More

    ಕಬ್ಬು ಕಟಾವು ಮಾಡಿ

    ಹೂವಿನಹಡಗಲಿ: ಕಬ್ಬು ಕಟಾವು ಮಾಡುವಂತೆ ಒತ್ತಾಯಿಸಿ ಕೊಂಬಳಿ ಗ್ರಾಮದ ಕಬ್ಬು ಬೆಳೆಗಾರರು ಭಾನುವಾರ ಗ್ರಾಮದ ಮೂಲಕ ವಿಜಯನಗರ ಸಕ್ಕರೆ ಕಾರ್ಖಾನೆಗೆ ತೆರಳುವ ಕಬ್ಬಿನ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು.

    ರೈತ ಪ್ರಭು ಸೊಪ್ಪಿನ ಮಾತನಾಡಿ, ಕೊಂಬಳಿ ಗ್ರಾಮದ ರೈತರು ಬೆಳೆದ ಸುಮಾರು 5500 ಟನ್ ಕಬ್ಬು ಕಟಾವಾಗದೆ ಒಣಗುತ್ತಿದೆ. ಕಾರ್ಖಾನೆಯವರು ಸರಿಯಾದ ಸಮಯಕ್ಕೆ ಕಬ್ಬು ಕಟಾವು ಮಾಡದೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದ್ದಾರೆ. ಕಬ್ಬು ಕಟಾವು ಮಾಡಲು ಬರುವ ಕೆಲಸಗಾರರಿಗೆ ಕಾರ್ಖಾನೆಯವರು ಹಣ ನೀಡಲ್ಲ. ಅವರು ರೈತರಿಂದ ಹಣ ಪಡೆಯುತ್ತಿದ್ದಾರೆ.

    ಈ ಮೂಲಕ ಕಂಪನಿ ಆರ್ಥಿಕ ಹೊರೆ ಹಾಕುತ್ತಿದೆ. 14 ತಿಂಗಳಾದರೂ ಸಹ ಕಬ್ಬು ಕಟಾವು ಮಾಡದಿದ್ದಾಗ ಬೆಳೆ ತನ್ನ ಶಕ್ತಿ ಕಳೆದುಕೊಳ್ಳುತ್ತದೆ. ಕಾರ್ಖಾನೆಯವರು ನೇಮಿಸಿದ ಅಧಿಕಾರಿಗಳು ರೈತರ ಸಮಸ್ಯೆ ಆಲಿಸಲ್ಲ. ಕಾರ್ಖಾನೆಗೆ ಹತ್ತಿರವೇ ಇರುವ ಗ್ರಾಮಕ್ಕೆ ಕಬ್ಬು ಸಾಗಿಸಲು ಯಾರೂ ಬರುತ್ತಿಲ್ಲ. ಇದು ಕಾರ್ಖಾನೆ ಸಮಸ್ಯೆಯಾಗಿದ್ದು ರೈತರ ಮೇಲೆ ಹಾಕಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ರಾಜ್ಯದಲ್ಲಿ ಬರಗಾಲವಿದೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ವಿದ್ಯುತ್ ಸಮಸ್ಯೆ ಹೆಚ್ಚಾಗಿದು,್ದ ಕಬ್ಬಿನ ಬೆಳೆಗೆ ನೀರು ಪೂರೈಕೆ ಮಾಡಲು ಕಷ್ಟವಾಗುತ್ತಿದೆ. ಕಬ್ಬು ಬೆಳೆಯನ್ನು ಪ್ರತಿ 12 ತಿಂಗಳಿಗೆ ಕಟಾವು ಮಾಡಬೇಕು. ಆದರೆ 14 ತಿಂಗಳಾದರೂ ಮಾಡುತ್ತಿಲ್ಲ. ಕಟಾವು ಸಂದರ್ಭದಲ್ಲಿ ಕೆಲಸಗಾರರಿಗೆ ಟನ್‌ಗೆ 100 ರಿಂದ 150 ರೂ. ನಾವೇ ನೀಡುತ್ತೇವೆ. ಉಳಿದದ್ದು ಕಾರ್ಖಾನೆ ನೀಡಬೇಕು. ಕಾರ್ಖಾನೆಯವರು ಪ್ರತಿಭಟನಾ ಸ್ಥಳಕ್ಕೆ ಬರುವವರೆಗೂ ಪ್ರತಿಭಟನೆ ಹಿಂಪಡೆಯಲ್ಲ ಎಂದು ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಬಂದ ಕಾರ್ಖಾನೆಯ ಅಧಿಕಾರಿಗಳು ಹಾಗೂ ರೈತರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿದ್ದ ಪೊಲೀಸರು ರೈತರ ಸಮಾಧಾನಪಡಿಸಿದರು.

    ಕಾರ್ಖಾನೆಯ ಎಜಿಎಂ ಮಂಜುನಾಥ ಮಾತನಾಡಿ, ನಾಟಿ ಹಂಗಾಮು ಮತ್ತು ಹರಿಯುವ ಹಂಗಾಮು ಎಂದು ಕಬ್ಬು ಬೆಳೆಯನ್ನು ವಿಭಾಗ ಮಾಡಲಾಗಿದೆ. ಜೂನ್‌ನಲ್ಲಿ ನಾಟಿ ಮಾಡಿದರೆ ಅದು ಹರಿಯುವ ಹಂಗಾಮಿಗೆ ಬರಲು 13-14 ತಿಂಗಳಾಗುತ್ತದೆ. ಜೂನ್‌ನಿಂದ ಐದು ತಿಂಗಳು ನಾಟಿ ಮಾಡುವವರಿಗೆ 5 ಲಕ್ಷ ಟನ್, ನಂತರ 4 ಲಕ್ಷ, ಆನಂತರ 50 ಸಾವಿರ ಟನ್ ಇಳುವರಿ ಬರುತ್ತದೆ. ಪ್ರತಿ ವರ್ಷ ಅಕ್ಟೋಬರ್ ಮೊದಲನೇ ವಾರ ಕಾರ್ಖಾನೆ ಆರಂಭ ಮಾಡುವುದು ವಾಡಿಕೆ. ಆದರೆ ಸರ್ಕಾರದ ಆದೇಶದಂತೆ ನ.1ರಿಂದ ಆರಂಭಿಸಬೇಕಿತ್ತು. ಆದರೆ, ರೈತರ ಮನವಿಗೆ ಅ.26ರಂದು ತೆರೆಯಲಾಯಿತು.

    ಕೊಂಬಳಿ ಭಾಗದಲ್ಲಿ 5300 ಟನ್ ಕಬ್ಬು ಇದೆ. ಬೇರೆ ಕಡೆ ಹೋದ ಕಾರ್ಮಿಕರು ಬಂದ ತಕ್ಷಣ ಕಟಾವು ಮಾಡಲಾಗುತ್ತದೆ ಎಂದರು. ಇದಕ್ಕೆ ವಿರೋಧಿಸಿದ ರೈತರು ಮತ್ತೆ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಲು ಮುಂದಾದರು. ಹೀಗಾಗಿ ಇನ್ನು ಮೂರು ದಿನಗಳಲ್ಲಿ ಕಬ್ಬು ಕಟಾವಿಗೆ ಕಾರ್ಮಿಕರನ್ನು ಕಳಿಸಲಾಗುವುದು. 40 ಟನ್‌ಗಿಂತ ಹೆಚ್ಚು ಬೆಳೆದ ರೈತರಿಗೆ 1 ಟನ್‌ಗೆ 150 ರೂ. ಕೂಲಿಯ ಹಣ ನೀಡಲಾಗುವುದು ಎಂದು ಎಜಿಎಂ ಮಂಜುನಾಥ ಭರವಸೆ ನಿಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟರು.

    ಕಬ್ಬು ಬೆಳೆಗಾರರಾದ ಶಿವಪ್ಪ ಕಲ್ಲಹಳ್ಳಿ, ಮಾಬುಸಾಬ್ ಪಿ, ಅಂಗಡಿ ಈರಣ್ಣ, ಪಿ.ವಿರೂಪಾಕ್ಷ ಗೌಡ್ರು, ಗಡ್ಡಿ ಗುಡ್ಡಪ್ಪ, ಅಕ್ಕಿ ಈರಪ್ಪ, ಪಾಲಾಕ್ಷ ಎಂ, ಗಡ್ಡಿ ಶ್ರೀಧರ, ಸೂರಣಗಿ ಮಲ್ಲೇಶಪ್ಪ, ಬಾಣದ ನಾಗಪ್ಪ, ಕೆ.ಹನುಮಂತಗೌಡ, ಹುಸೇನ್ ಸಾಹೇಬ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts