More

    ಪೆನ್​ಡ್ರೖೆವ್ ಪ್ರಕರಣ ಮೈತ್ರಿಗಿಲ್ಲ ಸಂಕಷ್ಟ

    ಕುಮಾರಸ್ವಾಮಿಗೆ ಅಮಿತ್ ಷಾ ಅಭಯ | ಕಾನೂನು ಹೋರಾಟಕ್ಕೆ ಸಹಕಾರದ ಭರವಸೆ

    ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿಗೆ ಧಕ್ಕೆ ತರಬಹುದು ಎಂಬ ಅನುಮಾನಗಳ ನಡುವೆ ಎಚ್.ಡಿ. ಕುಮಾರಸ್ವಾಮಿ ಮತ್ತು ಅಮಿತ್ ಷಾ ಶನಿವಾರ ತಡರಾತ್ರಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಸಭೆಯಲ್ಲಿ ಪ್ರಜ್ವಲ್ ರೇವಣ್ಣ ಪ್ರಕರಣ, ಎಚ್.ಡಿ.ರೇವಣ್ಣ ಬಂಧನ ಮತ್ತು ಮೈತ್ರಿ ಬಗ್ಗೆ ಚರ್ಚೆಗಳಾಗಿವೆ. ಈ ವೇಳೆ ಜೆಡಿಎಸ್​ನ ಮಿತ್ರ ಪಕ್ಷವಾಗಿ ಬಿಜೆಪಿ ನಿಮ್ಮ ಜತೆ ಗಟ್ಟಿಯಾಗಿ ನಿಲ್ಲುತ್ತದೆ ಎಂದು ಅಮಿತ್ ಷಾ ಭರವಸೆ ನೀಡಿದರೆನ್ನಲಾಗಿದೆ. ಮಹಿಳೆ ಅಪಹರಣ, ಲೈಂಗಿಕ ದೌರ್ಜನ್ಯ ಹಾಗೂ ಪೆನ್​ಡ್ರೖೆವ್ ಪ್ರಕರಣದಿಂದಾಗಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಯಾವುದೇ ರೀತಿಯ ಅಡ್ಡಿ ಉಂಟಾಗುವುದಿಲ್ಲ ಎಂದು ಅಭಯ ನೀಡಿದ್ದಾರೆ.

    ಈ ಪ್ರಕರಣದಿಂದ ಮೈತ್ರಿಗೆ ಮುಜುಗರವಾಗಿರುವುದು ನಿಜ. ನೀವು ಈಗಾಗಲೆ ದೃಢವಾದ ನಿರ್ಧಾರವನ್ನು ತೆಗೆದುಕೊಂಡು ಪ್ರಕರಣದ ಆರೋಪಿ ಸ್ಥಾನದಲ್ಲಿರುವ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಷದಿಂದ ಅಮಾನತು ಮಾಡಿದ್ದೀರಿ. ಮಹಿಳೆಯನ್ನು ಅಪಹರಿಸಿದ ಪ್ರಕರಣದಲ್ಲಿ ಎಸ್​ಐಟಿ ಬಂಧನದಲ್ಲಿರುವ ರೇವಣ್ಣ ಅವರನ್ನೂ ನೀವು ಸಮರ್ಥಿಸಿಕೊಂಡಿಲ್ಲ. ಈ ಪ್ರಕರಣ ಹೊರಬಂದ ನಂತರ ನಾನು ನಿಮ್ಮ ಎಲ್ಲ ಹೇಳಿಕೆಗಳನ್ನು ಗಮನಿಸಿದ್ದೇನೆ. ಪಕ್ಷ ಉಳಿಸುವ ನಿಟ್ಟಿನಲ್ಲಿ ನೀವು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಸ್ವಾಗತಾರ್ಹ. ಕಾನೂನು ಹೋರಾಟದಲ್ಲಿ ನಾವು ನಿಮ್ಮ ಜತೆಗಿರುತ್ತೇವೆ. ನೀವು ಧೈರ್ಯ ಕಳೆದುಕೊಳ್ಳಬೇಡಿ ಎಂದು ವಿಶ್ವಾಸ ತುಂಬುವ ಮಾತುಗಳನ್ನಾಡಿದ್ದಾರೆ ಎಂದು ಹೇಳಲಾಗಿದೆ.

    ಮೈತ್ರಿಗೆ ಧಕ್ಕೆ ಇಲ್ಲ, ಧೈರ್ಯದಿಂದಿರಿ: ಈ ಪ್ರಕರಣದಿಂದಾಗಿ ಮೈತ್ರಿಗೆ ಯಾವುದೇ ರೀತಿಯ ಧಕ್ಕೆ ಉಂಟಾಗುವುದಿಲ್ಲ. ಇಂತಹ ಪ್ರಕರಣಗಳು ನಡೆದಾಗ ಯಾವುದೇ ರಾಜಕೀಯ ಪಕ್ಷಗಳಿಗೆ ಮುಜುಗರವಾಗುತ್ತದೆ. ನಾವು ನಿಮಗೆ ಸಂಪೂರ್ಣವಾಗಿ ಕಾನೂನಿನ ಹೋರಾಟಕ್ಕೆ ಬೆಂಬಲ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ. ಕಾನೂನಿಗೆ ತಲೆ ಬಾಗುವುದಾಗಿ ನೀವು ತೆಗೆದುಕೊಂಡಿರುವ ನಿರ್ಧಾರ ಸ್ವಾಗತಾರ್ಹ. ತಪ್ಪು ಮಾಡಿಲ್ಲ ಎಂದರೆ ಖಂಡಿತವಾಗಿಯೂ ಕಾನೂನು ಹೋರಾಟದಲ್ಲಿ ಜಯ ಸಿಕ್ಕೇ ಸಿಗುತ್ತದೆ. ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ ಎಂದು ಧೈರ್ಯ ಹೇಳಿದ್ದಾರೆ.

    ಹೆಚ್ಚು ಸ್ಥಾನ ಗೆಲ್ಲುವುದು ನಿಶ್ಚಿತ:

    ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ನಮ್ಮ ಪಕ್ಷದ ಆಂತರಿಕ ಸಮೀಕ್ಷೆಯೂ ಅದನ್ನೇ ಹೇಳಿದೆ. ಜೆಡಿಎಸ್ ಮೂರು ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲೂ ಗೆಲುವು ಸಾಧಿಸುತ್ತೇವೆ. ಕರ್ನಾಟಕದಲ್ಲಿ ನಾವು ನಮ್ಮ ನಿರೀಕ್ಷೆಯಷ್ಟೇ ಸ್ಥಾನಗಳನ್ನು ಗೆಲ್ಲುತ್ತೇವೆ. 2028 ವಿಧಾನಸಭೆ ಚುನಾವಣೆವರೆಗೂ ನಮ್ಮ ಮೈತ್ರಿ ಮುಂದುವರಿಯಬೇಕು. ಈ ಪ್ರಕರಣವನ್ನು ಕಾನೂನು ರೀತಿಯಲ್ಲಿ ಹೋರಾಟ ನಡೆಸಿ ಎಂದು ಹೇಳಿ ಅಮಿತ್ ಷಾ ಅವರು ಕುಮಾರಸ್ವಾಮಿಗೆ ವಿಶ್ವಾಸ ತುಂಬಿದ್ದಾರೆ ಎಂದು ಹೇಳಲಾಗಿದೆ.

    ಸಂತ್ರಸ್ತೆಯರಿಗೆ ಸರ್ಕಾರದಿಂದ ಆರ್ಥಿಕ ನೆರವು

    ಬೆಳಗಾವಿ: ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ತಿಳಿಸಿದರು. ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. 75 ವರ್ಷಗಳಲ್ಲಿ ಎಂದೂ ಕಂಡರಿಯದ ಪ್ರಕರಣ ಇದಾಗಿದ್ದು, ನೂರಾರು ಸಂಖ್ಯೆಯಲ್ಲಿರುವ ಅತ್ಯಾಚಾರ ಸಂತ್ರಸ್ತರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆರ್ಥಿಕ ನೆರವು ಘೊಷಿಸಿದ್ದಾರೆ ಎಂದರು.

    ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಷಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಪ್ರಜ್ವಲ್ ಕೃತ್ಯಗಳ ಬಗ್ಗೆ ಮಾಹಿತಿ ಇದ್ದರೂ ಜೆಡಿಎಸ್ ಜತೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು ಏಕೆ ಎಂದು ಪ್ರಶ್ನಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್​ಪೋರ್ಟ್ ಅನ್ನು ಏಕೆ ರದ್ದುಗೊಳಿಸಲಿಲ್ಲ? ಅವರನ್ನು ಮರಳಿ ಕರೆತರಲು ಇಂಟರ್​ಪೋಲ್ ಮೂಲಕ ಬ್ಲೂ ಕಾರ್ನರ್ ನೋಟಿಸ್ ನೀಡಲಿಲ್ಲ ಯಾಕೆ ಎಂದು ಪ್ರಶ್ನಿಸಿದರು.

    ಸಿಎಂ ಸಿದ್ದರಾಮಯ್ಯ ಮಾತನಾಡಿ, ಪ್ರಜ್ವಲ್ ರೇವಣ್ಣ ಪತ್ತೆಗೆ ಸಿಬಿಐ ಮೂಲಕ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲು ಮುಂದಾಗಿರುವುದಾಗಿ ತಿಳಿಸಿದರು. ಪ್ರಜ್ವಲ್ ರೇವಣ್ಣ ಪೆನ್​ಡ್ರೖೆವ್ ಪ್ರಕರಣದಲ್ಲಿ ವಿಡಿಯೋಗಳು 4-5 ವರ್ಷಗಳ ಹಿಂದಿನದು ಎಂದು ಸಿ.ಟಿ ರವಿ ಹೇಳಿರಬಹುದು. ಈವರೆಗೂ ಯಾವ ಸಂತ್ರಸ್ತೆಯರೂ ದೂರು ಕೊಟ್ಟಿರಲಿಲ್ಲ. ಈಗ ದೂರು ದಾಖಲಿಸಿದ್ದಾರೆ. ಡಿಸೆಂಬರ್ ತಿಂಗಳಲ್ಲಿ ಪ್ರಜ್ವಲ್ ರೇವಣ್ಣನಿಗೆ ಸೇರಿದ ಅಶ್ಲೀಲ ವಿಡಿಯೋಗಳಿವೆ ಎಂಬ ಚರ್ಚೆಗಳು ನಡೆದಿದ್ದವು. ಈ ವಿಚಾರ ಗೊತ್ತಿದ್ದರೂ ಬಿಜೆಪಿಯವರು ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಅಲ್ಲದೆ ಪ್ರಜ್ವಲ್ ರೇವಣ್ಣಗೆ ಮೈತ್ರಿ ಅಭ್ಯರ್ಥಿ ಎಂದು ಟಿಕೆಟ್ ಕೊಟ್ಟಿದ್ದಾರೆ. ಜೆಡಿಎಸ್​ನವರು ಈ ಮೊದಲು ಕಮ್ಯುನಲ್ ಪಾರ್ಟಿ ಎಂದು ಹೇಳಿಕೊಳ್ಳುತ್ತಿದ್ದರು. ಯಾವುದೇ ಕಾರಣಕ್ಕೂ ಬಿಜೆಪಿ ಜತೆಗೆ ಸೇರಲ್ಲ ಎಂದಿದ್ದರು. ಮೋದಿ ಪ್ರಧಾನಿ ಆಗಲ್ಲ, ಆದರೆ ನಾನು ದೇಶ ಬಿಟ್ಟು ಹೋಗುತ್ತೇನೆ ಎಂದೂ ದೇವೇಗೌಡರು ಹೇಳಿದ್ದರು. ಮೋದಿ ಪ್ರಧಾನಿ ಆದ ಬಳಿಕ ದೇವೇಗೌಡರು ದೇಶ ಬಿಟ್ಟು ಹೋದರಾ ಎಂದು ಪ್ರಶ್ನಿಸಿದರು.

    ಪ್ರಜ್ವಲ್ ರೇವಣ್ಣ ಪ್ರಕರಣ ಬಿಜೆಪಿ ಮತ್ತು ರಾಜ್ಯದ ಯಾವುದೇ ಕ್ಷೇತ್ರದ ಚುನಾವಣೆ ಮೇಲೂ ಪರಿಣಾಮ ಬೀರುವುದಿಲ್ಲ. ಪ್ರಕರಣವನ್ನು ಸರ್ಕಾರ ಎಸ್​ಐಟಿಗೆ ವಹಿಸಿದೆ. ತನಿಖೆ ನಡೆದು ತಪ್ಪಿತಸ್ಥ ಎಂಬುದು ಸಾಬೀತಾದರೆ ಶಿಕ್ಷೆ ಆಗಲಿದೆ. ಎಚ್.ಡಿ. ದೇವೇಗೌಡರು ಘಟನೆ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳದೆ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕಿದೆ.

    | ಬಿ.ಎಸ್.ಯಡಿಯೂರಪ್ಪ ಮಾಜಿ ಸಿಎಂ

    ಮಹಿಳೆಯರ ಮೇಲೆ ದೌರ್ಜನ್ಯ ಮಾಡು ವವರಿಗೆ ಉಗ್ರ ಶಿಕ್ಷೆ ಆಗಬೇಕು. ಹಾಸನ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ. ತಪ್ಪು ಮಾಡಿದರೆ ಶಿಕ್ಷೆ ಕೊಡುವುದಕ್ಕೆ ಸರ್ಕಾರ ಕಾದು ನಿಂತಿದೆ. ಯಾರೇ ಆಗಲಿ, ತಪ್ಪು ಮಾಡಿದರೆ ಶಿಕ್ಷೆಯಾಗಲೇಬೇಕು.

    | ಶೋಭಾ ಕರಂದ್ಲಾಜೆ ಕೇಂದ್ರ ಸಚಿವೆ

    ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿಲ್ಲ. ಇದು ಹತ್ತಾರು ವರ್ಷದಿಂದ ನಡೆದಿದೆ ಅಂತ ಹೇಳಲಾಗುತ್ತಿದೆ. ಆದರೆ ಇದನ್ನು ರಾಜಕೀಯವಾಗಿ ಯಾರೂ ಬಳಸಿಕೊಳ್ಳಬಾರದು. ಇಂತಹ ಕೆಲಸ ಮಾಡುವವರಿಗೆ ಬುದ್ಧಿ ಬರಬೇಕು. ಕಾನೂನಿನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

    | ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ

    ಮಂಗಳೂರಿಗೆ ಬಂದಿಲ್ಲ: ಸರಣಿ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ, ಸಂಸದ ಪ್ರಜ್ವಲ್ ರೇವಣ್ಣ ದುಬೈ ವಿಮಾನದಲ್ಲಿ ಭಾನುವಾರ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪುವ ವದಂತಿ ಹರಡಿದೆ. ಕೊಲ್ಲಿ ರಾಷ್ಟ್ರದಿಂದ ಆಗಮಿಸುವ ಯಾವುದೇ ವಿಮಾನದಲ್ಲಿ ಪ್ರಜ್ವಲ್ ರೇವಣ್ಣ ಹೆಸರಿನಲ್ಲಿ ಭಾನುವಾರ ಸಂಜೆ 4.15 ಗಂಟೆ ತನಕ ಟಿಕೆಟ್ ಬುಕ್ ಆಗಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕೃತ ಮೂಲ ತಿಳಿಸಿದೆ.

    ಬ್ಲೂ ಕಾರ್ನರ್ ನೋಟಿಸ್:  ಪೆನ್​ಡ್ರೖೆವ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ವಿರುದ್ಧ ಈಗಾಗಲೆ ಬ್ಲೂ ಕಾರ್ನರ್ ನೋಟಿಸ್ ಜಾರಿಯಾಗಿದ್ದು, ಅವರು ಎಲ್ಲಿದ್ದಾರೆ ಎಂಬ ಮಾಹಿತಿ ಎಸ್​ಐಟಿ ಅಧಿಕಾರಿಗಳಿಗೆ ಗೊತ್ತಿದೆ ಎಂದು ಗೃಹಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದರು. ಈಗಾಗಲೆ ಅಂತಾರಾಷ್ಟ್ರಿಯ ಪೊಲೀಸ್ ಸಂಸ್ಥೆ ಇಂಟರ್​ಪೋಲ್​ಗೆ ತಿಳಿಸಿ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಿದೆ. ವಿವಿಧ ದೇಶಗಳ ಪೊಲೀಸರನ್ನು ಸಂರ್ಪಸಿ ಮೊಬೈಲ್ ಲೊಕೇಶನ್ ಆಧರಿಸಿ ಪತ್ತೆ ಹಚ್ಚುವ ಕಾರ್ಯ ನಡೆದಿದೆ. ಅದರ ಬಳಿಕ ಎಸ್​ಐಟಿ ಅಧಿ ಕಾರಿಗಳು ವಿದೇಶದಿಂದ ಕರೆತರುವ ಪ್ರಕ್ರಿಯೆ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

    ನಾನು ವಕ್ತಾರನಲ್ಲ!: ಎಸ್​ಐಟಿ ತನಿಖೆ ಯಾವ ರೀತಿ ನಡೆಯುತ್ತಿದೆ ಎಂದು ವಕ್ತಾರರ ರೀತಿಯಲ್ಲಿ ತಾವು ವಿವರ ನೀಡಲು ಸಾಧ್ಯವಿಲ್ಲ. ಎಸ್​ಐಟಿ ಕಾನೂನು ಪ್ರಕಾರ ದೂರು ಆಧರಿಸಿ ರೇವಣ್ಣ ಅವರನ್ನು ಬಂಧಿಸಿದೆ. ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಮುಂದಿನ ಪ್ರಕ್ರಿಯೆಯನ್ನು ಕೈಗೊಳ್ಳುತ್ತಾರೆ ಎಂದು ಹೇಳಿದರು. ವಿಡಿಯೋ ಬಹಿರಂಗವಾದ ಮೂಲಗಳು ಸೇರಿ ಪ್ರಕರಣವನ್ನು ಎಲ್ಲ ಆಯಾಮಗಳಲ್ಲೂ ಎಸ್​ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಾರೆ. ಕಾರ್ತಿಕ್ ಎಂಬಾತ ಎಲ್ಲಿದ್ದಾರೆ? ಎಂಬ ಬಗ್ಗೆಯೂ ಎಸ್​ಐಟಿ ಅಧಿಕಾರಿಗಳಿಗೆ ಮಾಹಿತಿ ಇರಬಹುದು ಎಂದು ಡಾ.ಪರಮೇಶ್ವರ ಹೇಳಿದರು. ತನಿಖೆಗೆ ಸಂಬಂಧಪಟ್ಟಂತೆ ಯಾವುದೇ ವಿಚಾರಗಳನ್ನು ನಾವು ಬಹಿರಂಗಪಡಿಸುತ್ತಿಲ್ಲ. ಮೇಲ್ನೋಟಕ್ಕೆ ಸಾಧುವಾದಂತಹ ಮಾಹಿತಿಯನ್ನು ನಾನೇ ನೇರವಾಗಿ ಮಾತನಾಡುತ್ತಿದ್ದೇನೆ ಎಂದರು.

    ಪ್ರಜ್ವಲ್ ಪರ ಮತ ಯಾಚಿಸಿದ್ದನ್ನು ಮರೆತ ಸಿಎಂ

    ಹೀ ಈಸ್ ಎ ಯಂಗ್ ಲೀಡರ್ ವಿತ್ ಗ್ರೇಟ್ ವಿಶನ್. 2019ರ ಏಪ್ರಿಲ್ 17 ರಂದು ಕಡೂರಿನಲ್ಲಿ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಜ್ವಲ್ ರೇವಣ್ಣ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ಹೇಳಿದ್ದ ಮಾತಿದು. ಈಗ ಎಲ್ಲವನ್ನೂ ಮರೆತು ಏನು ಮಾತನಾಡುತ್ತಿದ್ದೀರಿ ಸಿದ್ದರಾಮಯ್ಯ? ಎಂದು ಆಗಿನ ಅವರ ಭಾಷಣದ ತುಣುಕನ್ನು ಪ್ರದರ್ಶನ ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರದರ್ಶಿಸಿದರು.

    ಪ್ರಜ್ವಲ್ ರೇವಣ್ಣನನ್ನು ಈಗ ರೇಪಿಸ್ಟ್ ಎಂದು ಕರೆಯುವ ನಿಮಗೆ, ಇವರನ್ನು ಗೆಲ್ಲಿಸಿಕೊಡಿ ಎಂದು ಜನರಲ್ಲಿ ಮನವಿ ಮಾಡಿದ್ದು ಮರೆತು ಹೋಯಿತೇ? ಪ್ರಜ್ವಲ್ ಇನ್ನೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಂಸದರಾಗಿಯೇ ಇದ್ದಾರೆ. ಅವರು ಈ ಚುನಾವಣೆಯಲ್ಲಿ ಗೆದ್ದು ಎನ್​ಡಿಎ ಅಭ್ಯರ್ಥಿಯಾದರೆ ಅವರ ವಿರುದ್ಧ ಪಕ್ಷದ ವತಿಯಿಂದ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಶೋಕ್ ಸ್ಪಷ್ಪಪಡಿಸಿದರು.

    ಪ್ರಜ್ವಲ್ ರೇವಣ್ಣ ನಡೆಸಿದ ಮಹಿಳಾ ದೌರ್ಜನ್ಯದ ಘಟನೆಗಳು ಯಾವ ಸಮಯದಲ್ಲಿ ನಡೆದಿದೆ ಎಂದು ಇನ್ನೂ ತನಿಖಾ ತಂಡ ವರದಿ ನೀಡಬೇಕಿದೆ. ನಮ್ಮ ಹೊಂದಾಣಿಕೆಯಲ್ಲಿ ಇನ್ನೂ ಪ್ರಜ್ವಲ್ ರೇವಣ್ಣ ಗೆದ್ದಿಲ್ಲ. ಈಗ ಪ್ರಜ್ವಲ್ ಸಂಸದರಾಗಿರುವುದು ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲೇ. ಜೆಡಿಎಸ್ ಈಗಾಗಲೆ ಪ್ರಜ್ವಲ್ ವಿರುದ್ಧ ಕ್ರಮ ಕೈಗೊಂಡಿದೆ ಎಂದರು.

    ರಾಜ್ಯ ಸರ್ಕಾರದ ವೈಫಲ್ಯ: ಸಚಿವ ಎಂ.ಬಿ.ಪಾಟೀಲ್ ಪಾತಾಳಕ್ಕೆ ಹೋಗುವುದು ಬೇಡ, ಭೂಮಿಯಲ್ಲಿದ್ದಾಗಲೇ ಪ್ರಜ್ವಲ್​ನನ್ನು ಬಂಧಿಸಬಹುದಿತ್ತು. ಆದರೆ ಆ ಕೆಲಸವನ್ನು ಸರ್ಕಾರ ಮಾಡಿಲ್ಲ ಎಂದರು. ಯಾವುದೇ ಕೇಂದ್ರ ಸರ್ಕಾರ ಸಂಸದರಿಗೆ ಸಹಜವಾಗಿಯೇ ರಾಜತಾಂತ್ರಿಕ ಪಾಸ್​ಪೋರ್ಟ್ ನೀಡುತ್ತದೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ನೀಡಿಲ್ಲ. ರಾಜ್ಯದ ಗುಪ್ತಚರ ಇಲಾಖೆ ಸರಿಯಾಗಿ ಇದ್ದಿದ್ದರೆ, ಪ್ರಜ್ವಲ್ ತಪ್ಪಿಸಿಕೊಂಡು ಹೋಗುತ್ತಾರೆ, ದೇಶ ಬಿಡಲು ಅವಕಾಶ ನೀಡಬಾರದು ಎಂದು ವಿಮಾನ ನಿಲ್ದಾಣಕ್ಕೆ ಪ್ರಾಧಿಕಾರಕ್ಕೆ ತಿಳಿಸಬಹುದಿತ್ತು. ಅದನ್ನು ಈ ಸರ್ಕಾರ ಮಾಡಲಿಲ್ಲ ಎಂದರು. ಶಾಸಕ ರೇವಣ್ಣ ಅವರ ಬಂಧನ ಸರಿಯಾಗಿಯೇ ಇದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು. ಪ್ರಕರಣದ ಬಗ್ಗೆ ಈಗಾಗಲೆ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದು, ಬಿಜೆಪಿಗೂ ಇದಕ್ಕೂ ಸಂಬಂಧವಿಲ್ಲ ಎಂದರು.

    ಪ್ರಜ್ವಲ್ ಗೆದ್ದರೆ ಶಿಸ್ತಿನ ಕ್ರಮ

    ಪ್ರಜ್ವಲ್ ರೇವಣ್ಣನನ್ನು ಈಗ ರೇಪಿಸ್ಟ್ ಎಂದು ಕರೆಯುವ ಸಿದ್ದರಾಮಯ್ಯ, ತೆನೆ ಹೊತ್ತ ಮಹಿಳೆಗೆ ಶಕ್ತಿ ನೀಡಿ ಎಂದು ಅವರೇ ಹೇಳಿದ್ದರು. ಆಗ ಟ್ವೀಟ್ ಮಾಡಿ, ಐ ರಿಕ್ವೆಸ್ಟ್ ಎವರಿವನ್ ಟು ಕಾಸ್ಟ್ ದೇರ್ ವೋಟ್ಸ್ ಇನ್ ಹೀಸ್ ಫೇವರ್ ಎಂದು ಮನವಿ ಮಾಡಿದ್ದರು. ಮೈತ್ರಿ ಬಲಪಡಿಸಿ ಎಂದು ಕೋರಿದ್ದರು. ಪ್ರಜ್ವಲ್ ರೇವಣ್ಣ ಈಗಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಲೇ ಸಂಸದರಾಗಿ ಇದ್ದಾರೆ. ಈ ಚುನಾವಣೆಯಲ್ಲಿ ಗೆದ್ದು ಅವರು ಎನ್​ಡಿಎ ಸಂಸದರಾದರೆ ನಂತರ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.

    ಎಂಪಿ ನಿವಾಸ ಎಸ್​ಐಟಿ ವಶಕ್ಕೆ

    ಹಾಸನ: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ರಾತ್ರಿ ಸಂತ್ರಸ್ತೆಯರ ಜತೆ ಎಸ್​ಐಟಿ ಅಧಿಕಾರಿಗಳು ನಗರದ ಆರ್.ಸಿ. ರಸ್ತೆಯಲ್ಲಿರುವ ಸಂಸದ ಪ್ರಜ್ವಲ್ ರೇವಣ್ಣ ನಿವಾಸದಲ್ಲಿ ಪರಿಶೀಲನೆ ನಡೆಸಿ, ನಿವಾಸವನ್ನು ತಮ್ಮ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಎಂಪಿ ನಿವಾಸದಲ್ಲಿ ನಮ್ಮ ಮೇಲೆ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆಯರು ದೂರು ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ 12 ಗಂಟೆವರೆಗೂ ಎಂಪಿ ನಿವಾಸದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಎಸ್​ಐಟಿ ಮುಂದಿನ ತನಿಖೆ ಹಾಗೂ ಸಾಕ್ಷ್ಯ ನಾಶ ಸಾಧ್ಯತೆ ಹಿನ್ನೆಲೆಯಲ್ಲಿ ತನಿಖೆ ಬಳಿಕ ಗೆಟ್​ಗೆ ಬೀಗ ಹಾಕುವ ಮೂಲಕ ಇತರರಿಗೆ ನಿವಾಸದ ಒಳಗೆ ಹೋಗಲು ನಿರ್ಬಂಧಿಸಿದೆ. ಪೊಲೀಸ್ ಭದ್ರತೆಯನ್ನೂ ಒದಗಿಸಲಾಗಿದೆ.

    ಈತ ಕ್ರೀಸ್​ಗೆ ಬಂದ್ರೆ ಬೌಲರ್​ಗಳೇ ಬೆವರುತ್ತಾರೆ! ಅಜಯ್​ ಜಡೇಜಾ ಹೆಸರಿಸಿದ ಸ್ಟಾರ್​ ಬ್ಯಾಟ್ಸ್​ಮನ್ ಇವರೇ

    5 ರೂ. ಪಾರ್ಲೆ-ಜಿ ಬಿಸ್ಕತ್​ ಬೆಲೆ ದುಬೈ, ಪಾಕಿಸ್ತಾನ ರಾಷ್ಟ್ರಗಳಲ್ಲಿ ಎಷ್ಟಿದೆ ಗೊತ್ತಾ? ಕೇಳಿದ್ರೆ ದಂಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts