ಇಷ್ಟಾರ್ಥ ಈಡೇರಿಸುವ ಪಟ್ಲದಮ್ಮದೇವಿ

3 Min Read
ಇಷ್ಟಾರ್ಥ ಈಡೇರಿಸುವ ಪಟ್ಲದಮ್ಮದೇವಿ
ಪಟ್ಲದಮ್ಮ ದೇವಾಲಯದ ಹೊರ ನೋಟ.

ಗೋಣಿಕೊಪ್ಪ: ಪಟ್ಟಣದ ಹೃದಯ ಭಾಗದಲ್ಲಿ ನೆಲೆ ನಿಂತು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಮೂಲಕ ಪಟ್ಲದಮ್ಮ ದೇವಿ ಮನೆ ಮಾತಾಗಿದ್ದಾಳೆ.

ಪಟ್ಟಣದ ಮಾರುಕಟ್ಟೆಯ ಹಿಂಬದಿ ಇರುವ ಪೌರ ಕಾರ್ಮಿಕರ ಕಾಲನಿಗೆ ಹೊಂದಿಕೊಂಡಂತೆ ಈ ದೇವಾಲಯವಿದೆ. ಈಕೆ ಇಲ್ಲಿ ನೆಲೆಸಿರುವ ಪೌರಕಾರ್ಮಿಕರ ಆರಾಧ್ಯ ದೈವ. ಹಾಗಾಗಿ ದೇವಾಲಯದ ಉಸ್ತುವಾರಿಯನ್ನು ಪೌರಕಾರ್ಮಿಕರೇ ನೋಡಿಕೊಳ್ಳುತ್ತಿದ್ದಾರೆ.

ಅನಾದಿ ಕಾಲದಿಂದಲೂ ಇಲ್ಲಿ ದೇವಿ ನೆಲೆಸಿದ್ದಾಳೆ. ಪಟ್ಲದಮ್ಮ ಎಂದರೆ ದೇವಿ ಪಾರ್ವತಿಯ ಅವತಾರ. 40 ವರ್ಷಗಳಿಂದ ಒಂದು ಕಲ್ಲಿಗೆ ಪೂಜೆ ಸಲ್ಲಿಸಲಾಗುತ್ತಿತ್ತು. 2023 ರಲ್ಲಿ ಜೀರ್ಣೋದ್ಧಾರ ಸಮಿತಿ ರಚಿಸಿ ದಾನಿಗಳ ಸಹಾಯದಿಂದ ನೂತನ ದೇವಾಲಯವನ್ನು ನಿರ್ಮಿಸುವ ಕಾರ್ಯ ಕೈಗೊಳ್ಳಲಾಯಿತು. 2024ರಲ್ಲಿ ದೇವಾಲಯ ಕಾರ್ಯ ಪೂರ್ಣಗೊಂಡ ನಂತರ ಅದ್ದೂರಿಯಾಗಿ ಉತ್ಸವ ಮಾಡಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಈಗಾಗಲೇ ದೇವಿಗೆ 3 ಕುಂಭಾಭಿಷೇಕ ನಡೆದಿದ್ದು, ಇನ್ನೂ ಒಂದು ಕುಂಭಾಭಿಷೇಕ ಬಾಕಿ ಇದೆ.

ಈ ದೇವಿಯ ಗುಡಿ ಮುಂದೆ ಮುನೇಶ್ವರ ದೇವರ ದೇವಾಲಯವಿದೆ. ಕಲ್ಲಿನ ರೂಪದಲ್ಲಿರುವ ಮುನೇಶ್ವರ ಸ್ವಾಮಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಮುನೇಶ್ವರ ಬಲಿಯನ್ನು ಬಯಸುವ ದೇವರಾಗಿದ್ದರೂ ಸದ್ಯಕ್ಕೆ ಇಲ್ಲಿ ಬಲಿ ನೀಡುತ್ತಿಲ್ಲ. ದೇವಿಯ ಗುಡಿ ಮುಂದೆ ದೇವಿಯ ವಾಹನ ಸಿಂಹದ ಮೂರ್ತಿ ದೇವಾಲಯಕ್ಕೆ ಮುಖ ಮಾಡಿದ ಭಂಗಿಯಲ್ಲಿ ಕುಳಿತಿದೆ. ದೇವಿ ಬಳಿ ಹರಕೆ ಹೇಳಿಕೊಂಡರೆ ಈಡೇರುತ್ತದೆ ಎಂಬ ಪ್ರತೀತಿ ಹಿಂದಿನಿಂದಲೂ ಇದೆ.

ಪೌರಕಾರ್ಮಿಕರ ಆರಾಧ್ಯ ದೈವವಾಗಿರುವ ದೇವಿಗೆ ಅನೇಕ ಜನರು ಬಂದು ಪೂಜೆ ಸಲ್ಲಿಸುವುದು ಹಿಂದಿನಿಂದಲೂ ನಡೆದು ಬಂದಿದೆ. ಎಷ್ಟೋ ಜನರು ತಮ್ಮ ಕಷ್ಟದ ಸಂದರ್ಭದಲ್ಲಿ ದೇವಿಗೆ ಹರಕೆ ಹೇಳಿಕೊಂಡು ಈಡೇರಿದ ಉದಾಹರಣೆಗಳೂ ಇವೆ.

ಹಿನ್ನೆಲೆ: ಪಟ್ಲದಮ್ಮ ಆದಿ ದ್ರಾವಿಡರ ಆರಾಧ್ಯ ದೇವಿ. ಸುಮಾರು 40 ವರ್ಷದ ಹಿಂದೆ ಇಲ್ಲಿಗೆ ಬಂದ ಪೌರ ಕಾರ್ಮಿಕರು ತಮ್ಮ ಕಾಲನಿ ಪಕ್ಕದಲ್ಲಿಯೇ ಕಲ್ಲೊಂದನ್ನು ಪ್ರತಿಷ್ಠಾಪಿಸಿ ಅದಕ್ಕೆ ಪೂಜೆ ಸಲ್ಲಿಸಲು ಆರಂಭಿಸಿದರು. ದಿನ ಕಳೆದಂತೆ ಅಲ್ಲಿನ ಜನರಿಗೆ ಕಷ್ಟಗಳು ಕಾಣಿಸಿಕೊಂಡಾಗ ಜ್ಯೋತಿಷಿಗಳ ಮೊರೆ ಹೋದರು. ಆಗ ದೇವರ ಕೋಪ ಇರುವುದು ತಿಳಿಯಿತು. ಕೂಡಲೇ ಕಾರ್ಯಪ್ರವೃತ್ತರಾದ ಇಲ್ಲಿನ ನಿವಾಸಿಗಳು ನೂತನ ದೇವಾಲಯದ ನಿರ್ಮಾಣಕ್ಕೆ ಮುಂದಾದರು. ಅಂದಿನಿಂದ ಇಂದಿನವರೆಗೂ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಕಾರ್ಯ ನಡೆಯುತ್ತಿದೆ. ಅಲ್ಲದೆ ಹಲವಾರು ವರ್ಷಗಳಿಂದ ಇಲ್ಲಿನ ಜನರಿಗೆ ನಾನಾ ಕಷ್ಟಗಳು ಗೋಚರಿಸುತ್ತಿದ್ದು, ಪ್ರಶ್ನೆ ಇಟ್ಟು ನೋಡಿದಾಗ ದೇವಿಯ ಶಾಪ ಇರುವುದು ತಿಳಿಯಿತು.

See also  ಕುಮಾರಳ್ಳಿ ಸುಗ್ಗಿ ಉತ್ಸವ ಸಂಪನ್ನ

ದೇವಿಗೆ ನೆಲೆ ಕಲ್ಪಿಸಿದರೆ ಪರಿಹಾರ ಸಿಗುತ್ತದೆ ಎಂದು ಅರಿತ ಇಲ್ಲಿನ ನಿವಾಸಿಗಳು ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾದರು. ದೇವಾಲಯದಲ್ಲಿ ದೇವರಿಗೆ ನಿತ್ಯ ಮುಂಜಾನೆ ಮತ್ತು ಸಂಜೆ ಪೂಜೆ ನೆರವೇರುತ್ತದೆ. ಇದರೊಂದಿಗೆ ಹಬ್ಬದ ದಿನಗಳಲ್ಲಿ ವಿಶೇಷ ಪೂಜೆ ಇರುತ್ತದೆ. ಪೌರಕಾರ್ಮಿಕರ ಊರ ಯಜಮಾನರಾಗಿರುವ ಗಣೇಶ್, ಅರುಣ್ಕುಮಾರ್ ಪೂಜೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ನನೆಗುದಿಗೆ ಬಿದ್ದಿದ್ದ ದೇವಾಲಯವನ್ನು ಜೀರ್ಣೋದ್ಧಾರ ಮಾಡಬೇಕೆಂದು ಹೊರಟಾಗ ಅನೇಕ ದಾನಿಗಳು ಸಹಾಯ ಮಾಡಿದ ಪರಿಣಾಮ ಇಂದು ದೇವಿಯ ಉತ್ತಮ ದೇವಾಲಯ ನಿರ್ಮಾಣವಾಗಿದೆ. ಈಗಿನ ಶಾಸಕ ಪೊನ್ನಣ್ಣ ಅವರು ಚುನಾವಣಾ ಪೂರ್ವದಲ್ಲೇ ದೇವಾಲಯಕ್ಕೆ ಅನುದಾನ ನೀಡಿದ್ದಾರೆ. ಸಿ.ಕೆ.ಬೋಪಣ್ಣ ವಿಗ್ರಹವನ್ನು ಮಾಡಿಸಿ ಕೊಟ್ಟಿದ್ದಾರೆ. ಗೋಪುರ ನಿರ್ಮಾಣಕ್ಕೆ ಮೀನುಂಬೈ, ಕೇಶವ ಕಾಮತ್ ಮತ್ತು ಗ್ರೂಪ್‌ನಿಂದ ಗೇಟ್ ನಿರ್ಮಾಣ, ಸಿಯಾಬ್ ಅವರಿಂದ ಗ್ರಿಲ್ಸ್ ಕೊಡುಗೆ, ಸಮಾಜ ಸೇವಕ ರಫೀಕ್ ಟೈಲ್ಸ್ಗೆ ಸಹಾಯ ಹಸ್ತ ಚಾಚಿದ್ದಾರೆ. ಹೀಗೆ ದಾನಿಗಳ ನೆರವಿನಿಂದ ಶಕ್ತಿದೇವಿಯ ನೆಲೆ ಭದ್ರವಾಗಿದೆ. ಸಣ್ಣದಾದ ಆವರಣದಲ್ಲಿ ದೇವಿಯಿದ್ದರೂ ಇದರ ಕೀರ್ತಿ ಅಪಾರವಾಗಿದೆ.

ಮಾರ್ಗ: ಗೋಣಿಕೊಪ್ಪ ಪಟ್ಟಣಕ್ಕೆ ಬಂದರೆ ಅಲ್ಲಿಂದ ಬಸ್ ನಿಲ್ದಾಣಕ್ಕ ತೆರಳಬೇಕು. ನಿಲ್ದಾಣದ ಹಿಂದಿನ ರಸ್ತೆಯಲ್ಲಿ 100 ಮೀಟರ್ ಸಾಗಿದರೆ ಪಟ್ಲದಮ್ಮ ದೇವಾಲಯ ಸಿಗುತ್ತದೆ. ದೇವಾಲಯಕ್ಕೆ ಎಲ್ಲ ರೀತಿಯ ವಾಹನಗಳಲ್ಲೂ ಬರಬಹುದಾಗಿದೆ.

ಸುಮಾರು 40 ವರ್ಷಗಳಿಂದ ಇಲ್ಲಿ ನೆಲೆಸಿದ್ದೇವೆ. ಅಂದಿನಿಂದಲೂ ನಾವು ದೇವಿಯನ್ನು ಆರಾಧಿಸುತ್ತಿದ್ದೇವೆ. ಇಂದಿಗೂ ತಾಯಿ ನಮ್ಮನ್ನು ಕೈ ಬಿಟ್ಟಿಲ್ಲ. ಅನೇಕ ಭಕ್ತರು ಇಲ್ಲಿಗೆ ಭೇಟಿ ನೀಡಿ ಕಷ್ಟ ಪರಿಹರಿಸುವಂತೆ ದೇವಿಯನ್ನು ಬೇಡಿಕೊಂಡು ಹೋಗುತ್ತಾರೆ. ಎಲ್ಲರ ಇಷ್ಟಾರ್ಥಗಳನ್ನು ದೇವಿ ಈಡೇರಿಸುತ್ತಾಳೆ. ನಿತ್ಯ ಪೂಜೆ ಇದ್ದು, ಹಬ್ಬದಂದು ವಿಶೇಷ ಪೂಜೆ ಇರುತ್ತದೆ. ಕೆಲಸಕ್ಕೆ ಹೋಗುವ ಮೊದಲು ಮತ್ತು ಬಂದ ನಂತರ ದೇವಿಯ ಪೂಜೆಯಲ್ಲಿ ತೊಡಗಿಸಿಕೊಳ್ಳುತ್ತೇನೆ.
ಗಣೇಶ್ ಪೂಜಾರಿ, ಪಟ್ಲದಮ್ಮ ದೇವಿ ದೇವಾಲಯ

See also  ಶ್ರೀ ಲಕ್ಕಪ್ಪಸ್ವಾಮೀಜಿ ಇತರರಿಗೆ ಮಾದರಿ

ಇಲ್ಲಿ ನೆಲೆಸಿರುವ ಪೌರಕಾರ್ಮಿಕರ ಆರಾಧ್ಯ ದೇವಿ ಪಟ್ಲದಮ್ಮ. ಮೊದಲು ಇಲ್ಲಿ ಕಲ್ಲನ್ನು ಪೂಜಿಸಲಾಗುತ್ತಿತ್ತು. ದೇವಾಲಯ ಕೆಲಸ ಆರಂಭಗೊಂಡು ಎರಡು ವರ್ಷ ಕಳೆದಿದ್ದು, ಇದೀಗ ದೇವಾಲಯ ಲೋಕಾರ್ಪಣೆಗೊಂಡಿದೆ. ಅನೇಕ ಭಕ್ತರು ಮತ್ತು ದಾನಿಗಳ ಸಹಾಯದಿಂದ ದೇವಾಲಯ ಹೊಸ ರೂಪ ತಾಳಿದೆ. ದೇವಿಯ ವಿಗ್ರಹವನ್ನೂ ಪ್ರತಿಷ್ಠಾಪಿಸಲಾಗಿದೆ. ಮುಂದಿನ ವರ್ಷದದಿಂದ ಅದ್ದೂರಿಯಾಗಿ ವಾರ್ಷಿಕ ಉತ್ಸವವನ್ನು ಆಚರಿಸಲಾಗುವುದು.
ವಿಜಯ್ ಜಿಲ್ಲಾಧ್ಯಕ್ಷ, ಪೌರ ಕಾರ್ಮಿಕರ ಸಂಘ

Share This Article