More

    ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಿ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

    ಪಡುಬಿದ್ರಿ: ರಾಜ್ಯದ 42 ಸಾವಿರ ಶಾಲೆಗಳಲ್ಲಿ 10ಮಕ್ಕಳಿಗಿಂತ ಕಡಿಮೆ ಇರುವ ಶಾಲೆ 5 ಸಾವಿರಕ್ಕೂ ಮೇಲಿದೆ. ಮಕ್ಕಳ ಸಂಖ್ಯೆ ಕಡಿಮೆಯಿದ್ದರೂ ಶಾಲೆಗೆ ಅಗತ್ಯ ಸೌಲಭ್ಯ ನೀಡುವಲ್ಲಿ ಕಡಿತವಾದಲ್ಲಿ ಜನ ಗಲಾಟೆ ಮಾಡುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಶಾಲಾಭಿವೃದ್ಧಿ ಸಮಿತಿಯಲ್ಲಿ ಸಭೆ ನಡೆಸಿ ಪ್ರಯತ್ನಿಸಬೇಕು ಎಂದು ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

    ಎರ್ಮಾಳು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
    ರಾಜ್ಯದ 15 ಸಾವಿರ ಶಾಲೆಗಳಲ್ಲಿ ಸಮರ್ಪಕ ಕೊಠಡಿಗಳೇ ಇಲ್ಲ. 7ಸಾವಿರ ಶಾಲೆಗಳಲ್ಲಿ ಶೌಚಗೃಹದ ಕೊರತೆಯಿದೆ. ಪ್ರಭಾವ ಬಳಸಿ ಸರ್ಕಾರದ ಅನುದಾನ ತರುವುದು ದೊಡ್ಡದಲ್ಲ, ಅದರ ಸದ್ವಿನಿಯೋಗವಾಗಬೇಕು ಎಂದರು. ಕೋವಿಡ್ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅನುಮತಿ ಪಡೆಯದೇ ಯಾವುದೇ ಕಾರಣಕ್ಕೂ ಶಾಲೆಗಳನ್ನು ತೆರೆಯಲಾಗುವುದಿಲ್ಲ ಎಂದು ತಿಳಿಸಿದರು.

    ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಮಾತನಾಡಿದರು. ಗುತ್ತಿಗೆದಾರ ಕುತ್ಯಾರು ಪ್ರಸಾದ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಶಾಸಕ ಲಾಲಾಜಿ ಆರ್.ಮೆಂಡನ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾಪಂ ಸದಸ್ಯ ಕೇಶವ ಮೊಯಿಲಿ, ಸಮೂಹ ಸಂಪನ್ಮೂಲ ಕೇಂದ್ರ ಸಂಯೋಜಕಿ ಉಮಾ, ಶಿಕ್ಷಣ ಸಂಯೋಜಕ ಶಂಕರ್ ಸುವರ್ಣ, ತೆಂಕ ಗ್ರಾಪಂ ಆಡಳಿತಾಧಿಕಾರಿ ವೀಣಾ ವಿವೇಕಾನಂದ, ಎಸ್‌ಡಿಎಂಸಿ ಅಧ್ಯಕ್ಷ ಸೋಮಯ್ಯ, ಕ್ಲಸ್ಟರ್ ಸಂಪನ್ಮೂಲ ಕೇಂದ್ರದ ಸುಧೀರ್, ಶಾಲಾ ಮುಖ್ಯಶಿಕ್ಷಕ ವಿನೋದ ಸ್ವಾಗತಿಸಿದರು. ವಿದ್ಯಾರ್ಥಿ ಸಂಘ ಅಧ್ಯಕ್ಷ ಶಿವಪ್ರಸಾದ್ ಶೆೆಟ್ಟಿ ಎಲ್ಲದಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಮಲ್ಲಿಕಾ ನಿರೂಪಿಸಿದರು. ಗ್ರಾಪಂ ಮಾಜಿ ಅಧ್ಯಕ್ಷೆ ಜಯಶ್ರೀ ವಂದಿಸಿದರು.

    ಎರ್ಮಾಳು ಶಾಲೆಯಲ್ಲಿ 6 ಮತ್ತು 7ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ಪಾಠ ಬೋಧನೆಗೆ ಈಗಾಗಲೇ ಅನುಮತಿ ನೀಡಲಾಗಿದೆ. ಎರಡು ಶಿಕ್ಷಕರಿಗೆ ತರಬೇತಿ ನೀಡಿ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲು ಸಜ್ಜುಗೊಳಿಸಲಾಗಿದ್ದು, ಯಾವುದೇ ತೊಂದರೆ ಇಲ್ಲ.
    -ಮಂಜುಳಾ, ಉಡುಪಿ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts