More

    ಕೃಷಿ ಭೂಮಿ ಅನ್ಯ ಉದ್ದೇಶಕ್ಕೆ ಬಳಸಲು, ನೀರಾವರಿ ಜಮೀನು ಗರಿಷ್ಠ ಮಿತಿಗಿಂತ ಹೆಚ್ಚು ಖರೀದಿಸಲು ಅನುಮತಿ ಕಡ್ಡಾಯ

    ಬೆಂಗಳೂರು: ಕೃಷಿಯೇತರ ಉದ್ದೇಶಕ್ಕೆ ಗರಿಷ್ಠ ಮಿತಿಗಿಂತ ಹೆಚ್ಚಿನ ಭೂಮಿ ಮತ್ತು ನೀರಾವರಿ ಜಮೀನು ಖರೀದಿಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ಕಂದಾಯ ಇಲಾಖೆ ಕಟ್ಟಾಜ್ಞೆ ಹೊರಡಿಸಿದೆ.

    ಕರ್ನಾಟಕ ಭೂ ಸುಧಾರಣೆ ಕಾಯ್ದೆ 1961 ಕಲಂ 79ಎ, 79ಬಿ (ಕೃಷಿ ಜಮೀನು ಕೃಷಿಕ ಮಾತ್ರ ಖರೀದಿ ಮಾಡಬೇಕು) ರದ್ದು ಮಾಡಿ ರಾಜ್ಯ ಸರ್ಕಾರ 1 ಕುಟುಂಬ ಗರಿಷ್ಠ 216 ಎಕರೆ ಜಮೀನು ಖರೀದಿಗೆ ಅವಕಾಶ ಕಲ್ಪಿಸಿದೆ. ಆದರೆ, ವ್ಯಕ್ತಿಗಳು, ಸಂಘ-ಸಂಸ್ಥೆಗಳು ಮತ್ತು ಕೈಗಾರಿಕಾ ಸಂಸ್ಥೆಗಳು ಕೃಷಿಯೇತರ ಉದ್ದೇಶಕ್ಕೆ ಕೃಷಿ ಭೂಮಿಯನ್ನು ಖರೀದಿ ಮಾಡುತ್ತಿದ್ದಾರೆ. ಈ ಬಗ್ಗೆ ಕಂದಾಯ ಇಲಾಖೆ ಗೊಂದಲ ನಿವಾರಿಸಿ ಮಂಗಳವಾರ ಸುತ್ತೋಲೆ ಹೊರಡಿಸಿದೆ.

    ನೀರಾವರಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಖರೀದಿಸಲು ಕಂದಾಯ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಒಂದು ವೇಳೆ ಗರಿಷ್ಠ ಮಿತಿ (216 ಎಕರೆ) ಒಳಗಿದ್ದರೆ ಮತ್ತು ನೀರಾವರಿ ಜಮೀನು ಅಲ್ಲದಿದ್ದರೆ ಅನುಮತಿ ಅಗತ್ಯ ಇರುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಕಡ್ಡಾಯವಾಗಿ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ವಾರಸುದಾರರು ಪ್ರಮಾಣಪತ್ರ ಸಲ್ಲಿಸಬೇಕು. ಖಾತೆ ಮಾಡುವಾಗ ರಾಜಸ್ವ ನಿರೀಕ್ಷಕ ಮತ್ತು ಗ್ರಾಮ ಲೆಕ್ಕಿಗರು ಭೂ ಸುಧಾರಣಾ ಕಾಯ್ದೆ ಮಾನದಂಡಗಳು ಉಲ್ಲಂಘನೆಯ ಬಗ್ಗೆ ಪರಿಶೀಲಿಸಬೇಕು. ಆನಂತರ ಖಾತೆ ನೀಡಬೇಕು. ಒಂದು ವೇಳೆ ತಪ್ಪಾಗಿ ಪ್ರಮಾಣ ಪತ್ರ ಸಲ್ಲಿಸಿದ್ದಲ್ಲಿ ಉಪ ನೋಂದಣಾಧಿಕಾರಿಗಳಿಗೆ ಕಳುಹಿಸಿ ನೋಂದಣಿ ದಸ್ತಾವೇಜನ್ನು ಅಸಿಂಧು ಮಾಡುವಂತೆ ಆದೇಶಿಸಬೇಕು. ಸಬ್ ರಿಜಿಸ್ಟರ್ ಆದೇಶದ ಅನ್ವಯ ಕ್ರಯ ಪತ್ರ ರದ್ದು ಮಾಡುವಂತೆ ಕಂದಾಯ ಇಲಾಖೆ ಸೂಚನೆ ನೀಡಿದೆ.

    ಒಂದು ವೇಳೆ ನೀರಾವರಿ ಜಮೀನು ಅಲ್ಲದಿದ್ದರೆ ಮತ್ತು ಗರಿಷ್ಠ ಮಿತಿ ಒಳಗೆ ಜಮೀನು ಇದ್ದರೆ ಅಂಥವರು ಕೃಷಿಯೇತರ ಉದ್ದೇಶಕ್ಕೆ ಭೂಮಿ ಬಳಸಲು ಕಡ್ಡಾಯವಾಗಿ ಭೂ ಕಂದಾಯ ಕಾಯ್ದೆ ಪ್ರಕಾರ ಭೂ ಪರಿವರ್ತನೆ ಮಾಡಿಕೊಳ್ಳಬೇಕು. ಭೂ ಪರಿವರ್ತನೆ ಆಗದಿದ್ದರೆ ಕೃಷಿ ಜಮೀನು ಎಂದೇ ಪರಿಗಣಿಸಲಾಗುತ್ತದೆ. ನಿಯಮ ಉಲ್ಲಂಘಿಸಿ ಕೃಷಿಯೇತರ ಉದ್ದೇಶಕ್ಕೆ ಬಳಸಿದರೆ ಜಿಲ್ಲಾಧಿಕಾರಿಗಳು ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಕಂದಾಯ ಇಲಾಖೆ ಎಚ್ಚರಿಕೆ ನೀಡಿದೆ.

    ಶಾಲಾ-ಕಾಲೇಜುಗಳಿಗೆ ರಜೆ ವಿಚಾರ; ಕರೊನಾ ನಿಯಂತ್ರಣ ನಿಟ್ಟಿನಲ್ಲಿ ಸಿಎಂ ಮಹತ್ವದ ನಿರ್ಧಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts