More

    ಆಗಂತುಕರ ವಿರುದ್ಧ ಭಯೋತ್ಪಾದನಾ ವಿರೋಧಿ ಕಾನೂನು ಅಡಿ ಕೇಸು ದಾಖಲು: ಇಂದು ಕೋರ್ಟ್​ಗೆ ಹಾಜರು

    ನವದೆಹಲಿ: ನಿನ್ನೆ (ಡಿ.13) ಸಂಸತ್ತಿನಲ್ಲಿ ನಡೆದ ಭಾರಿ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ನಾಲ್ವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ಗಳನ್ನು ಹೊರತುಪಡಿಸಿ, ಭಯೋತ್ಪಾದನಾ ವಿರೋಧಿ ಕಾನೂನು, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಇಂದು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.

    ಬಂಧಿತ ನಾಲ್ವರಲ್ಲಿ ಸಾಗರ್​ ಶರ್ಮ ಮತ್ತು ಮನೋರಂಜನ್​ ಡಿ ಹಳದಿ ಬಣ್ಣ ಹೊರ ಸೂಸುವ ಹೊಗೆ ಡಬ್ಬಿ ಅಥವಾ ಕ್ಯಾನಿಸ್ಟರ್​ಗಳನ್ನು ಸಿಡಿಸಿ, ಸಂಸತ್ತಿನ ಒಳಗೆ ಗದ್ದಲ ಉಂಟು ಮಾಡುವ ಮೂಲಕ ಆತಂಕವನ್ನು ಸೃಷ್ಟಿಸಿದರು. ಅದೇ ಸಮಯದಲ್ಲಿ ಇನ್ನಿಬ್ಬರು ಆರೋಪಿಗಳಾದ ನೀಲಂ ದೇವಿ ಮತ್ತು ಅಮೋಲ್​ ಶಿಂಧೆ ಸಂಸತ್ತಿನ ಹೊರಭಾಗದಲ್ಲಿ ಹಳದಿ ಮತ್ತು ಕೆಂಪು ಬಣ್ಣದ ಕ್ಯಾನಿಸ್ಟರ್​ಗಳನ್ನು ಸ್ಫೋಟಿಸಿ, ಸರ್ಕಾರಿ ವಿರೋಧಿ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು.

    ಈ ನಾಲ್ವರಲ್ಲದೆ, ಇನ್ನಿಬ್ಬರು ಆರೋಪಿಗಳಾದ ಲಲಿತ್​ ಜಾ ಮತ್ತು ವಿಕ್ಕಿ ಶರ್ಮ ಕೂಡ ಸಂಚಿನ ಭಾಗವಾಗಿದ್ದಾರೆ. ಈ ಇಬ್ಬರು ಗುರುಂಗಾವ್​ ಮೂಲದವರು. ಆರೋಪಿಗಳು ಕ್ಯಾನಿಸ್ಟರ್​ಗಳನ್ನು ಸ್ಫೋಟಿಸುವ ವಿಡಿಯೋವನ್ನು ಚಿತ್ರೀಕರಿಸುತ್ತಿದ್ದ ಆರೋಪಿ ಲಲಿತ್​ ಜಾ, ಎಲ್ಲರ ಸೆಲ್‌ಫೋನ್‌ಗಳೊಂದಿಗೆ ಪರಾರಿಯಾಗಿದ್ದಾನೆ ಎಂದು ವರದಿಯಾಗಿದೆ. ಸದ್ಯ ಇನ್ನೂ ಈತನ ಪತ್ತೆಯಾಗಿಲ್ಲ. ಆರೋಪಿಗಳಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದ ವಿಕ್ಕಿ ಶರ್ಮ ಮತ್ತು ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ.

    ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದು, ಭಗತ್​ ಸಿಂಗ್​ ಫ್ಯಾನ್​ ಕ್ಲಬ್​ ಹೆಸರಿನಲ್ಲಿ ಎಲ್ಲ ಆರೋಪಿಗಳು ಸಾಮಾಜಿಕ ಜಾಲತಾಣ ಮೂಲಕ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ. ಒಂದೂವರೆ ವರ್ಷದ ಹಿಂದೆ ಆರೋಪಿಗಳೆಲ್ಲರೂ ಮೈಸೂರಿನಲ್ಲಿ ಭೇಟಿಯಾಗಿದ್ದರು ಮತ್ತು ತಮ್ಮ ಸಂಚನ್ನು ಯಾವ ರೀತಿ ಕಾರ್ಯ ರೂಪಕ್ಕೆ ತರಬೇಕೆಂದು ಚರ್ಚಿಸಿದ್ದರು ಎಂದು ಹೇಳಲಾಗಿದೆ. ಮತ್ತೊಂದು ಸುತ್ತಿನ ಸಭೆ 9 ತಿಂಗಳ ನಡೆದಿತ್ತು ಎನ್ನಲಾಗಿದೆ.

    ಆರೋಪಿ ಸಾಗರ್ ಶರ್ಮಾ, ಕಳೆದ ಜುಲೈನಲ್ಲಿ ಲಖನೌದಿಂದ ದೆಹಲಿಗೆ ಬಂದಿದ್ದ ಎಂದು ಮೂಲಗಳು ತಿಳಿಸಿವೆ. ಈ ಭೇಟಿಯ ಸಮಯದಲ್ಲಿ ಸಂಸತ್ತಿಗೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಆದರೆ, ಭದ್ರತಾ ತಪಾಸಣೆಗಳನ್ನು ತುಂಬಾ ಎಚ್ಚರಿಕೆಯಿಂದ ಗಮನಿಸಿ ವಾಪಸ್ಸಾಗಿದ್ದ. ಆದರೆ, ನಿನ್ನೆಯ ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ಎಲ್ಲ ಆರೋಪಿಗಳು ಇದೇ ಭಾನುವಾರ ದೆಹಲಿ ಬಂದು ತಲುಪಿದ್ದರು. ಅಲ್ಲಿಯವರೆಗೂ ಆರೋಪಿಗಳು ಗುರುಗ್ರಾಮ್‌ನಲ್ಲಿರುವ ವಿಕ್ಕಿಯ ಮನೆಯಲ್ಲಿ ನೆಲೆಸಿದ್ದರು.

    ಅಮೋಲ್ ಶಿಂಧೆ, ಮಹಾರಾಷ್ಟ್ರದ ತನ್ನ ಸ್ವಂತ ಊರಿನಿಂದ ಹೊಗೆ ಡಬ್ಬಿಗಳನ್ನು ಪಡೆದು ತಂದಿದ್ದ ಎಂದು ತಿಳಿದುಬಂದಿದೆ. ಇಂಡಿಯಾ ಗೇಟ್‌ನಲ್ಲಿ ನಡೆದ ಸಭೆಯಲ್ಲಿ ತಮ್ಮ ಗುಂಪಿನ ಸದಸ್ಯರ ನಡುವೆ ಡಬ್ಬಿಗಳನ್ನು ವಿತರಿಸಲಾಗಿದೆ. ಎಲ್ಲ ಆರು ಮಂದಿಯು ಸಂಸತ್ತಿನ ಒಳಗೆ ಹೋಗಲು ಬಯಸಿದ್ದರು. ಆದರೆ, ಸಾಗರ್ ಶರ್ಮಾ ಮತ್ತು ಮನೋರಂಜನ್ ಮಾತ್ರ ಪಾಸ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು ಎಂದು ಮೂಲಗಳು ತಿಳಿಸಿವೆ.

    ನಡೆದಿದ್ದೇನು?
    ನಿನ್ನೆ (ಡಿ.13) ಲೋಕಸಭಾ ಕಲಾಪದ ಶೂನ್ಯ ವೇಳೆಯಲ್ಲಿ ಆರೋಪಿ ಸಾಗರ್ ಶರ್ಮಾ, ಸಂದರ್ಶಕರ ಗ್ಯಾಲರಿಯಿಂದ ಚೇಂಬರ್‌ಗೆ ಜಿಗಿದ ಆಘಾತಕಾರಿ ದೃಶ್ಯಗಳಿಗೆ ಸಾಕ್ಷಿಯಾಯಿತು. ಹಳದಿ ಹೊಗೆ ಹೊರಸೂಸುವ ಡಬ್ಬಿಯನ್ನು ತೆರೆದು ಸ್ಪೀಕರ್ ಕುರ್ಚಿಯನ್ನು ತಲುಪುವ ಪ್ರಯತ್ನದಲ್ಲಿ ಸಾಗರ್​ ಶರ್ಮ ಡೆಸ್ಕ್‌ನಿಂದ ಡೆಸ್ಕ್‌ಗೆ ಜಿಗಿದರು. ಆದರೆ, ಕೆಲ ಸಂಸದರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸುತ್ತಿದ್ದಂತೆ, ಅಲ್ಲಿಯೇ ಇದ್ದ ಮನೋರಂಜನ್ ಕೂಡ ಹೊಗೆ ಡಬ್ಬಿ ತೆರೆದು ಓಡಲು ಆರಂಭಿಸಿದರು. ಆದರೆ, ಆತನನ್ನು ಕೂಡ ಶೀಘ್ರದಲ್ಲೇ ವಶಕ್ಕೆ ಪಡೆಯಲಾಯಿತು. ಲೋಕಸಭೆಯ ಒಳಗೆ ನಡೆದ ಈ ಆಘಾತಕಾರಿ ಘಟನೆಗೂ ಮುನ್ನ ನೀಲಂ ದೇವಿ ಮತ್ತು ಅಮೋಲ್ ಶಿಂಧೆ ಸಂಸತ್ತಿನ ಹೊರಗೆ ಹೊಗೆ ಡಬ್ಬಿಗಳನ್ನು ಸಿಡಿಸಿದರು ಮತ್ತು “ಸರ್ವಾಧಿಕಾರ”ದ ವಿರುದ್ಧ ಘೋಷಣೆಗಳನ್ನು ಕೂಗಿದರು.

    ದೆಹಲಿ ಪೊಲೀಸರ ಭಯೋತ್ಪಾದನಾ ನಿಗ್ರಹ ದಳ ಎಲ್ಲ ಆರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದೆ. ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರಿಗೆ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ್ದು, ಸಮಗ್ರ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ. 2001ರ ಸಂಸತ್ ದಾಳಿಯ ವಾರ್ಷಿಕೋತ್ಸವದಂದೇ ಈ ಭಾರಿ ಭದ್ರತಾ ಲೋಪ ಸಂಭವಿಸಿತ್ತು. ಆರೋಪಿಗಳ ವಿರುದ್ಧ ಕ್ರಿಮಿನಲ್ ಪಿತೂರಿ, ದ್ವೇಷವನ್ನು ಉತ್ತೇಜಿಸುವುದು ಮತ್ತು ಸಾರ್ವಜನಿಕ ಸೇವಕರು ಕರ್ತವ್ಯ ನಿರ್ವಹಿಸುವುದನ್ನು ತಡೆಯಲು ಬಲವನ್ನು ಬಳಸುವುದು ಸೇರಿ ಐಪಿಸಿ ಸೆಕ್ಷನ್​ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. (ಏಜೆನ್ಸೀಸ್​)

    ಊಟವನ್ನು ತ್ಯಜಿಸಿದಾಗ ನಿಮ್ಮ ದೇಹದಲ್ಲಿ ಏನಾಗುತ್ತದೆ? ಇಲ್ಲಿದೆ ಉಪಯುಕ್ತ ಮಾಹಿತಿ…

    ಕಿವಿ ಇದ್ದೂ ಕಿವುಡು, ಕಣ್ಣಿದ್ದೂ ಕುರುಡನಂತೆ; ರಾಜ್ಯ ಸರ್ಕಾರದ ವಿರುದ್ಧ ಬಿ.ವೈ ವಿಜಯೇಂದ್ರ ತೀವ್ರ ವಾಗ್ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts