More

    ಫರೀದಾಬೇಗಂಗೆ ತುಮಕೂರು ಪಾಲಿಕೆ ಮೇಯರ್ ಪಟ್ಟ!

    ತುಮಕೂರು: ತುಮಕೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮುಂದುವರಿದಿದ್ದು, ಅಧಿಕಾರ ಹಿಡಿಯಬೇಕು ಎಂದು ಬಿಜೆಪಿ ನಡೆಸಿದ ತಂತ್ರಗಾರಿಕೆ ಕೈಕೊಟ್ಟಿದೆ.

    ಗುರುವಾರ ನಡೆದ ಚುನಾವಣೆಯಲ್ಲಿ ಮೇಯರ್ ಆಗಿ 13ನೇ ವಾರ್ಡ್ ಕಾಂಗ್ರೆಸ್ ಸದಸ್ಯೆ ಫರೀದಾಬೇಗಂ ಹಾಗೂ ಉಪ ಮೇಯರ್ ಆಗಿ ಜೆಡಿಎಸ್‌ನ ಶಶಿಕಲಾ ಅವಿರೋಧ ಆಯ್ಕೆಯಾದರು. ಬೆಳಗ್ಗೆ 9 ರಿಂದ 10ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿತ್ತು, ಕಾಂಗ್ರೆಸ್‌ನ ಫರೀದಾಬೇಗಂ ಹಾಗೂ ಬಿಜೆಪಿಯ ಬಿ.ಜಿ.ವೀಣಾ ನಾಮಪತ್ರ ಸಲ್ಲಿಸಿದ್ದರು. ಬೆಂಗಳೂರು ಪ್ರಾದೇಶಿಕ ಆಯುಕ್ತ ಡಾ.ಎನ್.ವಿ.ಪ್ರಸಾದ್ ಪಾಲಿಕೆ ಸಭಾಂಗಣದಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಿದರು.

    ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು ಹಾಗೂ 35 ವಾರ್ಡ್‌ಗಳ ಪಾಲಿಕೆ ಸದಸ್ಯರು ಸೇರಿ ಒಟ್ಟು 38 ಸದಸ್ಯರಿಂದ ಹಾಜರಾತಿ ಪಡೆದು ಚುನಾವಣಾ ಪ್ರಕ್ರಿಯೆ ಪ್ರಾರಂಭಿಸಿದರು. 11.30ಕ್ಕೆ ಚುನಾವಣೆ ಪ್ರಕ್ರಿಯೆ ಆರಂಭವಾದ ಕೂಡಲೇ ಬಿ.ಜಿ.ವೀಣಾ ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಫರೀದಾಬೇಗಂ ಮೊದಲ ಮುಸ್ಲಿಂ ಮಹಿಳಾ ಮೇಯರ್ ಎಂಬ ಕೀರ್ತಿಗೆ ಪಾತ್ರರಾದರು.

    ಉಪಮೇಯರ್ ಸ್ಥಾನದ ಚುನಾವಣೆಗೆ ಶಶಿಕಲಾ ಗಂಗಹನುಮಯ್ಯ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹಾಗಾಗಿ, ಅವರ ಆಯ್ಕೆಯೂ ಅವಿರೋಧವಾಗಿಯೇ ಘೋಷಣೆಯಾಯಿತು. ಸ್ಥಾಯಿ ಸಮಿತಿಗೂ ಚುನಾವಣೆ: ಮೇಯರ್, ಉಪಮೇಯರ್ ಚುನಾವಣೆ ಬಳಿಕ 4 ಸ್ಥಾಯಿ ಸಮಿತಿಗಳಿಗೂ ಚುನಾವಣೆ ಪ್ರಕ್ರಿಯೆ ಜರುಗಿತು. ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿಸಮಿತಿ, ಲೆಕ್ಕಪತ್ರ ಸ್ಥಾಯಿ ಸಮಿತಿಯ ತಲಾ 7 ಸದಸ್ಯರ ಅಯ್ಕೆಯೂ ನಡೆಯಿತು.

    ನಗರಾಭಿವೃದ್ಧಿಯೇ ನನ್ನ ಗುರಿ: ತುಮಕೂರು ನಗರದ ಸಮಗ್ರ ಅಭಿವೃದ್ಧಿ ನನ್ನ ಗುರಿ ಎಂದು ಮೇಯರ್ ಸುದ್ದಿಗಾರರ ಜತೆ ಅಭಿಪ್ರಾಯ ಹಂಚಿಕೊಂಡರು. ಅವಿರೋಧವಾಗಿ ಆಯ್ಕೆ ಮಾಡಿ ನನ್ನ ಮೇಲಿಟ್ಟಿರುವವರ ಭರವಸೆಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದರು. ಎಲ್ಲ ವಾರ್ಡ್‌ಗಳಿಗೆ ಖುದ್ದಾಗಿ ಭೇಟಿ ನೀಡಿ ಸಮಸ್ಯೆ ಅರಿತು ಜನರ ಬೇಡಿಕೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಕಾರ್ಯನಿರ್ವಹಿಸುತ್ತೇನೆ ಎಂದರು.
    ಉಪ ಮೇಯರ್ ಶಶಿಕಲಾ ಗಂಗಹನುಮಯ್ಯ ಮಾತನಾಡಿ, ನಗರದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು. ಜನರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದರು.

    ವಿವಿಧ ಸಮಿತಿಗೆ ಆಯ್ಕೆಯಾದವರು: ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಆಯ್ಕೆಯಾದವರು: ಧರಣೇಂದ್ರ ಕುಮಾರ್, ಟಿ.ಎಂ.ಮಹೇಶ್, ಷಕೀಲ್ ಅಹಮದ್ ಷರೀಫ್, ನಳಿನ, ಮುಜಿದಾ ಖಾನಂ, ನೂರು ಉನ್ನೀಸಾ ಬಾನು, ಬಿ.ಎಸ್.ಮಂಜುನಾಥ್ ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ: ಎಚ್.ಎಂ.ದೀಪಶ್ರೀ, ಟಿ.ಕೆ.ನರಸಿಂಹಮೂರ್ತಿ, ಸೈಯದ್ ನಯಾಜ್, ಬಿ.ಜಿ.ಕೃಷ್ಣಪ್ಪ, ಎ.ಶ್ರೀನಿವಾಸ್, ಎಂ.ಪ್ರಭಾವತಿ, ಲಲಿತಾ.
    ಪಟ್ಟಣ ಯೋಜನೆ, ಸುಧಾರಣೆ ಸ್ಥಾಯಿ ಸಮಿತಿ: ಎಚ್.ಮಲ್ಲಿಕಾರ್ಜುನಯ್ಯ, ವಿ.ಎಸ್.ಗಿರಿಜಾ, ಎಚ್.ಎಸ್.ನಿರ್ಮಲಾ, ಎಂ.ಸಿ.ನವೀನಾ, ನಾಸಿರಾ ಬಾನು, ಬಿ.ಎಸ್.ರೂಪಶ್ರೀ, ಬಿ.ಜಿ.ವೀಣಾ.
    ಲೆಕ್ಕಪತ್ರ ಸ್ಥಾಯಿ ಸಮಿತಿ: ಕೆ.ಎಸ್.ಮಂಜುಳಾ, ಎಸ್.ಮಂಜುನಾಥ್, ಸಿ.ಎನ್.ರಮೇಶ್, ಚಂದ್ರಕಲಾ, ಇನಾಯತ್ ಉಲ್ಲಾ ಖಾನ್, ಜೆ.ಕುಮಾರ್, ವಿಷ್ಣುವರ್ಧನ.

    ದುಷ್ಟಕೂಟದಿಂದ ದೂರವಿರಿ: ನಗರದ ಅಭಿವೃದ್ಧಿ ದೃಷ್ಟಿಯಿಂದ ಅವಿರೋಧ ಆಯ್ಕೆಗೆ ಎಲ್ಲರೂ ಸಹಕಾರ ನೀಡಿದ್ದೇವೆ. ಮೇಯರ್, ಉಪಮೇಯರ್ ದರ್ಬಾರ್ ಮಾಡದೆ ಅಭಿವೃದ್ಧಿಗೆ ಶ್ರಮಿಸಿ ಎಂದು ಸಂಸದ ಜಿ.ಎಸ್.ಬಸವರಾಜು ಸಲಹೆ ನೀಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚು ಅನುದಾನ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸೋಣ, ರಾಜಕೀಯ ಬಿಟ್ಟು ಪಕ್ಷಾತೀತವಾಗಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

    ನಡೆಯದ ಬಿಜೆಪಿ ತಂತ್ರಗಾರಿಕೆ!: ನಗರದಲ್ಲಿ ಸಂಸದ, ಶಾಸಕರನ್ನು ಹೊಂದಿದ್ದ ಬಿಜೆಪಿ ರಾಜಕೀಯ ತಂತ್ರಗಾರಿಕೆ ನಡೆಸಿ ಪಾಲಿಕೆ ಅಧಿಕಾರ ಹಿಡಿಯಬಹುದು ಎಂಬ ನಿರೀಕ್ಷೆ ಹುಸಿಯಾಯಿತು. ಚುನಾವಣಾ ಕಣದಲ್ಲಿಯೇ ಉಳಿಯುವ ಧೈರ್ಯವನ್ನು ಬಿಜೆಪಿ ತೋರಿಸಲಿಲ್ಲ. ನಿರಾಯಾಸವಾಗಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಗೆ ಅಧಿಕಾರ ಒಲಿದುಬಂತು. ಚಮತ್ಕಾರ ನಡೆಯಬಹುದು ಎಂಬ ಲೆಕ್ಕಾಚಾರದಿಂದ ಮತದಾನದ ಹಕ್ಕು ಹೊಂದಿದ್ದ ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಬೆಮೆಲ್‌ಕಾಂತರಾಜು ಕೂಡ ಸಭೆಗೆ ಹಾಜರಾಗಿದ್ದರು.

    ಮಾದರಿ ತುಮಕೂರು ನಗರ ನಿರ್ಮಾಣದ ಬಗ್ಗೆ ನನ್ನ ಕನಸುಗಳಿವೆ, ಸದಸ್ಯರ ಸಲಹೆ ಪಡೆದು ಅಭಿವೃದ್ಧಿ ಕಾರ್ಯಕ್ರಮ ರೂಪಿಸುತ್ತೇನೆ. ಅಧಿಕಾರದಲ್ಲಿ ಕುಟುಂಬ ಸದಸ್ಯರ ಹಸ್ತಕ್ಷೇಪಕ್ಕೆ ಅವಕಾಶ ನೀಡದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಶಕ್ತಿ ನನಗಿದೆ.
    ಫರೀದಾ ಬೇಗಂ ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts