More

    ಗ್ರೆನೇಡ್ ದಾಳಿಗೆ ಸಂಚು; ವಿದೇಶದಲ್ಲಿದ್ದುಕೊಂಡೇ ಉಗ್ರರಿಗೆ ಸ್ಪೋಟಕ ರವಾನೆ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿ ಸಿಸಿಬಿ ಬಲೆಗೆ ಬಿದ್ದಿರುವ ಲಷ್ಕರ್ ಎ-ತೊಯ್ಬಾ (ಎಲ್​ಇಟಿ) ಸಂಘಟನೆಯ ಶಂಕಿತ ಉಗ್ರ ಮನೆಯ ಅಲ್ಮೇರಾದಲ್ಲಿ ಗ್ರೆನೇಡ್​ಗಳನ್ನು ಬಚ್ಚಿಟ್ಟಿದ್ದ. ಜನವಸತಿ ಪ್ರದೇಶದಲ್ಲಿ 4 ಗ್ರೆನೇಡ್​ಗಳು ಸ್ಪೋಟಿಸಿದ್ದರೆ ಸಂಭವಿಸುತ್ತಿದ್ದ ಅನಾಹುತ ಊಹಿಸಲಸಾಧ್ಯ. ಅದರಲ್ಲೂ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂತಹ ಜೀವಂತ ಗ್ರೆನೇಡ್ ಪತ್ತೆಯಾಗಿದೆ. ಗ್ರೆನೇಡ್​ನಲ್ಲಿರುವ ಒಂದೇ ಒಂದು ಪಿನ್ ತೆಗೆದರೆ ಅಥವಾ ಕಳಚಿಕೊಂಡಿದ್ದರೆ ದೊಡ್ಡ ಪ್ರಮಾಣದಲ್ಲಿ ಸ್ಫೋಟ ಸಂಭವಿಸುತ್ತಿತ್ತು.

    ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿರುವ 2008ರ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಸಂಚುಕೋರ, ಎಲ್​ಇಟಿ ಸಂಘಟನೆ ಸದಸ್ಯ ಕೇರಳದ ಟಿ. ನಾಸೀರ್ ಕುಮ್ಮಕ್ಕಿನಿಂದ ಆರ್.ಟಿ.ನಗರ ಬಳಿಯ ಕನಕನಗರದ ಜುನೇದ್ ಅಹಮದ್ ತನ್ನ ಗ್ಯಾಂಗ್ ಜತೆ ಸೇರಿಕೊಂಡು ಉಗ್ರ ಚಟುವಟಿಕೆಯಲ್ಲಿ ತೊಡಗಿದ್ದ. ಶಂಕಿತರ ವಿಚಾರಣೆ ವೇಳೆ ಬಂಧಿತ ಜಾಹೀದ್ ತಬ್ರೇಜ್​ನ ಕೊಡಿಗೆಹಳ್ಳಿಯಲ್ಲಿರುವ ಮನೆಯಲ್ಲಿ ಗ್ರೆನೇಡ್ ಇರುವ ಬಗ್ಗೆ ಮಾಹಿತಿ ಗೊತ್ತಾಗಿತ್ತು. ಅರಬ್ ದೇಶದಲ್ಲಿ ತಲೆಮರೆಸಿಕೊಂಡಿರುವ ಜುನೇದ್ ಅಹಮದ್, ದೂರವಾಣಿ ಕರೆ ಮಾಡಿ ಪಾರ್ಸೆಲ್ ಬರುತ್ತದೆ.

    ಅದನ್ನು ಸುರಕ್ಷಿತ ಸ್ಥಳದಲ್ಲಿ ಸಂಗ್ರಹಿಸಬೇಕು ಎಂದು ಸೂಚನೆ ಕೊಟ್ಟಿದ್ದ. ಅದರಂತೆ ಆತನ ಕಡೆಯವರು ಪಾರ್ಸೆಲ್ ತಂದು ಕೊಟ್ಟಿದ್ದು, ಮನೆಯಲ್ಲಿ ಬಚ್ಚಿಟ್ಟಿರುವುದಾಗಿ ಬಾಯ್ಬಿಟ್ಟಿದ್ದ. ತನಿಖಾಧಿಕಾರಿಗಳು ಬಾಂಬ್ ನಿಷ್ಕ್ರಿಯ ದಳ ಮತ್ತು ಎಫ್​ಎಸ್​ಎಲ್ ಅಧಿಕಾರಿಗಳೊಂದಿಗೆ ತಬ್ರೇಜ್ ಮನೆಗೆ ತೆರಳಿ ಪರಿಶೀಲನೆ ನಡೆಸಲಾಯಿತು. ಜಾಹೀದ್ ಕೊಠಡಿಯ ಅಲ್ಮೇರಾದಲ್ಲಿ ಬಟ್ಟೆ ಸುತ್ತಿ ಗ್ರೆನೇಡ್ ಬಚ್ಚಿಟ್ಟಿದ್ದ. ಅದನ್ನು ತಜ್ಞರ ಸಹಾಯದಿಂದ ಹೊರತೆಗೆದು ನೋಡಿದಾಗ ನಾಲ್ಕು ಜೀವಂತ ಗ್ರೆನೇಡ್ ಪತ್ತೆಯಾಗಿವೆ ಎಂದು ಡಾ.ಎಸ್.ಡಿ. ಶರಣಪ್ಪ ಮಾಹಿತಿ ನೀಡಿದ್ದಾರೆ.

    ದೇಶದ್ರೋಹಿ, ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದ ಕನಕನಗರದ ಸುಹೇಲ್ ಅಹಮದ್, ಹೆಬ್ಬಾಳದ ಮಹಮ್ಮದ್ ಉಮರ್, ಕೊಡಿಗೇಹಳ್ಳಿಯ ಜಾಹೀದ್ ತಬ್ರೇಜ್, ಜೆ.ಸಿ.ನಗರದ ಸೈಯದ್ ಮುದಾಸೀರ್, ಆರ್.ಟಿ.ನಗರ ಬಳಿಯ ಸುಲ್ತಾನ್​ಪಾಳ್ಯದ ಮೊಹಮ್ಮದ್ ಫೈಜಲ್ ರಬ್ಬಾನಿ ಬಂಧಿತರಾಗಿದ್ದಾರೆ.

    ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಎನ್​ಐಎ ವಿಶೇಷ ಕೋರ್ಟ್​ಗೆ ಹಾಜರುಪಡಿಸಿ 7 ದಿನ ಸಿಸಿಬಿ ಕಸ್ಟಡಿಗೆ ಪಡೆಯಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಿಸಿಬಿ) ಡಾ.ಎಸ್.ಡಿ. ಶರಣಪ್ಪ ಮಾಹಿತಿ ನೀಡಿದ್ದಾರೆ.

    ರೆಡಿ ಟು ಯೂಸ್

    ಡಿಟೋನೇಟರ್ ತಂತ್ರಜ್ಞಾನದಿಂದ ತಯಾರಾಗುವ ಸ್ಪೋಟಕವೇ ಗ್ರೆನೇಡ್. ಇದನ್ನು ಸೇಫ್ಟಿ ಪಿನ್​ನಿಂದ ನಿಯಂತ್ರಣ ಮಾಡಲಾಗುತ್ತದೆ. ಹ್ಯಾಂಡ್ ಗ್ರೆನೇಡ್​ಗಳಲ್ಲಿ ರಾಸಾಯನಿಕ ಗ್ರೆನೇಡ್​ಗಳು, ಸ್ಟನ್ ಗನ್ ಗ್ರೆನೇಡ್​ಗಳು, ಭಾರಿ ಸ್ಪೋಟಕದ ಗ್ರೆನೇಡ್​ಗಳು.. ಹೀಗೆ ಹಲವು ವಿಧಗಳಿವೆ. ಹ್ಯಾಂಡ್ ಗ್ರೆನೇಡ್​ನ ಪಿನ್ ಇರುವ ಭಾಗದಲ್ಲಿ ಬಟನ್ ಸಹ ಇರಲಿದೆ. ಬಟನ್ ಒತ್ತಿ ಹಿಡಿದು ಪಿನ್ ತೆಗೆದು ಎಸೆದರೆ ಅಥವಾ ಬಟನ್ ಮೇಲಿನ ಬೆರಳು ಬಿಟ್ಟರೆ ಸ್ಫೋಟ ಸಂಭವಿಸಲಿದೆ. ಕೆಲ ಗ್ರೆನೇಡ್​ಗಳು ಕೆಲ ಆಡಿಗಳಷ್ಟು ಪರಿಣಾಮ ಬೀರುತ್ತವೆ. ಸುಧಾರಿತ ಗ್ರೆನೇಡ್​ಗಳಾದರೆ 40 ಮೀಟರ್​ನಿಂದ 200 ಮೀಟರ್ ವರೆಗೂ ಸ್ಪೋಟದ ತೀವ್ರತೆ ಇರುತ್ತದೆ. ಇದೀಗ ಸಿಸಿಬಿ ಪೊಲೀಸರು ಶಂಕಿತರ ಬಳಿ ಜಪ್ತಿ ಮಾಡಿರುವ ಗ್ರೆನೇಡ್​ಗಳ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲು ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಕೇಂದ್ರ ತನಿಖಾ ದಳದ ಜತೆಗೆ ಸಂಪರ್ಕ ಸಾಧಿಸಿದ್ದಾರೆ.

    ಜೀವಂತ ಗ್ರೆನೇಡ್ ಆತಂಕ

    ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಜೀವಂತ ಹ್ಯಾಂಡ್ ಗ್ರೆನೇಡ್​ಗಳು ಪತ್ತೆಯಾಗಿರುವುದು ಪೊಲೀಸರಲ್ಲಿ ಆತಂಕ ಸೃಷ್ಟಿಸಿದೆ. 2021ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ 5 ಹ್ಯಾಂಡ್ ಗ್ರೆನೇಡ್ ನೆಲದಡಿಯಲ್ಲಿ ಪತ್ತೆಯಾಗಿದ್ದವು. ಆದರೆ, 40 ವರ್ಷಗಳಷ್ಟು ಹಳೆಯವು ಎಂದು ಗೊತ್ತಾಗಿತ್ತು. 2022ರಲ್ಲಿ ಅಥಣಿ ಬಳಿಯ ಶಾಲೆಯಲ್ಲಿ 1 ಹ್ಯಾಂಡ್ ಗ್ರೆನೇಡ್ ಸಿಕ್ಕಿತ್ತು. ಮಕ್ಕಳು ಚೆಂಡು ಎಂದು ಭಾವಿಸಿ ಆಟವಾಡುತ್ತಿದ್ದುದನ್ನು ಪರಿಶೀಲಿಸಿದಾಗ ಅದು ನಿರ್ಜೀವ ಎನ್ನುವುದು ತಿಳಿದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts