More

    ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿಗೆ ಕಾಂಗ್ರೆಸ್​ನಿಂದ ಪ್ರಶ್ನೆಗಳ ಸುರಿಮಳೆ: ಇದು ಮೋದಿ ಗ್ಯಾರೆಂಟಿ ಎಂದು ವ್ಯಂಗ್ಯ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದಾಗಲೆಲ್ಲ ಪ್ರಶ್ನೆಗಳು ಸುರಿಮಳೆಗೈಯುವ ಕಾಂಗ್ರೆಸ್​, ಈ ಬಾರಿಯು ಸಹ ಕೆಲವೊಂದಿಷ್ಟು ಪ್ರಶ್ನೆಗಳನ್ನು ಪ್ರಧಾನಿಗೆ ಕೇಳಿದೆ.

    ಪ್ರಧಾನಿ ಮೋದಿ ಅವರಿಂದು ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಇಂಡಿಯಾ ಎನರ್ಜಿ ಸಪ್ತಾಹ ಉದ್ಘಾಟನೆ. ತುಮಕೂರಿನ ಗುಬ್ಬಿಯಲ್ಲಿ ನಿರ್ಮಾಣವಾಗಿರುವ ಎಚ್​ಎಎಲ್​ ತಯಾರಿಕ ಘಟಕವನ್ನು ರಾಷ್ಟ್ರಕ್ಕೆ ಸಮರ್ಪಣೆ, ಲಘು ಉಪಯೋಗಿ ಹೆಲಿಕಾಪ್ಟರ್​ ಅನಾವರಣ ಹಾಗೂ ತುಮಕೂರು ಕೈಗಾರಿಕಾ ಟೌನ್​ಷಿಪ್​ ಯೋಜನೆ ಮತ್ತು ಜಲ ಜೀವನ್​ ಮಿಷನ್​ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲು ರಾಜ್ಯಕ್ಕೆ ಆಗಮಿಸಿದ್ದಾರೆ.

    ಈ ಬಾರಿ ಮೋದಿ ಗ್ಯಾರಂಟಿ (Modi_ಗ್ಯಾರಂಟಿ) ಎಂಬ ಹ್ಯಾಶ್​ಟ್ಯಾಗ್​ ಮೂಲಕ ಪ್ರಶ್ನೆಗಳನ್ನು ಕೇಳಿ ಪ್ರಧಾನಿ ಮೋದಿ ಕಾಲೆಳೆಯುವ ಪ್ರಯತ್ನವನ್ನು ಕಾಂಗ್ರೆಸ್​ ಮಾಡಿದೆ.

    ಕರ್ನಾಟಕದಲ್ಲಿ ಎಷ್ಟು ಪರ್ಸೆಂಟ್ ಕಮಿಷನ್ ಸರ್ಕಾರವಿದೆ ಎಂದು ಯಾರಿಗೆ ಕೇಳಿದರೂ ಥಟ್ ಎಂದು ಉತ್ತರಿಸುತ್ತಾರೆ. ಆದರೆ, ನಮಗೆ ಗ್ಯಾರಂಟಿ ಇದೆ. ಈ ಪ್ರಶ್ನೆಗೆ ಡಬಲ್ ಎಂಜಿನ್ ಸರ್ಕಾರದ ಮುಖ್ಯಸ್ಥರಾದ ನಮ್ಮ ಪ್ರಧಾನಿಗಳು ಎಂದಿಗೂ ಉತ್ತರಿಸುವುದಿಲ್ಲ. ಗುತ್ತಿಗೆದಾರರ ಕಮಿಷನ್ ಆರೋಪದ ಬಗ್ಗೆಯೂ ಮಾತನಾಡುವುದಿಲ್ಲ.‌

    ಕರ್ನಾಟಕದಲ್ಲಿ ವಿವಿಧ ಹುದ್ದೆಗಳಿಗೆ ನಡೆದ ನೇಮಕಾತಿಗಳಲ್ಲಿ ಸಾಲು ಸಾಲಾಗಿ ಹಗರಣಗಳು ನಡೆದಿದ್ದು, ಹುದ್ದೆಗಳಿಗೆ ತಕ್ಕಂತೆ 80 ಲಕ್ಷ, 70 ಲಕ್ಷ, 50 ಲಕ್ಷ, 1 ಕೋಟಿ ರೂ.ವರೆಗೂ ಹಣ ಫಿಕ್ಸ್ ಆಗಿದೆ. ಆದರೆ, ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆ ನೀಡಿದ್ದ ಪ್ರಧಾನಿಗಳು ಖಂಡಿತ ಈ ಹಗರಣದ ಕುರಿತ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ.

    ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ಎಗ್ಗಿಲ್ಲದೆ ಸಾಗಿದೆ.‌ ಹುದ್ದೆಗಳಿಗೆ,‌ ಆಯಕಟ್ಟಿನ ಸ್ಥಳಗಳಿಗೆ ಇಂತಿಷ್ಟು ಎಂದು ರೇಟ್ ಕಾರ್ಡ್ ಫಿಕ್ಸಾಗಿದೆ. ಆದರೆ, ರಾಜ್ಯಕ್ಕೆ ಆಗಮಿಸಿರುವ ಮೋದಿಯವರು ತಮ್ಮ ಡಬಲ್ ಎಂಜಿನ್ ಸರ್ಕಾರದ ವರ್ಗಾವಣೆ ದಂಧೆಯ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ. ಆರೋಪಗಳಿಗೆ ಉತ್ತರಿಸುವುದಿಲ್ಲ.

    ಕರ್ನಾಟಕವು ಸತತ ಮೂರು ವರ್ಷಗಳ ಕಾಲ ಪ್ರವಾಹಕ್ಕೆ ತುತ್ತಾಗಿದೆ. ಜನ ಆಸ್ತಿ ಪಾಸ್ತಿ ಕಳೆದುಕೊಂಡು ಕಣ್ಣೀರಿಟ್ಟರು. ನೆರೆ ಸಂತ್ರಸ್ತರ ಸಂಕಟ ಆಲಿಸಲು ಎಂದಾದರೂ ಕರ್ನಾಟಕಕ್ಕೆ ಬಂದಿದ್ದಾರೆಯೇ ನಮ್ಮ ಪ್ರಧಾನಿಗಳು? ಪ್ರವಾಹ ಪರಿಹಾರಕ್ಕೆ ಅಗತ್ಯ ನೆರವನ್ನಾದರೂ ನೀಡಿದ್ದಾರೆಯೇ? ಈ ಪ್ರಶ್ನೆಗಳಿಗೆ ಅವರು ಉತ್ತರಿಸುವುದಿಲ್ಲ.

    ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಕಾರಣದಿಂದ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 20ಕ್ಕೂ ಅಧಿಕ. ಮೋದಿಯವರು ಬಂದಾಗ ತೇಪೆ ಹಚ್ಚುವ ರಸ್ತೆಗಳು ಅವರು ದೆಹಲಿ ತಲುಪುವ ಮೊದಲೇ ಇಲ್ಲಿ ಕಿತ್ತು ಹೋಗಿರುತ್ತವೆ. ಬಿಜೆಪಿ ಸರ್ಕಾರ ನಡೆಸುವ ಈ ಕಮಿಷನ್ ಕಾಮಗಾರಿಗಳ ಬಗ್ಗೆ ಅವರಲ್ಲಿ ಖಂಡಿತ ಉತ್ತರವಿಲ್ಲ.

    ಕರ್ನಾಟಕ GST ಸಂಗ್ರಹದಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿದೆ. ಆದರೆ ತನ್ನ ಪಾಲಿನ ಹಣ ವಾಪಸ್ ಪಡೆಯುವಲ್ಲಿ ಸದಾ ಕೊನೆಯಲ್ಲಿದೆ. ರಾಜ್ಯದ ಮಕ್ಕಳಿಗೆ ಯೂನಿಫಾರಂ, ಸ್ಕೂಲ್ ಬ್ಯಾಗ್ ನೀಡಲೂ ಸರ್ಕಾರದ ಬಳಿ ಹಣವಿಲ್ಲ.‌ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ GST ಮೋಸದ ಬಗ್ಗೆ ಖಂಡಿತ ಪ್ರಧಾನಿಗಳು ಉತ್ತರ ನೀಡುವುದಿಲ್ಲ.

    ಮೋದಿಯವರ ಗೆಳೆಯ ಅದಾನಿಯ ಮಹಾ ಮೋಸ ಬಯಲಾಗಿದೆ.‌ ಅದರೊಂದಿಗೆ ಲಕ್ಷಾಂತರ ಕೋಟಿ ಹಣವೂ ನಷ್ಟವಾಗಿದೆ. ಈ ನಷ್ಟದಲ್ಲಿ SBI ಮತ್ತು LIC ಹೂಡಿಕೆ ಮಾಡಿದ್ದ ಜನಸಾಮಾನ್ಯರ ಹಣವೂ ಸೇರಿದೆ.‌ ತಮ್ಮ ಸ್ನೇಹಿತನ ಮೇಲೆ ಯಾವ ತನಿಖೆ ಮಾಡಿಸುತ್ತಾರೆ ಮತ್ತು ಜನಸಾಮಾನ್ಯರ ಉಳಿತಾಯದ ಹಣದ ಭವಿಷ್ಯವೇನು? ಕ್ಷಮಿಸಿ. ಈ ಬಗ್ಗೆ ಅವರು ಮಾತನಾಡುವುದಿಲ್ಲ.

    ಚುನಾವಣೆ ಸಮೀಪದಲ್ಲಿರುವಾಗ ಕರ್ನಾಟಕಕ್ಕೆ ತಿಂಗಳಿಗೆ ನಾಲ್ಕು ಬಾರಿ ಬರಲು ಕಾತುರರಾಗಿರುತ್ತಾರೆ! ಆದರೆ, ಪ್ರವಾಹ ಬಂದಾಗ ಬರಲು ಏಕೆ ಕಾತುರರಾಗಿರಲಿಲ್ಲ? ಸಿದ್ದಗಂಗಾ ಶ್ರೀಗಳು ಶಿವೈಕ್ಯರಾದಾಗ ಬರಲು ಏಕೆ ಕಾತುರರಾಗಿರಲಿಲ್ಲ? ರಾಜ್ಯದ GST ಪಾಲು ನೀಡಲು, ನೆರೆ, ಬರ ಪರಿಹಾರ ನೀಡಲು ಏಕೆ ಕಾತುರರಾಗಿಲ್ಲ?

    ಹೀಗೆ ಪ್ರಶ್ನೆಗಳನ್ನು ಕೇಳಿರುವ ಕಾಂಗ್ರೆಸ್​ ಖಂಡಿತವಾಗಿ ಪ್ರಧಾನಿ ಮೋದಿ ಇದ್ಯಾವುದಕ್ಕೂ ಉತ್ತರ ನೀಡುವುದಿಲ್ಲ. ಏಕೆಂದರೆ, ಇದು ಮೋದಿ ಗ್ಯಾರಂಟಿ ಎಂದು ಕಾಲೆಳೆದಿದೆ. ಇದಕ್ಕೆ ಬಿಜೆಪಿ ಯಾವ ರೀತಿಯಲ್ಲಿ ಉತ್ತರ ಕೊಡಲಿದೆ ಎಂದು ಕಾದು ನೋಡಬೇಕಿದೆ. (ದಿಗ್ವಿಜಯ ನ್ಯೂಸ್​)

    ವಿಶ್ವದಲ್ಲಿ ಭಾರತ ಮುಂಚೂಣಿಯಲ್ಲಿರುವ ಮತ್ತೊಂದು ಕ್ಷೇತ್ರವೆಂದರೆ ಗ್ರೀನ್​ ಹೈಡ್ರೋಜನ್: ಪ್ರಧಾನಿ ಮೋದಿ

    ಮೂರನೇ ಬಾರಿಗೆ ಗ್ರ್ಯಾಮಿ ಅವಾರ್ಡ್​ ಗೆದ್ದ ಬೆಂಗಳೂರು ಮೂಲದ ರಿಕ್ಕಿ ಕೇಜ್

    ಪಠಾಣ್​ ಸಿನಿಮಾ ಇಷ್ಟ ಆಗಲಿಲ್ಲ ಎಂದ ಮಗುವಿಗೆ ಶಾರುಖ್​ ಖಾನ್​ ಕೊಟ್ಟ ಉತ್ತರ ವೈರಲ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts