More

    Paytm ಷೇರು 3 ದಿನಗಳಲ್ಲಿ 41% ಕುಸಿತ: ಮುಖೇಶ ಅಂಬಾನಿ ಕಣ್ಣುಬಿದ್ದ ತಕ್ಷಣವೇ Jio ಫೈನಾನ್ಷಿಯಲ್ ಷೇರು ಒಂದೇ ದಿನದಲ್ಲಿ 14% ಏರಿಕೆ, ಏನಿದು ಲೆಕ್ಕಾಚಾರ?

    ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) Paytm ಪಾವತಿಗಳ ಬ್ಯಾಂಕ್ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಿದ ಹಿನ್ನೆಲೆಯಲ್ಲಿ Paytm ನ ಮೂಲ ಕಂಪನಿ One 97 ಕಮ್ಯುನಿಕೇಷನ್ಸ್ ಷೇರುಗಳು ನಿರಂತರವಾಗಿ ಕುಸಿತ ಕಾಣುತ್ತಿವೆ.

    ಸತತ ಮೂರನೇ ವಹಿವಾಟಿನ ದಿನದಂದು ಕೂಡ ಈ ಷೇರುಗಳು ಲೋವರ್​ ಸರ್ಕ್ಯೂಟ್​ ಹಿಟ್​ ಆಗಿವೆ. ಕಳೆದ ಗುರುವಾರ ಹಾಗೂ ಶುಕ್ರವಾರ ಶೇಕಡಾ 20ರ ಲೋವರ್​ ಸರ್ಕ್ಯೂಟ್​ ತಲುಪಿದ್ದ ಈ ಷೇರುಗಳು ಸೋಮವಾರ (ಫೆ. 5) ಕೂಡ ಶೇ. 10 ಲೋವರ್​ ಸರ್ಕ್ಯೂಟ್ ತಲುಪಿದವು. ಈ ಮೂಲಕ ಸತತ ಮೂರು ವಹಿವಾಟಿನ ದಿನಗಳಲ್ಲಿ ಶೇ. 42ರಷ್ಟು ಕುಸಿತವನ್ನು ಈ ಷೇರುಗಳು ಕಂಡಿವೆ.

    ಈಗ Paytm ಪೇಮೆಂಟ್ಸ್ ಬ್ಯಾಂಕ್‌ನ ಪರವಾನಗಿ ಕೂಡ ಅಪಾಯದಲ್ಲಿದೆ. ಏತನ್ಮಧ್ಯೆ, One 97 Communications ಅಂದರೆ Paytm ತನ್ನ ವ್ಯಾಲೆಟ್ ವ್ಯವಹಾರವನ್ನು ಮಾರಾಟ ಮಾಡಲು ಮುಖೇಶ್ ಅಂಬಾನಿ ಜತೆ ಮಾತನಾಡುತ್ತಿದೆ ಎಂಬ ಸುದ್ದಿ ಇದೆ. ಮುಖೇಶ್ ಅಂಬಾನಿಯವರ ಕಂಪನಿ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಪೇಟಿಎಂ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.

    ಈ ಹಿನ್ನೆಲೆಯಲ್ಲಿ ಸೋಮವಾರ ಫೆ. 5ರಂದು ಬಿಎಸ್‌ಇಯಲ್ಲಿ ಜಿಯೋ ಫೈನಾನ್ಷಿಯಲ್ ಸರ್ವಿಸಸ್‌ನ ಷೇರುಗಳು 14% ಏರಿಕೆಯಾಗಿ 289.70 ರೂ.ಗೆ ತಲುಪಿದವು. ಇದು ಈ ಷೇರುಗಳ ಸಾರ್ವಕಾಲಿಕ ಗರಿಷ್ಠ ಮಟ್ಟವೂ ಆಗಿದೆ.

    ಕಳೆದ ವರ್ಷ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಅನ್ನು ರಿಲಯನ್ಸ್ ಇಂಡಸ್ಟ್ರೀಸ್‌ನೊಂದಿಗೆ ವಿಲೀನಗೊಳಿಸಲಾಗಿದೆ. ಇದರ ನಂತರ, ಆಗಸ್ಟ್ 2023 ರಲ್ಲಿ, ಜಿಯೋ ಹಣಕಾಸು ಸೇವೆಗಳು ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್ ಇತ್ತು. ಹಲವಾರು ತಿಂಗಳುಗಳ ಕಾಲ ಒತ್ತಡದಲ್ಲಿದ್ದ ನಂತರ, ಈ ಸ್ಟಾಕ್ ಈಗ ತ್ವರಿತ ಗತಿಯಲ್ಲಿ ಬೆಳೆದಿದೆ.

    ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಅವರ ತಂಡವು ಕಳೆದ ವರ್ಷ ನವೆಂಬರ್​ನಿಂದಲೇ ಜಿಯೋ ಫೈನಾನ್ಶಿಯಲ್‌ನೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.

    ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲೆ ಆರ್‌ಬಿಐ ನಿರ್ಬಂಧ ಹೇರುವ ಮುನ್ನವೇ ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ ಮಾತುಕತೆ ಆರಂಭವಾಗಿದೆ. Paytm ಬೇಲ್‌ಔಟ್‌ನ (ದಿವಾಳಿಯಾಗುವುದನ್ನು ತಪ್ಪಿಸುವ ನೆರವು) ಭಾಗವಾಗಿ Payments Bank ಅನ್ನು ಸ್ವಾಧೀನಪಡಿಸಿಕೊಳ್ಳಲು ಜಿಯೋ ಫೈನಾನ್ಶಿಯಲ್ ಮುಂದಾಗುವ ಸಾಧ್ಯತೆ ಇದೆ.

    ಪೇಟಿಎಂ ಪೇಮೆಂಟ್ಸ್ ಬ್ಯಾಂಕ್​ನಲ್ಲಿ ಗ್ರಾಹಕರ ಖಾತೆಗಳಲ್ಲಿ ಯಾವುದೇ ಠೇವಣಿ ಅಥವಾ ಕ್ರೆಡಿಟ್ ಅನ್ನು ಸ್ವೀಕರಿಸುವುದನ್ನು ಆರ್‌ಬಿಐ ನಿಷೇಧಿಸಿದೆ. ಹೀಗಾಗಿ, ಈಗ Paytm ಅಸ್ತಿತ್ವವೇ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆರ್​ಬಿಐ ಬ್ಯಾಂಕಿಂಗ್ ಪರವಾನಗಿಯನ್ನು ರದ್ದುಗೊಳಿಸುವುದರ ಜತೆಗೆ Paytm ನಲ್ಲಿ ನಡೆದಿರಬಹುದಾಗ ಮನಿ ಲಾಂಡರಿಂಗ್ (ಹಣ ಅಕ್ರಮ ವಗಾರ್ವಣೆ) ಕುರಿತು ಪರಿಶೀಲಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಕೆವೈಸಿ ಉಲ್ಲಂಘನೆಗಳ ಕಾರಣದಿಂದಾಗಿ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಇದಲ್ಲದೆ, 1,000 ಕ್ಕೂ ಹೆಚ್ಚು ಬಳಕೆದಾರರು ತಮ್ಮ ಖಾತೆಗಳಿಗೆ ಒಂದೇ ಪರ್ಮನೆಂಟ್​ ಅಕೌಂಟ್​ ನಂಬರ್​ (PAN) ಅನ್ನು ಲಿಂಕ್ ಮಾಡಿರುವುದು RBI ತನಿಖೆಯಲ್ಲಿ ಕಂಡುಬಂದಿದೆ. ಕೆಲವು ಖಾತೆಗಳನ್ನು ಮನಿ ಲಾಂಡರಿಂಗ್‌ಗೆ ಬಳಸಿಕೊಂಡಿರಬಹುದು ಎಂದು ಆರ್‌ಬಿಐ ಕಳವಳ ವ್ಯಕ್ತಪಡಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts