More

    ಜಾತಿಮುಕ್ತ ಸಿದ್ಧಾಂತ ಪತಂಜಲಿ ಆದ್ಯತೆ; ಜಾತಿಮುಕ್ತ ಸಮಾಜ ಸನಾತನ ಸಂಸ್ಕೃತಿಯ ಬಯಕೆ

    ಹರಿದ್ವಾರ: ಜಾತಿಗಣತಿ ಕುರಿತ ಚರ್ಚೆಗಳು ಮುಂದಿನ ದಿನಗಳಲ್ಲಿ ದೇಶದ ರಾಜಕಾರಣದಲ್ಲಿ ಬಹುದೊಡ್ಡ ವಿಷಯವಾಗಿ ಹೊರಹೊಮ್ಮಲಿದೆ. ನಮ್ಮ ಸನಾತನ ಸಂಸ್ಕೃತಿ ಜಾತಿಮುಕ್ತ ಸಮಾಜ ಬಯಸುತ್ತದೆ. ಪತಂಜಲಿ ಕೂಡ ಜಾತಿಮುಕ್ತ ಸಿದ್ಧಾಂತ ಪಾಲಿಸುತ್ತ ಬಂದಿದ್ದು, ನಮ್ಮ ಸಂಸ್ಥೆಗೆ ಯಾರನ್ನೂ ಜಾತಿಯ ಆಧಾರದಲ್ಲೂ ನೇಮಕ ಮಾಡಿಕೊಂಡಿಲ್ಲ. ಸಮಾಜ ಮತ್ತು ದೇಶಸೇವೆಯೇ ನಮ್ಮ ಗುರಿ ಎಂದು ಪತಂಜಲಿ ಯೋಗಪೀಠದ ಸಂಸ್ಥಾಪಕ ಬಾಬಾ ರಾಮ್‌ದೇವ್‌ ಹೇಳಿದ್ದಾರೆ.

    ಹರಿದ್ವಾರದ ಪತಂಜಲಿ ಯೋಗಪೀಠದಲ್ಲಿ ಆಯ್ದ ಪತ್ರಕರ್ತರೊಂದಿಗೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಿರ್ಧಾರ ತೆಗೆದುಕೊಳ್ಳುವ ಹುದ್ದೆಯಲ್ಲಿ ನಮ್ಮದೇ ಜಾತಿಯವ ಕೂರಬೇಕು ಎಂಬುದೇ ಕೆಟ್ಟ ಮನಸ್ಥಿತಿ. ಇದಕ್ಕೆ ನಾವು ತದ್ವಿರುದ್ಧ. ದೇಶದಲ್ಲಿ ಈಗಲೂ ಬಡತನ, ದಾರಿದ್ರ್ಯದ ಸಮಸ್ಯೆ ಇದ್ದು ಅಂಥವರಿಗೆ ನೆರವಾಗಬೇಕು. ಆರ್ಥಿಕ ಆಧಾರಿತ ಮೀಸಲಾತಿ ಬೇಕೇ ವಿನಃ ಜಾತಿ ಆಧರಿತವಲ್ಲ. ಆಗ ಮಾತ್ರ ನೈಜ ಬಡವರ ಸಾಮಾಜಿಕ, ಶೈಕ್ಷಣಿಕ ಏಳಿಗೆ ಸಾಧ್ಯ. ಈ ಮೂಲಕ ದೇಶದಲ್ಲಿ ಮೀಸಲಾತಿ ವ್ಯವಸ್ಥೆಯನ್ನೇ ಅಂತ್ಯಗೊಳಿಸಬಹುದು ಎಂದು ಪ್ರತಿಪಾದಿಸಿದರು.

    ಕರೊನಾ ನಂತರದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಆತಂಕ ವ್ಯಕ್ತಪಡಿಸಿದ ಅವರು, ಕರೊನಾ ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ವೈಜ್ಞಾನಿಕ ದಾಖಲೀಕರಣ ಭಾರತ ಸೇರಿದಂತೆ ಎಲ್ಲೂ ಆಗಿಲ್ಲ. ಹೀಗಾಗಿ, ಇದೊಂದು ದೊಡ್ಡ ಹಗರಣ. ಕರೊನಾ ನಂತರ ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್‌, ಜಾಂಡೀಸ್‌ ಸೇರಿ ಹಲವು ರೋಗಗಳು ಜನರನ್ನು ಬಾಧಿಸುತ್ತಿವೆ. ಯಾವ ಮದ್ದಿನಿಂದ ಏನು ಹಾನಿಯಾಗಿದೆ ಎಂಬ ಬಗ್ಗೆ ಸಂಶೋಧನೆ ನಡೆಯಬೇಕಲ್ಲವೇ? ಈ ಬಗ್ಗೆ ಮಾತನಾಡಲು ನನಗೆ ಯಾವುದೇ ಭಯವಿಲ್ಲ. ನಾನು ಭಯದೊಂದಿಗೆ ಹುಟ್ಟಿಲ್ಲ, ಬದುಕುತ್ತಲೂ ಇಲ್ಲ ಎಂದು ವಿವರಿಸಿದರು.

    ಇದನ್ನೂ ಓದಿ: ‘ನಂಗೆ ಕನ್ನಡ ತುಂಬಾ ಇಷ್ಟ..’ ಎಂದು ಕ್ರಿಕೆಟಿಗ ಕಪಿಲ್​ದೇವ್ ಅವರಿಂದ ಹೇಳಿಸಿದ್ರು ಕನ್ನಡದ ನಟಿ!

    ಮೆಡಿಕಲ್‌ ಮಾಫಿಯಾ ದೇಶಕ್ಕೆ ಅತಿದೊಡ್ಡ ಕಂಟಕವಾಗಿ ಪರಿಣಮಿಸಿದೆ. ವೈದ್ಯಕೀಯ ಶಿಕ್ಷಣದ ಪಠ್ಯಗಳನ್ನೂ ಫಾರ್ಮಾ ಕಂಪನಿ ಅಥವಾ ಮೆಡಿಕಲ್ ಮಾಫಿಯಾಗಳೇ ನಿರ್ಧರಿಸುತ್ತವೆ ಎಂದರೆ ಭವಿಷ್ಯ ಎಷ್ಟು ಭಯಾನಕವಾಗಿರಬಹುದು ಎನ್ನುವುದನ್ನು ನೀವೇ ಊಹಿಸಿ. ವೈದ್ಯಕೀಯ ವ್ಯವಸ್ಥೆಯಲ್ಲಿ ತುಂಬಿಕೊಂಡಿರುವ ಕೆಲ ದುಷ್ಟ ಶಕ್ತಿಗಳು ಆಯುರ್ವೇದ, ಯೋಗದ ಬಗ್ಗೆ ಸುಳ್ಳು ವ್ಯಾಖ್ಯಾನಗಳನ್ನು ಹಬ್ಬಿಸುತ್ತಿವೆ. ಇದನ್ನು ತಡೆಯಲು ನಾನು ಹೋರಾಡುತ್ತಿದ್ದೇನೆ. ಫಾರ್ಮಾ ಕಂಪನಿಗಳ ಸುಳ್ಳು ಪ್ರತಿಪಾದನೆಗಳನ್ನು ಕೇಳಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ನಾನು ಈ ವ್ಯವಸ್ಥೆಯನ್ನು ಪ್ರಶ್ನಿಸುತ್ತಿದ್ದೇನೆಯೇ ವಿನಃ ನ್ಯಾಯಾಂಗದ ವಿರುದ್ಧ ಮಾತನಾಡುತ್ತಿಲ್ಲ ಎಂದು ಸಮರ್ಥಿಸಿಕೊಂಡರು.

    ಪತಂಜಲಿ ಸಂಸ್ಥೆ ಈಗ 5 ಲಕ್ಷ ಜನರಿಗೆ ನೇರ/ಪರೋಕ್ಷ ಉದ್ಯೋಗ ಕಲ್ಪಿಸಿದೆ. ದೇಶದಲ್ಲಿ ಶೇ.70ರಷ್ಟು ಮಂದಿ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯನ್ನೇ ನಂಬಿಕೊಂಡಿದ್ದಾರೆ. ಪ್ರಸ್ತುತ ಪತಂಜಲಿ ದೇಶದ 100 ಕೋಟಿಗಿಂತಲೂ ಹೆಚ್ಚು ಜನರನ್ನು ತಲುಪಿದೆ. ಭಾರತ ಮಾತ್ರವಲ್ಲ, ಇಡೀ ವಿಶ್ವವೇ ನೈಸರ್ಗಿಕ ಔಷಧಿ, ವೈದ್ಯಕೀಯ ವ್ಯವಸ್ಥೆಯತ್ತ ಹೊರಳುತ್ತಿದೆ. ಇದನ್ನು ಮಾಫಿಯಾಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ, ಪತಂಜಲಿಯಂತಹ ಸಂಸ್ಥೆಗಳ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಾ, ಹೆಸರು ಕೆಡಿಸುವ ಕೆಲಸ ಮಾಡುತ್ತಿವೆ. ಆದರೆ, ಜನ ಇದನ್ನು ನಂಬುವುದಿಲ್ಲ. ಇವರ ಸುಳ್ಳಿನ ಸರಮಾಲೆ ಜನ ತಿರಸ್ಕರಿಸುತ್ತಿದ್ದಾರೆ ಎಂದು ತಿಳಿಸಿದರು.

    ಇದನ್ನೂ ಓದಿ: ಹಾಲು ಕುಡಿಯಲು ಯಾವ ಸಮಯ ಉತ್ತಮ?: ಆಯುರ್ವೇದ ಏನು ಹೇಳುತ್ತದೆ?

    ಸಣ್ಣ ಮಕ್ಕಳು ಮೊಬೈಲ್​ಫೋನ್​, ಸಾಮಾಜಿಕ ಜಾಲತಾಣಗಳ ದಾಸರಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಬಾಬಾ ರಾಮ್‌ದೇವ್‌, ಇವುಗಳಿಂದಾಗಿ ಮಾನವೀಯ ಸಂಬಂಧಗಳು ಹಾಳಾಗುತ್ತಿರುವುದಲ್ಲದೆ, ಮಕ್ಕಳ ಮೆದುಳಿನ ವ್ಯವಸ್ಥೆಯೇ ಹಾಳಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ದೃಶ್ಯಗಳಂತೂ ಎಗ್ಗಿಲ್ಲದೆ ಲಭ್ಯವಿರುತ್ತವೆ. ಈ ಕಂಟೆಂಟ್‌ಗಳಿಗೆ ಕಡಿವಾಣ ಹಾಕಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಲ್ಲಿ ಮಕ್ಕಳ ಭವಿಷ್ಯ ಕತ್ತಲಾಗಲಿದೆ. ಮೇಲಾಗಿ, ಜಾತಿ, ಧರ್ಮಗಳ ವಿಷಬೀಜ ಬಿತ್ತುವ ಕೆಲಸವನ್ನೂ ಜಾಲತಾಣಗಳು ಮಾಡುತ್ತಿರುವುದು ವಿಧ್ವಂಸಕ ಕೃತ್ಯಕ್ಕೆ ಪ್ರೇರೇಪಣೆಯಾಗುತ್ತಿದೆ. ಆನ್‌ಲೈನ್‌ ಗೇಮಿಂಗ್‌ಗಳಿಂದ ಮಕ್ಕಳ ವಿದ್ಯಾಭ್ಯಾಸ ಹಾಳಾಗುತ್ತಿದೆ. ಈ ಗೇಮ್‌ಗಳನ್ನು ಆಡಿ, ಪಾನ್‌ ಮಸಾಲ ತಿನ್ನಿ ಎಂದು ಶಾರುಖ್‌ ಖಾನ್‌, ಅಕ್ಷಯ್‌ ಕುಮಾರ್‌, ಅಜಯ್‌ ದೇವಗನ್‌ ಅವರಂತಹ ನಟರು ಜಾಹೀರಾತು ಮೂಲಕ ಪ್ರೋತ್ಸಾಹಿಸುತ್ತಿದ್ದಾರೆ. ಹಾಗಾದರೆ ಇವರಿಗೆ ಸಾಮಾಜಿಕ ಬದ್ಧತೆ ಇಲ್ಲವೇ? ಎಂದು ಬಾಬಾ ಪ್ರಶ್ನಿಸಿದರು.

    ಪಾಕಿಸ್ತಾನ ಗಡಿಭಾಗದಿಂದ ಡ್ರೋನ್‌ ಮೂಲಕ ಡ್ರಗ್ಸ್‌ಗಳನ್ನು ಅಕ್ರಮ ರವಾನೆ ಮಾಡುತ್ತಿರುವ ಬಗ್ಗೆ ಕಿಡಿಕಾರಿದ ಬಾಬಾ, ಇದರಲ್ಲಿ ರಾಜಕಾರಣಿಗಳು, ದೊಡ್ಡ ಅಧಿಕಾರಿಗಳದ್ದೇ ಕೈವಾಡವಿದೆ. ಗಡಿ ರಕ್ಷಣಾ ಪಡೆಗೇ ಇದನ್ನು ನಿಭಾಯಿಸುವ ಶಕ್ತಿಯಿದೆ.‌ ಈ ವಿಷಯದಲ್ಲಿ ಕೇಂದ್ರ ಸರ್ಕಾರ ಶೂನ್ಯ ಸಹಿಷ್ಣುತೆ ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.

    ಭಾರಿ ಹೆಬ್ಬಾವನ್ನೇ ಹಿಡಿದ ‘ಮಗಧೀರ’; ವಿಡಿಯೋ ವೈರಲ್, ಜನರಿಂದ ಮೆಚ್ಚುಗೆಯ ಮಹಾಪೂರ

    ‘ಎಕ್ಸ್’ ವಿಚಾರ: ಸಾರಾಸಗಟು ಇಲ್ಲವೆಂದ ತೆಂಡುಲ್ಕರ್ ಪುತ್ರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts