More

    ರೈಲ್ವೆ ಅಂಡರ್‌ಪಾಸ್ ಕಾಮಗಾರಿ ಪೂರ್ಣ

    ಹೊಸದುರ್ಗ: ಎಂಟು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಭದ್ರಾ ಕಾಲುವೆಯ ರೈಲ್ವೆ ಅಂಡರ್‌ಪಾಸ್ ಕಾಮಗಾರಿ ಪೂರ್ಣಗೊಂಡಿದ್ದು, ಬಯಲು ಸೀಮೆಯ ರೈತರಿಗೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ ಹೇಳಿದರು.

    ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಬಳಿಯ ರೈಲ್ವೆ ಅಂಡರ್ ಪಾಸ್ ಕಾಮಗಾರಿ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು.

    ಸಂಸದ ನಾರಾಯಣಸ್ವಾಮಿ ಅವರು ಬೆಳಗಾವಿಗೆ ಬಂದು ಕಾಮಗಾರಿ ಸ್ಥಗಿತಗೊಂಡಿರುವ ಬಗೆ ತಿಳಿಸಿದ್ದರು. ಅಂದು ತಕ್ಷಣ ವಿಭಾಗೀಯ ಮುಖ್ಯಸ್ಥ ಎ.ಕೆ.ಸಿಂಗ್‌ಗೆ ಕಾಲುವೆಯ ಟನಲ್ ನಿರ್ಮಾಣ ಕಾಮಗಾರಿಗೆ ಅಗತ್ಯವಾದ ವ್ಯವಸ್ಥೆ ಮಾಡುವಂತೆ ಆದೇಶ ನೀಡಿದೆ. ಅದರಂತೆ ಬದಲಿ ರೈಲು ಮಾರ್ಗ ನಿರ್ಮಾಣ ಮಾಡಿ ಟನಲ್ ಕಾಮಗಾರಿ ಆರಂಭಿಸಲಾಗಿತ್ತು. 31 ದಿನದಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸ್ಥಳೀಯ ರೈತರಿಗೆ ರೈಲ್ವೆ ಅಂಡರ್ ಪಾಸ್‌ಗಳು ಸಮಸ್ಯೆಯಾಗಿವೆ ಎನ್ನುವ ದೂರುಗಳಿವೆ. ಇಂತಹ ಸಮಸ್ಯೆ ದೇಶಾದ್ಯಂತವಿದೆ. ಸಮಸ್ಯೆ ನಿವಾರಣೆಗೆ ಅಧ್ಯಯನ ನಡೆಸಲಾಗುತ್ತಿದೆ. ರೈತರಿಗೆ ಸಮಸ್ಯೆಯಾಗದಂತೆ ರೈಲ್ವೆ ಅಂಡರ್‌ಪಾಸ್‌ಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.

    ಸಂಸದ ನಾರಾಯಣಸ್ವಾಮಿ ಮಾತನಾಡಿ, ನಾನು ರಾಜಕಾರಣಿಯಲ್ಲ, ಬದಲಾಗಿ ಸಮಾಜ ಸೇವಕ. ಜನರು ನನಗೆ ಅಧಿಕಾರ ನೀಡಿದ್ದಾರೆ. ಅವರ ಸೇವೆ ಮಾಡುವುದು ನನ್ನ ಕರ್ತವ್ಯ ಎಂದು ತಿಳಿಸಿದರು.

    ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕೆ ಇನ್ನೂ ಹಲವು ಅಡೆತಡೆಗಳಿವೆ. ಅಂದಾಜು 70 ಕಿಮೀ ಗೂ ಹೆಚ್ಚು ದೂರ ಕಾಲುವೆ ನಿರ್ಮಾಣಕ್ಕೆ ಭೂಮಿಯ ಸ್ವಾಧೀನ ಆಗಬೇಕಾಗಿದೆ. ಮುಂದಿನ ಎರಡು ವರ್ಷದಲ್ಲಿ ಯೋಜನೆಯನ್ನು ಪೂರ್ಣಗೊಳಿಸಿ ಜಿಲ್ಲೆಯ 400ಕ್ಕೂ ಹೆಚ್ಚು ಕೆರೆಗಳಿಗೆ ನೀರು ತುಂಬಿಸುವ ವಿಶ್ವಾಸವಿದೆ ಎಂದರು.

    ಸಂಸದ ಜಿ.ಎಂ.ಸಿದ್ದೇಶ್ವರ್, ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಎ.ಕೆ.ಸಿಂಗ್, ಮೈಸೂರು ವಿಭಾಗದ ಡಿಆರ್‌ಎಂ ಅಪರ್ಣಾ ಗರ್ಗ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಕೆ.ಎಸ್.ನವೀನ್ ಮತ್ತಿತರರಿದ್ದರು.

    ನೇರ ರೈಲು ಮಾರ್ಗ ಪ್ರಕ್ರಿಯೆ ಪ್ರಗತಿ: ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗದ ನಿರ್ಮಾಣ ಪ್ರಕ್ರಿಯೆ ಪ್ರಗತಿಯಲ್ಲಿದೆ. ಭೂಮಿ ಸ್ವಾಧೀನ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, 49 ಕೋಟಿ ಹಣವನ್ನು ಯೋಜನೆಗಾಗಿ ಖರ್ಚು ಮಾಡಲಾಗಿದೆ. ರಾಜ್ಯ ಸರ್ಕಾರ ಎಷ್ಟು ಬೇಗ ಭೂಮಿ ಒದಗಿಸುತ್ತದ್ದೊ ಅಷ್ಟು ಬೇಗ ಕಾಮಗಾರಿ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts