More

    ಜನರ ಸಹಕಾರ ಕರೊನಾಗೆ ಪರಿಹಾರ; ಸಾರ್ವಜನಿಕರ ಸಹಭಾಗಿತ್ವದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಸರ್ಕಾರ ನಿರ್ಧಾರ

    ಬೆಂಗಳೂರು: ಕರೊನಾ ಕೈ ಮೀರುತ್ತಿರುವಂತೆಯೇ ಸರ್ಕಾರ ಜನರ ಸಹಭಾಗಿತ್ವ ದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಇಚ್ಛಿಸಿದೆ. ‘ನೀವೂ ಕರೊನಾ ಯೋಧರಾಗಿ!’ ಎಂದು ಸಾರ್ವಜನಿಕರಿಗೆ ಕರೆಕೊಟ್ಟಿದ್ದು, 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ನೋಂದಣಿಗೆ ಸಹಾಯ ಮಾಡಿ, www.cowin.gov.in ಅಥವಾ ಆರೋಗ್ಯ ಸೇತು ಆಪ್​ನಲ್ಲಿ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಿ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಸಾರ್ವಜನಿಕರಿಗೆ ಕರೆ ಕೊಟ್ಟಿದ್ದಾರೆ.

    ಕೋವಿಡ್​ಗಾಗಿಯೇ ನೀಡುತ್ತಿರುವ ಲಸಿಕೆಯನ್ನು 45 ವರ್ಷ ಮೇಲ್ಪಟ್ಟವರಿಗೆ ಆದ್ಯತೆ ನೀಡಿ ಕೊಡಿಸಿದರೆ ಅಪಾಯ ಸಂದರ್ಭಗಳನ್ನು ತಪ್ಪಿಸಬಹುದು ಮತ್ತು ಹೆಚ್ಚಿನ ಜೀವಹಾನಿ ತಡೆಯಬಹುದು ಎಂಬುದು ಸರ್ಕಾರದ ಆಶಯ. ಸುಲಲಿತವಾಗಿ ಆರೋಗ್ಯ ಸೇತು ಅಥವಾ ಕೋವಿನ್ ಆಪ್ ಬಳಸಿ ತಮ್ಮ ಸುತ್ತಮುತ್ತಲಿನವರಿಗೆ ನೆರವಾಗುವ ಮೂಲಕ ಲಸಿಕೆ ಕೊಡಿಸುವಂತೆ ಸಿಎಂ ಕೋರಿದ್ದಾರೆ. ಲಸಿಕೆ ಪಡೆಯಲು ಇರುವ ವ್ಯವಸ್ಥೆಯನ್ನು ಅರಿತು ಮಾಹಿತಿ ಪಡೆಯಲು ಹಲವರಿಗೆ ಅಳುಕು ಇರಲಿದೆ. ಜತೆಗೆ ಸ್ಮಾರ್ಟ್ ಫೋನ್ ಬಳಕೆಯೂ ಅಸಾಧ್ಯ ಇರಬಹುದು. ಆನ್​ಲೈನ್ ನೋಂದಣಿ ಕಡ್ಡಾಯ ಇಲ್ಲದೆ ಇದ್ದರೂ ಜನರಲ್ಲಿ ಮಾಹಿತಿ ಕೊರತೆ ಕಾರಣಕ್ಕೆ ನೆರವಾಗುವಂತೆ ಮನವಿ ಮಾಡಿದ್ದಾರೆ.

    ಆರೋಗ್ಯ ಸೇತುವಿನಲ್ಲೇನಿದೆ?: ಲಸಿಕೆ ಪಡೆಯಲು ನೋಂದಣಿ ಮಾಡುವ ವಿಧಾನ, ಅರ್ಹತೆ, ಆನ್​ಲೈನ್​ನಲ್ಲಿ ಸ್ಲಾಟ್ ಪಡೆಯುವಿಕೆ, ಸ್ಮಾರ್ಟ್​ಫೋನ್ ಅಥವಾ ಕಂಪ್ಯೂಟರ್ ನೆರವಿಲ್ಲದೆ ನೋಂದಣಿ ಹೇಗೆ? ಐಡಿ ಪುರಾವೆ ಅಗತ್ಯತೆ, ಹತ್ತಿರದ ಲಸಿಕೆ ಕೇಂದ್ರ ಕಂಡುಹಿಡಿಯುವುದು ಸೇರಿ ಹಲವು ಮಾಹಿತಿ ಆರೋಗ್ಯ ಸೇತು ಮತ್ತು ಕೋವಿನ್ ವೆಬ್​ನಲ್ಲಿದೆ. ಜತೆಗೆ ರಾಷ್ಟ್ರೀಯ ಸಹಾಯವಾಣಿ 1075ಗೆ ಕರೆ ಮಾಡಬಹುದು. ಈ ಕೆಲಸವನ್ನು ಕರೊನಾ ಯೋಧರೆಂದು ಭಾವಿಸಿ ಜನರಿಗೆ ನೆರವಾಗಬಹುದು. ಈ ಹಿಂದೆ ಬೂತ್ ಹಾಗೂ ಪಂಚಾಯಿತಿ ಮಟ್ಟದಲ್ಲಿ ಸಮಿತಿಗಳನ್ನು ರಚಿಸಿದ್ದಾಗ ಸಾರ್ವಜನಿಕರನ್ನು ಬಳಸಿಕೊಳ್ಳಲಾಗಿತ್ತು. ಐಸೋಲೇಷನ್​ನಲ್ಲಿ ಇರುವವರ ಮೇಲೆ ಗಮನ ಇಡುವಲ್ಲಿ ಈ ತಂಡ ಒಂದಷ್ಟು ಕೆಲಸ ಮಾಡಿತ್ತು. ಇದೀಗ ಮತ್ತೆ ಅದೇ ರೀತಿ ತಂಡಗಳನ್ನು ತಳಮಟ್ಟದಲ್ಲಿ ರಚಿಸಲೂ ಸರ್ಕಾರ ಆಸಕ್ತಿ ತೋರಿಸಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

    ಕುಂಭಮೇಳ ಯಾತ್ರಿಕರಿಗೆ ಮನೆ ಕ್ವಾರಂಟೈನ್ ಕಡ್ಡಾಯ: ಉತ್ತರಖಂಡದ ಹರಿದ್ವಾರ ದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಪಾಲ್ಗೊಂಡು ರಾಜ್ಯಕ್ಕೆ ಮರಳುವ ಯಾತ್ರಿಗಳು ಕಡ್ಡಾಯವಾಗಿ ಮನೆ ಕ್ವಾರಂಟೈನ್​ಗೆ ಒಳಗಾಗಬೇಕು ಎಂದು ಆರೋಗ್ಯ ಇಲಾಖೆ ಸುತ್ತೋಲೆ ಹೊರಡಿಸಿದೆ. ಕ್ವಾರಂಟೈನ್ ವೇಳೆ ಕುಟುಂಬ ಸದಸ್ಯರಿಂದ ಪ್ರತ್ಯೇಕವಾಗಿರ ಬೇಕು, ತಪ್ಪದೇ ಆರ್​ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ನೆಗೆಟಿವ್ ವರದಿ ಬಂದ ನಂತರವಷ್ಟೇ ತಮ್ಮ ಎಂದಿನ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

    ಶಾಸಕಾಂಗ ಸಮಿತಿಗಳ ಅಧ್ಯಯನ ಪ್ರವಾಸ ರದ್ದು: ಕರೊನಾ ಹೆಚ್ಚಳ ಹಿನ್ನೆಲೆಯಲ್ಲಿ ವಿಧಾನಸಭೆಯ ಸಮಿತಿಗಳ ರಾಜ್ಯ ಹಾಗೂ ಅಂತಾರಾಜ್ಯ ಅಧ್ಯಯನ ಪ್ರವಾಸಗಳನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ರದ್ದು ಮಾಡಿದ್ದಾರೆ. ವಿಧಾನಸಭೆಯಲ್ಲಿ ಒಟ್ಟು 15 ಸಮಿತಿಗಳಿವೆ. ಅಧ್ಯಯನ ಪ್ರವಾಸಕ್ಕೆ ಸಮಿತಿಗಳು ಹೋದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಗುಂಪುಗೂಡುವುದರಿಂದ ಕರೊನಾ ಹರಡುವ ಸಾಧ್ಯತೆಗಳಿವೆ. ಆದ್ದರಿಂದ ಸದ್ಯಕ್ಕೆ ಅಧ್ಯಯನ ಪ್ರವಾಸ ಬೇಡವೆಂಬ ನಿರ್ಧಾರಕ್ಕೆ ಬರಲಾಗಿದೆ. ಏ.18ರ ಸರ್ವಪಕ್ಷ ಸಭೆಯಲ್ಲಿ ಸರ್ಕಾರ ಸಭೆ ನಡೆಸುವುದಕ್ಕೂ ಕಡಿವಾಣದ ನಿರ್ಧಾರ ಕೈಗೊಂಡರೆ ಸಮಿತಿ ಸಭೆ ನಡೆಸುವುದಕ್ಕೂ ನಿರ್ಬಂಧ ವಿಧಿಸಲಾಗುತ್ತದೆ.

    ಸುಳ್ಳುಗಳ ಭ್ರಮೆಯ ಉತ್ಸವ: ವಾಸ್ತವದಲ್ಲಿ ರಾಜ್ಯದಲ್ಲಿ ಲಸಿಕೆಗಳಿಗೆ ತೀವ್ರ ಕೊರತೆ ಉಂಟಾಗಿದೆ, ಆದರೆ ಬಿಜೆಪಿ ಸರ್ಕಾರ ಲಸಿಕೆ ಉತ್ಸವ ಎನ್ನುವ ಸುಳ್ಳುಗಳ ಭ್ರಮೆಯ ಉತ್ಸವ ನಡೆಸುತ್ತಿದೆ. ಜನರ ಮರಣದಲ್ಲೂ ಮಹೋತ್ಸವ ಆಚರಿಸಲು ಬಿಜೆಪಿಯಂತಹ ಲಜ್ಜೆಗೆಟ್ಟ ಸರ್ಕಾರಕ್ಕೆ ಮಾತ್ರ ಸಾಧ್ಯ ಎಂದು ಕಾಂಗ್ರೆಸ್ ಟೀಕಿಸಿದೆ. ಪರಿಸ್ಥಿತಿ ಬಿಗಡಾಯಿಸುತ್ತಿದ್ದರೂ ‘ಸೋಂಕಿತ ಸರ್ಕಾರಕ್ಕೆ’ ಇನ್ನೂ ಗಾಂಭೀರ್ಯತೆ ಬಂದಿಲ್ಲ. ಅಲ್ಲಿ ಪ್ರಧಾನಿ ಮೋದಿ ಲಸಿಕೆ ಕೊರತೆ ನೀಗಿಸುವ ಬದಲು ಟೀಕಾ ಉತ್ಸವ ಎನ್ನುವ ಬೂಟಾಟಿಕೆ ಆಡುತ್ತಿದ್ದಾರೆ. ಇಲ್ಲಿ ಬಿಜೆಪಿ ನಾಯಕರು ಲಸಿಕೆ ಕೊರತೆ ಇಲ್ಲವೆಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆಪಾದಿಸಿದೆ. ಸಚಿವ ಸುಧಾಕರ್ ಅವರೇ, ಲಸಿಕೆ ಕೊರತೆ ನೀಗಿಸಲು ಯಾವ ಕ್ರಮ ಕೈಗೊಂಡಿದ್ದೀರಿ ಎಂದೂ ಪ್ರಶ್ನಿಸಿದೆ. ಕರೊನಾ, ಲಾಕ್​ಡೌನ್, ಬಗೆಹರಿಯದ ಶಾಲಾ ಶುಲ್ಕ ವಿವಾದ, ಯಶಸ್ವಿಯಾಗದ ವಿದ್ಯಾಗಮ, ಹಿಂದುಳಿದ ಕಲಿಕಾ ಪ್ರಗತಿ, ಪೂರ್ಣಗೊಳ್ಳದ ಪಾಠಗಳು, ಶಿಕ್ಷಣದಿಂದ ಹೊರಗುಳಿದ ವಿದ್ಯಾರ್ಥಿಗಳು, ಆನ್​ಲೈನ್ ತರಗತಿಗಳ ವೈಫಲ್ಯದಿಂದ ವಿದ್ಯಾರ್ಥಿಗಳ ಭವಿಷ್ಯ ಮಂಕಾಗಿದೆ. ಪರೀಕ್ಷೆಗಳ ಮೊದಲು ಈ ಎಲ್ಲ ವಿಚಾರಗಳಲ್ಲಿ ಲೋಪ ಸರಿಪಡಿಸಿ ಎಂದು ಶಿಕ್ಷಣ ಸಚಿವರಿಗೆ ಸಲಹೆ ನೀಡಿದೆ.

    ಏ. 18ರಂದು ಮುಖ್ಯಮಂತ್ರಿ ಅವರಿಂದ ಸರ್ವಪಕ್ಷ ಸಭೆ

    ಬೆಂಗಳೂರು: ಕರೊನಾ ಎರಡನೇ ಅಲೆ ಅಬ್ಬರಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಕ್ರಮಗಳ ಬಗ್ಗೆ ರ್ಚಚಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಏ.18ಕ್ಕೆ ಸರ್ವಪಕ್ಷ ಸಭೆ ಕರೆದಿದ್ದಾರೆ. ಭಾನುವಾರ ಸಂಜೆ 4 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿರುವ ಸರ್ವಪಕ್ಷ ಸಭೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್​ನ 35 ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಕರೊನಾ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಸರ್ವಪಕ್ಷಗಳ ಮುಖಂಡರಿಗೆ ವಿವರಿಸಲಾಗುತ್ತದೆ. ಏನೇನು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂಬ ಮಾಹಿತಿಯನ್ನು ಮುಖ್ಯಮಂತ್ರಿ ನೀಡಲಿದ್ದಾರೆ. ಪ್ರತಿಪಕ್ಷಗಳ ಮುಖಂಡರಿಂದಲೂ ಸಲಹೆಗಳನ್ನು ಆಹ್ವಾನಿಸಲಾಗುತ್ತದೆ.

    ಕರೊನಾ ನಿಯಂತ್ರಣದ ಸಲುವಾಗಿ ಸರ್ಕಾರ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಏನೇನು ಮಾಡಿದೆ. ಖಾಸಗಿ ಆಸ್ಪತ್ರೆಗಳು, ಕೋವಿಡ್ ಕೇರ್ ಸೆಂಟರ್​ಗಳ ಸ್ಥಾಪನೆ ಹೀಗೆ ವಿವಿಧ ಸೌಲಭ್ಯಗಳ ಬಗ್ಗೆ ವಿವರಣೆ ನೀಡಲಾಗುತ್ತದೆ. ಏನೇನು ಮಾರ್ಗಸೂಚಿ ರೂಪಿಸಲಾಗಿದೆ. ಇನ್ನೂ ಏನೇನು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂಬ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಆರ್ಥಿಕ ಚಟುವಟಿಕೆಗಳಿಗೆ ಅಡ್ಡಿಯಾಗದಂತೆ ಹೇಗೆ ಬಿಗಿಕ್ರಮ ಕೈಗೊಳ್ಳಬೇಕಾಗಿದೆ ಎಂಬ ಬಗ್ಗೆಯೂ ಪ್ರತಿಪಕ್ಷಗಳ ವಿವರ ಪಡೆಯಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಸಹ ಪ್ರತಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದ್ದರು. ರಾಜ್ಯದಲ್ಲಿಯೂ ಪ್ರತಿಪಕ್ಷಗಳ ಮುಖಂಡರೂ ಸರ್ವಪಕ್ಷಗಳ ಸಭೆಗೆ ಒತ್ತಾಯಿಸಿದ್ದರು.

    ಈ ಸಭೆಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮೇಲ್ಮನೆ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡರಾದ ಡಾ.ಜಿ.ಪರಮೇಶ್ವರ್, ರಾಮಲಿಂಗಾ ರೆಡ್ಡಿ, ದಿನೇಶ್ ಗುಂಡೂರಾವ್, ಜೆಡಿಎಸ್​ನ ಎಚ್.ಡಿ. ರೇವಣ್ಣ, ಬಂಡೆಪ್ಪ ಖಾಶೆಂಪುರ, ಸಚಿವರು, ಅಧಿಕಾರಿಗಳಿಗೆ ಆಹ್ವಾನ ನೀಡಲಾಗಿದೆ.

    ಬಳ್ಳಾರಿ ಜಿಂದಾಲ್​ನಲ್ಲಿ ಸೋಂಕು ಹೆಚ್ಚಳ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ದಿನದಿಂದ ದಿನಕ್ಕೆ ಕರೊನಾ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಅವಳಿ ಜಿಲ್ಲೆಯಲ್ಲಿ ಬುಧವಾರ ಒಂದೇದಿನ ಆರು ಸೋಂಕಿತರು ಮೃತಪಟ್ಟಿರುವುದು ಒಂದೆಡೆಯಾದರೆ, ಮೊದಲನೇ ಅಲೆಯಲ್ಲಿ ಹೆಚ್ಚಿನ ಆತಂಕ ಸೃಷ್ಟಿಸಿದ್ದ ಜಿಂದಾಲ್​ನಲ್ಲಿ ಮತ್ತೆ ಸೋಂಕು ವ್ಯಾಪಕವಾಗಿ ಕಂಡುಬರುತ್ತಿದೆ. 2ನೇ ಅಲೆಯಲ್ಲಿ 200 ಸೋಂಕಿತರು ಜಿಂದಾಲ್​ನವರಾಗಿದ್ದಾರೆ. ಅದರಲ್ಲೂ ಜಿಂದಾಲ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಮೊದಲಿಗೆ ಸೋಂಕು ಕಂಡುಬಂದಿತ್ತು. ಬಳಿಕ ಕಾರ್ವಿುಕರಲ್ಲಿ ಸೋಂಕು ಹೆಚ್ಚಾಗತೊಡಗಿದೆ. ಕಾರ್ಖಾನೆಯಲ್ಲಿ ಸ್ಥಳೀಯರು ಸೇರಿ ಅಕ್ಕಪಕ್ಕದ ರಾಜ್ಯದವರು ಕೆಲಸ ಮಾಡುತ್ತಿರುವುದರಿಂದ ಸೋಂಕು ಮತ್ತಷ್ಟು ಹೆಚ್ಚಾಗುವ ಭೀತಿ ಶುರುವಾಗಿದೆ.

    ನೈಟ್ ಕರ್ಫ್ಯೂ ಅಳವಡಿಸಿರುವ ರಾಜ್ಯದ ಎಂಟು ನಗರಗಳಲ್ಲಿ ಜನತಾ ಕರ್ಫ್ಯೂ ಇಲ್ಲವೆ ವಾರಾಂತ್ಯದ ಲಾಕ್​ಡೌನ್ ಮಾಡುವ ಚಿಂತನೆ ನಡೆದಿದೆ. ಆದರೆ ಈ ಕುರಿತಂತೆ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಏಪ್ರಿಲ್ 18ರ ಸರ್ವಪಕ್ಷ ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗಲಿದೆ.

    | ಬಸವರಾಜ ಬೊಮ್ಮಾಯಿ ಗೃಹ ಸಚಿವ

    ಕರೊನಾ ಸೋಂಕು ನಿಯಂತ್ರಣ, ನಿರ್ವಹಣೆಗೆ ಗ್ರಾಪಂ ಹಾಗೂ ಪ್ರತಿ ಹಳ್ಳಿಗಳ ಮಟ್ಟದಲ್ಲೂ ಪ್ರತ್ಯೇಕವಾಗಿ ಟಾಸ್ಕ್ ಫೋರ್ಸ್ ರಚನೆಗೆ ಆದೇಶಿಸಲಾಗಿದೆ. ಕರೊನಾ ಬಗ್ಗೆ ಜಾಗೃತಿ ಮೂಡಿಸುವ ಜತೆಗೆ ಸೋಂಕಿತರಿಗೆ ಕೂಡಲೇ ಚಿಕಿತ್ಸೆ ದೊರೆಯುವಂತೆ ಮಾಡುವುದು ಟಾಸ್ಕ್​ಫೋರ್ಸ್ ಜವಾಬ್ದಾರಿಯಾಗಿದೆ.

    | ಕೆ.ಎಸ್.ಈಶ್ವರಪ್ಪ ಸಚಿವ

    ಬೆಚ್ಚಿಬೀಳಿಸುವಂತಿದೆ ಬೆಂಗಳೂರಿನಲ್ಲಿ ಕರೊನಾ ಸೋಂಕಿನ ಪ್ರಮಾಣ!; ಇಂದು ಇದುವರೆಗಿನ ಗರಿಷ್ಠ ಪ್ರಕರಣ ದಾಖಲು..

    ರಾಜಧಾನಿಯಲ್ಲಿ ಕೋವಿಡ್ ಶವ ಸಂಸ್ಕಾರಕ್ಕೂ ಕ್ಯೂ! ಚಿತಾಗಾರದ ಮುಂದೆ ಗಂಟೆಗಟ್ಟಲೆ ನಿಂತ ಆಂಬ್ಯುಲೆನ್ಸ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts