More

    ಮನಸ್ಸಿನಲ್ಲಿ ಕೊರತೆಯಿದ್ದರೆ ಜೀವನದಲ್ಲಿ ಸಾಧನೆ ಮಾಡುವುದು ಅಸಾಧ್ಯ

    ಬಾಳೆಹೊನ್ನೂರು: ಮನಸ್ಸಿನಲ್ಲಿ ಕೊರತೆಯಿದ್ದರೆ ಜೀವನದಲ್ಲಿ ಸಾಧನೆ ಮಾಡುವುದು ಅಸಾಧ್ಯ ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.

    ಪಟ್ಟಣದ ಬಿಜಿಎಸ್ ಸಮೂಹ ಸಂಸ್ಥೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಲಾವೈಭವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ಯಾವುದೇ ವ್ಯಕ್ತಿ ಸಾಧನೆ ಮಾಡಲು ಸರಳ ಜೀವನ ಅಗತ್ಯ ಎಂದರು.

    ಜ್ಞಾನ-ವಿಜ್ಞಾನಗಳು ಕೇವಲ ಪಠ್ಯ ಪುಸ್ತಕದಲ್ಲಿ ಇಲ್ಲ. ಅವು ನಮ್ಮ ಮನಸ್ಸಿನಲ್ಲಿಯೂ ಇದೆ ಎಂಬುದನ್ನು ಅರಿಯಬೇಕಿದೆ. ಚಿಂತನೆ ಮಾಡುವ ಶಕ್ತಿ ಕೇವಲ ಮನುಷ್ಯನಿಗಿದ್ದು, ಉತ್ತಮ ವಿಚಾರಗಳನ್ನು ನಾವುಗಳು ಜೀವನದಲ್ಲಿ ಮೆಲುಕು ಹಾಕಬೇಕು ಎಂದರು.

    ವಿದ್ಯಾರ್ಥಿಗಳು ಆತ್ಮಬಲ, ಆತ್ಮವಿಶ್ವಾಸ, ಆತ್ಮಸ್ಥೈರ್ಯ, ಆತ್ಮಜ್ಞಾನ ಹೊಂದಿ ಸಾಧನೆ ಮಾಡಬೇಕಿದೆ. ಜ್ಞಾನ ದೇಗುಲವೆಂಬುದು ಜೀವನದಲ್ಲಿ ಶ್ರೇಷ್ಠ ಮತ್ತು ಪರಿಪೂರ್ಣ ಎಂಬುದನ್ನು ಅರಿಯಬೇಕಿದೆ ಎಂದರು.

    ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಆಡಳಿತಾಧಿಕಾರಿ ಎ.ಟಿ.ಶಿವರಾಂ ಮಾತನಾಡಿ, ಆದಿಚುಂಚನಗಿರಿಯ ಈ ಹಿಂದಿನ ಪೀಠಾಧ್ಯಕ್ಷ ಬಾಲಗಂಗಾಧರನಾಥ ಸ್ವಾಮೀಜಿ 1974ರಲ್ಲಿ 50 ವಿದ್ಯಾರ್ಥಿಗಳೊಂದಿಗೆ ಒಂದು ಶಿಕ್ಷಣ ಸಂಸ್ಥೆ ಆರಂಭಿಸಿದ್ದರು. ಪ್ರಸ್ತುತ ರಾಜ್ಯ, ಹೊರ ರಾಜ್ಯದಲ್ಲಿ 483 ವಿದ್ಯಾಸಂಸ್ಥೆಗಳು, 1.48 ಲಕ್ಷ ವಿದ್ಯಾರ್ಥಿಗಳು ಬಿಜಿಎಸ್ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ದೆಹಲಿ, ರಾಮನಗರ ಮುಂತಾದೆಡೆ ಕೇಂದ್ರೀಯ ಪಠ್ಯಕ್ರಮವನ್ನು ಸಹ ಶಿಕ್ಷಣ ಸಂಸ್ಥೆ ಅಳವಡಿಸಿಕೊಂಡಿದೆ ಎಂದು ತಿಳಿಸಿದರು.

    ಎನ್.ಆರ್.ಪುರ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ನಾಗರಾಜ್ ಮಾತನಾಡಿ, ವಿದ್ಯಾರ್ಥಿಗಳಿಗೆ ಅಂಕ ಗಳಿಕೆಯೇ ಗುರಿಯಾಗಬಾರದು. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕಿದೆ ಎಂದರು.

    ಪ್ರಾಚಾರ್ಯ ಡಾ. ವೈ.ಎ.ಸುರೇಶ್, ಬಿಜಿಎಸ್ ಕಾಲೇಜಿನ ಆಡಳಿತ ಸಮಿತಿ ಸದಸ್ಯ ಎಂ.ಕೆ.ಸುಂದರೇಶ್, ಟಿ.ಎಂ.ಉಮೇಶ್ ಕಲ್ಮಕ್ಕಿ, ಕೆ.ಎನ್.ರುದ್ರಪ್ಪ ಗೌಡ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts