More

    ಜಿಲ್ಲಾ ಮಟ್ಟದಲ್ಲಿ ಕಣ್ಗಾವಲು ಅಧಿಕಾರಿ ನೇಮಕಕ್ಕೆ ಪಿಎಂ ಸೂಚನೆ: ವಿವಿಧ ಮುಖ್ಯಮಂತ್ರಿಗಳ ಜತೆ ನಡೆದ ವೀಡಿಯೋ ಕಾನ್ಫರೆನ್ಸ್‌

    ನವದೆಹಲಿ: ಕರೊನಾ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಂದು ರಾಜ್ಯದಲ್ಲಿಯೂ ಜಿಲ್ಲಾ ಮಟ್ಟದ ರೋಗ ಕಣ್ಗಾವಲು ಅಧಿಕಾರಿಯನ್ನು ನೇಮಕ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾರೆ.

    ಕರೊನಾ ವೈರಸ್‌ ಅನ್ನು ಹೇಗೆ ನಿಭಾಹಿಸಬೇಕು ಎಂಬ ಬಗ್ಗೆ ಕಾರ್ಯತಂತ್ರ ರೂಪಿಸಲು ಹಾಗೂ ಖಾಸಗಿ ಪ್ರಯೋಗಾಲಯಗಳಿಂದ ದತ್ತಾಂಶವನ್ನು ಸಂಗ್ರಹಿಸಿ ಮುಂದಿನ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ರೋಗ ಕಣ್ಗಾವಲು ಅಧಿಕಾರಿಗಳ ಅವಶ್ಯಕತೆ ಇದೆ ಎಂದು ಅವರು ಹೇಳಿದ್ದಾರೆ.

    ಕರೊನಾ ವೈರಸ್‌ ಕುರಿತಂತೆ ದೇಶದ ಎಲ್ಲಾ ರಾಜ್ಯಗಳು ತೆಗೆದುಕೊಂಡಿರುವ ಕ್ರಮಗಳ ಕುರಿತು ತಿಳಿಯುವ ಸಂಬಂಧ ಇಂದು ಅವರು ಮುಖ್ಯಮಂತ್ರಿಗಳ ಜತೆ ಎರಡನೆಯ ಬಾರಿ ನಡೆಸಿದ ವೀಡಿಯೋ ಕಾನ್ಫರೆನ್ಸ್‌ನಲ್ಲಿ ಈ ಸೂಚನೆಗಳನ್ನು ನೀಡಿದ್ದಾರೆ. ‘ಪ್ರತಿಯೊಬ್ಬ ಭಾರತೀಯನೂ ಕರೊನಾ ವೈರಸ್‌ನಿಂದ ಸುರಕ್ಷಿತವಾಗಿರುವುದು ನಮ್ಮ ಧ್ಯೇಯವಾಗಬೇಕಿದೆ’ ಎಂದಿದ್ದಾರೆ.

    ಕೇಂದ್ರವು ಈ ತಿಂಗಳೊಳಗೆ, 11 ಸಾವಿರ ಕೋಟಿ ರೂಪಾಯಿಗಳನ್ನು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಬಿಡುಗಡೆ ಮಾಡಲಿದೆ, ಇದನ್ನು ಕರೊನಾ ವೈರಸ್‌ ವಿರುದ್ಧ ಹೋರಾಡುವ ಕಾರ್ಯಗಳಿಗೆ ಬಳಸಬೇಕು. “ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ’ ಅಡಿಯಲ್ಲಿ ಬಿಡುಗಡೆಯಾದ ಹಣ ಮತ್ತು ಧಾನ್ಯವನ್ನು ತ್ವರಿತವಾಗಿ ವಿತರಿಸಬೇಕು” ಎಂದು ಅವರು ಹೇಳಿದರು.

    ‘ಈಗ ನಾವು ಲಾಕ್‌ಡೌನ್‌ನ ಎರಡನೆಯ ವಾರಕ್ಕೆ ಕಾಲಿಟ್ಟಿದ್ದೇವೆ. ಈ ಹಂತದಲ್ಲಿ ಕರೊನಾ ವೈರಸ್‌ ತಡೆಗಟ್ಟಲು ಪರೀಕ್ಷೆ ಮಾಡಿಸಿಕೊಳ್ಳುವುದು, ಸೋಂಕು ಪೀಡಿತರನ್ನು ಪತ್ತೆಹಚ್ಚುವುದು, ಅವರನ್ನು ಪ್ರತ್ಯೇಕಿಸುವುದು ಮತ್ತು ಕ್ವಾಂಟರಿಂಗ್ ಮಾಡುವುದು ಇವಿಷ್ಟು ಕಡ್ಡಾಯವಾಗಿ ಆಗಲೇಬೇಕಾದ ಕಾರ್ಯಗಳಾಗಿವೆ’ ಎಂದು ಪ್ರಧಾನಿ ಸೂಚಿಸಿದ್ದಾರೆ.

    ವೈದ್ಯಕೀಯ ಸಲಕರಣೆಗಳು, ಔಷಧ ಪೂರೈಕೆ ಮತ್ತು ಇವುಗಳಿಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತರಿಸಿಕೊಳ್ಳುವ ಅವಶ್ಯಕತೆ ಇದೆ. ಕರೊನಾ ವೈರಸ್‌ ಸೋಂಕಿತರಿಗಾಗಿ ಪ್ರತ್ಯೇಕ ಆಸ್ಪತ್ರೆಗಳು ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು, ಇವರ ಸೇವೆಯಲ್ಲಿ ತೊಡಗಿರುವ ವೈದ್ಯಕೀಯ ಸಿಬ್ಬಂದಿಯನ್ನು ರಕ್ಷಣೆ ಮಾಡಬೇಕು. ಅಗತ್ಯ ಬಿದ್ದರೆ ವೈದ್ಯರಿಗೆ ಆನ್‌ಲೈನ್‌ ಮೂಲಕ ತರಬೇತಿ ನೀಡುವ ವ್ಯವಸ್ಥೆ ಮಾಡಬೇಕಾಗಿದೆ ಎಂದು ಪ್ರಧಾನಿ ತಿಳಿಸಿದರು.

    ದೇಶದ ಅನೇಕ ಭಾಗಗಳಲ್ಲಿ ಸುಗ್ಗಿಯ ಕಾಲವಾಗಿದ್ದು, ಸುಗ್ಗಿಯ ಕಾರ್ಯಾಚರಣೆಯಲ್ಲಿ ತೊಡಗಿರುವ ರೈತರು ಮತ್ತು ಕಾರ್ಮಿಕರನ್ನು ಲಾಕ್‌ಡೌನ್‌ನಿಂದ ಮುಕ್ತಗೊಳಿಸಲಾಗಿದೆ. ಆದರೂ ಈ ಸೋಂಕು ತಗುಲದಂತೆ ಸೋಷಿಯಲ್‌ ಡಿಸ್ಟೆನ್ಸ್‌ ಕಾಪಾಡಿಕೊಳ್ಳುವತ್ತ ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ. ಇದರೆ ಜತೆಗೆ, ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ರೈತರೊಂದಿಗೆ ಟ್ರಕ್ ಪೂಲಿಂಗ್ ಯೋಜನೆಯನ್ನು ಸಹ ರೂಪಿಸುವ ಅವಶ್ಯಕತೆ ಇದೆ ಎಂದು ಪ್ರಧಾನಿ ಹೇಳಿದ್ದಾರೆ.

    ಭಾರತದಲ್ಲಿ ಆಯುರ್ವೇದದಂಥ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯನ್ನು ರೋಗನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಬಳಸಿಕೊಳ್ಳಬೇಕು ಎಂದು ಮೋದಿ ಸಲಹೆ ನೀಡಿದರು.

    ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ತಾವು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ವಿವಿಧ ಮುಖ್ಯಮಂತ್ರಿಗಳು ಪ್ರಧಾನಿಯವರಿಗೆ ವಿವರಿಸಿದರು.

    ಪ್ರಧಾನಿ ಮೋದಿ ಅವರ ಜತೆ ಗೃಹ ಸಚಿವ ಅಮಿತ್‌ ಷಾ ಜತೆಗಿದ್ದರು.

    ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ: ಕೆ.ಸುಧಾಕರ್, ಆರೋಗ್ಯ ಸಚಿವ ಬಿ.ಶ್ರೀರಾಮುಲು, ಮುಖ್ಯ ಕಾರ್ಯದರ್ಶಿ ಟಿ. ಎಂ.ವಿಜಯಭಾಸ್ಕರ್ ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ವೀಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಿದ್ದರು.
    (ಏಜೆನ್ಸೀಸ್‌)

    ನಿಮಗಾಗಿ ನನ್ನ ತಂದೆ ನಮ್ಮಿಂದ ದೂರವಿದ್ದಾರೆ, ನೀವೂ ಸಹಾಯ ಮಾಡುವಿರಾ?: ಬಾಲಕಿಯ ಸಂದೇಶಕ್ಕೆ ಮನಸೋತ ಕೇಂದ್ರ ಸಚಿವ!

    339 ಅರಣ್ಯ ರಕ್ಷಕ ಹುದ್ದೆಗಳಿಗೆ ಮೇ 15ರವರೆಗೂ ಅರ್ಜಿ ಸಲ್ಲಿಕೆಗೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts