ಹಾನಗಲ್ಲ: ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ತಾಲೂಕಿನ ಹೇರೂರ ಗ್ರಾಮದಲ್ಲಿ ಹಸಿ ಮೆಣಸಿನಕಾಯಿ ಬೆಳೆ ಜಲಾವೃತವಾಗಿದೆ.
ಇದರಿಂದಾಗಿ ಗ್ರಾಮದ ಹತ್ತಾರು ರೈತರ ಅಂದಾಜು 10 ಎಕರೆ ಜಮೀನಿನಲ್ಲಿನ ಹಸಿಮೆಣಸಿನಕಾಯಿ ಬೆಳೆ ಹಾಳಾಗಿದೆ. 25 ಎಕರೆಯಷ್ಟು ಭೂಮಿ ಜವುಳು ಹಿಡಿದಿದೆ. ಇದರಿಂದ ಮೆಣಸಿನಕಾಯಿಗಳೆಲ್ಲ ಗಿಡಗಳಲ್ಲಿಯೇ ಕೊಳೆತು ಹೋಗುವಂತಾಗಿದೆ. ಹೊಲಗಳಲ್ಲಿ ನೀರು ನಿಂತು ಕೆರೆಯಂತಾಗಿವೆ. ಇದಕ್ಕೆ ಕಾರಣ ಹೊಲಗಳ ಪಕ್ಕದಲ್ಲಿರುವ ಹಳ್ಳಕ್ಕೆ ಅವೈಜ್ಞಾನಿಕವಾಗಿ ಅಡ್ಡಚರಂಡಿ (ಸಿ.ಡಿ.) ನಿರ್ವಿುಸಿರುವುದು. ಅದರಿಂದಲೇ ಮಳೆ ನೀರು ಜಮೀನುಗಳಿಗೆ ನುಗ್ಗುತ್ತದೆ ಎಂಬುದು ರೈತರ ಆರೋಪ.
‘ಸಿ.ಡಿ. ತೆರವುಗೊಳಿಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ಬಗ್ಗೆ ವರದಿ ಮಾಡಿ ಸಂಬಂಧಿಸಿದವರಿಗೆ ತಿಳಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳು ಸರ್ಕಾರದಿಂದ ಪರಿಹಾರ ಬರುತ್ತದೆ ಎಂದು ಹೇಳುತ್ತಾರೆ. ಆದರೆ, ಪರಿಹಾರ ದೊರೆತಿಲ್ಲ ಎಂದು ರೈತ ಫಕೀರೇಶ ದೂರಿದ್ದಾರೆ.
‘ಪ್ರತಿವರ್ಷ ಮಳೆಗಾಲದಲ್ಲಿ ನಮ್ಮ ಹಾಗೂ ಸುತ್ತಮುತ್ತಲಿನ 25 ಎಕರೆಯಷ್ಟು ಹೊಲ-ಗದ್ದೆಗಳು ಜಲಾವೃತಗೊಳ್ಳುತ್ತವೆ. ಕೃಷಿ ಇಲಾಖೆ ಸಿಬ್ಬಂದಿಯಾದರೂ ಇತ್ತ ಹಾಯುವುದಿಲ್ಲ. ನಮ್ಮ ಸಮಸ್ಯೆಯನ್ನು ಆಲಿಸುವುದಿಲ್ಲ. ರಾಜ್ಯದ ಎಲ್ಲ ಸಚಿವರಿಗೆ ಕಾಲು ಬೀಳುತ್ತೇವೆ. ರೈತರ ಸಮಸ್ಯೆಗಳನ್ನು ಬಗೆಹರಿಸಿ’ ಎಂದು ರೈತ ಮಲ್ಲಪ್ಪ ಬಡಿಗೇರ ಅಲವತ್ತುಕೊಂಡಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ದರ ಕುಸಿತ ಹಾಗೂ ಮಾರಾಟವಾಗದೆ ಉಳಿದ ಹಿಂಗಾರು ಬೆಳೆಗಳಿಗೆ ಪರಿಹಾರ ನೀಡಲು ಸಾಧ್ಯವಿದೆ. ಈ ಯೋಜನೆ ಜಾರಿಯಲ್ಲಿದ್ದು, ಪ್ರತಿ ಹೆಕ್ಟೇರ್ಗೆ 10 ಸಾವಿರ ರೂಪಾಯಿ ಪರಿಹಾರ ಘೊಷಣೆಯಾಗಿದೆ. ಮೆಣಸಿನಕಾಯಿ ಹಾನಿಯಾದ ಹೇರೂರ ಗ್ರಾಮದ ರೈತರ ಹೊಲಗಳಿಗೆ ಕಂದಾಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಜಂಟಿ ಸಮೀಕ್ಷೆ ಮಾಡಿ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು.
|ಮಂಜುನಾಥ ಬಣಕಾರ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ಹಾನಗಲ್ಲ