More

    ಹಳ್ಳಿಗಳಲ್ಲಿ ಡಿಜಿಟಲ್ ರಶೀದಿ ಪರದಾಟ

    ಬಿ.ರಾಘವೇಂದ್ರ ಪೈ ಗಂಗೊಳ್ಳಿ

    ಗ್ರಾಮ ಪಂಚಾಯಿತಿಗಳು ತೆರಿಗೆ ಮತ್ತು ಶುಲ್ಕಗಳನ್ನು ಪಂಚತಂತ್ರ 2.0 ತಂತ್ರಾಂಶದ ಮೂಲಕ ಸಂಗ್ರಹಿಸಿ, ಡಿಜಿಟಲ್ ರಶೀದಿ ನೀಡುವುದನ್ನು ಕಡ್ಡಾಯಗೊಳಿಸಿರುವುದು ಸಮಸ್ಯೆಗೆ ಕಾರಣವಾಗಿದೆ. ಮುಖ್ಯವಾಗಿ ಗ್ರಾಮೀಣ ಪ್ರದೇಶದ ಜನರು ಇದರಿಂದ ಇಕ್ಕಟ್ಟಿಗೆ ಸಿಲುಕಿದ್ದಾರೆ.

    ಡಿಜಿಟಲ್ ರಶೀದಿ ಆದೇಶ

    ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ(ಗ್ರಾಮ ಪಂಚಾಯಿತಿಗಳ ಆಯವ್ಯಯ ಮತ್ತು ಲೆಕ್ಕಪತ್ರಗಳು)-2006ರ ನಿಯಮ 21ರನ್ವಯ ಗ್ರಾಮ ಪಂಚಾಯಿತಿಗಳು ಈ ಹಿಂದೆ ನಮೂನೆ-3 ರಶೀದಿ ಪುಸ್ತಕಗಳನ್ನು ಉಪಯೋಗಿಸಿ ತೆರಿಗೆ ಮತ್ತು ಇತರ ಶುಲ್ಕಗಳನ್ನು ಸಂಗ್ರಹಿಸಿ ರಶೀದಿ ನೀಡುತ್ತಿದ್ದವು. ಆದರೆ ಇದೀಗ ಶುಲ್ಕಗಳನ್ನು ಸಂಗ್ರಹಿಸಲು ನಮೂನೆ-3ರಲ್ಲಿ ನಿಗದಿಪಡಿಸಿದ ಮ್ಯಾನ್ಯುಯಲ್ ರಶೀದಿಗಳನ್ನು ನೀಡುವಂತಿಲ್ಲ. ಇದರ ಬದಲಾಗಿ ಪಂಚತಂತ್ರ 2.0 ತಂತ್ರಾಂಶದ ಮೂಲಕ ಡಿಜಿಟಲ್ ರಶೀದಿಗಳನ್ನು ನೀಡುವಂತೆ ಕಳೆದ ಜುಲೈ 6ರಂದು ಸರ್ಕಾರ ಆದೇಶ ಹೊರಡಿಸಿದೆ. ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಏ.11ರಂದು ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಆದೇಶ ಹೊರಡಿಸಿದ್ದಾರೆ. ಸರ್ಕಾರಿ ಮುದ್ರಣಾಲಯಗಳಿಂದ ಅಥವಾ ಜಿಲ್ಲಾ ಪಂಚಾಯತ್‌ಗಳ ಮೂಲಕ ನಮೂನೆ-3 ಮುದ್ರಿತ ರಶೀದಿ ಪುಸ್ತಕಗಳನ್ನು ಗ್ರಾಮ ಪಂಚಾಯಿತಿಗಳು ಪಡೆದುಕೊಳ್ಳುವಂತಿಲ್ಲ ಎಂದು ಸ್ಟಷ್ಟವಾಗಿ ತಿಳಿಸಿದ್ದಾರೆ.

    ಗ್ರಾಮೀಣ ಜನರಿಗೆ ಸಮಸ್ಯೆ

    ಸರ್ಕಾರದ ಈ ಆದೇಶದ ಗ್ರಾಮೀಣ ಪ್ರದೇಶದ ಜನರಿಗೆ ಬಹಳಷ್ಟು ಸಮಸ್ಯೆಯನ್ನು ತಂದೊಡ್ಡಿದೆ. ಹಲವಾರು ವರ್ಷಗಳಿಂದ ಗ್ರಾಮೀಣ ಭಾಗದ ಜನರು ತೆರಿಗೆ ಮತ್ತಿತರ ಶುಲ್ಕಗಳನ್ನು ಗ್ರಾಮ ಪಂಚಾಯಿತಿಗಳಲ್ಲಿ ನಗದಾಗಿ ಪಾವತಿಸಿ ರಶೀದಿ ಪಡೆದುಕೊಳ್ಳುತ್ತಿದ್ದರು. ಆದರೆ ಈಗ ನಗದು ಪಾವತಿಗೆ ಅವಕಾಶ ಇದೆ. ಗ್ರಾಮಸ್ಥರು ತಮ್ಮ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಉಪಯೋಗಿಸಿ ಸ್ವೈಪ್ ಯಂತ್ರದ ಮೂಲಕ ಅಥವಾ ಕ್ಯೂಆರ್ ಕೋಡ್ ಬಳಸಿಕೊಂಡು ತೆರಿಗೆ ಅಥವಾ ಇತರ ಶುಲ್ಕವನ್ನು ಪಾವತಿಸಬಹುದು. ನಗದು ಪಾವತಿಸಿದರೆ ಗ್ರಾಮ ಪಂಚಾಯಿತಿಗಳು ಪಂಚತಂತ್ರ 2.0 ತಂತ್ರಾಂಶದ ಮಾಡ್ಯುಲ್‌ನಲ್ಲಿ ಸಂಗ್ರಹಿಸಿ ಡಿಜಿಟಲ್ ರಶೀದಿ ನೀಡಬೇಕಾಗಿದೆ. ಕೈಬರಹದ ರಶೀದಿ ನೀಡಲು ಗ್ರಾಮ ಪಂಚಾಯಿತಿಗಳಿಗೆ ಇನ್ನು ಮುಂದೆ ಅವಕಾಶ ಇಲ್ಲ.

    ಗ್ರಾಮ ಪಂಚಾಯಿತಿಗಳಲ್ಲಿ ಪಂಚತಂತ್ರ 2.0 ತಂತ್ರಾಂಶದ ಮೂಲಕ ಡಿಜಿಟಲ್ ರಶೀದಿಗಳನ್ನು ಸೃಜಿಸಿ ತೆರಿಗೆ ಮತ್ತು ಇತರ ಶುಲ್ಕವನ್ನು ಸಂಗ್ರಹ ಮಾಡಬೇಕೆನ್ನುವ ಸರ್ಕಾರದ ಈ ಆದೇಶ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಹಣ ದುರುಪಯೋಗ ತಡೆಗಟ್ಟಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದ್ದರೂ ಗ್ರಾಮೀಣ ಪ್ರದೇಶದ ಜನರಿಗೆ ಇದರಿಂದ ಸಮಸ್ಯೆಯಾಗಿದೆ.

    ನೆಟ್‌ವರ್ಕ್ ಸಮಸ್ಯೆ

    ಗ್ರಾಮೀಣ ಪ್ರದೇಶದಲ್ಲಿ ನೆಟ್‌ವರ್ಕ್ ಸಮಸ್ಯೆ ಕಾಡುತ್ತಿರುವುದರಿಂದ ಡಿಜಿಟಲ್ ರಶೀದಿ ಸೃಜಿಸಲು ಸಾಕಷ್ಟು ಸಮಯ ತಗಲುತ್ತದೆ. ಗ್ರಾಮೀಣ ಪ್ರದೇಶದ ಬಹುತೇಕ ಜನರಿಗೆ ಡೆಬಿಟ್ ಕಾರ್ಡ್ ಬಳಕೆ ಸರಿಯಾಗಿ ಗೊತಿಲ, ಕೆಲವರ ಬಳಿ ಇನ್ನೂ ಎಂಡ್ರಾಯ್ಡಾ ಫೋನ್ ಕೂಡ ಇಲ್ಲ. ಹೀಗಿರುವಾಗ ಗ್ರಾಮೀಣ ಪ್ರದೇಶದ ಜನರು ಸ್ವೈಪ್ ಯಂತ್ರದ ಮೂಲಕ ಅಥವಾ ಕ್ಯೂಆರ್ ಕೋಡ್ ಉಪಯೋಗಿಸಿಕೊಂಡು ತೆರಿಗೆ ಅಥವಾ ಶುಲ್ಕು ಪಾವತಿಸುವುದು ಕಷ್ಟಸಾಧ್ಯ. ತೆರಿಗೆ ಅಥವಾ ಇತರ ಶುಲ್ಕ ಪಾವತಿಗೆ ಪಂಚಾಯಿತಿಗೆ ತೆರಳಿ ನಗದಾಗಿ ಶುಲ್ಕ ಪಾವತಿಸಿದರೆ ಡಿಜಿಟಲ್ ರಶೀದಿ ಪಡೆಯಲು ಕಾದು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಉದ್ಭವಿಸಿದೆ.

    ಹಣ ದುರುಪಯೋಗ ತಡೆಗಟ್ಟಲು ಸರ್ಕಾರ ಕೈಗೊಂಡ ಕ್ರಮ ಸ್ವಾಗತಾರ್ಹ. ಆದರೆ ನೆಟ್‌ವರ್ಕ್ ಮತ್ತಿತರ ಸಮಸ್ಯೆಗಳಿರುವ ಗ್ರಾಮ ಪಂಚಾಯಿತಿಗಳಲ್ಲಿ ಇದರಿಂದ ಆಗುವ ತೊಂದರೆಗಳ ಬಗ್ಗೆ ಸರ್ಕಾರ ಗಮನಹರಿಸಬೇಕಿದೆ.

    ಗ್ರಾಮ ಪಂಚಾಯಿತಿಗಳಲ್ಲಿ ನೀಡುವ ಮ್ಯಾನ್ಯುಯಲ್ ರಶೀದಿಗಳಿಂದ ಹಣ ದುರುಪಯೋಗ ಸಾಧ್ಯತೆ ಇರುವುದರಿಂದ ಇದನ್ನು ತಡೆಗಟ್ಟಲು ಸರ್ಕಾರ ಪಂಚತಂತ್ರ 2.0 ತಂತ್ರಾಂಶದ ಮೂಲಕ ತೆರಿಗೆ ಅಥವಾ ಶುಲ್ಕವನ್ನು ಸಂಗ್ರಹಿಸಿ ಡಿಜಿಟಲ್ ರಶೀದಿಯನ್ನು ನೀಡಲು ಸೂಚನೆ ನೀಡಿದೆ. ಜನರು ನಗದು ರೂಪದಲ್ಲಿ ತೆರಿಗೆ ಅಥವಾ ಶುಲ್ಕ ಪಾವತಿಸಬಹುದು. ಆದರೆ ಕೈಬರಹದ ರಶೀದಿಯನ್ನು ನೀಡುವಂತಿಲ್ಲ. ಸ್ವೈಪ್ ಯಂತ್ರದ ಮೂಲಕ ಪಾವತಿಸುವಂತೆ ಒತ್ತಡ ಹಾಕುವಂತಿಲ್ಲ. ಜನರು ತಮಗೆ ಅನುಕೂಲವಾದ ರೀತಿಯಲ್ಲಿ ತೆರಿಗೆ, ಶುಲ್ಕ ಪಾವತಿಸಬಹುದು.

    -ಪ್ರಸನ್ನ ಎಚ್., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್ ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts