More

    ನಗರ ವ್ಯಾಪ್ತಿಯಲ್ಲಿ ಕಡಿಮೆಯಾಗದ ದಟ್ಟಣೆ, ರಜಾ ದಿನವಾದರೂ ತಗ್ಗದ ವಾಹನ ಸಂಚಾರ

    ಕುಂದಾಪುರ: ಕಳೆದ ಎರಡು ದಿನದಿಂದ ಪೊಲೀಸರು ಲಾಠಿ ಬದಿಗಿಟ್ಟ ಪರಿಣಾಮ ರಜಾ ದಿನವಾದರೂ ಕುಂದಾಪುರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಏರಿದ ಜನದಟ್ಟಣೆ, ನಿಲ್ಲದ ವಾಹನ ಸಂಚಾರ. ನಗರದಲ್ಲಿ ಹೀಗಾದರೆ, ಹಳ್ಳಿಗಳಲ್ಲಿ ದಿನನಿತ್ಯದ ವಸ್ತುಗಳಿಗೂ ಕೊರತೆ ಎದುರಾಗಿದೆ.

    ಲಾಕ್‌ಡೌನ್ ನಂತರ ಕುಂದಾಪುರ ತಾಲೂಕಿನಲ್ಲಿ ಶನಿವಾರ ಔಷಧ, ತರಕಾರಿ, ದಿನಸಿ ಸಾಮಾನು ಅಂಗಡಿಗಳ ಮುಂದೆ ಜನ ದಟ್ಟಣೆತ್ತು. ಕುಂದಾಪುರ ಸಂತೆ ಮೈದಾನದ ಎದುರು ತರಕಾರಿ ಮಾರಾಟ ವಾಹನದ ಮುಂದೆ ತರಕಾರಿ ಕೊಳ್ಳಲು ಮುಗಿಬಿದ್ದ ಜನರನ್ನು ಪೊಲೀಸರು ಚದುರಿಸಿದರು. ಹಳ್ಳಿಗಳಲ್ಲಿ ಚಿಕ್ಕಪುಟ್ಟ ಅಂಗಡಿಗಳಲ್ಲಿ ಆಹಾರ ಪದಾರ್ಥ, ತರಕಾರಿ ಸ್ಟಾಕ್ ಮುಗಿದಿದ್ದರಿಂದ, ಹೆಚ್ಚಿನ ಅಂಗಡಿ ಮುಂಗಟ್ಟು ಮುಚ್ಚಿದ್ದು, ಬೆರಳೆಣಿಕೆ ಅಂಗಡಿ ಬಾಗಿಲು ತೆಗೆದಿದ್ದವು.

    ಜಿಲ್ಲಾಡಳಿತ ದಿನಬಳಕೆ ವಸ್ತುಗಳು, ತರಕಾರಿ ಕೊರತೆ ಆಗದಂತೆ ನೋಡಿಕೊಳ್ಳುತ್ತದೆ ಎಂದಿದ್ದರೂ ಗ್ರಾಮೀಣ ಪ್ರದೇಶಕ್ಕೆ ಸಾಮಾನು ಸರಂಜಾಮು ಪೂರೈಕೆ ಆಗುತ್ತಿಲ್ಲ. ಹೋಲ್‌ಸೇಲ್ ವ್ಯಾಪಾರಸ್ಥರು ಸಾಮಗ್ರಿ ಪೂರೈಕೆಗೆ ಕಾರ್ಮಿಕರ ಸಮಸ್ಯೆ ಮುಂದಿಡುತ್ತಿದ್ದು, ಎಪಿಎಂಸಿ ಮೂಲಕ ದಿನಸಿ ವಸ್ತುಗಳನ್ನು ಪೂರೈಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದರು. ಆದರೆ, ಈ ವ್ಯವಸ್ಥೆ ಇನ್ನೂ ಆರಂಭವಾಗಿಲ್ಲ. ಹಳ್ಳಿಗಳಲ್ಲೇ ಬೆಳೆದ ತರಕಾರಿ ಸಣ್ಣಪುಟ್ಟ ಅಂಗಡಿಯಲ್ಲಿ ಇಟ್ಟುಕೊಂಡಿದ್ದು, ಅದನ್ನೇ ಗ್ರಾಹಕರು ಮನೆಗೆ ಒಯ್ಯುತಿದ್ದಾರೆ.

    ಶುಕ್ರವಾರ ಕುಂದಾಪುರ ರಕ್ತೇಶ್ವರಿ ದೇವಸ್ಥಾನದಲ್ಲಿ ಎಎಸ್ಪಿ ಹರಿರಾಮ್ ಶಂಕರ್ ನೇತೃತ್ವದಲ್ಲಿ ತರಕಾರಿ ಮಾರಾಟ ಬೆಲೆ ಬಗ್ಗೆ ವ್ಯಾಪಾರಸ್ಥರ ಸಭೆ ನಡೆಸಿ, ಚಿಕ್ಕಮಗಳೂರು ಹಾಗೂ ಉಡುಪಿ ಮಾರುಕಟ್ಟೆ ಬೆಲೆಯಲ್ಲಿ ತರಕಾರಿ ಮಾರಾಟ ಮಾಡಬೇಕು. ಬೆಲೆ ಹೆಚ್ಚು ಮಾಡಿ ಮಾರಾಟ ಮಾಡಿದರೆ ಪರವಾನಗಿ ರದ್ದು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರೂ, ಒಂದು ಕೆಜಿ ಟೊಮೊಟ 70, ಕೊತ್ತ್ತಂಬರಿ ಸೊಪ್ಪು ಕೆಜಿಗೆ 350, 5ರೂ ಬಿಸ್ಕೆಟ್ 8 ರೂ, ಬಾಜಲ್ 12, ಅಕ್ಕಿ ಕೆಜಿಗೆ 50 ರೂ ಹೀಗೆ ಮಾರಾಟ ಮಾಡಲಾಗುತ್ತಿದೆ.

    ಬಿಕೋ ಎನ್ನುತ್ತಿರುವ ಹಳ್ಳಿಗಳು..
    ಕೋಟೇಶ್ವರ ಹೋಲ್‌ಸೇಲ್ ದಿನಸಿ, ತರಕಾರಿ ಮಳಿಗೆಗಳಿದ್ದ ಪರಿಸರದಲ್ಲಿ ಜೀವಂತಿಕೆ ಕಂಡರೂ, ಒಳ ಪ್ರದೇಶ ಖಾಲಿ ಖಾಲಿ, ಕಾಳಾವರ, ಸಳ್ವಾಡಿ, ದಬ್ಬೆಕಟ್ಟೆ, ಹೊಂಬಾಡಿ, ಹುಣ್ಸೆಮಕ್ಕಿ, ಬಿದ್ಕಲ್ಕಟ್ಟೆ, ಹಾಲಾಡಿ, ಶಂಕರನಾರಾಯಣ, ಅಂಪಾರು, ಕಂಡ್ಲೂರು, ಬಸ್ರೂರು, ಕೋಣಿ ರಸ್ತೆಗಳು ನಿರ್ಜನ. ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು.
    ಹಾಲಾಡಿ, ಶಂಕರನಾರಾಯಣ, ಅಂಪಾರು ಸರ್ಕಲ್‌ಗಳು ಬಿಕೋ ಎನ್ನುತ್ತಿದ್ದರೆ, ಆಟೋ ಸ್ಟಾ್ಯೃಂಡ್, ಬಸ್ ನಿಲ್ದಾಣ, ಬಾಡಿಗೆ ವಾಹನಗಳ ನಿಲ್ದಾಣ ನಿರ್ಜನ ಪ್ರದೇಶ. ಕರಾವಳಿ ಮಲೆನಾಡು, ಕೊಲ್ಲೂರು ಬೆಸೆವ ಅಂಪಾರು ವೃತ್ತದಲ್ಲಿ ಶಂಕರನಾರಾಯಣ ಎಸ್ಸೈ ಶ್ರೀಧರ್ ನಾಯ್ಕ ಪೊಲೀಸ್ ಸಿಬ್ಬಂದಿ ಜತೆ ಅಂಪಾರು ವೃತ್ತದಲ್ಲಿ ಬೇರೆ ಜಿಲ್ಲೆ, ಪ್ರದೇಶದಿಂದ ಬರುವ ವಾಹನಗಳ ಮೇಲೆ ನಿಗಾ ಇಡಲು ಕಾರ್ಡನ್ ಟೇಪ್ ಕಟ್ಟಿ, ಅಡಕೆ ಮರ ಅಡ್ಡವಿಟ್ಟು ತಪಾಸಣೆಗೆ ಅನುಕೂವಾಗುವಂತೆ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದರು.

    ಕಾರ್ಮಿಕರ ಕಾಲ್ನಡಿಗೆ
    ಕೆಲಸ ಹುಡುಕಿ ಬೇರೆ ಕಡೆಯಿಂದ ಬಂದ ಕಾರ್ಮಿಕರು ಕೆಲಸ ಇಲ್ಲದೆ, ಊರಿಗೆ ಮರಳಲು ವಾಹನ ವ್ಯವಸ್ಥೆಯೂ ಇಲ್ಲದೆ ಕಾಲ್ನಡಿಗೆಯಲ್ಲಿ ಮಕ್ಕಳು, ಮರಿ ಸೇರಿ ಐವತ್ತಕ್ಕೂ ಅಧಿಕ ಮಂದಿ ಎರಡು ಗುಂಪಾಗಿ ಹೊರಟಿದ್ದಾರೆ. ಮಂಗಳೂರಿಂದ ಶುಕ್ರವಾರ ಹೊರಟ ಕಾರ್ಮಿಕರು ಶನಿವಾರ ಮಧ್ಯಾಹ್ನ ಕುಂದಾಪುರ ಸಮೀಪ ಹೆಮ್ಮಾಡಿ ತಲುಪಿದ್ದಾರೆ. ನಾವು ಕೆಲಸ ಹುಡುಕಿಕೊಂಡು ಮಂಗಳೂರಿಗೆ ಬಂದಿದ್ದು, ಲಾಕ್‌ಡೌನ್ ಆಗಿದ್ದರಿಂದ ಕೆಲಸವೂ ಇಲ್ಲ. ಕೈಯಲ್ಲಿ ರೊಕ್ಕವೂ ಇಲ್ಲದೆ ಹೇಗಾದರೂ ಊರಿಗೆ ತಲುಪಿ ಜೀವ ಉಳಿಸಿಕೊಳ್ಳಲು ಹೊರಟಿದ್ದೇವೆ. ಯಾರಾದರೂ ನಮ್ಮನ್ನು ಊರಿಗೆ ಮುಟ್ಟಿಸಲು ಸಹಕಾರ ನೀಡಬೇಕು ಎಂದು ಬೇಡಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts