More

    ವ್ಯಾಪಾರಿ ಮನೆ ಎದುರು ರೈತರ ಪ್ರತಿಭಟನೆ

    ರಾಣೆಬೆನ್ನೂರ: ಮೆಕ್ಕೆಜೋಳ ಖರೀದಿಸಿದ ವ್ಯಾಪಾರಿ ಹಣ ನೀಡಿಲ್ಲ ಎಂದು ಆರೋಪಿಸಿ ಜಿಲ್ಲೆಯ ವಿವಿಧ ಭಾಗದ ರೈತರು ನಗರದ ಹಲಗೇರಿ ರಸ್ತೆಯಲ್ಲಿರುವ ವ್ಯಾಪಾರಿ ಮನೆಯ ಎದುರು ಪೆಂಡಾಲ್ ಹಾಕಿ ಬುಧವಾರ ಪ್ರತಿಭಟನೆ ನಡೆಸಿದರು.

    ಜಿಲ್ಲೆಯ ಹಾವೇರಿ ತಾಲೂಕಿನ ಕಾಟೇನಹಳ್ಳಿ, ಹಳೇರಿತ್ತಿ, ಹನುಮನಹಳ್ಳಿ ಸೇರಿ ವಿವಿಧ ಭಾಗದ ರೈತರು ಕಳೆದ 6 ತಿಂಗಳ ಹಿಂದೆ ತಾವು ಬೆಳೆದ ಮೆಕ್ಕೆಜೋಳ ಬೆಳೆಯನ್ನು ಇಲ್ಲಿಯ ದಲ್ಲಾಳಿಗಳ ಮೂಲಕ ನಗರದ ವ್ಯಾಪಾರಿಗೆ ಮಾರಾಟ ಮಾಡಿದ್ದರು. ಆದರೆ, ದಲ್ಲಾಳಿಗಳು ನಿಮಗೆ ಒಂದು ತಿಂಗಳ ನಂತರ ಹಣ ಸಂದಾಯ ಮಾಡಲಾಗುವುದು ಎಂದವರು ಇಲ್ಲಿಯವರೆಗೂ ಹಣ ನೀಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

    ಸಾಲ ಮಾಡಿಕೊಂಡು ಬೆಳೆ ಬೆಳೆದಿದ್ದೇವೆ. ಈಗ ಸಾಲಗಾರರು ನಮ್ಮ ಮನೆ ಬಾಗಿಲಿಗೆ ಬಂದು ಕುಳಿತುಕೊಂಡಿದ್ದಾರೆ. ನಾವು ಹಣವನ್ನು ಯಾರಲ್ಲಿ ಕೇಳಬೇಕು. ಹಲವು ಬಾರಿ ದಲ್ಲಾಳಿಗಳ ಹತ್ತಿರ ಹಣ ಕೇಳಿದ್ದೇವೆ. ಆದರೆ, ದಲ್ಲಾಳಿಗಳು ನಮಗೆ ವ್ಯಾಪಾರಿ ಹಣ ನೀಡಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗಿದೆ. ಪ್ರತಿಯೊಬ್ಬ ರೈತರಿಗೆ ಲಕ್ಷಾಂತರ ರೂ. ಹಣ ನೀಡಬೇಕಾದ ವ್ಯಾಪಾರಿ ಈಗ ಕಾಣೆಯಾಗಿದ್ದಾರೆ. ನಾವೀಗ ಏನು ಮಾಡಬೇಕು ಎಂದು ತಿಳಿಯದಾಗಿದೆ ಎಂದು ರೈತರು ಗೋಳಿಟ್ಟರು.

    ಸ್ಥಳಕ್ಕೆ ಆಗಮಿಸಿದ ಪೊಲೀಸರೊಂದಿಗೂ ವಾಗ್ವಾದ ನಡೆಸಿದ ರೈತರು, ನಾವು ಬೆಳೆದ ಬೆಳೆಗಳನ್ನು ನೀಡಿ ಮೋಸ ಹೋಗಿದ್ದೇವೆ. ನಮಗೆ ಒಂದು ತಿಂಗಳೊಳಗೆ ಹಣ ನೀಡಲಾಗುವುದು ಎಂದು ನಂಬಿಸಿ ಮೆಕ್ಕೆಜೋಳ ಬೆಳೆ ಖರೀದಿಸಿದ್ದಾರೆ. ನ್ಯಾಯ ಒದಗಿಸಿ ಎಂದು ಪೊಲೀಸರಲ್ಲಿ ರೈತರು ಮನವಿ ಮಾಡಿದರು.

    ರೈತರಾದ ಮುಸ್ತುಸಾಬ ಬೆಳವಿಗಿ, ಚನ್ನವೀರಗೌಡ್ರ ಲಕ್ಕನಗೌಡ್ರ, ಲಕ್ಷ್ಮಣ ಓಲೇಕಾರ, ಮಾಲತೇಶ ಹೊಳೆಯಣ್ಣನವರ, ಮಲ್ಲಪ್ಪ ಅಗಡಿ, ಅಲ್ಲಾಭಕ್ಷಿ ಗಂಜಿಗಟ್ಟಿ, ಯಲ್ಲಪ್ಪ ದೇವಗಿರಿ, ವಿರೂಪಾಕ್ಷಪ್ಪ ಕೋಡಿಹಳ್ಳಿ, ಪಿ.ಎಂ. ಹಳೆಮನಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts