More

    ಮೆಜೆಸ್ಟಿಕ್​ ಮೆಟ್ರೋ ನಿಲ್ದಾಣದಲ್ಲಿ ಬ್ಯಾರಿಕೇಡ್​; ಪ್ರಯಾಣಿಕರ ಸುರಕ್ಷತೆಗಾಗಿ ಬಿಎಂಆರ್​ಸಿಎಲ್​ ಕ್ರಮ

    ರಾಮ ಕಿಶನ್​ ಕೆ.ವಿ. ಬೆಂಗಳೂರು
    ಐದಾರು ತಿಂಗಳಿನಿಂದ ಬೆಂಗಳೂರಿನ ಪ್ರಮುಖ ಮೆಟ್ರೋ ನಿಲ್ದಾಣಗಳು ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ. ಅದರಲ್ಲೂ ಇಂಟರ್​ಚೇಂಜ್​ ನಿಲ್ದಾಣವಾದ ಮೆಜೆಸ್ಟಿಕ್​ನಲ್ಲಿ ಬೆಳಗ್ಗೆ ಹಾಗೂ ಸಂಜೆ ಜನದಟ್ಟಣೆ ಹೆಚ್ಚಾಗುತ್ತಿದ್ದು, ಅಸುರಕ್ಷತೆ ಭಯ ನಿವಾರಿಸುವ ದೃಷ್ಟಿಯಿಂದ ಫ್ಲಾಟ್ ಫಾರ್ಮ್​ನಲ್ಲಿ ಬ್ಯಾರಿಕೇಡ್​ ಅಳವಡಿಸಲಾಗಿದೆ. ಬಿಎಂಆರ್​ಸಿಎಲ್​ನ ಈ ಕ್ರಮದಿಂದ ಭದ್ರತಾ ಸಿಬ್ಬಂದಿ ಮೇಲಿನ ಒತ್ತಡವೂ ಕಡಿಮೆಯಾದಂತಾಗಿದೆ.

    ಮೆಟ್ರೋ ನಿಲ್ದಾಣಗಳಲ್ಲಿ ಕೆಲ ಪ್ರಯಾಣಿಕರು ಬೇಜವಾಬ್ದಾರಿ ತೋರುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿವೆ. ಜನವರಿಯಲ್ಲಿ ಜಾಲಹಳ್ಳಿ ನಿಲ್ದಾಣದಲ್ಲಿ ಯುವಕನೊಬ್ಬ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದ. ಇದಕ್ಕೂ ಮೊದಲು ಕೈಜಾರಿ ಕೆಳಕ್ಕೆ ಬಿದ್ದ ಮೊಬೈಲ್​ ಪಡೆದುಕೊಳ್ಳಲು ಮಹಿಳೆಯೊಬ್ಬರು ಇಂದಿರಾನಗರ ನಿಲ್ದಾಣದಲ್ಲಿ ಟ್ರಾ$್ಯಕ್​ಗೆ ಇಳಿದಿದ್ದರು. ಕುವೆಂಪುನಗರ ಮೆಟ್ರೋ ನಿಲ್ದಾಣದಲ್ಲಿ ಯುವಕರಿಬ್ಬರು ಮೆಟ್ರೋ ಹಳಿಗಳನ್ನು ದಾಟಲು ಪ್ರಯತ್ನಿಸಿದ್ದರು. ಇಂತಹ ಪ್ರಕರಣಗಳಿಗೆ ತಡೆಯೊಡ್ಡಲು ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆ ವ್ಯಕ್ತವಾಗಿತ್ತು.

    ಹೇಗೆ ಸಹಕಾರಿ?

    ಕೆಲ ಪ್ರಯಾಣಿಕರಿಗೆ ಮೆಟ್ರೋ ಹಳಿ ಸಮೀಪ ಹಾಗೂ ಮೆಟ್ರೋ ರೈಲು ಆಗಮಿಸುವಾಗ ಫೋಟೋ ಕ್ಲಿಕ್ಕಿಸಿಕೊಳ್ಳುವುದು, ರೀಲ್ಸ್​ ಮಾಡುವ ಗೀಳು ಇರುತ್ತದೆ. ಮಕ್ಕಳು ಪಾಲಕರ ಕಣ್ತಪ್ಪಿಸಿ ಫ್ಲಾಟ್​ಫಾರ್ಮ್​ ಬಳಿ ಬಾಗಿ ಇಣುಕುವುದು, ರೈಲು ಹತ್ತಲು ಸರತಿ ಸಾಲಿನಲ್ಲಿ ನಿಂತಿರುವಾಗ ನೂಕುನುಗ್ಗಲು ಉಂಟಾಗುವುದು, ಹೀಗೆ ಕೆಲ ಸಂದರ್ಭದಲ್ಲಿ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ. ಇಂತಹ ಸಮಯದಲ್ಲಿ ಬ್ಯಾರಿಕೇಡ್​ಗಳು ಸಹಕಾರಿಯಾಗುತ್ತವೆ.

    ಶಾಶ್ವತ ಕ್ರಮವಲ್ಲ

    ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಬ್ಯಾರಿಕೇಡ್​ ಅಳವಡಿಸಿರುವುದು ಉತ್ತಮ ಕ್ರಮವೇ ಆಗಿದ್ದರೂ ಇದು ಶಾಶ್ವತ ಫಲಶ್ರುತಿ ತರುವುದಿಲ್ಲ ಎಂದು ಕೆಲ ಪ್ರಜ್ಞಾವಂತರು ಹೇಳಿದ್ದಾರೆ. ಕಾರಣ, ಬ್ಯಾರಿಕೇಡ್​ ಅಳವಡಿಸಿರುವಾಗಲೂ ಪ್ರಯಾಣಿಕರ ಸುರಕ್ಷತೆ ಬಗ್ಗೆ ಗ್ಯಾರಂಟಿ ಇಲ್ಲ. ತಲಾ ಎರಡೆರಡು ಬ್ಯಾರಿಕೇಡ್​ ಮಧ್ಯೆ ರೈಲನ್ನೇರಲು ಹಾಗೂ ಇಳಿಯಲು ಸ್ಥಳಾವಕಾಶ ಮಾಡಲಾಗಿದೆ. ಭದ್ರತಾ ಸಿಬ್ಬಂದಿ ದೂರ ಇದ್ದ ಸಂದರ್ಭದಲ್ಲಿ ಆ ಸ್ಥಳದಿಂದ ಈಗಲೂ ಕೆಲವರು ಹಳಿಯತ್ತ ಸಾಗುವ ಸಾಧ್ಯತೆಯನ್ನು ತಳ್ಳಹಾಕುವಂತಿಲ್ಲ. ಬ್ಯಾರಿಕೇಡ್​ ಸಮೀಪ ಹೋಗುವ ಮಕ್ಕಳು ಗ್ಯಾಪ್​ನಲ್ಲಿ ಇಣುಕುವುದಿಲ್ಲ ಎನ್ನಲಾಗದು. ಇಷ್ಟೆಲ್ಲ ಸರ್ಕಸ್​ ಮಾಡುವ ಬದಲು ಒಮ್ಮೆಗೆ ದೆಹಲಿ ಮಾದರಿಯಲ್ಲಿ ಸ್ಕ್ರೀನ್​ ಡೋರ್​ ಅಳವಡಿಸಬೇಕಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇನ್ನಷ್ಟು ಸ್ಟೇಷನ್​ಗಳಲ್ಲಿ ಅಳವಡಿಕೆ

    ಪ್ರಸ್ತುತ ಹೆಚ್ಚಿನ ದಟ್ಟಣೆಗೆ ಸಾಯಾಗುವ ಮೆಜೆಸ್ಟಿಕ್​ ನಿಲ್ದಾಣದಲ್ಲಿ ಬ್ಯಾರಿಕೇಡ್​ ಅಳವಡಿಸಲಾಗಿದೆ. ಸರತಿ ಸಾಲಿನಲ್ಲಿ ನಿಂತಿರುವ ಪ್ರಯಾಣಿಕರು ಇದನ್ನು ದಾಟಲು ಯತ್ನಿಸಬಾರದು. ಭದ್ರತಾ ಸಿಬ್ಬಂದಿಗೆ ಸಹಕಾರ ನೀಡಬೇಕು. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಯಾಣಿಕರಿಂದ ದಟ್ಟಣೆ ಉಂಟಾಗುವ ಮತ್ತಷ್ಟು ನಿಲ್ದಾಣಗಳಲ್ಲಿ ಬ್ಯಾರಿಕೇಡ್​ ಅಳವಡಿಸಲು ಚಿಂತನೆ ನಡೆಸಲಾಗಿದೆ. ಇನ್ನಷ್ಟೇ ಉದ್ಘಾಟನೆಯಾಗಬೇಕಿರುವ ಹೊಸ ಮಾರ್ಗಗಳ ನಿಲ್ದಾಣಗಳಲ್ಲಿ ಪ್ಲಾಟ್​ಫಾರ್ಮ್​ ಸ್ಕ್ರೀನ್​ಡೋರ್​ (ಪಿಎಸ್​ಡಿ) ಅಳವಡಿಸಲಾಗುತ್ತದೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ತಿಳಿಸಿದ್ದಾರೆ.

    ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷತೆ ದೃಷ್ಟಿಯಿಂದ ಹಳದಿ ಗೆರೆಯನ್ನು ದಾಟದಂತೆ ಸೂಚನೆ ನೀಡುತ್ತಿರುತ್ತೇವೆ. ಹೀಗಿದ್ದರೂ ಕೆಲ ಪ್ರಯಾಣಿಕರು ನಿಯಮ ಮೀರುತ್ತಾರೆ. ಜನದಟ್ಟಣೆ ಸಂದರ್ಭದಲ್ಲಿ ಪ್ರಯಾಣಿಕರನ್ನು ನಿಭಾಯಿಸುವುದೇ ದೊಡ್ಡ ಸವಾಲು. ಇಂತಹ ಸಂದರ್ಭದಲ್ಲಿ ಬ್ಯಾರಿಕೇಡ್​ ನಮ್ಮ ಒತ್ತಡ ಕಡಿಮೆ ಮಾಡಿವೆ.
    – ಭದ್ರತಾ ಸಿಬ್ಬಂದಿ, ಮೆಜೆಸ್ಟಿಕ್​ ನಿಲ್ದಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts