More

    ಮುಂಬೈ ಫುಟ್​ಬಾಲ್​ ಕೋಚ್​ಗಳು ಈಗ ತರಕಾರಿ, ಕಬಾಬ್​ ಮಾರುತ್ತಿದ್ದಾರೆ!

    ಮುಂಬೈ: ಕರೊನಾ ವೈರಸ್​ ಹಾವಳಿಯಿಂದಾಗಿ ಬಹುತೇಕ ಎಲ್ಲ ಕ್ರೀಡಾ ಚಟುವಟಿಕೆಗಳೂ ಸ್ತಬ್ಧಗೊಂಡಿವೆ. ಅದರಲ್ಲೂ ಕರೊನಾ ಮಹಾಮಾರಿಯಿಂದ ಅತ್ಯಧಿಕ ಹೊಡೆತ ತಿಂದಿರುವ ಮಹಾರಾಷ್ಟ್ರದಲ್ಲಿ ಜನರ ಬದುಕು ದುಸ್ತರವಾಗಿದೆ. ಭಾರತೀಯ ಕ್ರೀಡಾಕ್ಷೇತ್ರದಲ್ಲಿ ಮುಂಬೈ ಪ್ರಮುಖ ಸ್ಥಾನ ಹೊಂದಿದ್ದು, ಇಲ್ಲಿನ ಕ್ರೀಡಾ ಚಟುವಟಿಕೆಗಳೂ ಈಗ ಸಂಪೂರ್ಣ ಬಂದ್​ ಆಗಿವೆ. ಇದರಿಂದಾಗಿ ಇಲ್ಲಿನ ಫುಟ್​ಬಾಲ್​ ಅಕಾಡೆಮಿಗಳೂ ಸ್ತಬ್ಧಗೊಂಡಿವೆ. ಇದರಿಂದಾಗಿ ಅದರಲ್ಲಿನ ಕೋಚ್​ಗಳ ಪರಿಸ್ಥಿತಿ ಚಿಂತಾಜನಕವಾಗಿತ್ತು. ಹೀಗಾಗಿ ಫುಟ್​ಬಾಲ್​ ಕೋಚ್​ಗಳು ಈಗ ಜೀವನ ನಿರ್ವಹಣೆಗಾಗಿ ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.

    ಕ್ರೀಡೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಮುಂಬೈನ ಮೂವರು ಫುಟ್​ಬಾಲ್​ ಕೋಚ್​ಗಳು ಈಗ ಹೊಟ್ಟೆಪಾಡಿಗಾಗಿ ಹೊಸ ಉದ್ಯೋಗವನ್ನು ಕಂಡುಕೊಂಡಿದ್ದಾರೆ. ಮಕ್ಕಳಿಗೆ ಫುಟ್​ಬಾಲ್​ ಆಟದ ಕೌಶಲಗಳನ್ನು ಹೇಳಿಕೊಡುತ್ತಿದ್ದ ಪ್ರಸಾದ್​ ಬೋಸಲೆ, ಸಿದ್ಧೇಶ್​ ಶ್ರೀವಾಸ್ತವ ಮತ್ತು ಸಾಮ್ರಾಟ್​ ರಾಣಾ ಈಗ ಕರೊನಾ ಹಾವಳಿಯಿಂದಾಗಿ ಕ್ರಮವಾಗಿ ತರಕಾರಿ, ಕಬಾಬ್​ ವ್ಯಾಪಾರಿ ಮತ್ತು ರೆಸ್ಟೊರೆಂಟ್​ ಒಂದರ ಡೆಲಿವರಿ ಬಾಯ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    ಇದನ್ನೂ ಓದಿ: ದ್ಯುತಿಗಿಲ್ಲ ಪ್ರಾಯೋಜಕರ ಕೊರತೆ, ಕಾರು ಮಾರಾಟಕ್ಕೆ ರೈಲು ಬಿಟ್ಟ ಅಥ್ಲೀಟ್​!

    ನಾನು ತರಕಾರಿ ಮಾರಾಟ ಆರಂಭಿಸಿದಾಗ ಮೊದಲಿಗೆ ವಿಚಿತ್ರವೆನಿಸುತ್ತಿತ್ತು. ಯಾಕೆಂದರೆ ನಾನು ದೈಹಿಕ ಶಿಕ್ಷಣ ಪ್ರಾಧ್ಯಾಪಕ. ಡಬಲ್​ ಗ್ರಾಚುವೇಟ್​. ಆದರೆ ನನ್ನ ಮತ್ತು ಕುಟುಂಬದ ಹೊಟ್ಟೆಪಾಡಿಗಾಗಿ ಇದು ಅನಿವಾರ್ಯವಾಗಿದೆ. ಹೀಗಾಗಿ ಬೇರೆಲ್ಲ ಯೋಚನೆ ಬಿಟ್ಟುಬಿಟ್ಟಿದ್ದೇನೆ. ನಾನು ತರಕಾರಿಗಳನ್ನು ಭುಜದಲ್ಲಿ ಹೊತ್ತು ತರುತ್ತೇನೆ. ಬಳಿಕ ನನ್ನ ಗಾಡಿಯಲ್ಲಿಟ್ಟು ಬೀದಿಗಳಲ್ಲಿ ವ್ಯಾಪಾರ ಮಾಡುತ್ತೇನೆ ಎಂದು ಪ್ರಸಾದ್​ ಬೋಸಲೆ ತಿಳಿಸಿದ್ದಾರೆ. ಕಳೆದ ಮಾರ್ಚ್​ನಿಂದ ಅವರು ಫುಟ್​ಬಾಲ್​ ಕೋಚಿಂಗ್​ ನಿಲ್ಲಿಸಿದ್ದಾರೆ. ಅವರು ಕೆಲಸ ನಿರ್ವಹಿಸುತ್ತಿದ್ದ ಶಾಲೆಯೂ ಅವರನ್ನು ಕೆಲಸದಿಂದ ತೆಗೆದುಹಾಕಿದೆ. ಮುಂಬೈ ಹೊರವಲಯದ ಕಾಂಡಿವಲಿಯಲ್ಲಿ ಅವರು ತರಕಾರಿ ಮಾರುತ್ತಿದ್ದಾರೆ.

    ಸಿದ್ಧೇಶ್​ ಶ್ರೀವಾಸ್ತವ ಅವರು ಎರಡು ಶಾಲೆಗಳಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದರು. ಜತೆಗೆ ಖಾಸಗಿ ಅಕಾಡೆಮಿಯಲ್ಲೂ ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಕೆಲ ತಿಂಗಳಿನಿಂದ ಅವರಿಗೆ ವೇತನವೂ ಸಿಕ್ಕಿಲ್ಲ. ಅವರ ತಂದೆಯೂ ನಿವೃತ್ತರಾಗಿದ್ದಾರೆ. ಹೀಗಾಗಿ ಕುಟುಂಬದ ನಿರ್ವಹಣೆಗಾಗಿ ಅವರು ಈಗ ಕಬಾಬ್​ ಮಾರಾಟ ಆರಂಭಿಸಿದ್ದಾರೆ. ಮುಂಬೈ ನಗರದಲ್ಲಿ ಒಟ್ಟಾರೆ 60-70ರಷ್ಟು ಕೋಚ್​ಗಳು ಈಗ ನಿರುದ್ಯೋಗಿಗಳಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.

    ಸಾಮ್ರಾಟ್​ ರಾಣಾ ಅವರೂ ಜೂನಿಯರ್​ ಐ-ಲೀಗ್​ ತಂಡಗಳಿಗೆ ಕೋಚ್​ ನೀಡುತ್ತಿದ್ದರು. ಆದರೆ ಈಗ ಅವರು ಡೆಲಿವರಿ ಬಾಯ್​ ಆಗಿದ್ದಾರೆ. ಝೊಮಾಟೊ ಮತ್ತು ಸ್ವಿಗ್ಗಿಯಲ್ಲೂ ಅವರು ಕೆಲಸಕ್ಕೆ ಪ್ರಯತ್ನಿಸಿದ್ದರು. ಆದರೆ ಅಲ್ಲಿ ಕೆಲಸ ಖಾಲಿ ಇಲ್ಲದ ಕಾರಣ ಹತ್ತಿರದ ರೆಸ್ಟೋರೆಂಟ್​ ಒಂದರಲ್ಲಿ ಡೆಲಿವರಿ ಬಾಯ್​ ಆಗಿ ಸೇರಿಕೊಂಡರು. ತಾನು ಹೊಂದಿದ್ದ ಸಣ್ಣ ಉಳಿತಾಯ ಮತ್ತು ತಾಯಿಯ ಚಿನ್ನ ಮಾರಿದ ಹಣವೆಲ್ಲ ಖರ್ಚಾದ ಬಳಿಕ ಅನಿವಾರ್ಯವಾಗಿ ಈ ಕೆಲಸಕ್ಕೆ ಬಂದೆ ಎಂದಿದ್ದಾರೆ ರಾಣಾ.

    2ನೇ ಟೆಸ್ಟ್​ನಲ್ಲಿ ಇಂಗ್ಲೆಂಡ್​ಗೆ ವಿಂಡೀಸ್​ ಆಘಾತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts