More

    ಗುರು ಸಿದ್ದರಾಮೇಶ್ವರ ಜಯಂತಿಗೆ ಭರದ ಸಿದ್ಧತೆ

    ಅಜ್ಜಂಪುರ: ಸೊಲ್ಲಾಪುರದಲ್ಲಿ ಜ.14,15 ರಂದು ನಡೆಯಲಿರುವ ಗುರು ಸಿದ್ಧರಾಮೇಶ್ವರ ಶಿವಯೋಗಿಗಳ ಜಯಂತಿ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ.

    ಸಭಾ ಕಾರ್ಯಕ್ರಮ ನಡೆಸಲು ಸೊಲ್ಲಾಪುರ-ಚಿಕ್ಕನಲ್ಲೂರು ನಡುವಿನ ಕೃಷಿ ಭೂಮಿಯಲ್ಲಿ ವಿಶಾಲವಾದ ಪೆಂಡಾಲ್ ಹಾಕಲಾಗಿದೆ. ಪೆಂಡಾಲ್ ಕಂಬಗಳನ್ನು ಬಣ್ಣದ ಬಟ್ಟೆಗಳಿಂದ ಅಲಂಕೃತಗೊಳಿಸಲಾಗಿದೆ. ಹೆಚ್ಚು ಬೆಳಕು ನೀಡುವ ಬಲ್ಬ್​ಗಳನ್ನು ಅಳವಡಿಸಲಾಗಿದೆ.

    ಸಭಾಂಗಣದ ವೇದಿಕೆ ನಿರ್ಮಾಣ ಹಂತದಲ್ಲಿದ್ದು, ಸುಮಾರು 25 ಸಾವಿರ ಜನ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮದ ಸಮೀಪ ಹತ್ತಾರು ಮೊಬೈಲ್ ಶೌಚಗೃಹದ ವ್ಯವಸ್ಥೆ ಮಾಡಲಾಗಿದೆ. ಜನರಿಗೆ ಕುಡಿಯಲು ನೀರು ವಿತರಿಸಲು ನೀರಿನ ಬಾಟಲಿಗಳನ್ನೂ ಸಂಗ್ರಹಿಸಲಾಗಿದೆ.

    ಸೊಲ್ಲಾಪುರದ ಗುರುಸಿದ್ಧರಾಮೇಶ್ವರ ದೇವಾಲಯಕ್ಕೆ ಬಣ್ಣದ ಲೇಪನ ನೀಡಲಾಗಿದೆ. ತಮ್ಮಟದಹಳ್ಳಿ, ಸೊಲ್ಲಾಪುರ, ಚಿಕ್ಕನಲ್ಲೂರುವರೆಗಿನ ರಸ್ತೆ ಹಾಗೂ ಗ್ರಾಮದ ವಿವಿಧ ದೇವಾಲಯ, ಗೋಪುರಗಳು, ಮುಖ್ಯದ್ವಾರ, ರಥ, ಕಲ್ಯಾಣಿಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಸಭಾ ಮಂಟಪ ಸಮೀಪ ಹಸಿರಿನ ವಾತಾವರಣ ನಿರ್ವಿುಸಲು ಮತ್ತು ಧೂಳು ಉಂಟಾಗದಂತೆ ತಡೆಯಲು ಸುತ್ತಲೂ ರಾಗಿ ಬಿತ್ತನೆ ಮಾಡಲಾಗಿದೆ.

    ಅಜ್ಜಂಪುರ-ಸೊಲ್ಲಾಪುರದಲ್ಲಿ ಜಯಂತಿಗೆ ಶುಭಕೋರುವ, ಆಹ್ವಾನಿಸುವ ಫ್ಲೆಕ್ಸ್​ಗಳನ್ನು ಹಾಕಲಾಗಿದೆ. ಸಾರ್ವಜನಿಕ ಸ್ಥಳಗಳು, ಮನೆ, ಅಂಗಡಿಗಳಲ್ಲಿ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ. ಆಟೋ, ಬಸ್​ಗಳಿಗೂ ಆಹ್ವಾನ ಪತ್ರಿಕೆಗಳನ್ನು ಅಳವಡಿಸಿ ಪ್ರಚಾರ ನೀಡಲಾಗಿದೆ.

    ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಆಗಮಿಸುವ ಹಿನ್ನೆಲೆಯಲ್ಲಿ ಪಟ್ಟಣದ ಶೆಟ್ರು ಸಿದ್ಧಪ್ಪ ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಗುರು ಸಿದ್ಧರಾಮೇಶ್ವರ ದೇವಾಲಯ ಸಮಿತಿ, ಗುರು ಸಿದ್ಧರಾಮೇಶ್ವರ ಜಯಂತಿ ಸಮಿತಿ, ಸೊಲ್ಲಾಪುರ ಮತ್ತು ಸುತ್ತಲಿನ ಗ್ರಾಮಸ್ಥರು ಕಾರ್ಯಕ್ರಮದ ಸಿದ್ಧತೆಯಲ್ಲಿ ತೊಡಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts