More

    ಪರ್ಯಾಯ ಪೂರ್ವಭಾವಿಯಾಗಿ ಕಾಪು ದಂಡತೀರ್ಥ ಕೆರೆಯಲ್ಲಿ ಪುತ್ತಿಗೆ ಉಭಯ ಶ್ರೀಗಳ ತೀರ್ಥಸ್ನಾನ

    ಪಡುಬಿದ್ರಿ: ಉಡುಪಿ ಶ್ರೀ ಕೃಷ್ಣ ಮಠದ ಪರ್ಯಾಯ ಸರ್ವಜ್ಞ ಪೀಠಾರೋಹಣಗೈಯ್ಯುವ ಮುನ್ನ ಸಂಪ್ರದಾಯದಂತೆ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಜತೆಗೂಡಿ ಬುಧವಾರ ಮಧ್ಯರಾತ್ರಿ ಕಳೆದು ಗುರುವಾರ, ಕಾಪು ಉಳಿಯಾರಗೋಳಿ ದಂಡತೀರ್ಥ ಮಠಕ್ಕೆ ಆಗಮಿಸಿ, ಶ್ರೀ ಮಧ್ವಾಚಾರ್ಯರ ದಂಡದಿಂದ ಉದಿಸಿದ ದಂಡತೀರ್ಥ ಕೆರೆಯಲ್ಲಿ ತೀರ್ಥಸ್ನಾನ ಮಾಡಿದರು.
    ಪರ್ಯಾಯ ಶ್ರೀ ಪುತ್ತಿಗೆ ಮಠದ ಆಪ್ತ ವಲಯ ಮತ್ತು ಪರ್ಯಾಯ ಸ್ವಾಗತ ಸಮಿತಿಯ ಪ್ರಮುಖರ ಜತೆಗೂಡಿ 12.05ರ ವೇಳೆಗೆ ಕಾಪು ದಂಡತೀರ್ಥ ಮಠಕ್ಕೆ ಆಗಮಿಸಿದ ಪುತ್ತಿಗೆ ಶ್ರೀಗಳಿಗೆ ದಂಡತೀರ್ಥ ಮಠ ಮತ್ತು ಗ್ರಾಮಸ್ಥರ ವತಿಯಿಂದ ಭವ್ಯ ಸ್ವಾಗತ ಕೋರಲಾಯಿತು. ಬಳಿಕ ವಿವಿಧ ಧಾರ್ಮಿಕ ಆಚರಣೆ ಪೂರೈಸಿ ತೀರ್ಥಸ್ನಾನಗೈದರು.

    ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ತಹಸೀಲ್ದಾರ್ ಪ್ರತಿಭಾ ಆರ್, ಪರ್ಯಾಯ ಸ್ವಾಗತ ಸಮಿತಿ ಪದಾಧಿಕಾರಿಗಳು, ದಂಡತೀರ್ಥ ಮಠದ ಅಧ್ಯಕ್ಷ ಡಾ.ಸೀತಾರಾಮ ಭಟ್, ಮಠದ ಅರ್ಚಕ ಶ್ರೀನಿವಾಸ ಭಟ್ ಮಲ್ಲಾರು, ಸ್ಥಳೀಯ ಪ್ರಮುಖರಾದ ರವಿ ಭಟ್ ಮಂದಾರ, ಶ್ರೀನಿವಾಸ ಸಾಮಗ, ಕಾಪು ದಿವಾಕರ ಶೆಟ್ಟಿ, ಮನೋಹರ ಎಸ್.ಶೆಟ್ಟಿ, ಉದಯ್ ಕುಮಾರ್ ಶೆಟ್ಟಿ, ಸಂತೋಷ್ ಪಿ.ಶೆಟ್ಟಿ ಮತ್ತಿತರರು ಈ ಸಂದರ್ಭ ಸ್ಥಳದಲ್ಲಿದ್ದು ದಿವ್ಯಸಂದರ್ಭಕ್ಕೆ ಸಾಕ್ಷಿಯಾದರು.

    ಕುಂಜಿ ಗೋಪಾಲಕೃಷ್ಣ ದೇವರಿಗೆ ತೀರ್ಥ ಅರ್ಚನೆ

    ಪುತ್ತಿಗೆ ಶ್ರೀಗಳು ಸ್ನಾನ ಬಳಿಕ ತಮ್ಮ ಕಮಂಡಲದಲ್ಲಿ ದಂಡತೀರ್ಥ ಕೆರೆಯ ತೀರ್ಥ ಕುಂಡದಿಂದ ತೀರ್ಥ ತುಂಬಿಸಿ ತಮ್ಮ ಪಟ್ಟದ ದೇವರ ಸಹಿತ ಮಠದ ಕುಂಜಿ ಗೋಪಾಲ ಕೃಷ್ಣ ದೇವರಿಗೆ ಅರ್ಚನೆ, ಪೂಜೆ ನೆರವೇರಿಸಿದರು. ಬಳಿಕ ಮುಖ್ಯಪ್ರಾಣ ದೇವರಿಗೆ ನಮಿಸಿದರು. ವಿವಿಧ ಸಂಪ್ರದಾಯಗಳ ಪಾಲನೆ ಬಳಿಕ ಪರ್ಯಾಯ ಶೋಭಾಯಾತ್ರೆಗಾಗಿ ಉಡುಪಿ ಜೋಡುಕಟ್ಟೆಗೆ ನಿರ್ಗಮಿಸಿದರು.

    ದಂಡದಿಂದ ಉದಿಸಿದ ದಂಡತೀರ್ಥ

    ಆಚಾರ್ಯ ಮಧ್ವರು ಫ್ರೌಢಾವಸ್ಥೆಯಲ್ಲಿರುವಾಗಿ ಉಳಿಯಾರಗೋಳಿ ತೋಟಂತಿಲ್ಲಾಯ ಮನೆತನದ ಗುರುಗಳಲ್ಲಿ ವಿದ್ಯಾಭ್ಯಾಸ ಪಡೆದಿದ್ದರು. ಶಿಕ್ಷಣ ಪಡೆದ ಬಳಿಕ ಗುರುದಕ್ಷಿಣೆಯಾಗಿ ಉಳಿಯಾರಗೋಳಿ ಗ್ರಾಮದ ಜನತೆ ನೀರಿನ ಸಂಕಷ್ಟದ ಪರಿಹಾರಕ್ಕಾಗಿ ತಮ್ಮ ದಂಡ(ಒಣಕೋಲು)ದಿಂದ ಭೂಮಿ ಗೀರಿ ಕೆರೆ ಸೃಷ್ಟಿಸಿದರೆಂಬ ಪ್ರತೀತಿಯಿದೆ. ಅದರ ಜತೆಗೆ ತೋಟಂತಿಲ್ಲಾಯ ಮನೆತನದವರಿಗೆ ಗುರುದಕ್ಷಿಣೆ ರೂಪದಲ್ಲಿ ಕುಂಜಿ ಗೋಪಾಲ ಕೃಷ್ಣ ದೇವರ ಮೂರ್ತಿ ನೀಡಿದ್ದರು. ಮಧ್ವಾಚಾರ್ಯರು ತನ್ನ ಕೈಯ್ಯಲ್ಲಿದ್ದ ದಂಡದಿಂದ ಸೃಷ್ಟಿಸಿದ ಕೆರೆ ದಂಡತೀರ್ಥ ಕೆರೆಯಾಗಿ, ಗ್ರಾಮವು ದಂಡತೀರ್ಥ ಎಂಬ ಹೆಸರು ಪಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts