಪ್ರವೇಶ ನೀಡಿದ್ದಕ್ಕೆ ಪಿಎಸ್‌ಐ ವಿರುದ್ಧ ರಾಮನಗರ ಎಸ್ಪಿ ಅನೂಪ್‌ಶೆಟ್ಟಿ ಗರಂ ಆದರು. ಪ್ರಧಾನಿ ಮೋದಿ ಶ್ರೀಮಠದ ಭೇಟಿ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಉಸ್ತುವಾರಿ ಹೊತ್ತಿದ್ದ ಅನೂಪ್‌ಶೆಟ್ಟಿ ಗುರುವಾರ ಬೆಳಗ್ಗೆ ಸಿದ್ಧತೆ ಪರಿಶೀಲಿಸಲು ಮಠಕ್ಕೆ ಬಂದಿದ್ದ ಸೋಮಣ್ಣ ಅವರ ಕಾರನ್ನು ಮಠದ ಅಂಗಳಕ್ಕೆ ಬಿಟ್ಟಿದ್ದಕ್ಕೆ ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಯಾರ್ ಕಾರು ಬರುತ್ತೆ ಗೊತ್ತಾ! ಇವತ್ತು ಯಾರ್ ಕಾರ್ ಬರುತ್ತೆ ಗೊತ್ತೇನಪ್ಪ ನಿನಗೆ? ಯಾರಾದ್ರೇನು ಕಾರು ಹೇಗೆ ಬಿಟ್ಟೆ. ಅಷ್ಟು ಗೊತ್ತಾಗಲ್ವಾ ಎಂದು ರೇಗಾಡಿದರು. ನಂತರ ಮಠದಿಂದ ಮರಳಿದ ಸಚಿವ ವಿ.ಸೋಮಣ್ಣ ಎಸ್‌ಪಿಜಿ ಅವರಿಗೆ ಮನವರಿಕೆ ಮಾಡಿಕೊಡಬಹುದು. ಆದರೆ, ನಮ್ಮವರಿಗೆ ಹೇಳಲಿಕ್ಕೆ ಆಗ್ತಿಲ್ಲ ಎಂದು ಗೊಣಗಿಕೊಂಡು ಕಾರು ಹತ್ತಿ ಹೊರಟರು.

    ಮೋದಿ ಭಾಷಣಕ್ಕೆ ಕಾಂಗ್ರೆಸ್ ಅಪಸ್ವರ: ಪ್ರಧಾನಿ ನರೇಂದ್ರಮೋದಿ ಸಿದ್ಧಗಂಗಾ ಮಠದ ಮಕ್ಕಳ ಮುಂದೆ ಮಾಡಿರುವ ಭಾಷಣಕ್ಕೆ ಜಿಲ್ಲಾ ಕಾಂಗ್ರೆಸ್ ಅಪಸ್ವರ ಎತ್ತಿದೆ. ಸಿದ್ಧಗಂಗಾ ಮಠ ಜ್ಯಾತ್ಯತೀತ, ಪಕ್ಷಾತೀತವಾಗಿ ಗುರುತಿಸಿಕೊಂಡು ಸರ್ವಧರ್ಮ, ಜನಾಂಗ, ಪಕ್ಷಗಳಿಂದಲೂ ಗೌರವಕ್ಕೆ ಪಾತ್ರವಾಗಿದ್ದು, ಇಂತಹ ಸ್ಥಳದಲ್ಲಿ ರಾಜಕೀಯ ಭಾಷಣ ಮಾಡಿದ್ದಾರೆ ಎಂದು ಮಾಜಿ ಶಾಸಕ ಡಾ.ರಫೀಕ್‌ಅಹ್ಮದ್ ಟೀಕಿಸಿದ್ದಾರೆ. ಮಠದ ಮಕ್ಕಳೊಂದಿಗೆ ಮಾತನಾಡಿ ದೇಶಾಭಿಮಾನಕ್ಕೆ ಸ್ಫೂರ್ತಿಯಾಗುವ ಮಾತನಾಡುವ ಬದಲಾಗಿ ಧರ್ಮ, ಜಾತಿಗಳ ವಿರುದ್ಧ ದ್ವೇಷ ಕಾರುವ ಭಾಷಣ ಮಾಡಿರುವುದು ಖಂಡನೀಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಜಲಸಂಕಷ್ಟ ಪರಿಸ್ಥಿತಿ ನಿರ್ವಹಣೆಗೆ ಜಲ ಜೀವನ್ ಮಿಷನ್: ಕರ್ನಾಟಕ ಸೇರಿ ಇಡೀ ದೇಶದಲ್ಲಿ ಜಲ ಸಂಕಷ್ಟ ಪರಿಸ್ಥಿತಿ ನಿರ್ವಹಣೆಗೆ ಜಲ ಜೀವನ್ ಮಿಷನ್ ಯೋಜನೆಯನ್ನು ಆರಂಭಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು. ರಾಜ್ಯವು ಸೇರಿ 7 ರಾಜ್ಯಗಳಲ್ಲಿ ಅಂತರ್ಜಲ ಅಭಿವೃದ್ಧಿಗಾಗಿ ಅಟಲ್ ಭೂಜಲ್ ಯೋಜನೆ ಅಭಿಯಾನವನ್ನು ಜಾರಿಗೊಳಿಸಿದ್ದು, ಆ ಮೂಲಕ ಅಂತರ್ಜಲ ಅಭಿವೃದ್ಧಿ ನೀರಿನ ಸಮಸ್ಯೆಯನ್ನು ನಿಭಾಯಿಸಲು ಕ್ರಮವಹಿಸಲಾಗಿದೆ. ಕೃಷಿಗೆ ಪೂರಕವಾದ ನೀರಾವರಿ ಯೋಜನೆಗಳನ್ನು ಸಹ ಸರ್ಕಾರ ಕೈಗೆತ್ತಿಕೊಂಡಿದೆ ಎಂದರು. ಕೃಷಿ ಕರ್ಮಣ್ಯ ಪ್ರಶಸ್ತಿಯನ್ನು ಪೌಷ್ಠಿಕ ಆಹಾರಗಳನ್ನು ಬೆಳೆಯುವ ಕೃಷಿ ವಿಭಾಗ, ಸಾವಯವ ಕೃಷಿ ವಿಭಾಗಕ್ಕೂ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು.

    ರೈತ ಸಂಘದ ಕಾರ್ಯಕರ್ತರ ಬಂಧನ: ಕೇಂದ್ರ ಸರ್ಕಾರ ರೈತರನ್ನು ಕಡೆಗಣಿಸಿದ್ದು ಸ್ವಾಮಿನಾಥನ್ ಆಯೋಗದ ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರಮೋದಿ ಅವರಿಗೆ ಕಪ್ಪು ಬಾವುಟ ತೋರಿಸಿ ಪ್ರತಿಭಟಿಸಲು ಮುಂದಾಗಿದ್ದ ರಾಜ್ಯ ರೈತ ಸಂಘದ ಪದಾಧಿಕಾರಿಗಳನ್ನು ಪೊಲೀಸರು ವಶಕ್ಕೆ ಪಡೆದರು. ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆಗೆ ಮುಂದಾಗಿದ್ದ ಜಿಲ್ಲಾಧ್ಯಕ್ಷ ಆನಂದಪಟೇಲ್ ನೇತೃತ್ವದ ತಂಡವನ್ನು ಎಎಸ್ಪಿ ಉದೇಶ್ ನೇತೃತ್ವದಲ್ಲಿ ಪೊಲೀಸರು ತಡೆದು ವಶಕ್ಕೆ ಪಡೆದು ಮಧುಗಿರಿ ಠಾಣೆಯಲ್ಲಿ ದಿನಪೂರ್ತಿ ಕೂರಿಸಿದ್ದರು. ಹುಳಿಯಾರು ಪಟ್ಟಣದಲ್ಲಿ ಕೆಂಕೆರೆ ಸತೀಶ್ ನೇತೃತ್ವದಲ್ಲಿ ಬಸ್‌ನಲ್ಲಿ ಹೊರಟಿದ್ದ ಮಹಿಳೆಯನ್ನು ವಶಕ್ಕೆ ಪಡೆಯಲಾಗಿತ್ತು. ಕುಣಿಗಲ್, ಮಾಗಡಿ, ರಾಮನಗರ, ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿ ಮತ್ತಿತರರ ಕಡೆಗಳಲ್ಲಿ ರೈತ ಮುಖಂಡರನ್ನು ವಶಕ್ಕೆ ಪಡೆಯಲಾಗಿತ್ತು.

    ವಿವಿ ಹೆಲಿಪ್ಯಾಡ್‌ನಲ್ಲಿ ಪ್ರಧಾನಿಗೆ ಸ್ವಾಗತ: ತುಮಕೂರು ವಿವಿ ಹೆಲಿಪ್ಯಾಡ್‌ನಲ್ಲಿ ಪ್ರಧಾನಿ ನರೇಂದ್ರಮೋದಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹಸಿರು ಶಾಲು ಹೊದಿಸಿ, ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮೇಯರ್ ಲಲಿತಾ, ಶಾಸಕ ಜಿ.ಬಿ.ಜ್ಯೋತಿಗಣೇಶ್ ಮತ್ತಿತರರು ಇದ್ದರು.

    ಹರಿದುಬಂದ ಜನಸಾಗರಕ್ಕೆ ಸಕಲ ವ್ಯವಸ್ಥೆ: ರೈತ ಸಮಾವೇಶದಲ್ಲಿ ನಿರೀಕ್ಷೆಗೂ ಮೀರಿದ ಜನ ಸಮೂಹವಿತ್ತು. ತುಮಕೂರು, ಚಿತ್ರದುರ್ಗ, ಹಾಸನ, ಬೆಂಗಳೂರು, ರಾಮನಗರ ಸೇರಿ ಸುತ್ತಮುತ್ತಲ ಜಿಲ್ಲೆಗಳಿಂದ ಜನರು ಗುರುವಾರ ಬೆಳಗ್ಗೆಯಿಂದಲೇ ಬರಲಾರಂಭಿಸಿದ್ದರು. ನಗರದ ಬಿ.ಎಚ್.ರಸ್ತೆಯಲ್ಲಿ ಮಧ್ಯಾಹ್ನ 1 ರಿಂದ 5ರವರೆಗೂ ಸಂಚಾರ ಬಂದ್ ಮಾಡಲಾಗಿತ್ತು. ದೂರದಿಂದ ಬಂದಿದ್ದವರಿಗೆಲ್ಲ ಮಾರ್ಗಮಧ್ಯೆಯೇ ಊಟದ ವ್ಯವಸ್ಥೆ ಮಾಡಿಕೊಡಲಾಗಿತ್ತು. ಜೂನಿಯರ್ ಕಾಲೇಜು ಮೈದಾನದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಿಯೂ ಯಾವ ಕೊರತೆಯಾಗದಂತೆ ಜಿಲ್ಲಾಡಳಿತ ಕಾರ್ಯಕ್ರಮ ಆಯೋಜಿಸಿತ್ತು.

    ಮೋದಿ… ಮೋದಿ…: ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮದತ್ತ ಮೋದಿ ವೇದಿಕೆಗೆ ಆಗಮಿಸಿ ಕೈಬೀಸುತ್ತಿದ್ದಂತೆ ಮೋದಿ..ಮೋದಿ ಘೋಷಣೆಗಳು ಮೊಳಗಿದವು. ಜೈಜವಾನ್ ಅಂತ ನಾನು ಕೂಗುವೆ.. ನೀವು ಜೈಕಿಸಾನ್ ಅಂತ ಹೇಳಿ ಎಂದು ಮೋದಿ ಜೈಜವಾನ್ ಅಂತ ಘೋಷಣೆ ಕೂಗುತ್ತಿದ್ದಂತೆ ಜನರು ಜೈಕಿಸಾನ್ ಎಂದು ಕೂಗಿದರು.

    ಗಣ್ಯರ ದಂಡು: ಮೋದಿ ಕಾರ್ಯಕ್ರಮದಲ್ಲಿ ಗಣ್ಯರ ದಂಡೇ ಸೇರಿತ್ತು. ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರ ದೊಡ್ಡ ದಂಡೇ ಕಾರ್ಯಕ್ರಮ ಸಾಕ್ಷೀಕರಿಸಿತು. ರಾಮಕೃಷ್ಣ ಆಶ್ರಮದ ವೀರೇಶಾನಂದ ಸ್ವಾಮೀಜಿ ಗಣ್ಯರ ಮಧ್ಯದಲ್ಲಿ ಕುಳಿತು ಮೋದಿ ಭಾಷಣ ಆಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts