More

    ಆ ದಾಖಲೆಯನ್ನು ಇದುವರೆಗೂ ಯಾರಿಂದಲೂ ಮುರಿಯಲು ಆಗಿಲ್ಲ!

    ಮೂರು ವರ್ಷಗಳಾದವು ಕನ್ನಡದ ಹೆಮ್ಮೆಯ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅಗಲಿ. 2017ರ ಮೇ 31ರಂದು ಪಾರ್ವತಮ್ಮ ಅವರು ಅನಾರೋಗ್ಯದಿಂದ ನಿಧನರಾದರು.

    ಕನ್ನಡ ಚಿತ್ರರಂಗಕ್ಕಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗಕ್ಕೇ ಪಾರ್ವತಮ್ಮ ಅವರ ಕೊಡುಗೆ ದೊಡ್ಡದು. ಸುಮಾರು 42 ವರ್ಷಗಳಲ್ಲಿ ಅವರು ನಿರ್ಮಿಸಿದ ಚಿತ್ರಗಳ ಸಂಖ್ಯೆ 70 ಮೀರುತ್ತದೆ. ಒಬ್ಬ ಮಹಿಳೆ 70ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ ದಾಖಲೆ ಭಾರತೀಯ ಚಿತ್ರರಂಗದಲ್ಲೇ ಇಲ್ಲ. ಅಂಥದ್ದೊಂದು ಅಪರೂಪದ ದಾಖಲೆ ಪಾರ್ವತಮ್ಮ ಅವರ ಹೆಸರಿನಲ್ಲಿದ್ದು, ಅದನ್ನು ಮುರಿಯುವುದು ಸಾಧ್ಯವೇ ಇಲ್ಲ ಎಂಬ ಮಾತಿದೆ.

    ಇದನ್ನೂ ಓದಿ: ಪತಿ ಬದಲಿಗೆ ಬಾಯ್​ಫ್ರೆಂಡ್​ ನೆನಪಲ್ಲಿ ದೀಪಿಕಾ ಪಡುಕೋಣೆ!

    ಪಾರ್ವತಮ್ಮ ರಾಜಕುಮಾರ್ ಅವರು ನಿರ್ಮಾಪಕಿಯಾಗಿದ್ದೇ ಒಂದು ರೋಚಕ ಕಥೆ. 70ರ ದಶಕದಲ್ಲಿ ಡಾ. ರಾಜಕುಮಾರ್ ಚಿತ್ರಗಳು ಸೂಪರ್ ಹಿಟ್ ಆದರೂ, ಅವರ ಚಿತ್ರಗಳಿಂದ ಹೆಚ್ಚೇನೂ ಆದಾಯ ಬರುತ್ತಿಲ್ಲ ಎಂದು ಕೆಲವು ನಿರ್ಮಾಪಕರು ಮತ್ತು ವಿತರಕರು ಕೊರಗುತ್ತಿದ್ದರಂತೆ. ಇದನ್ನೇ ಸವಾಲಾಗಿ ಸ್ವೀಕರಿಸಿದ ಪಾರ್ವತಮ್ಮನವರು, ಯಾಕೆ ಹೀಗಾಗುತ್ತಿದೆ ಎಂದು ನೋಡುವುದಕ್ಕೆ ತಾವೇ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಹೀಗೆ ಅವರು ನಿರ್ಮಿಸಿದ ಮೊದಲ ಚಿತ್ರ ಡಾ. ರಾಜಕುಮಾರ್ ಅಭಿನಯದ ‘ತ್ರಿಮೂರ್ತಿ’.

    1975ರಲ್ಲಿ ಬಿಡುಗಡೆಯಾದ ಈ ಚಿತ್ರ ಯಶಸ್ವಿಯಾಗುತ್ತಿದ್ದಂತೆಯೇ, ಚಿತ್ರ ನಿರ್ಮಾಣ ಮುಂದುವರೆಸಿದ ಪಾರ್ವತಮ್ಮ ಅವರು, ಪೂರ್ಣಿಮಾ ಎಂಟರ್‌ಪ್ರೈಸಸ್ ಮುಂತಾದ ನಿರ್ಮಾಣ ಸಂಸ್ಥೆಗಳಡಿ ಡಾ ರಾಜಕುಮಾರ್ ಅಭಿನಯದ ‘ಶಂಕರ್ ಗುರು’, ‘ತಾಯಿಗೆ ತಕ್ಕ ಮಗ’, ‘ಕವಿರತ್ನ ಕಾಳಿದಾಸ’, ‘ಭಕ್ತ ಪ್ರಹ್ಲಾದ’, ‘ಅನುರಾಗ ಅರಳಿತು’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿದ್ದಾರೆ. ನಂತರ ಶಿವರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್ ಮತ್ತು ವಿನಯ್ ರಾಜಕುಮಾರ್ ಅವರನ್ನೂ ಚಿತ್ರರಂಗಕ್ಕೆ ಪರಿಚಯಿಸಿ, ಅವರೆಲ್ಲರ ವೃತ್ತಿಜೀವನ ಯಶಸ್ವಿಯಾಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಒಂದೇ ಕುಟುಂಬದ ಮೂರು ತಲೆಮಾರಿನ ನಟರ ಚಿತ್ರಗಳನ್ನು ನಿರ್ಮಿಸಿದ ಹೆಗ್ಗಳಿಕೆಯೂ ಅವರಿಗಿದೆ.

    ಇದನ್ನೂ ಓದಿ: ಇಂಥಾ ಪಾತ್ರ ಯಾಕೆ ಕೊಡ್ತೀರಾ ಅಂತ ನಾನ್ಯಾವತ್ತೂ ಕೇಳಿಲ್ಲ …

    ಅಷ್ಟೇ ಅಲ್ಲ, 1989 ಮತ್ತು 1990ರಲ್ಲಿ ಪಾರ್ವತಮ್ಮ ನಿರ್ಮಾಣದ ತಲಾ ಐದು ಚಿತ್ರಗಳು ಬಿಡುಗಡೆಯಾಗಿವೆ. ಕನ್ನಡ ಚಿತ್ರರಂಗದಲ್ಲಿ ಯಾವ ನಿರ್ಮಾಪಕರು ವರ್ಷಕ್ಕೆ ಐದು ಸಿನಿಮಾಗಳನ್ನು ನಿರ್ಮಿಸಿದ ಉದಾಹರಣೆ ಇಲ್ಲ. ಅಂಥದ್ದೊಂದು ಅಪರೂಪದ ಹೆಗ್ಗಳಿಕೆಯೂ ಪಾರ್ವತಮ್ಮ ಅವರ ಹೆಸರಿನಲ್ಲಿದೆ ಎನ್ನುವುದು ವಿಶೇಷ.

    ಕರೊನಾ ಕಲಿಸಿಕೊಟ್ಟಿರುವ ಪಾಠ ಏನು? ರವಿಚಂದ್ರನ್​ ಹೇಳ್ತಾರೆ ಕೇಳಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts