More

    ನಿಲದ್ಲ ಜನರ ಗುಳೆ ರಾಜಧಾನಿಯಲ್ಲಿ ಕುಂದಿದ ಆರ್ಥಿಕ ಕಳೆ

    ಬೆಂಗಳೂರು: ಕರೊನಾ ಸೋಂಕಿನ ಆರ್ಭಟ ಹೆಚ್ಚುತ್ತಿದ್ದಂತೆ ಬೆಂಗಳೂರಿನಲ್ಲಿ ನೆಲೆಸಿದ್ದ ಹೊರಜಿಲ್ಲೆಯವರು ತಮ್ಮ ಊರುಗಳಿಗೆ ಗುಳೆ ಹೊರಟಿರುವುದು ಮುಂದುವರಿದಿದೆ. ನಗರಕ್ಕೆ ಬರುವವರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹೀಗಾಗಿ ಬೆಂಗಳೂರಿನ ಆರ್ಥಿಕ ಪ್ರಗತಿ ಮೇಲೆ ಪರಿಣಾಮ ಬೀರುವಂತಾಗಿದೆ.

    ದೇಶದ ಐಟಿ-ಬಿಟಿ ಕ್ಷೇತ್ರದಲ್ಲಿನ ಉತ್ಪಾದನೆ ಶೇ. 30ಕ್ಕಿಂತ ಹೆಚ್ಚಿನ ಪಾಲು ಬೆಂಗಳೂರಿನದ್ದು. ಅದರ ಜತೆಗೆ ಆಟೋಮೊಬೈಲ್ ಸೇರಿ ಇನ್ನಿತರ ಉತ್ಪನ್ನಗಳ ಉತ್ಪಾದನೆಯಲ್ಲೂ ಬೆಂಗಳೂರು ತನ್ನದೇ ಪಾಲನ್ನು ಹೊಂದಿದೆ. ಆದರೆ, ಕರೊನಾ ಸೋಂಕಿನ ಭೀತಿಯಿಂದಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಜನರೆಲ್ಲರೂ ಸ್ವಗ್ರಾಮಗಳತ್ತ ತೆರಳುತ್ತಿದ್ದಾರೆ. ಅದರಿಂದ ಉತ್ಪಾದನೆ ಕುಸಿಯುವುದರ ಜತೆಗೆ, ಈಗಿರುವ ಉತ್ಪಾದನೆಯನ್ನು ಖರೀದಿಸಲು ಜನರಿಲ್ಲದಂತಾಗಿದೆ. ಪರಿಣಾಮ ಬೆಂಗಳೂರಿನ ಆರ್ಥಿಕತೆ ಶೇ.30 ಕುಸಿಯುವಂತಾಗಿದೆ.

    ಕರೊನಾ ಭೀತಿಯಿಂದಾಗಿ ಜನರು ಗುಳೆ ಹೋಗುತ್ತಿರುವುದು ಮತ್ತು ನಗರಕ್ಕೆ ಜನರು ಬರದಿರುವುದರಿಂದ ಬೆಂಗಳೂರಿನ ಆರ್ಥಿಕತೆ ಮೇಲೆ ಭಾರಿ ಪರಿಣಾಮ ಬೀರುತ್ತಿದ್ದು, ಆರ್ಥಿಕತೆ ಶೇ.30 ಕುಸಿದಿದೆ. ಇದು ಹೀಗೇ ಮುಂದುವರಿದರೆ, ಮತ್ತಷ್ಟು ಕಡಿಮೆಯಾಗುವ ಭೀತಿ ಎದುರಾಗಿದೆ. ಈಗಾಗಲೆ ಉತ್ಪಾದನೆ ತಗ್ಗಿದ್ದು, ಖರೀದಿದಾರರೂ ಕಡಿಮೆಯಾಗುತ್ತಿದ್ದಾರೆ.
    | ಸಿ.ಆರ್.ಜನಾರ್ದನ ಎಫ್​ಕೆಸಿಸಿಐ ಅಧ್ಯಕ್ಷ

    ಜಿಡಿಪಿಯಲ್ಲಿ ಶೇ. 60 ಪಾಲು: 2018-19ನೇ ಸಾಲಿನಲ್ಲಿ ರಾಜ್ಯದ ಜಿಡಿಪಿ ಗಾತ್ರ 15 ಲಕ್ಷ ಕೋಟಿ ರೂ. ಗೂ ಹೆಚ್ಚಿನದ್ದು. ಅದರಲ್ಲಿ ಬೆಂಗಳೂರಿನದ್ದೇ ಶೇ.60ಕ್ಕೂ ಹೆಚ್ಚಿನ ಪಾಲಿದೆ. ಪ್ರಮುಖವಾಗಿ ಐಟಿ-ಬಿಟಿ, ಏರೋಸ್ಪೇಸ್, ಕೈಗಾರಿಕೆ, ಶಿಕ್ಷಣ ವಲಯಗಳಿಂದ ಬೆಂಗಳೂರಿನ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

    ಕರೊನಾದಿಂದ ಕುಸಿತ: ಕರೊನಾ ಸೋಂಕು ಹರಡುವುದನ್ನು ತಡೆಯಲು ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಮಾಡಲಾದ ಲಾಕ್​ಡೌನ್​ನಿಂದಾಗಿ ಬೆಂಗಳೂರಿನ ಆದಾಯ ಈಗಾಗಲೆ ಕುಸಿದಿದೆ. ಅದರ ಜತೆಗೆ ಇದೀಗ ಕರೊನಾ ಭೀತಿಯಿಂದಾಗಿ ಬೆಂಗಳೂರಿನ ಆರ್ಥಿಕತೆಗೆ ಭಾರಿ ಹೊಡೆತ ಬಿದ್ದಿದೆ. ಪ್ರಮುಖವಾಗಿ ಉತ್ಪಾದನೆಯಂತೆ ಖರೀದಿ ಪ್ರಮಾಣವೂ ಕ್ಷೀಣಿಸಿದೆ.
    ಚಿಲ್ಲರೆ ವ್ಯಾಪಾರಿಗಳಿಗೆ ಹೊಡೆತ ಜನರ ಗುಳೆ ಮತ್ತು ಬರುವುದು ಕಡಿಮೆ ಆಗಿರುವುದರಿಂದ ಚಿಲ್ಲರೆ ವ್ಯಾಪಾರಿಗಳಿಗೆ ಭಾರಿ ಹೊಡೆತಬಿದ್ದಿದೆ. ಅದರಲ್ಲೂ ತರಕಾರಿ-ಹಣ್ಣು ಮಾರಾಟಗಾರರು, ದಿನಸಿ ವಸ್ತುಗಳ ಅಂಗಡಿ ಮಾಲೀಕರು ಸೇರಿ ಇನ್ನಿತರ ಚಿಲ್ಲರೆ ವ್ಯಾಪಾರಿಗಳ ವ್ಯಾಪಾರದಲ್ಲಿ ಶೇ. 40 ಕುಸಿದಿದೆ.

    ನಗರ ಬಿಟ್ಟ ಲಕ್ಷಾಂತರ ಜನ: ಲಾಕ್​ಡೌನ್ ಅವಧಿಯಲ್ಲೇ 5 ಲಕ್ಷಕ್ಕೂ ಹೆಚ್ಚಿನ ಜನರು ಬೆಂಗಳೂರು ತೊರೆದು ತಮ್ಮೂರುಗಳಿಗೆ ತೆರಳಿದ್ದರು. ಅದರಲ್ಲಿ ಶೇ.50 ವಲಸೆ ಕಾರ್ವಿುಕರು. ಉಳಿದಂತೆ ಲಾಕ್​ಡೌನ್ ಸಡಿಲಿಕೆ ನಂತರ ಕರೊನಾ ಪ್ರಕರಣಗಳು ಹೆಚ್ಚಿದಂತೆಲ್ಲ ನಗರ ಬಿಟ್ಟು ಹೋಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಈವರೆಗೆ ಅಂದಾಜು 20 ಲಕ್ಷಕ್ಕೂ ಹೆಚ್ಚಿನವರು ಬೆಂಗಳೂರು ಬಿಟ್ಟಿದ್ದಾರೆ. ಕರೊನಾ ಸೋಂಕಿಗಿಂತ ಮುಂದೆ ನಿತ್ಯ 5 ಲಕ್ಷಕ್ಕೂ ಹೆಚ್ಚಿನ ಜನರು ಬೆಂಗಳೂರಿಗೆ ಬಂದು, ಹೋಗುತ್ತಿದ್ದರು. ಆದರೀಗ ಆ ಸಂಖ್ಯೆ 1 ಲಕ್ಷವೂ ದಾಟುತ್ತಿಲ್ಲ.

    ಚಿನ್ನದ ರಾಣಿಯ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಹಿರಿಯ ಅಧಿಕಾರಿಗಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts