More

    ಬಣ್ಣ ಕಳೆದುಕೊಂಡ ಛಾಯಾಗ್ರಾಹಕರ ಬದುಕು

    ರಾಜೇಶ್ ಶೆಟ್ಟಿ ದೋಟ ಮಂಗಳೂರು

    ‘ಸ್ಮೈಲ್ ಪ್ಲೀಸ್…’ ಎಂದು ಗ್ರಾಹಕರ ಮೊಗದಲ್ಲಿ ಮಂದಹಾಸ ಮೂಡಿಸುತ್ತಿದ್ದ ಛಾಯಾಗ್ರಾಹಕರ ಮುಖದ ಮೇಲೆ ನಗು ಮಾಯವಾಗಿದೆ. ದ.ಕ. ಉಡುಪಿಯ ಸುಮಾರು 3,300 ಫೋಟೋ, ವಿಡಿಯೋಗ್ರಾಫರ್‌ಗಳ ಬದುಕಿನ ಮೇಲೆ ಕರೊನಾ ಬರೆ ಎಳೆದಿದೆ. ಇಡೀ ವರ್ಷದ ಆದಾಯ ದಕ್ಕುತ್ತಿದ್ದ ಸೀಸನ್‌ನಲ್ಲೇ ಛಾಯಾಗ್ರಾಹಕರು ಕೆಲಸವಿಲ್ಲದೆ ಬರಿಗೈಯಲ್ಲಿ ಕುಳಿತರೆ, ರಸಕ್ಷಣಗಳನ್ನು ಸೆರೆ ಹಿಡಿಯಬೇಕಿದ್ದ ಕ್ಯಾಮರಾಗಳು ಲೆನ್ಸ್ ಕಳಚಿಟ್ಟು ಬ್ಯಾಗ್‌ನಲ್ಲೇ ಉಳಿದಿವೆ.

    ತಂತ್ರಜ್ಞಾನ ಹಾಗೂ ಗುಣಮಟ್ಟದಲ್ಲಿ ಸದಾ ಅಪ್‌ಡೇಟ್ ಆಗುತ್ತಿರುವ ಪೈಪೋಟಿಯ ಈ ವೃತ್ತಿಗೆ ಅಗತ್ಯ ಪರಿಕರ ಹೊಂದಿಸಿಕೊಳ್ಳುವುದು ಅನಿವಾರ್ಯ. ಸಾಮಾನ್ಯವಾಗಿ ಫೆಬ್ರವರಿ, ಮಾರ್ಚ್‌ನಲ್ಲಿ ಮುಂಗಡ ಬುಕ್ಕಿಂಗ್ ಆಧರಿಸಿ ಫೋಟೋಗ್ರಾಫರ್‌ಗಳು ಹೊಸ ಕ್ಯಾಮರಾ, ಲೆನ್ಸ್ ಖರೀದಿಸುತ್ತಾರೆ. ಆದರೆ ಖರೀದಿಸಿದ ಕ್ಯಾಮರಾ ಸಾಲದ ಕಂತು ಕಟ್ಟಲು ಪರದಾಡುತ್ತಿರುವ ಸ್ಥಿತಿ ಈ ಬಾರಿ ನಿರ್ಮಾಣವಾಗಿದೆ. ಮಾರ್ಚ್‌ನಿಂದ ಜೂನ್‌ವರೆಗಿನ ಸಂಪಾದನೆಯಲ್ಲೇ ಇಡೀ ವರ್ಷದ ಜೀವನ ನಿರ್ವಹಣೆ ಮಾಡುತ್ತಿದ್ದ ವೃತ್ತಿಪರ ಛಾಯಾಗ್ರಾಹಕರಿಗೆ ಇದೀಗ ಸ್ಟುಡಿಯೋ ಬಾಡಿಗೆ, ಸಂಸಾರ ನಿರ್ವಹಣೆಗೆ ಸಂಕಷ್ಟ ಎದುರಿಸುತ್ತಿದ್ದಾರೆ.

    ಲಕ್ಷಗಟ್ಟಲೆ ಬಂಡವಾಳ
    ಬಹುತೇಕ ಛಾಯಾಗ್ರಾಹಕರು ಮಧ್ಯಮ ವರ್ಗದವರು. ಉತ್ತಮ ದರ್ಜೆಯ ಕ್ಯಾಮರಾಕ್ಕೆ ಕನಿಷ್ಠ 1.25 ಲಕ್ಷ ರೂ. ಬೇಕು. ಪ್ರತ್ಯೇಕ ಶೂಟಿಂಗ್ ಮತ್ತು ಮಿಕ್ಸಿಂಗ್ ಯೂನಿಟ್‌ಗೂ 5ರಿಂದ 8 ಲಕ್ಷ ರೂ. ಬಂಡವಾಳ ಅಗತ್ಯ. ಪೂರಕ ಪರಿಕರಗಳು ಸೇರಿದಂತೆ 10-15 ಲಕ್ಷ ರೂ. ಬಂಡವಾಳ ಸುರಿದು ಈ ಕ್ಷೇತ್ರದ ದುಡಿಮೆಯನ್ನೇ ನಂಬಿರುವವರು ಕಂಗಾಲಾಗಿದ್ದಾರೆ. ಇವರಂತೆ ಆಲ್ಬಂ ವಿನ್ಯಾಸಕರು, ವಿಡಿಯೋ ಸಂಕಲನಕಾರರು, ಕಲರ್ ಲ್ಯಾಬ್ ಸಿಬ್ಬಂದಿಗೂ ಈ ಋತುವಿನ ದುಡಿಮೆ ಕೈತಪ್ಪಿದೆ.

    ಸದ್ಯ ಚೇತರಿಕೆ ಕಷ್ಟ: ಈ ಸೀಸನ್‌ನ ಆರ್ಡರ್‌ಗಳು ರದ್ದಾಗಿವೆ. ಲಾಕ್‌ಡೌನ್ ತೆರವಾದರೂ ಬಳಿಕ ಆಷಾಢ ಆರಂಭವಾಗುತ್ತದೆ. ವೃತ್ತಿಪರ ಸಾಮಾನ್ಯ ಛಾಯಾಗ್ರಾಹಕರಿಗೆ ಫೆಬ್ರವರಿಯಿಂದ ಜೂನ್ ಮಧ್ಯದವರೆಗೆ ಕನಿಷ್ಠ 15-18 ಆರ್ಡರ್‌ಗಳು ನೇರವಾಗಿ ದೊರೆಯುತ್ತಿತ್ತು. ಇತರರ ಆರ್ಡರ್‌ಗಳನ್ನು ವಹಿಸಿಕೊಳ್ಳುವುದೂ ಸೇರಿದಂತೆ ಸುಮಾರು 3ರಿಂದ 4.5 ಲಕ್ಷ ರೂ.ವರೆಗೆ ಆದಾಯ ಲಭಿಸುತ್ತಿತ್ತು. ಇನ್ನೀಗ ನವೆಂಬರ್, ಡಿಸೆಂಬರ್‌ವರೆಗೆ ಕಾಯಬೇಕಿದೆ.

    ದುಡಿದದ್ದೂ ವ್ಯರ್ಥ: ಜನವರಿ, ಫೆಬ್ರವರಿ ತಿಂಗಳಿನಲ್ಲಿ ನಡೆದ ಕಾರ್ಯಕ್ರಮಗಳ ಚಿತ್ರಗಳೂ ಛಾಯಾಗ್ರಾಹಕರ ಬಳಿಯೇ ಬಾಕಿಯಾಗಿವೆ. ಅವುಗಳನ್ನು ಎಡಿಟ್ ಮಾಡಿ, ಮುದ್ರಿಸಿ ಆಲ್ಬಂ ಮಾಡಿಕೊಡಲೂ ಸಾಧ್ಯವಾಗುತ್ತಿಲ್ಲ. ವಿಳಂಬವಾದರೆ ಹಣ ಬರುವ ಭರವಸೆಯೂ ಇಲ್ಲವಾದ್ದರಿಂದ ದುಡಿದ ಹಣವೂ ಕೈಸೇರಲಾರದ ಇಕ್ಕಟ್ಟು ಸೃಷ್ಟಿಯಾಗಿದೆ.

    ಪ್ರಸ್ತುತ ಛಾಯಾಗ್ರಾಹಕರಿಗೆ ಸ್ಟುಡಿಯೋ ಸಿಟ್ಟಿಂಗ್‌ನಿಂದ ವರಮಾನ ಕಡಿಮೆ. ಮದುವೆ ಮತ್ತಿತರ ಸಮಾರಂಭಗಳೇ ಸಂಪಾದನೆಯ ಮಾರ್ಗ. ಈ ಬಾರಿ ಏಪ್ರಿಲ್-ಮೇ ತಿಂಗಳಲ್ಲಿ ನಿರಂತರ ಕಾರ್ಯಕ್ರಮಗಳಿತ್ತು. ಅಲ್ಲದೆ ಪ್ರಸ್ತುತ ಮಾರುಕಟ್ಟೆಗೆ ಬಂದಿರುವ ಮಿರರ್‌ಲೆಸ್ ಕ್ಯಾಮರಾಗಳನ್ನು ಹೆಚ್ಚಿನ ಛಾಯಾಗ್ರಾಹಕರು ಸಾಲ ಮಾಡಿ ಖರೀದಿಸಿದ್ದು, ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕರೊನಾ ಸಾಮೂಹಿಕ ಸಂಕಟದಲ್ಲಿ ಛಾಯಾಗ್ರಾಹಕರು ಬಹುವಾಗಿ ತತ್ತರಿಸಿದ್ದಾರೆ.
    ಶ್ರೀಧರ್ ಶೆಟ್ಟಿಗಾರ್, ಕರಂದಾಡಿ, ಕಾಪು
    ಅಧ್ಯಕ್ಷ, ಸೌತ್‌ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್, ದ.ಕ-ಉಡುಪಿ ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts