More

    ಪೈಪ್‌ಲೈನ್ ಹಾನಿ, ಮೀನುಗಾರರಲ್ಲಿ ಆತಂಕ

    ಪಡುಬಿದ್ರಿ: ಯುಪಿಸಿಎಲ್ ಸ್ಥಾವರಕ್ಕೆ ನೀರು ಪೂರೈಕೆ ಮತ್ತು ವಿಸರ್ಜನೆಗೆ ಎರ್ಮಾಳು ಬಳಿ ಸಮುದ್ರಕ್ಕೆ ಅಳವಡಿಸಲಾಗಿರುವ ಪೈಪ್‌ಲೈನ್ ಒಡೆದು ತಿಂಗಳು ಕಳೆದರೂ ಅಧಿಕಾರಿಗಳು ಮತ್ತು ಯುಪಿಸಿಎಲ್ ಕಂಪನಿ ಕ್ರಮ ಕೈಗೊಳ್ಳದಿರುವುದು ಮೀನುಗಾರರ ಆಕ್ರೋಶಕ್ಕೆ ಕಾರಣವಾಗಿದೆ.

    ಒಂದು ವರ್ಷದಿಂದ ಪೈಪ್‌ಲೈನ್ ಒಡೆದಿದ್ದು, ತಿಂಗಳ ಹಿಂದೆ ಸಮುದ್ರ ತಳಮಟ್ಟದಲ್ಲಿದ್ದ ಅದನ್ನು ಕಿನಾರೆಯಲ್ಲೇ ಬೇರ್ಪಡಿಸಿ ಇಡಲಾಗಿದೆ. ಸದ್ಯ ತೆರೆದ ಸ್ಥಿತಿಯಲ್ಲಿರುವ ಪೈಪ್‌ನಿಂದಲೇ ಸ್ಥಾವರ ನೀರು ಹೊರಬಿಡುತ್ತಿರುವ ಬಗ್ಗೆ ಸ್ಥಳೀಯ ಮೀನುಗಾರರು ಸಂಶಯ ವ್ಯಕ್ತಪಡಿಸಿದ್ದಾರೆ. ಕಂಪನಿಯ ಈ ನಿರ್ಲಕ್ಷ್ಯ ಜತೆಗೆ ಕಾನೂನಾತ್ಮಕ ನಿರ್ದಿಷ್ಟ ನಿಯಮಗಳನ್ನು ಗಾಳಿಗೆ ತೂರಿ ಸ್ಥಳೀಯ ನಿವಾಸಿಗಳ ಅಸ್ತಿತ್ವ ಮತ್ತು ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ ಎಂದು ದೂರಿದ್ದಾರೆ.

    ಯುಪಿಸಿಎಲ್ ಪರಿಸರ ವಿರೋಧಿ ಚಟುವಟಿಕೆಗಳೊಂದಿಗೆ, ಅವೈಜ್ಞಾನಿಕ ರೀತಿ ಕಡಲ ಕಿನಾರೆಯಲ್ಲಿ ಕಲ್ಲುಬಂಡೆಗಳ ರಾಶಿಯನ್ನು ಡಂಪ್ ಮಾಡಿದ ಪರಿಣಾಮ ಮೀನುಗಾರಿಕೆಗೂ ತೊಡಕುಂಟಾಗಿದೆ. ಅವೈಜ್ಞಾನಿಕ ರೀತಿಯಲ್ಲಿ ಕಡಲ ಕಿನಾರೆ ಪ್ರಕೃತಿಯನ್ನು ನಾಶಗೊಳಿಸಿ ನಮ್ಮ ಅಸ್ತಿತ್ವಕ್ಕೆ ಧಕ್ಕೆ ಉಂಟು ಮಾಡಲಾಗುತ್ತಿದೆ. ಈ ಬಗ್ಗೆ ಸರ್ಕಾರ ಗಮನಹರಿಸದಿದ್ದಲ್ಲಿ ತೀವ್ರ ಹೋರಾಟ ನಡೆಸುವುದಾಗಿ ಮೀನುಗಾರರು ಎಚ್ಚರಿಕೆ ನೀಡಿದ್ದಾರೆ.

    ಯಾಕಿದು ಪೈಪ್‌ಲೈನ್?
    ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್ ಸ್ಥಾವರ ಉಡುಪಿ ಪವರ್ ಕಾರ್ಪೊರೇಷನ್ ಯೋಜನೆಗೆ ನೀರು ಪೂರೈಸುವ ಉದ್ದೇಶದಿಂದ ಕೆಲವು ವರ್ಷಗಳ ಹಿಂದೆ ಸಮುದ್ರಕ್ಕೆ ಪೈಪ್‌ಲೈನ್ ಅಳವಡಿಸಲಾಗಿತ್ತು. ಮೀನು ಸಂತತಿ ನಾಶ ಭೀತಿಯಿಂದ ಮೀನುಗಾರರು ವಿರೋಧ ವ್ಯಕ್ತಪಡಿಸಿದ್ದರೂ ಕಾಮಗಾರಿ ನಡೆಸಿ ಸಮುದ್ರ ಮಧ್ಯದಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ಈ ಪೈಪ್‌ಲೈನ್‌ಗೆ ಅಳವಡಿಸಿದ್ದ ಬ್ರೇಕ್‌ವಾಟರ್‌ನಿಂದ ಆರು ವರ್ಷ ಹಿಂದೆ ತೀವ್ರ ಕಡಲ್ಕೊರೆತ ಉಂಟಾದಾಗ ಎಚ್ಚೆತ್ತ ಜಿಲ್ಲಾಡಳಿತ ಬ್ರೇಕ್‌ವಾಟರ್ ತೆರವುಗೊಳಿಸಿತ್ತು. ಬಳಿಕ ಈ ಪ್ರದೇಶದಲ್ಲಿ ಕಡಲ್ಕೊರೆತ ಕ್ಷೀಣಿಸಿತ್ತು. ಯುಪಿಸಿಎಲ್‌ನಿಂದ ಹೊರ ಬರುವ ಬಿಸಿನೀರು ಕಡಲ ಗರ್ಭ ಸೇರಿ ಪ್ರಾಕೃತಿಕ ವ್ಯತ್ಯಯಕ್ಕೆ ಕಾರಣವಾಗುತ್ತಿರುವ ಬಗ್ಗೆ ಹಲವಾರು ವರ್ಷಗಳಿಂದ ದೂರು ಕೇಳಿ ಬರುತ್ತಿದ್ದರೂ ಕ್ರಮ ಕೈಗೊಂಡಿರಲಿಲ್ಲ.

    ಮೀನುಗಾರಿಕೆ ಕ್ಷೀಣ, ಬಿಸಿನೀರು ಪ್ರಭಾವ?
    ಸ್ಥಾವರದಲ್ಲಿ ಉತ್ಪಾದನೆ ಸುಲಲಿತವಾಗಿ ಸಾಗುತ್ತಿದ್ದರೆ ಕಂಪನಿ ಬಿಸಿ ನೀರು ವಿಸರ್ಜನೆ ಮಾಡುತ್ತಿರಲೇಬೇಕು. ಒಡೆದ ಪೈಪ್‌ನಿಂದ ಸುಮಾರು ಒಂದು ವರ್ಷ ಮತ್ತು ಕಡಲ ಕಿನಾರೆಯಲ್ಲಿ ತೆರೆಯಲ್ಪಟ್ಟ ಸ್ಥಿತಿಯಲ್ಲಿರುವ ಪೈಪ್‌ನಿಂದ ಒಂದೂವರೆ ತಿಂಗಳಿನಿಂದ ಕಲ್ಮಶ ಹೊರ ಸೂಸಲಾಗುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟ. ಇವೆಲ್ಲದರಿಂದ ಸ್ಥಳೀಯರ ಅಸ್ತಿತ್ವಕ್ಕೆ ತೊಂದರೆಯಾಗಿದ್ದು, ಸಂಬಂಧಿತ ಅಧಿಕಾರಿಗಳ ನಿರ್ಲಕ್ಷೃಕ್ಕೆ ಬಲಿಯಾಗುವ ಪರಿಸ್ಥಿತಿ ಎದುರಾಗಿದೆ. ಒಂದು ತಿಂಗಳಿನಿಂದ ಎರ್ಮಾಳು, ಉಚ್ಚಿಲ, ಕಾಡಿಪಟ್ಣ, ನಡಿಪಟ್ಣ ಪ್ರದೇಶದಲ್ಲಿ ಮೀನು ಸಿಗುವುದು ಕಡಿಮೆಯಾಗಿದ್ದು, ಮೀನುಗಾರರು ಆತಂಕಿತರಾಗಿದ್ದಾರೆ.

    ಹದಿನೈದು ವರ್ಷಗಳಿಂದಿಲ್ಲಿನ ಸ್ಥಿತಿ ಹೀಗೆಯೇ ಇದೆ. ಈಗ ಯಾಕೆ ಇದೊಂದು ದೊಡ್ಡ ಸಮಸ್ಯೆ ಎಂದು ಬಿಂಬಿಸಲಾಗುತ್ತಿದೆ ಎಂದು ಗೊತ್ತಿಲ್ಲ.
    ಕಿಶೋರ್ ಆಳ್ವ, ಕಾರ್ಯಕಾರಿ ನಿರ್ದೇಶಕರು, ಯುಪಿಸಿಎಲ್ ಅದಾನಿ ಗ್ರೂಪ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts