More

    ಕ್ಲೇಮ್ ತಿರಸ್ಕರಿಸಿದ ವಾಣಿಜ್ಯ ವಿಮಾ ಕಂಪನಿಗೆ ದಂಡ

    ಧಾರವಾಡ: ವಿಮೆ ಕ್ಲೇಮ್ ತಿರಸ್ಕರಿಸಿದ ಕೆನರಾ ಎಚ್‌ಎಸ್‌ಬಿಸಿ ವಾಣಿಜ್ಯ ವಿಮಾ ಕಂಪನಿಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
    ತಾಲೂಕಿನ ಮುಗಳಿ ಗ್ರಾಮದ ವಿಜಯಲಕ್ಷ್ಮೀ ಪಾಟೀಲ ಮತ್ತು ಪತಿ ಸಾವಂತ ಪಾಟೀಲ ಎಂಬುವರು ಇಲ್ಲಿನ ಗಾಂಧಿನಗರದ ಓರಿಯಂಟಲ್ ವಾಣಿಜ್ಯ ಬ್ಯಾಂಕ್‌ನಲ್ಲಿ ಜಂಟಿ ಉಳಿತಾಯ ಖಾತೆ ಹೊಂದಿದ್ದರು. ಅದು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ ವಿಲೀನವಾಯಿತು. ದೂರುದಾರರು ಈ ಬ್ಯಾಂಕ್‌ನಿಂದ 16,60,000 ರೂ. ಗೃಹಸಾಲ ಪಡೆದಿದ್ದರು. ಅದಕ್ಕೆ ಕೆನರಾ ಎಚ್‌ಎಸ್‌ಬಿಸಿ ವಾಣಿಜ್ಯ ವಿಮಾ ಕಂಪನಿಯಿಂದ 8 ಲಕ್ಷ ರೂ. ವಿಮೆ ಮಾಡಿಸಿದ್ದರು. 2021ರ ಜ. 20ರಂದು ವಿಜಯಲಕ್ಷ್ಮೀ ಪತಿ ಸಾವಂತ ಪಾಟೀಲ ಹೃದಯಾಘಾತದಿಂದ ಮೃತಪಟ್ಟಿದ್ದರು. ನಂತರ ವಿಜಯಲಕ್ಷ್ಮೀ ಬ್ಯಾಂಕ್‌ನಲ್ಲಿ ವಿಮಾ ಮೊತ್ತಕ್ಕಾಗಿ ಕ್ಲೇಮ್ ಅರ್ಜಿ ಸಲ್ಲಿಸಿದ್ದರು. ಆದರೆ, ಸಾವಂತ ಪಾಟೀಲ ನಿಧನಕ್ಕೂ ಮೊದಲು 8 ವರ್ಷದಿಂದ ಸಕ್ಕರ ಕಾಯಿಲೆ ಮತ್ತು ಅಧಿಕ ರಕ್ತದೊತ್ತಡದಿದ ಬಳಲುತ್ತಿದ್ದ ಸಂಗತಿಯನ್ನು ವಿಮೆ ಪಡೆಯುವಾಗ ಬಚ್ಚಿಟ್ಟಿದ್ದರು ಎಂಬ ಕಾರಣವೊಡ್ಡಿ ವಿಮಾ ಕಂಪನಿ ಕ್ಲೇಮ್ ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ವಿಜಯಲಕ್ಷ್ಮೀ ಕೆನರಾ ಎಚ್‌ಎಸ್‌ಬಿಸಿ ಓರಿಯಂಟಲ್ ವಾಣಿಜ್ಯ ವಿಮಾ ಸಂಸ್ಥೆ ವಿರುದ್ಧ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
    ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು, ಒಪ್ಪಂದದಂತೆ ವಿಮೆದಾರ ನಿಧನದ ನಂತರ ವಿಮಾ ಮೊತ್ತವನ್ನು ನಾಮನಿರ್ದೇಶಿತರು, ಅವಲಂಬಿತರಿಗೆ ಕೊಡುವುದು ಕರ್ತವ್ಯ. ಕಾಯಿಲೆಗಳ ಆಧಾರದಲ್ಲಿ ಕ್ಲೇಮ್ ತಿರಸ್ಕರಿಸಿರುವುದು ಕಾನೂನುಬದ್ಧವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಒಂದು ತಿಂಗಳೊಳಗಾಗಿ ವಿಮಾ ಹಣ 7,71,185 ರೂಪಾಯಿ ಮತ್ತು ಕ್ಲೇಮ್ ತಿರಸ್ಕರಿಸಿದ ದಿನಾಂಕದಿಂದ ಶೇ. 8 ಬಡ್ಡದರದಂತೆ ದೂರುದಾರರಿಗೆ ಕೊಡಬೇಕು. ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ 50,000 ರೂ. ಪರಿಹಾರ ಹಾಗೂ ಪ್ರಕರಣದ ವೆಚ್ಚ 10,000 ರೂ. ನೀಡಬೇಕು ಎಂದು ವಿಮಾ ಸಂಸ್ಥೆಗೆ ನಿರ್ದೇಶಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts