

ಧಾರವಾಡ: ರಾಜಕೀಯ ಸಮಾರಂಭಗಳಿಗೆ ಹೋಗುವಾಗ ಇಲ್ಲವೇ ಬರುವಾಗ ಕಾರ್ಯಕರ್ತರು ಹುಷಾರಾಗಿರುವುದು ತುಂಬಾ ಒಳಿತು. ಏಕೆಂದರೆ ಪಕ್ಷದ ಕಾರ್ಯಕ್ರಮದ ಹುರುಪಿನಲ್ಲಿ ಅವಘಡ-ಅಪಘಾತಗಳು ಸಂಭವಿಸಿ, ಜನರು ಪ್ರಾಣ ಕಳೆದುಕೊಳ್ಳುತ್ತಿರುವುದು ನಡೆಯುತ್ತಿದೆ.
ಅಂಥ ಸಾವುಗಳ ಪಟ್ಟಿಗೆ ಇಂದು ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಗವಹಿಸಿದ್ದ ಬೆಳಗಾವಿಯ ಯುವಕ್ರಾಂತಿ ರ‌್ಯಾಲಿಯಲ್ಲಿ ಪಾಲ್ಗೊಳ್ಳಲು ಹೋಗಿದ್ದ ವ್ಯಕ್ತಿಯೊಬ್ಬ ಅಪಘಾತದಲ್ಲಿ ಸಾವಿಗೀಡಾಗಿದ್ದಾನೆ.
ಹುಬ್ಬಳ್ಳಿಯ ಎಸ್.ಎಂ. ಕೃಷ್ಣ ನಗರದ ನಿವಾಸಿ ಅಬ್ದುಲ್ ಖಾದರ್ ಮುಜಾತಿ (70) ಸಾವಿಗೀಡಾದ ವ್ಯಕ್ತಿ. ಧಾರವಾಡ ತಾಲೂಕಿನ ತೇಗೂರ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದು ಈತ ಸಾವಿಗೀಡಾಗಿದ್ದಾನೆ. ಬೆಳಗಾವಿಯ ಕಾರ್ಯಕ್ರಮಕ್ಕೆ ಕ್ರೂಸರ್ ತೆಗೆದುಕೊಂಡು ಹೋಗಿದ್ದ ಈತ ವಾಪಸ್ ಬರುವಾಗ ಊಟಕ್ಕೆಂದು ವಾಹನ ನಿಲ್ಲಿಸಿ ರಸ್ತೆ ದಾಟುವಾಗ ಅಪಘಾತ ಸಂಭವಿಸಿದೆ. ಗರಗ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.