More

    ಫಲ್ಗುಣಿ ಮತ್ತೆ ಕಲುಷಿತ

    ಹರೀಶ್ ಮೋಟುಕಾನ, ಮಂಗಳೂರು

    ನಗರದ ಹೊರವಲಯದ ಮೂಡುಶೆಡ್ಡೆಯಲ್ಲಿರುವ ಪಚ್ಚನಾಡಿ ಜಲತ್ಯಾಜ್ಯ ಸಂಸ್ಕರಣಾ ಘಟಕದಿಂದ ಹಾಗೂ ಬೈಕಂಪಾಡಿ, ಕೆಂಜಾರು ಮೊದಲಾದ ಕಡೆಯಿಂದ ಸಂಸ್ಕರಿಸಲ್ಪಡದ ತ್ಯಾಜ್ಯ ನೀರು ನದಿಗೆ ಸೇರುತ್ತಿರುವ ಭೀತಿ ಎದುರಾಗಿದ್ದು, ಮರವೂರು ಅಣೆಕಟ್ಟಿನ ಒಳಗಿರುವ ಮತ್ತು ಹೊರಗಿನಿಂದ ಹರಿದು ಬರುತ್ತಿರುವ ನೀರು ಕಪ್ಪು ಬಣ್ಣಕ್ಕೆ ತಿರುಗಿದಂತೆ ಕಂಡು ಬಂದಿದೆ. ಇದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.
    ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಮರವೂರಿನಲ್ಲಿ ಫಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಅಣೆಕಟ್ಟಿನಿಂದ 8 ಗ್ರಾಮ ಪಂಚಾಯಿತಿಗಳ 14 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಬಜ್ಪೆ, ಜೋಕಟ್ಟೆ, ಮರವೂರು, ಕೆಂಜಾರು, ಪೆರ್ಮುದೆ, ಕುತ್ತೆತ್ತೂರು, ಮೂಡುಶೆಡ್ಡೆ, ಪಡುಶೆಡ್ಡೆ, ತೆಂಕ ಎಕ್ಕಾರು, ಬಡಗ ಎಕ್ಕಾರು, ಬಾಳ, ಕಳವಾರು, ಸೂರಿಂಜೆ ಮತ್ತು ದೇಲಂತಬೆಟ್ಟು ಗ್ರಾಮಗಳ ಜನರು ನೀರು ಬಳಸುತ್ತಿದ್ದಾರೆ.

    ಮೂಡುಶೆಡ್ಡೆಯಲ್ಲಿರುವ 8.75 ಎಂಎಲ್‌ಡಿ ಸಾಮರ್ಥ್ಯದ ಪಚ್ಚನಾಡಿ ಜಲತ್ಯಾಜ್ಯ ಸಂಸ್ಕರಣಾ ಘಟಕದಿಂದ ತಿಂಗಳ ಹಿಂದೆ ತ್ಯಾಜ್ಯ ನೀರು ಸೋರಿಕೆಯಾಗಿ ಅಣೆಕಟ್ಟಿಗೆ ಹರಿದು ಹೋಗಿತ್ತು. ಈ ನೀರನ್ನು ಕುಡಿದ ಹಲವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಶಾಸಕ ಉಮಾನಾಥ ಕೋಟ್ಯಾನ್, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಮಹಾನಗರಪಾಲಿಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಯಾವುದೇ ಕಾರಣಕ್ಕೂ ತ್ಯಾಜ್ಯ ನೀರು ಹೊರ ಬಿಡದಂತೆ ಶಾಸಕರು ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದರು.

    ನದಿಯಲ್ಲಿ ಕಪ್ಪು ನೀರು: ಮಂಜಲ್‌ಪಾದೆ ಮೂಲಕ ಹರಿದು ಹೋಗಿ ಮರವೂರು ಅಣೆಕಟ್ಟಿಗೆ ಸೇರುವ ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಈ ನದಿ ನೀರಿನಲ್ಲಿ ಹೊರಗಿನಿಂದ ಬಂದು ವಾಹನ ತೊಳೆಯುತ್ತಿದ್ದಾರೆ. ರಾತ್ರಿ ವೇಳೆ ಮಾಂಸದ ತ್ಯಾಜ್ಯ ತಂದು ನದಿಗೆ ಸುರಿಯುತ್ತಿದ್ದಾರೆ. ಕೆಲವರು ಈ ನೀರಲ್ಲೇ ಸ್ನಾನ, ಬಟ್ಟೆ ಒಗೆಯುತ್ತಿದ್ದಾರೆ. ನೀರು ಸಂಪೂರ್ಣ ಕಲುಷಿತವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
    2017ರ ಫೆಬ್ರವರಿ ತಿಂಗಳಲ್ಲಿ ಮೊದಲ ಬಾರಿಗೆ ಫಲ್ಗುಣಿ ನದಿ ನೀರು ಕಲುಷಿತಗೊಂಡು ಕಪ್ಪಾಗಿತ್ತು. ವಿವಿಧ ಕೈಗಾರಿಕೆಗಳ ನೀರು ನದಿ ಒಡಲು ಸೇರುತ್ತಿರುವ ಕುರಿತು ಸಾರ್ವಜನಿಕರು ಆರೋಪಿಸಿದ್ದರು. ಬೈಕಂಪಾಡಿ ಮತ್ತು ಕೆಂಜಾರಿನಿಂದ ಸಂಸ್ಕರಿಸಲ್ಪಡದ ತ್ಯಾಜ್ಯ ನೀರು ಹಾಗೂ ಕುಲಶೇಖರ ಮತ್ತು ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಿಂದಲೂ ತ್ಯಾಜ್ಯ ಸೇರುವುದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಪತ್ತೆ ಮಾಡಿತ್ತು. ಆ ಬಳಿಕ ಎರಡು ವರ್ಷ ಯಾವುದೇ ಸಮಸ್ಯೆ ಉಂಟಾಗಿರಲಿಲ್ಲ.

    ಅಣೆಕಟ್ಟು ನೀರಲ್ಲಿ ತ್ಯಾಜ್ಯ: ಮರವೂರು ಅಣೆಕಟ್ಟು ನೀರಲ್ಲಿ ತ್ಯಾಜ್ಯ ತುಂಬಿದ ಪ್ಲಾಸ್ಟಿಕ್‌ಗಳು ತೇಲುತ್ತಿವೆ. ಎಲ್ಲೋ ತ್ಯಾಜ್ಯ ತುಂಬಿಸಿ ಎಸೆಯಲಾದ ಪ್ಲಾಸ್ಟಿಕ್ ಕವರ್‌ಗಳು ತೇಲಿಕೊಂಡು ಬಂದು ಡ್ಯಾಂ ಸೇರುತ್ತಿವೆ. ಈ ನೀರು ಕುಡಿಯಲು ಯೋಗ್ಯವೇ ಎಂಬುದನ್ನು ಪರೀಕ್ಷಿಸಿದರೆ ಜನರಲ್ಲಿರುವ ಆತಂಕ ನಿವಾರಣೆಯಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಜನವರಿ ಆರಂಭದಲ್ಲಿ ಜಲತ್ಯಾಜ್ಯ ಸಂಸ್ಕರಣಾ ಘಟಕದಿಂದ ಶುದ್ಧೀಕರಿಸದ ನೀರನ್ನು ಅಣೆಕಟ್ಟೆಗೆ ಬಿಡುತ್ತಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿತ್ತು. ಪರಿಶೀಲನೆ ನಡೆಸಿದಾಗ ಒಂದಷ್ಟು ಪ್ರಮಾಣದಲ್ಲಿ ನೀರು ಸೋರಿಕೆಯಾಗಿತ್ತು. ಆ ಬಳಿಕ ನೀರು ಸೋರಿಕೆಯಾಗದಂತೆ ಸೂಕ್ತ ಎಚ್ಚರಿಕೆ ನೀಡಿದ ಬಳಿಕ ಈಗ ಸ್ಥಗಿತಗೊಂಡಿದೆ. ಅನಾರೋಗ್ಯ ಕಾಣಿಸಿಕೊಂಡಾಗ ನೀರಿನ ಬಗ್ಗೆ ಭೀತಿ ಉಂಟಾಗುವುದು ಸಹಜ.
    ಹರಿಪ್ರಸಾದ್ ಶೆಟ್ಟಿ, ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷ

    ಪಚ್ಚನಾಡಿ ಜಲತ್ಯಾಜ್ಯ ಸಂಸ್ಕರಣಾ ಘಟಕದಿಂದ ನೀರು ಹೊರ ಬಿಡಲಾಗುತ್ತಿಲ್ಲ. ಈ ಹಿಂದೆ ಪಂಪ್ ಹಾಳಾದಾಗ ನೀರು ಹೋರ ಹೋಗಿ ಸಮಸ್ಯೆಯಾಗಿತ್ತು. ಈಗ ಸಮಸ್ಯೆ ಬಗೆ ಹರಿದಿದೆ. ಸಾರ್ವಜನಿಕರು ಭಯ ಪಡುವ ಅಗತ್ಯವಿಲ್ಲ.
    ಅಬ್ದುಲ್ ಖಾದರ್, ಮನಪಾ ಜೂನಿಯರ್ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts