More

    ಪರಂಪರೆ: ರಾಜಧರ್ಮದ ಪಾಲನೆಯ ಫಲಗಳು

    ಪರಂಪರೆ: ರಾಜಧರ್ಮದ ಪಾಲನೆಯ ಫಲಗಳುಮಾನವನು ಜೀವನದ ನಡತೆಯಲ್ಲಿ ಅನುಸರಿಸಿ ಪಾಲಿಸತಕ್ಕಂತಹ ಬೇರೆಬೇರೆ ಆಶ್ರಮಧರ್ಮ – ಕರ್ಮಗಳನ್ನು ತಿಳಿಸಿಕೊಟ್ಟ ಭೀಷ್ಮನು ಮುಂದುವರಿದು, ರಾಜನ ಸ್ಥಾನವನ್ನು ಹೊಂದುವ ಕ್ಷತ್ರಿಯನು ಸ್ವಧರ್ಮ ಪಾಲನಾಕರ್ಮದ ಮೂಲಕವೇ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸಂನ್ಯಾಸ ಆಶ್ರಮಗಳ ಪಾಲನೆಯಿಂದ ದೊರೆಯುವಂತಹ ಫಲವನ್ನು ಯಾವ್ಯಾವ ರೀತಿಯಲ್ಲಿ ಪಡೆಯಬಲ್ಲನು ಎಂಬ ವಿಚಾರವನ್ನು ಈ ರೀತಿಯಾಗಿ ತಿಳಿಸತೊಡಗಿದರು:

    ‘ನರಶ್ರೇಷ್ಠನಾದ ಯುಧಿಷ್ಠಿರ! ಪ್ರಜಾಪಾಲನೆಯ ಹೊಣೆಯೊಂದಿಗೆ ಸದಾ ಕಾಲವೂ ಅರ್ಹ ಪೂಜನೀಯ ವ್ಯಕ್ತಿಗಳ ಅಭೀಷ್ಟೆಗಳನ್ನು ಈಡೇರಿಸಿ ಸಮ್ಮಾನಿಸುತ್ತಿರಬೇಕು. ಹಾಗೆಯೇ ಕ್ಷತ್ರಿಯನು ಗುರುಸೇವೆಯನ್ನು ಮಾಡುತ್ತ ಕ್ಷಮಾಭಾವವನ್ನು ಹೊಂದಿ ಶಾಸ್ತ್ರಗಳ ಸ್ವಾಧ್ಯಾಯನಿರತನೂ ಆಗಿರಬೇಕು. ಈ ರೀತಿಯಾಗಿ ವರ್ತಿಸುವುದರ ಮೂಲಕ ರಾಜಕಾರ್ಯದಲ್ಲಿ ತೊಡಗಿಕೊಂಡಿದ್ದರೂ ಬ್ರಹ್ಮಚರ್ಯಾಶ್ರಮ ಹಾಗೂ ಸಂನ್ಯಾಸಾಶ್ರಮಗಳಿಂದ ದೊರೆಯುವ ಫಲವು ಅವನಿಗೆ ಪ್ರಾಪ್ತವಾಗುತ್ತದೆ ಎಂಬುದು ನೀತಿಶಾಸ್ತ್ರದ ನಿರೂಪಣೆಯಾಗಿದೆ. ಸಮಸ್ತ ಪ್ರಾಣಿಗಳನ್ನು ಕೂಡ ದಯಾಪರತೆಯಿಂದ ಪಾಲಿಸುತ್ತ ರಾಷ್ಟ್ರದ ರಕ್ಷಣೆಯಲ್ಲಿ ಬದ್ಧನಾಗಿದ್ದರೂ ಕ್ಷತ್ರಿಯ ರಾಜನಿಗೆ ಸಂನ್ಯಾಸಾಶ್ರಮದ ಫಲವು ಪ್ರಾಪ್ತವಾಗುತ್ತದೆ.

    ಸಂಕಟದಲ್ಲಿರುವ ಜ್ಞಾತಿಬಂಧುಗಳು, ಕುಲಬಂಧುಗಳು, ಸಹೃದಯರು ಇವರುಗಳಿಗೆಲ್ಲ ನೆರವನ್ನಿತ್ತು ಉದ್ಧರಿಸುವುದರಿಂದಲೂ; ಶ್ರೇಷ್ಠ ಗುರುಗಳನ್ನು ಗುರುತಿಸಿ ಸತ್ಕರಿಸುವುದರಿಂದಲೂ; ಆಹ್ನಿಕ, ಅರ್ಘ್ಯಕರ್ಮ ಮುಂತಾದ ದೈನಂದಿನ ಕರ್ಮಗಳನ್ನು ಕೈಗೊಳ್ಳುವುದರಿಂದಲೂ; ಪಿತೃಶ್ರಾದ್ಧ, ಭೂತಯಜ್ಞ (ಪಂಚಮಹಾಭೂತಗಳನ್ನು ತೃಪ್ತಿಪಡಿಸುವುದು), ಅತಿಥಿ ಸತ್ಕಾರವೇ ಮೊದಲಾದ ಮನುಷ್ಯಯಜ್ಞ – ಇವುಗಳನ್ನೆಲ್ಲ ಆಚರಿಸುವುದರಿಂದಲೂ ಕ್ಷತ್ರಿಯರಾಜನಿಗೆ ರಾಜಕಾರ್ಯ ಕರ್ಮದೊಂದಿಗೇ ವಾನಪ್ರಸ್ಥಾಶ್ರಮದ ಪುಣ್ಯಫಲವೂ ಪ್ರಾಪ್ತವಾಗುತ್ತದೆ.

    ಗೃಹಸ್ಥಾಶ್ರಮಿಯಾದವನಿಗೆ ಅತಿಥಿ ಸತ್ಕಾರವು ಮಹತ್ವದ ಧರ್ಮವಾಗಿದೆ. ಶತ್ರುರಾಷ್ಟ್ರದವರನ್ನು ತುಳಿದುಹಾಕಿ ತನ್ನ ರಾಷ್ಟ್ರವನ್ನು ರಕ್ಷಿಸಿಕೊಳ್ಳುವ ರಾಜನು ಅತಿಥಿಸತ್ಕಾರ ನಿರತನೂ ಆಗಿ ದೇವಯಜ್ಞವನ್ನು ಗೈಯುತ್ತಿರುವ ಮೂಲಕ ಗೃಹಸ್ಥ ಮತ್ತು ವಾನಪ್ರಸ್ಥ ಎಂಬ ಈ ಎರಡು ಆಶ್ರಮಗಳ ಆಚರಣೆಯ ಫಲವನ್ನು ಪಡೆದುಕೊಳ್ಳುವನು. ರಾಜನು ತನ್ನ ರಾಷ್ಟ್ರದಲ್ಲಿ ವಾನಪ್ರಸ್ಥಾಶ್ರಮಿಗಳಿಗೂ ಬ್ರಹ್ಮವಿದರಿಗೂ, ವೇದವಿದ್ಯೆಗೂ ಪೋಷಣೆ-ರಕ್ಷಣೆ ನೀಡುವುದರಿಂದಲೇ ವಾನಪ್ರಸ್ಥಾಶ್ರಮ ಧರ್ಮವನ್ನು ಪಾಲಿಸಿದ ಪುಣ್ಯಫಲಕ್ಕೆ ಭಾಜನನಾಗುವನು.

    ಪ್ರತಿದಿನವೂ ತನ್ನ ಇಷ್ಟದೇವತೆಯ ಮಂತ್ರವನ್ನು ಜಪಿಸುತ್ತ ಹಾಗೂ ದೇವಾನುದೇವತೆಗಳಿಗೆ ನಿಷ್ಠಾಪೂರ್ವಕವಾಗಿ ಪೂಜೆಯನ್ನು ಸಲ್ಲಿಸುತ್ತ ರಾಜದಂಡದ ಬಲದಿಂದ ಧರ್ಮವನ್ನು ಪಾಲಿಸುತ್ತ ಶತ್ರುಗಳೊಂದಿಗೆ ಕಾದಾಡಬೇಕಾದ ಸಂದರ್ಭದಲ್ಲಿ, ‘ಎದುರಾಳಿಯನ್ನು ನಾಶಮಾಡುತ್ತೇನೆ ಇಲ್ಲವೇ ತನ್ನ ಪ್ರಾಣವನ್ನೇ ತೆತ್ತು ಕ್ಷತ್ರಿಯಧರ್ಮವನ್ನು ಪಾಲಿಸುತ್ತೇನೆ’ ಎಂಬ ಛಲದಿಂದ ಹೋರಾಡುವ ಕ್ಷತ್ರಿಯನಿಗೆ ಗೃಹಸ್ಥ ಮತ್ತು ಸಂನ್ಯಾಸ ಈ ಎರಡೂ ಆಶ್ರಮಗಳ ಪಾಲನೆಯ ಪುಣ್ಯಫಲವು ಲಭಿಸುತ್ತದೆ.

    ಮಗು ಯುಧಿಷ್ಠಿರ! ಪ್ರಜಾಪ್ರಭುವಾಗಿರುವವನು – ಬಾಲಕರನ್ನೂ, ವೃದ್ಧರನ್ನೂ ದಯಾಪೂರ್ಣತೆಯ ಜತೆಗೆ ಪೋಷಣೆಗೈದರೆ ಎಲ್ಲ ಆಶ್ರಮ ಧರ್ಮಗಳನ್ನು ಆಚರಿಸಿದ ಫಲವು ದೊರೆಯುತ್ತದೆ. ತನ್ನ ರಾಷ್ಟ್ರದಲ್ಲಿ ಯಾವುದೇ ಪ್ರಾಣಿಯ ಮೇಲೆ ಹಿಂಸೆ ಘಟಿಸಿದಾಗ ಆ ಸಂಕಟದಿಂದ ಪಾರುಮಾಡಿ ರಕ್ಷಣೆ ನೀಡಿದರೆ ಹಾಗೂ ಚರಾಚರ ಪ್ರಾಣಿಗಳನ್ನು ಗೌರವಿಸಿ ಯಥಾಯೋಗ್ಯವಾಗಿ ರಕ್ಷಣೆಗೈದರೆ ಅದರಿಂದಲೇ ಗೃಹಸ್ಥಾಶ್ರಮ ಧರ್ಮವನ್ನು ಪಾಲಿಸಿದ ಫಲಕ್ಕೆ ಕ್ಷತ್ರಿಯ ರಾಜನು ಭಾಜನನಾಗುವನು.

    ತನ್ನ ಸಹೋದರರು, ಪುತ್ರರು, ಪೌತ್ರರು ಇತ್ಯಾದಿ ಕುಟುಂಬದವರು ಸಂಬಂಧಿಕರಲ್ಲಿ ಯಾರೇ ಅಪರಾಧವನ್ನು ಗೈದರೂ ರಾಜನು ಪಕ್ಷಪಾತವನ್ನು ತೋರದೆಯೇ ನಿರ್ಮಮತ್ವದಿಂದ ದಂಡನೆಯನ್ನು ವಿಧಿಸಬೇಕು. ಹಾಗೆಯೇ ಅವರು ಉತ್ತಮ ಕಾರ್ಯಗೈದರೆ ಅನುಗ್ರಹ-ಪುರಸ್ಕಾರ ನೀಡುವುದು ಗೃಹಸ್ಥ ಧರ್ಮಪಾಲನೆಯ ಪುಣ್ಯಕ್ಕೆ ಅವನನ್ನು ಪಾತ್ರನನ್ನಾಗಿಸುತ್ತದೆ.

    ನೀತಿಶಾಸ್ತ್ರಗಳು ವಿಧಿಸಿರುವಂತೆ ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸಂನ್ಯಾಸ ಈ ನಾಲ್ಕು ಆಶ್ರಮಗಳಲ್ಲಿ ಯಾವುದೇ ಆಶ್ರಮನೀತಿಯನ್ನು ಅನುಸರಿಸಿ, ವ್ರತಸ್ಥರಾಗಿದ್ದವರಿಗೆ ತಕ್ಕ ಆಶ್ರಯವನ್ನು ನೀಡಿ ಭೋಜನಾದಿ ವ್ಯವಸ್ಥೆಗಳನ್ನು ಗೈದು ಸತ್ಕರಿಸುವುದು ಕೂಡ ಗೃಹಸ್ಥಾಶ್ರಮ ಧರ್ಮಪಾಲನೆಯ ಫಲಕ್ಕೆ ರಾಜನನ್ನು ಭಾಜನನನ್ನಾಗಿಸುತ್ತದೆ ಎಂಬಿತ್ಯಾದಿಯಾಗಿ ನೀತಿಶಾಸ್ತ್ರವು ತಿಳಿಯಪಡಿಸಿದೆ.

    ಯುಧಿಷ್ಠಿರ! ದೇಶಧರ್ಮ ಮತ್ತು ಕಾಲಧರ್ಮಗಳನ್ನು ಪಾಲಿಸುವ ರಾಷ್ಟ್ರದ ಪ್ರಭುವಿಗೆ ಆಶ್ರಮಧರ್ಮವನ್ನು ಹಂತಹಂತವಾಗಿ ಆಚರಣೆ ಮಾಡದೆಯೇ ಈ ಎಲ್ಲವುಗಳಿಂದ ದೊರೆಯುವ ಪುಣ್ಯಫಲವನ್ನು ರಾಜಧರ್ಮ ಪಾಲನೆಯೊಂದರ ಮೂಲಕವೇ ಪಡೆದುಕೊಳ್ಳಲು ಅವಕಾಶಗಳಿವೆ, ಸಾಧ್ಯತೆಯೂ ಇದೆ. ಅದು ಹೇಗೆಂದರೆ – ಯಾವ ರಾಜನ ಆಳ್ವಿಕೆಯ ಹಾಗೂ ಆಶ್ರಯದಲ್ಲಿ ಸಮಸ್ತ ಜೀವಿಗಳು ಸಮಾನತೆಯನ್ನು ಪಡೆಯುವ ಹಾಗಿರುತ್ತದೆಯೋ ಆ ರಾಜನಿಗೆ ಎಲ್ಲ ಸಾಧು ಸತ್ಪುರುಷರು ಸಂಪಾದಿಸುತ್ತಿರುವ ಪುಣ್ಯಕರ್ಮಗಳ ಫಲವು ಸಹಜವಾಗಿ ಪ್ರಾಪ್ತವಾಗುತ್ತಿರುತ್ತದೆ. ಆದರೆ ಧರ್ಮಪರಾಯಣರಾಗಿ ಇರುವವರ ರಕ್ಷಣೆಗೈಯದಿರುವ ಪ್ರಭುವಿಗೆ ಪಾಪಕಾರ್ಯಗಳನ್ನು ಎಸಗುವವರ ಪಾಪದ ಫಲಗಳು ಬೆನ್ನೇರಿ ಸಂಕಟಕ್ಕೆ ಗುರಿಮಾಡುತ್ತವೆ.’
    (ಲೇಖಕರು ಹಿರಿಯ ಪತ್ರಕರ್ತರು, ಸಾಹಿತಿ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts