More

    ಇನ್ನಿಲ್ಲ ಪಿಂಚಣಿ ಚಿಂತೆ: ಹೊಸ ಹುದ್ದೆಗೇರಿದ ಎನ್​ಪಿಎಸ್ ಸಿಬ್ಬಂದಿಗೆ ಹಳೇ ಪೆನ್ಶನ್

    ಕೀರ್ತಿನಾರಾಯಣ ಸಿ.
    ಬೆಂಗಳೂರು: 2004ರ ಪೂರ್ವದಲ್ಲೇ ಸರ್ಕಾರಿ ಕೆಲಸಕ್ಕೆ ಸೇರಿದ್ದರೂ ತಾಂತ್ರಿಕ ಸಮಸ್ಯೆಗಳಿಂದಾಗಿ ನೂತನ ಪಿಂಚಣಿ ಯೋಜನೆ (ಎನ್​ಪಿಎಸ್) ವ್ಯಾಪ್ತಿಗೆ ಒಳಪಟ್ಟು ಕಿರಿಕಿರಿ ಅನುಭವಿಸುತ್ತಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಲಕ್ಷಾಂತರ ನೌಕರರ ಬಹುಕಾಲದ ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿದೆ. ಎನ್​ಪಿಸ್​ನಿಂದ ಹೊರಬಂದು ಹಳೇ ಪಿಂಚಣಿ ಯೋಜನೆ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

    2004 ಜ.1ರ ಪೂರ್ವದಲ್ಲಿ ಉದ್ಯೋಗಕ್ಕೆ ಸೇರಿ ರಾಜೀನಾಮೆ ಕೊಟ್ಟ ನಂತರ ಪುನಃ ಮತ್ತೊಂದು ಹುದ್ದೆಗೆ ಹೊಸದಾಗಿ ಆಯ್ಕೆಯಾಗಿರುವ ಕೇಂದ್ರ, ಸರ್ಕಾರಿ ನೌಕರರ ಹಿಂದಿನ ಸೇವೆ ಪರಿಗಣಿಸಿ ಹಳೇ ಪಿಂಚಣಿ ವ್ಯವಸ್ಥೆಯಲ್ಲೇ ಮುಂದುವರಿಸ ಬಹುದೆಂದು ಸಿಬ್ಬಂದಿ-ಸಾರ್ವಜನಿಕ ಕುಂದುಕೊರತೆ ಹಾಗೂ ಪಿಂಚಣಿ ಸಚಿವಾಲಯ ಅಧಿಕೃತವಾಗಿ ಆದೇಶ ಹೊರಡಿಸಿದೆ.

    ಕೇಂದ್ರ ಸರ್ಕಾರಿ ನಾಗರಿಕ ಸೇವಾ (ಪಿಂಚಣಿ) ನಿಯಮ 1972ರ ಅನ್ವಯ 2004ರ ಪೂರ್ವದಲ್ಲಿ ನೇಮಕಗೊಂಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಅಥವಾ ಕೇಂದ್ರ ಸ್ವಾಯತ್ತ ಸಂಸ್ಥೆಗಳ ನೌಕರರು ರಾಜೀನಾಮೆಯನ್ನು (ತಾಂತ್ರಿಕವಾಗಿ) ಕೊಟ್ಟು 2004 ಜ.1ರ ನಂತರ ಹಾಗೂ 2009 ಅ.28ಕ್ಕೂ ಮುನ್ನ ಪುನಃ ಕರ್ತವ್ಯಕ್ಕೆ ಹಾಜರಾದರೆ ಅವರಿಗೆ ಹಿಂದಿನ ಸೇವಾ ಅವಧಿಗೆ ಸಂಬಂಧಿಸಿದ ಸೌಲಭ್ಯಗಳನ್ನು ನೀಡಲು ತೀರ್ವನಿಸಿ, ಅವರನ್ನು ಹೊಸ ಪಿಂಚಣಿ ಯೋಜನೆಗೆ ಸೇರ್ಪಡೆಗೊಳಿಸಿ ಹೊರಡಿಸಿದ್ದ ಆದೇಶವನ್ನೂ ರದ್ದುಪಡಿಸಲಾಗಿದೆ.

    ಆದೇಶದಲ್ಲೇನಿದೆ?: ಎನ್​ಪಿಎಸ್ ವ್ಯಾಪ್ತಿಯಲ್ಲಿರುವ ನೌಕರರು ಪರಿಷ್ಕೃತ ಆದೇಶದಂತೆ ಹಳೇ ಪಿಂಚಣಿ ಸೌಲಭ್ಯ ಪಡೆಯಲು 3 ತಿಂಗಳ ಕಾಲಾವಕಾಶ ನೀಡಲಾಗಿದೆ. ಆಯಾ ಇಲಾಖೆಗಳಲ್ಲಿ ನಿಯಮಬದ್ಧವಾಗಿ ಅರ್ಜಿ ಸಲ್ಲಿಸುವ ಮುಖಾಂತರ ಹಳೇ ಪಿಂಚಣಿ ವ್ಯವಸ್ಥೆಗೆ ಬದಲಾವಣೆ ಮಾಡಿಕೊಳ್ಳಬಹುದು. ಒಂದು ವೇಳೆ ನಿಗದಿತ ಅವಧಿಯಲ್ಲಿ ಪಡೆಯಲು ಸಾಧ್ಯವಾಗದಿದ್ದರೆ ಅಂಥ ನೌಕರರು ಹೊಸ ಪಿಂಚಣಿ ಯೋಜನೆಯ ನಿಯಮಗಳಿಗೇ ಬದ್ಧವಾಗಿ ಮುಂದುವರಿಯ ಬೇಕಾಗುತ್ತದೆ ಎಂದು ಸ್ಪಷ್ಟವಾಗಿ ಸೂಚನೆ ಕೊಟ್ಟಿದೆ.

    ಕೇಂದ್ರ ಸರ್ಕಾರದ ಹೊಸ ಆದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಲಕ್ಷಾಂತರ ಉದ್ಯೋಗಿಗಳಿಗೆ ನ್ಯಾಯ ಸಿಕ್ಕಿದೆ. ಎನ್​ಪಿಎಸ್ ಅನ್ನು ರಾಜ್ಯ ಸರ್ಕಾರ ಯಥಾವತ್ತಾಗಿ 2006 ಏ.1ರಿಂದ ಜಾರಿಗೆ ತಂದಿದೆ ಯಾದರೂ ಕೇಂದ್ರ ಜಾರಿಗೆ ತಂದಿರುವ ಸುಧಾರಣಾ ಕ್ರಮಗಳನ್ನು ಈವರೆಗೂ ಜಾರಿಗೊಳಿಸಿಲ್ಲ. ಆದ್ದರಿಂದ ಕೇಂದ್ರದ ಸುಧಾರಣಾ ಅದೇಶಗಳನ್ನೂ ಜಾರಿಗೆ ತರುವ ಮೂಲಕ ನೌಕರರಿಗೆ ನ್ಯಾಯ ಒದಗಿಸಬೇಕು.
    | ಶಾಂತಾರಾಮ           ಅಧ್ಯಕ್ಷರು, ರಾಜ್ಯ ಸರ್ಕಾರಿ ಎನ್​ಪಿಎಸ್ ನೌಕರರ ಸಂಘ

    ಯಾರಿಗೆ ಅನ್ವಯ?

    • ರಾಜ್ಯ ಸರ್ಕಾರಿ ಹುದ್ದೆಗೆ ರಾಜೀನಾಮೆ ಕೊಟ್ಟು ಕೇಂದ್ರದ ಹುದ್ದೆಗೆ ಆಯ್ಕೆಯಾದವರು
    • ಕೇಂದ್ರದಿಂದ ಕೇಂದ್ರೀಯ ಸ್ವಾಯತ್ತತೆ ಹೊಂದಿರುವ ರಾಜ್ಯ ಸಂಸ್ಥೆಗಳಿಗೆ ಬಂದ ನೌಕರರು
    • 2004 ಪೂರ್ವದ ಹುದ್ದೆ ಬಿಟ್ಟು ಪರೀಕ್ಷೆ ಬರೆದು ಮತ್ತೊಂದು ಹುದ್ದೆಗೆ ಆಯ್ಕೆಯಾದವರು
    • ಅಂತಿಮ ಆಯ್ಕೆಯಾದರೂ ಕಾರಣಾಂತರಕ್ಕೆ 2004ರ ನಂತರ ಆದೇಶ ಪ್ರತಿ ಪಡೆದವರು
    • ನಿಯಮಬದ್ಧವಾಗಿ ರಾಜೀನಾಮೆ ಕೊಟ್ಟು ಪುನಃ ಆಯ್ಕೆಯಾಗಿದ್ದವರಿಗೆ ಮಾತ್ರ ಅವಕಾಶ

    ಇತರ ಬೇಡಿಕೆಗಳೇನು?

    ಡಿಸಿಆರ್​ಜಿ ಕೊಟ್ಟಿಲ್ಲ: 2004ರಿಂದಲೇ ಎನ್​ಪಿಎಸ್ ನೌಕರರಿಗೆ ನಿವೃತ್ತಿ ಮತ್ತು ಮರಣ (ಡಿಸಿಆರ್​ಜಿ) ಉಪಧನ ಅನ್ವಯಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ಪೂರ್ಣಪ್ರಮಾಣದಲ್ಲಿ ಜಾರಿಗೆ ತರುವ ಬದಲು ರಾಜ್ಯ ಸರ್ಕಾರ 2018ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿದೆ. 2006ರಿಂದ ಅನ್ವಯಿಸಿ ಆದೇಶ ಹೊರಡಿಸುವಂತೆ ಹಲವು ಬಾರಿ ಮನವಿ ಕೊಟ್ಟರೂ ಕೂಡ ಸರ್ಕಾರಗಳು ಪರಿಗಣಿಸಿಲ್ಲ ಇದರಿಂದ 50ರಿಂದ 60 ಸಾವಿರ ನೌಕರರಿಗೆ ನಿವೃತ್ತಿ ಉಪಧನ ಸಿಕ್ಕಿಲ್ಲ.

    ಇದನ್ನೂ ಓದಿ: ಗೋಹತ್ಯೆ ತಡೆಗೆ ಒಂದಡಿ ಮುಂದಿರಿಸಿತು ಯೋಗಿ ಸರ್ಕಾರ: ಕಠಿಣ ಶಿಕ್ಷೆ ಎಂಥವರನ್ನೂ ಹಿಮ್ಮೆಟ್ಟಿಸೀತು!

    ಅನುಕಂಪದ ಹುದ್ದೆ ಸಿಗ್ತಿಲ್ಲ: ರಾಜ್ಯದಲ್ಲಿ ಮೃತಪಟ್ಟಿರುವ 300 ರಿಂದ 400 ಸರ್ಕಾರಿ ನೌಕರರ ಕುಟುಂಬಗಳಿಗೆ ಸರ್ಕಾರದ ಯಾವ ಸೌಲಭ್ಯವೂ ಸಿಕ್ಕಿಲ್ಲ. ಮೃತ ಉದ್ಯೋಗಿಯ ಕುಟುಂಬದ ಒಬ್ಬರಿಗೆ ಅನುಕಂಪದ ಹುದ್ದೆ ನೀಡಲಾಗುತ್ತದೆ. ಆದರೆ, ಡಿಸಿಆರ್​ಜಿ ಸೇರಿ ಇನ್ನಿತರ ವಿಚಾರಗಳು ಬಗೆಹರಿಯದ ಕಾರಣ ಇದೂ ಸಾಧ್ಯವಾಗುತ್ತಿಲ್ಲ. ಇನ್ನಿತರ ಉಪಧನಗಳ ಸೌಲಭ್ಯವೂ ದೊರೆತಿಲ್ಲ.

    ಕೆಎಟಿ ಆದೇಶಕ್ಕೆ ಕಿಮ್ಮತ್ತಿಲ್ಲ: ಆರ್​ಡಿಪಿಆರ್​ನಲ್ಲಿ 1980ರಿಂದ ಬಿಲ್ ಕಲೆಕ್ಟರ್​ಗಳಾಗಿ ಕೆಲಸ ಮಾಡುತ್ತಿದ್ದವರನ್ನು ನೇರ ನೇಮಕಾತಿ ಆಧಾರದಲ್ಲಿ ಇಲಾಖೆಗೆ ವಿಲೀನ ಮಾಡಿಕೊಳ್ಳಲಾಯಿತು. ಆದರೆ, ಎನ್​ಪಿಎಸ್ ಜಾರಿ ಬಳಿಕ 2006 ಏ.1ರ ನಂತರ ವಿಲೀನ ಆದವರಿಗೆ ಹಿಂದಿನ ಸೇವಾ ಅವಧಿ ಪರಿಗಣಿಸಲಿಲ್ಲ, ಹಳೇ ಪಿಂಚಣಿ ಸೌಲಭ್ಯವೂ ಸಿಗಲಿಲ್ಲ. ಪ್ರಕರಣ ಕೆಎಟಿ ಮೆಟ್ಟಿಲೇರಿ ನೌಕರರ ಹಿಂದಿನ ಸೇವಾವಧಿಯನ್ನು ಪರಿಗಣಿಸಬೇಕು ಎಂದು ಆದೇಶ ಹೊರಡಿಸಿದರೂ ಈವರೆಗೆ ಜಾರಿಯಾಗಿಲ್ಲ.

    23ರಂದು ‘ಸಮರ್ಥ ನಾಯಕತ್ವ-ಸ್ವಾವಲಂಬಿ ಭಾರತ’ದ ಮಹಾಸಂಪರ್ಕ ದಿನ: ಎನ್​ಆರ್​ಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts