More

    ಹಳೇ ಸ್ಕೂಟರ್​ಗೆ ಇ-ವಾಹನ ರೂಪ!; ಬೆಂಗಳೂರಿನಲ್ಲಿ ಸಿದ್ಧವಾಯ್ತು ಭಾರತದ ಮೊದಲ ದೇಶೀಯ ತಂತ್ರಜ್ಞಾನ

    | ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

    ಪೆಟ್ರೋಲ್ ದರ ಏರಿಕೆ ಬಿಸಿ ನಡುವೆಯೇ ದ್ವಿಚಕ್ರ ವಾಹನ ಮಾಲೀಕರಿಗೊಂದು ಶುಭಸುದ್ದಿ ಹೊರಬಿದ್ದಿದೆ. ಹೋಂಡಾ ಆಕ್ಟಿವಾ, ಟಿವಿಎಸ್ ಜ್ಯುಪಿಟರ್, ಸುಜುಕಿ ಆಕ್ಸಿಸ್, ಡಿಯೋ ಮಾದರಿಯ ಸ್ಕೂಟರ್​ಗಳನ್ನು ಎಲೆಕ್ಟ್ರಿಕ್ ವಾಹನ(ಇ.ವಿ)ವಾಗಿ ಪರಿವರ್ತಿಸುವ ಮೊದಲ ದೇಶೀಯ ತಂತ್ರಜ್ಞಾನ ಬೆಂಗಳೂರಿನಲ್ಲಿ ಸಿದ್ಧವಾಗಿದ್ದು, 5 ಪೇಟೆಂಟ್ ಪಡೆದುಕೊಂಡಿದೆ. ಈ ಮಹತ್ವದ ಬೆಳವಣಿಗೆ ನಡುವೆಯೇ ಪೆಟ್ರೋಲ್ ಇಂಜಿನ್ ಸ್ಕೂಟರ್​ಗಳನ್ನು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸಲು ಆಗುವ ವೆಚ್ಚದ ಕೆಲವು ಭಾಗವನ್ನು ಪ್ರೋತ್ಸಾಹಧನದ ರೂಪದಲ್ಲಿ ಕೊಡಲು ಸಾಧ್ಯವೇ ಎಂಬ ಬಗ್ಗೆ ಕೈಗಾರಿಕೆ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಪ್ರಾಥಮಿಕ ಹಂತದ ಚರ್ಚೆ ನಡೆಸಿದ್ದಾರೆಂಬ ಮಾಹಿತಿ ಲಭಿಸಿದೆ.

    ವಿಜಯವಾಣಿಯೊಂದಿಗೆ ಮಾತನಾಡಿದ ಕೈಗಾರಿಕೆ ಇಲಾಖೆ ಹಿರಿಯ ಅಧಿಕಾರಿ, ಹಳೆಯ ಸ್ಕೂಟರ್​ಗಳನ್ನು ಎಲೆಕ್ಟ್ರಿಕ್ ವಾಹನವಾಗಿ ಪರಿವರ್ತಿಸುವ ಪ್ರಕ್ರಿಯೆಗೆ ಸಬ್ಸಿಡಿ ಕೊಡಬಹುದೆಂಬ ಬಗ್ಗೆ ಪ್ರಾಥಮಿಕ ಹಂತದಲ್ಲಿ ಚರ್ಚೆಯಾಗಿದೆ. ಉನ್ನತ ಹಂತದಲ್ಲಿ ನಿರ್ಧಾರವಾಗಬೇಕು, ಜತೆಗೆ ಸಾರಿಗೆ ಇಲಾಖೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

    ಹಳೇ ಸ್ಕೂಟರ್​ಗೆ ಇ-ವಾಹನ ರೂಪ!; ಬೆಂಗಳೂರಿನಲ್ಲಿ ಸಿದ್ಧವಾಯ್ತು ಭಾರತದ ಮೊದಲ ದೇಶೀಯ ತಂತ್ರಜ್ಞಾನಪರಿವರ್ತನೆ ವೆಚ್ಚ ಎಷ್ಟು?: ಇವಿ ಪರಿವರ್ತನೆಗೆ ಪ್ರತಿ ವಾಹನಕ್ಕೆ ಪ್ರಸ್ತುತ 30-35 ಸಾವಿರ ರೂ. ಆಗಬಹುದೆಂಬ ಅಂದಾಜಿದೆ. ಇದರಲ್ಲಿ ಸರ್ಕಾರದ ಕಡೆಯಿಂದ ಎಷ್ಟು ಹಣ ಕೊಡಬಹುದೆಂಬ ಬಗ್ಗೆ ವಿಸ್ತೃ ಚರ್ಚೆಯಾಗಬೇಕಿದೆ. ಈಗಾಗಲೇ ಒಂಬತ್ತು ರಾಜ್ಯಗಳು 20-25 ಸಾವಿರ ರೂ. ಪ್ರೋತ್ಸಾಹಧನವನ್ನು ಹೊಸ ವಾಹನ ಖರೀದಿದಾರರಿಗೆ ನೀಡುತ್ತಿವೆ. ಅದೇ ರೀತಿ ಹಳೆಯ ವಾಹನ ಪರಿವರ್ತನೆಗೆ ಸಬ್ಸಿಡಿ ನೀಡಿದರೆ ಜನರಿಗೂ ಅನುಕೂಲ, ಪರಿಸರಕ್ಕೂ ಒಳಿತಾಗಲಿದೆ ಎಂದು ಕೈಗಾರಿಕೆ ಇಲಾಖೆ ಅಧಿಕಾರಿ ತಿಳಿಸಿದ್ದಾರೆ.

    ಲಭ್ಯ ಮಾಹಿತಿ ಪ್ರಕಾರ ಬೌನ್ಸ್ ಕಂಪನಿ ಕೂಡ ಈ ರೀತಿ ಪರಿವರ್ತಿತ ತಂತ್ರಜ್ಞಾನ ಸಿದ್ಧಪಡಿಸಿಕೊಂಡಿದೆ. ಹಾಗೆಯೇ ಬೆಂಗಳೂರು ಮೂಲದ ಸ್ಟಾರ್ಯ ಮೊಬಿಲಿಟಿ (ಎಸ್​ಟಿಆರ್​ವೈಎ) ಕಳೆದ ಮೂರು ವರ್ಷದಲ್ಲಿ ಈ ಕ್ಷೇತ್ರದಲ್ಲಿ ಸಂಶೋಧನೆ ನಡೆಸಿ ತಂತ್ರಜ್ಞಾನ ಅಭಿವೃದ್ಧಿಪಡಿಸಿದೆ. ಅದನ್ನೀಗ ಜನರಿಗೆ ತಲುಪಿಸುವ ಕೆಲಸಕ್ಕೂ ಕೈಹಾಕಿದೆ. ಹಳೆಯ ಸ್ಕೂಟರ್​ನಲ್ಲಿ ಈ ತಂತ್ರಜ್ಞಾನ ಯಾವ ರೀತಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಟೆಸ್ಟ್ ಡ್ರೖೆವ್ ಮಾಡಿಸುವ ಪ್ರಕ್ರಿಯೆಗೂ ವಾರದ ಹಿಂದೆಯಷ್ಟೇ ಚಾಲನೆ ನೀಡಿದೆ. ಕಂಪನಿ ಸಿಇಒ ರವಿ ಜಗನ್ನಾಥ್ ಈ ಬಗ್ಗೆ ವಿವರಣೆ ನೀಡಿ, ಸಂಪೂರ್ಣ ದೇಸೀಯ ತಂತ್ರಜ್ಞಾನ, ವಿನ್ಯಾಸ ಬಳಸಿ ಉಪಕರಣ ಸಿದ್ಧಪಡಿಸಿದ್ದು ಜನರ ಬಳಕೆಗೆ ಬಿಡುಗಡೆ ಮಾಡಲಾಗುತ್ತಿದೆ. ಅತೀ ಕಡಿಮೆ ದರದಲ್ಲಿ ಪ್ರಯಾಣಿಕರು ಪ್ರಯಾಣಿಸಲು ಅವಕಾಶ ಸಿಗಲಿದೆ ಎಂದರು.

    ಹೊಸ ತಂತ್ರಜ್ಞಾನದ ವಿಶೇಷ

    • ಸ್ಟಾರ್ಯ ಮೊಬಿಲಿಟಿ (ಎಸ್​ಟಿಆರ್​ವೈಎ) ಅಭಿವೃದ್ಧಿಪಡಿಸಿರುವ ಉಪಕರಣ, ಬ್ಯಾಟರಿ ಬ್ಯಾಕಪ್ ಅನ್ನು ಹೊಂಡಾ ಆಕ್ಟಿವಾ, ಟಿವಿಎಸ್ ಜ್ಯುಪಿಟರ್, ಸುಜುಕಿ ಆಕ್ಸಿಸ್, ಡಿಯೋನಲ್ಲಿ ಅಳವಡಿಸಲು 35 ಸಾವಿರ ರೂ.ವರೆಗೆ ವೆಚ್ಚವಾಗುತ್ತದೆ.
    • ಪ್ರತಿ ಕಿಲೋಮೀಟರ್​ಗೆ 75 ಪೈಸೆ ವೆಚ್ಚವಾಗಬಹುದು. ಬ್ಯಾಟರಿ ಬಾಳಿಕೆ ಮೂರೂವರೆ ನಾಲ್ಕು ವರ್ಷ ಅಷ್ಟೇ ಇರುವ ಕಾರಣ ವಿವಿಧ ರೀತಿಯ ಯೋಜನೆ ಪರಿಚಯಿಸುವ ಉದ್ದೇಶವನ್ನೂ ಉತ್ಪಾದಕರು ಹೊಂದಿದ್ದಾರೆ.
    • ಸಾಮಾನ್ಯ ಸಾಕೆಟ್ ಬಳಸಿ ಒಂದು ಬಾರಿ ಚಾರ್ಜ್ ಮಾಡಿದರೆ 70 ಕಿಲೋಮೀಟರ್ ಸಂಚರಿಸಬಹುದು. ಪೆಟ್ರೋಲ್ ಬಳಕೆ ವೇಳೆ ಇರುವ ಸಾಮರ್ಥ್ಯವೇ ಇಲ್ಲೂ ಸಿಗಲಿದೆ.
    • ಇನ್ನೊಂದು ವರ್ಷದಲ್ಲಿ ಬ್ಯಾಟರಿ ಪಾಯಿಂಟ್ ವ್ಯಾಪಕವಾಗಿಸುವ ಉದ್ದೇಶವಿದ್ದು, ಅದು ಬ್ಯಾಟರಿ ಬಾಳಿಕೆ ಸಮಸ್ಯೆ, ಚಾರ್ಜಿಂಗ್ ಸಮಸ್ಯೆಗೆ ಪರಿಹಾರ ನೀಡಲಿದೆ. ಬ್ಯಾಟರಿ ಖಾಲಿಯಾಗುತ್ತಿದ್ದಂತೆ ಬ್ಯಾಟರಿ ಪಾಯಿಂಟ್​ನಲ್ಲಿ ಬದಲಿಸಿಕೊಂಡು ಮುಂದೆ ಸಾಗಬಹುದು.

    ತಮಿಳುನಾಡು ಹೈಜಾಕ್: ಏಷ್ಯಾದ ಅತಿ ದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಿಕಾ ಘಟಕವನ್ನು ತಮಿಳುನಾಡು ಸರ್ಕಾರ ತನ್ನಲ್ಲಿ ಸ್ಥಾಪನೆಯಾಗುವಂತೆ ನೋಡಿಕೊಂಡಿತ್ತು. ಜತೆಗೆ ಸಿಂಪಲ್ ಎನರ್ಜಿಯನ್ನು ಸೆಳೆಯುವ ಮೂಲಕ ದೇಶದ ಇತರ ರಾಜ್ಯಗಳು ಕಣ್ಣುಕಣ್ಣು ಬಿಟ್ಟುಕೊಂಡು ನೋಡುವಂತೆ ಮಾಡಿದೆ. ಕರ್ನಾಟಕವು ಇವಿ ಪಾಲಿಸಿ ತಂದ ಮೊದಲ ರಾಜ್ಯವಾದರೂ, ಅತೀ ಹೆಚ್ಚಿನ ಸಂಶೋಧನೆ ನಡೆಯುತ್ತಿದ್ದರೂ ಉತ್ಪಾದನಾ ಘಟಕಗಳನ್ನು ಉಳಿಸಿಕೊಳ್ಳುವಲ್ಲಿ ಸಾಧ್ಯವಾಗುತ್ತಿಲ್ಲ. ಈಗ ದೇಶದ ಮೊದಲ ಪರಿವರ್ತನಾ ಇವಿ ತಂತ್ರಜ್ಞಾನ ಘಟಕವನ್ನು ಸಹ ಸೆಳೆಯಲು ತಮಿಳುನಾಡು ಪ್ರಯತ್ನಿಸುತ್ತಿದೆ ಎಂಬ ಮಾಹಿತಿ ಇದೆ. ‘ಹೆಚ್ಚಿನ ಪ್ರೋತ್ಸಾಹ ನೀಡುತ್ತೇವೆ, ನೀವು ನಮ್ಮಲ್ಲಿಗೆ ಬನ್ನಿ’ ಎಂದು ನೇರ ಆಹ್ವಾನ ಅಲ್ಲಿನ ಅಧಿಕಾರಿಗಳಿಂದ ಬೆಂಗಳೂರಿನ ಇವಿ ಕಂಪನಿಗಳಿಗೆ ಬರುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಎಲ್ಲೆಲ್ಲಿ ಸಬ್ಸಿಡಿ ಇಲ್ಲ: ಕರ್ನಾಟಕ, ಉತ್ತರ ಪ್ರದೇಶ, ಕೇರಳ, ತಮಿಳುನಾಡು, ತೆಲಂಗಾಣ, ಮಧ್ಯಪ್ರದೇಶ, ಆಂಧ್ರ ಪ್ರದೇಶ, ಪಂಜಾಬ್​ನಲ್ಲಿ ಯಾವುದೇ ಪ್ರೋತ್ಸಾಹಧನ ನೀಡುತ್ತಿಲ್ಲ. ಉಳಿದಂತೆ ಕರ್ನಾಟಕ ಸೇರಿ 13 ರಾಜ್ಯಗಳು ಶೇ.100 ರಸ್ತೆ ತೆರಿಗೆ ರಿಯಾಯಿತಿ ನೀಡಿದ್ದರೆ, ಎರಡು ರಾಜ್ಯಗಳು ಶೇ.50 ರಿಯಾಯಿತಿ ನೀಡುತ್ತಿವೆ.

    ಪ್ರೋತ್ಸಾಹಧನ ಏಕೆ?: ಹೊಸ ಇವಿ ವಾಹನ ಖರೀದಿಗೆ 1.25-1.50 ಲಕ್ಷ ರೂ. ಆಗಲಿದೆ. ಇದನ್ನು ಭರಿಸಲು ಮಧ್ಯಮ, ಬಡ ಮಧ್ಯಮ ವರ್ಗಕ್ಕೆ ಕಷ್ಟವಾಗುತ್ತದೆ. ಹಾಗೆಯೇ ಬಳಸು ತ್ತಿರುವ ಹಳೆಯ ವಾಹನ ಏನು ಮಾಡು ವುದು, ಎಲ್ಲಿ ನಿಲ್ಲಿಸುವುದು ಎಂಬ ಚಿಂತೆ. ಅದರ ಬದಲು ಹಳೆಯ ವಾಹನವನ್ನೇ ಇವಿಯಾಗಿ ಪರಿವರ್ತಿಸಿದರೆ ಬಳಕೆದಾರರಿಗೆ ಹೆಚ್ಚಿನ ಲಾಭವಾಗುವುದು.

    ಇವಿ ಹಾಗೂ ಪೆಟ್ರೋಲ್ ಇಂಜಿನ್ ಒಟ್ಟಿಗೆ ಬಳಸುವ ವ್ಯವಸ್ಥೆ ಇಲ್ಲ. ಒಮ್ಮೆ ಇವಿಗೆ ಪರಿವರ್ತನೆಯಾದ ಬಳಿಕ ಪೆಟ್ರೋಲ್ ಇಂಜಿನ್ ಪುನಃ ಬಳಕೆಗೆ ಬರುವುದಿಲ್ಲ. ಇವಿ ಪರಿವರ್ತನೆಗೆ ಮುನ್ನ ಆರ್​ಟಿಒನಿಂದ ಇಂಜಿನ್ ಸ್ಕಾ್ಯ್ರ್ ಪ್ರಮಾಣ ಪತ್ರ ಪಡೆದುಕೊಳ್ಳಲಾಗುತ್ತದೆ. ಬಳಿಕ ಆ ಎಂಜಿನ್ ಬಳಸುವಂತಿಲ್ಲ.

    | ರವಿ ಜಗನ್ನಾಥ ಸಿಇಒ, ಸ್ಟಾರ್ಯ ಮೊಬಿಲಿಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts