More

    ಪಾವಗಡ ನಾಗಲಮಡಿಕೆ ಡ್ಯಾಂ ಭರ್ತಿ

    ಪಾವಗಡ : ಆಂಧ್ರದ ಹಂದ್ರಿ-ನೀವಾ ಸುಜಲಾ ಶ್ರವಂತಿ ಯೋಜನೆಯಲ್ಲಿ ತಾಲೂಕಿನ ನಾಗಲಮಡಿಕೆ ಡ್ಯಾಂ ತುಂಬಿ ಹರಿದಿದ್ದು, ಹೋಬಳಿಯ ಸುತ್ತಮುತ್ತಲಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

    ಆಂಧ್ರದ ಶ್ರೀಶೈಲಂ ಜಲಾಶಯದಿಂದ ಕೃಷ್ಣಾ ನದಿ ನೀರನ್ನು ಪೇರೂರು ಡ್ಯಾಂಗೆ ಹರಿಸುವ ಉದ್ದೇಶದಿಂದ ಈ ಹಿಂದಿನ ಟಿಡಿಪಿ ಸರ್ಕಾರ 900 ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 569 ಕಿ.ಮೀ.ಉದ್ದದ ಕಾಲುವೆ ನೀರಾವರಿ ಯೋಜನೆಗೆ ಟೆಂಡರ್ ಕರೆದಿತ್ತು. ನಂತರ ವೈಎಸ್‌ಆರ್ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ರಾಪ್ತಾಡು ಶಾಸಕ ತೋಪುದುರ‌್ತಿ ಪ್ರಕಾಶ್‌ರೆಡ್ಡಿ ಈ ಯೋಜನೆಯನ್ನು ನಾಗಲಮಡಿಕೆಯ ಉತ್ತರಪಿನಾಕಿನಿ ಹಳ್ಳದ ಮೂಲಕ ಪೇರೂರು ಡ್ಯಾಂಗೆ ನೀರು ಹರಿಸಲು ನೀಲಿನಕ್ಷೆ ತಯಾರಿಸಿದ್ದರು.

    ಇದೀಗ ಕಾಮಗಾರಿ ಪೂರ್ಣಗೊಂಡು ಯೋಜನೆಯಲ್ಲಿ ಪಿನಾಕಿನಿ ಹಳ್ಳದ ಮೂಲಕ 20 ಕಿ.ಮೀ.ದೂರದಲ್ಲಿರುವ ಪೇರೂರು ಡ್ಯಾಂಗೆ 0.5 ಟಿಎಂಸಿ ನೀರು ಹರಿಸಿರುವುದರಿಂದ ನಾಗಲಮಡಿಕೆ ಡ್ಯಾಂ ತುಂಬಿದೆ. ಇದರಿಂದ ಸುತ್ತಮುತ್ತಲಿನ 20 ಗ್ರಾಮಗಳಿಗೆ ಉಪಯೋಗವಾಗಲಿದ್ದು, ಅಂತರ್ಜಲ ಹೆಚ್ಚಾಗಲು ಅನುಕೂಲವಾಗಿದೆ. ನಾಗಲಮಡಿಕೆ ಡ್ಯಾಂಗೆ ನೀರು ಹರಿಸಿದ ಆಂಧ್ರದ ಸಿಎಂ ಜಗನ್‌ಮೋಹನ್‌ರೆಡ್ಡಿ ಮತ್ತು ಈ ಯೋಜನೆಗೆ ಶ್ರಮಿಸಿದ ತೋಪುದುರ‌್ತಿ ಪ್ರಕಾಶ್‌ರೆಡ್ಡಿ, ಸಿಎಂ ಬಿ.ಎಸ್.ಯಡಿಯೂರಪ್ಪ, ಸಂಸದ ಎ.ನಾರಾಯಣಸ್ವಾಮಿ, ಶಾಸಕ ವೆಂಕಟರವಣಪ್ಪ ಅವರ ಕಾರ್ಯಕ್ಕೆ ನಾಗಲಮಡಿಕೆ ಗ್ರಾಮದ ಸುತ್ತಮುತ್ತಲಿನ ರೈತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಾವಗಡಕ್ಕೆ ಕುಡಿಯುವ ನೀರು ಹರಿಸಲು ಸಿದ್ಧತೆ: 2005ರಲ್ಲಿ ಶಾಸಕರಾಗಿದ್ದ ಹಾಲಿ ಶಾಸಕ ವೆಂಕಟರವಣಪ್ಪ, 16 ಕೋಟಿ ರೂ. ವೆಚ್ಚದಲ್ಲಿ ಉತ್ತರಪಿನಾಕಿನಿ ಹಳ್ಳ ಹರಿಯುವ ನಾಗಲಮಡಿಕೆ ಡ್ಯಾಂಗೆ ತಡೆಗೋಡೆ ನಿರ್ಮಿಸಿ, ಎರಡು ಬೃಹತ್ ಇಂಗುಗುಂಡಿಗಳ ಟ್ಯಾಂಕ್‌ಗಳು ಹಾಗೂ ಪಂಪ್ ಹೌಸ್ ನಿರ್ಮಿಸಿ, ಸುವಾರು 14 ಕಿ.ಮೀ ದೂರದ ಪಾವಗಡಕ್ಕೆ ಪೈಪ್‌ಲೈನ್ ಮೂಲಕ ನೀರು ಹರಿಸಲು ಶ್ರಮಿಸಿದ್ದರು. ಆದರೆ, ಸಕಾಲಕ್ಕೆ ಮಳೆ ಇಲ್ಲದೆ ಡ್ಯಾಂ ಬತ್ತಿತ್ತು. ಈಗ ಡ್ಯಾಂ ತುಂಬಿರುವುದರಿಂದ ಪಟ್ಟಣಕ್ಕೆ ಕುಡಿಯುವ ನೀರು ಹರಿಸಲು ಪುರಸಭೆ ಸಿದ್ಧತೆ ಕೈಗೊಂಡಿದೆ.

    ನಾಗಲಮಡಿಕೆ ಡ್ಯಾಂಗೆ ನೀರು ಹರಿಯಲು ಆಂಧ್ರ ಸರ್ಕಾರದ ಮನವಿ ಮೇರೆಗೆ ಯಡಿಯೂರಪ್ಪ ತಕ್ಷಣ ಸ್ಪಂದಿಸಿ ಒಪ್ಪಿಗೆ ನೀಡಿದ್ದರು. ಈ ಯೋಜನೆಯಿಂದ ರೈತರ ಜೀವನ ಬದಲಾವಣೆಯಾಗಲಿದೆ ಮತ್ತು ಪಾವಗಡಕ್ಕೆ ನೀರು ಹರಿಸಬಹುದಾಗಿದೆ.
    ಎ.ನಾರಾಯಣಸ್ವಾಮಿ ಸಂಸದರು ಚಿತ್ರದುರ್ಗ

    ನಾಗಲಮಡಿಕೆ ಡ್ಯಾಂ ತುಂಬಿದ್ದು, ಪಾವಗಡ ಪಟ್ಟಣಕ್ಕೆ ನೀರು ಹರಿಸುವ ಸಲುವಾಗಿ ಪೈಪ್‌ಲೈನ್ ದುರಸ್ತಿ ವಾಡಿಸಲು ಪುರಸಭೆ ನಿಧಿಯಿಂದ ಸುವಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ಸಕಲ ಸಿದ್ಧತೆ ವಾಡಿಕೊಳ್ಳಲಾಗುತ್ತಿದೆ.
    ಜಿ.ನವೀನ್‌ಚಂದ್ರ ಮುಖ್ಯಾಧಿಕಾರಿ ಪಾವಗಡ ಪುರಸಭೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts