More

    ಪಂಚಮಿ ಹಬ್ಬಕ್ಕೆ ಬರದಂತೆ ಡಂಗುರ!

    ಬೆಳಗಾವಿ: ನಾಗರ ಪಂಚಮಿ ಹಬ್ಬ ‘ನಾಡಿಗೆ ದೊಡ್ಡದು’ ಎಂಬ ಮಾತಿದೆ. ಹೀಗಾಗಿ ಪಂಚಮಿ ಹಬ್ಬ ಬಂತೆಂದರೆ ಗಂಡನ ಮನೆಯಲ್ಲಿರುವ ಮಹಿಳೆಯರು ತವರಿಗೆ ಹೊರಡಲು ತುದಿಗಾಲ ಮೇಲೆ ನಿಂತಿರುತ್ತಾರೆ. ಆದರೆ, ಹೆಣ್ಣು ಮಕ್ಕಳದ್ದೇ ಹಬ್ಬವಾಗಿರುವ ಪಂಚಮಿಗೆ ಈ ಬಾರಿ ಕರೊನಾ ಅಡ್ಡಗಾಲು ಹಾಕಿದೆ.

    ‘ಪಂಚಮಿಗೆ ಬರುವ ಹೆಣ್ಮಕ್ಕಳು ಈ ವರ್ಷ ಊರುಗಳಿಗೆ ಬರತಕ್ಕದ್ದಲ್ಲ.. ಬರತಕ್ಕದ್ದಲ್ಲ… ಬರತಕ್ಕದ್ದಲ್ಲ..’ ಎಂದು ಬೆಳಗಾವಿ ಜಿಲ್ಲೆಯ ಕೆಲ ಹಳ್ಳಿಗಳಲ್ಲಿ ಡಂಗುರ ಸಾರಲಾಗುತ್ತಿದೆ..!

    ರಾಜ್ಯಾದ್ಯಂತ ಲಾಕ್‌ಡೌನ್ ತೆರವುಗೊಳಿಸಿದ್ದರೂ ಕರೊನಾ ಸೋಂಕು ಹುಟ್ಟಿಸಿರುವ ಭೀತಿಯಿಂದಾಗಿ ಮಾನವೀಯ ಸಂಬಂಧಗಳಿಗೂ ಅಂತರ ತಂದಿಡುತ್ತಿದೆ. ಪಂಚಮಿ ಹಬ್ಬದ ನೆಪಕ್ಕಾದರೂ ತವರಿಗೆ ಹೋಗಬೇಕೆಂದುಕೊಂಡವರಿಗೆ, ನಮ್ಮೂರಿನಲ್ಲಿ ನಮ್ಮನ್ನು ಒಳ ಬಿಟ್ಟುಕೊಳ್ಳುತ್ತಾರೋ ಇಲ್ಲವೋ ಎಂಬ ಭಾವನೆ ಕಾಡುತ್ತಿದೆ.

    ಸ್ವಯಂಪ್ರೇರಿತ ದಿಗ್ಬಂಧನ: ಹಳ್ಳಿಗಳಲ್ಲಿ ಈಗ ಕರೊನಾ ಸೋಂಕಿಗೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ, ಗ್ರಾಮೀಣ ಜನರು ಆತಂಕಕ್ಕೆ ಒಳಗಾಗಿದ್ದು, ಬೇರೆ ಊರುಗಳಲ್ಲಿರುವ ತಮ್ಮವರು ಊರಿಗೆ ಬಂದರೆ ನಮಗೂ ಎಲ್ಲಿ ಕರೊನಾ ವೈರಸ್ ತಗುಲಬಹುದೋ ಎಂಬ ಭಯ ಹಳ್ಳಿಗರನ್ನು ಕಾಡುತ್ತಿದೆ. ಹೀಗಾಗಿ ಹೊರ ಊರಿನಿಂದ ಯಾರೂ ಬರಬಾರದೆಂದು ತಮ್ಮೂರಿಗೆ ತಾವೇ ಸ್ವಯಂಪ್ರೇರಿತ ದಿಗ್ಬಂಧನ ಹಾಕಿಕೊಳ್ಳುತ್ತಿದ್ದಾರೆ.

    ನಗರ ಪ್ರದೇಶದವರಿಗೆ ಕಿರಿಕ್: ಹಳ್ಳಿಗಳಿಂದ ಹಳ್ಳಿಗೆ ಹೋಗುವವರಿಗೆ ಕೆಲವೊಮ್ಮೆ ರಿಯಾಯಿತಿ ಸಿಕ್ಕರೂ ಸಿಕ್ಕಿತೇನೋ. ಆದರೆ, ನಗರ ಪ್ರದೇಶದಿಂದ ಹಳ್ಳಿಗೆ ತೆರಳುವವರಿಗೆ ಮಾತ್ರ ಈ ಬಾರಿ ತೊಂದರೆ ಇದೆ. ಅದರಲ್ಲೂ ಅನ್ಯ ಜಿಲ್ಲೆಗಳಿಂದ ಇನ್ನೊಂದು ಜಿಲ್ಲೆಗೆ ತೆರಳುವವರಿಗಂತೂ ಊರು ಸೇರುವ ನಶೀಬು ಇಲ್ಲ. ಹಬ್ಬ ಇನ್ನಿತರ ನೆಪದಲ್ಲಿ ಬೇರೆ ಊರಿನಿಂದ ಬರಬೇಡಿ. ಬಂದರೆ, ದಂಡ ವಿಧಿಸುವುದಾಗಿಯೂ ಎಚ್ಚರಿಕೆ ನೀಡಿ ಡಂಗುರ ಸಾರುತ್ತಿದ್ದಾರೆ. ಡಂಗುರ ಸಾರಿದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದು, ಅದು ವೈರಲ್ ಆಗತೊಡಗಿದೆ.

    ಉಂಡಿ ಕಟ್ಟುವಂತಿಲ್ಲ: ನಗರ ಪ್ರದೇಶಗಳಲ್ಲಿನ ಜನರು ಪಂಚಮಿ ಹಬ್ಬಕ್ಕೆ ಉಂಡಿ (ಲಡ್ಡು) ಕಟ್ಟಬಹುದು. ಆದರೆ, ಹಳ್ಳಿಗಳಲ್ಲಿ ಸಂಪ್ರದಾಯಂತೆ ಮಳೆಗಾಲದಲ್ಲಿ ವಾರ ಬಿಡುವ ಪದ್ಧತಿ, ಉಂಡಿ ಕಟ್ಟುವುದು ಅಥವಾ ಕರಿದ ಪದಾರ್ಥ ತಯಾರಿಸುವುದಕ್ಕೂ ಕೆಲ ಗ್ರಾಮಗಳಲ್ಲಿ
    ನಿಷೇಧ ಹೇರಲಾಗಿದೆ. ಹಾಗಾಗಿ ತವರಿಗೆ ತೆರಳಲು ಹೆಣ್ಣು ಮಕ್ಕಳು ಮನಸ್ಸು ಮಾಡುತ್ತಿಲ್ಲ. ಅತ್ತ ಗ್ರಾಮದಲ್ಲಿರುವ ಸಹೋದರರು ಅಕ್ಕ-ತಂಗಿಯರನ್ನು ನಾಗರ ಪಂಚಮಿ ಹಬ್ಬಕ್ಕೆ ಕರೆಯುವ ಉತ್ಸಾಹದಲ್ಲೂ ಇಲ್ಲ.

    ತಪ್ಪು ತಿಳಿವಳಿಕೆಯಿಂದ ಹೊರಬನ್ನಿ: ನಗರ ಪ್ರದೇಶದ ಜನರಾಗಲಿ, ಗ್ರಾಮೀಣ ಭಾಗದವರೇ ಆಗಿರಲಿ ಕರೊನಾ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ವಹಿಸಬೇಕು. ಯಾವುದೇ ಅಗತ್ಯ ಕಾರ್ಯ ನಿಮಿತ್ತ ಹೊರ ಹೋಗುವವರು ಮಾಸ್ಕ್ ಧರಿಸಿ, ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಸ್ಯಾನಿಟೈಸರ್ ಜತೆಯಲ್ಲೇ ಇಟ್ಟುಕೊಳ್ಳಬೇಕು. ಮನೆಯಲ್ಲಿ ಯಾರದಾದರೂ ಕರೊನಾದಿಂದ ಮೃತಪಟ್ಟರೆ, ಆ ಮನೆಯವರು ತಾವೇ ಸ್ವಯಂ ಕ್ವಾರಂಟೈನ್ ಆಗಬೇಕು. ಇನ್ನು ಊರಿಗೆ ಬಾರದಂತೆ ಪ್ರವೇಶ ತಡೆಯುವುದು ಒಂದು ಭಾವುಕ ಹಾಗೂ ಸಮೂಹ ಸನ್ನಿ ನಡವಳಿಕೆಯಾಗಿದೆ. ಹೀಗಾಗಿ ಮಾನವೀಯ ನೆಲೆಗಟ್ಟಿನಲ್ಲಿ ಯೋಚಿಸಬೇಕಿದೆ. ವೈರಸ್ ಕುರಿತಾಗಿ ಇರುವ ತಪ್ಪು ತಿಳಿವಳಿಕೆಯಿಂದ ಎಲ್ಲರೂ ಹೊರಬರಬೇಕಿದೆ ಎನ್ನುತ್ತಾರೆ ಮನೋತಜ್ಞೆ ಡಾ. ಸೋನಾಲಿ ಸರ್ನೋಬತ್.

    ಬೆಳಗಾವಿ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಪಂಚಮಿ ಹಬ್ಬ ಆಚರಿಸದಂತೆ ಡಂಗುರ ಸಾರುತ್ತಿದ್ದಾರೆ. ಹೆಣ್ಣು ಮಕ್ಕಳು ತವರಿಗೆ ಬಾರದಂತೆ ಎಚ್ಚರಿಕೆಯನ್ನೂ ನೀಡುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಹಾಗೂ ದೈಹಿಕವಾಗಿ ಸದೃಢ ಆರೋಗ್ಯ ಹೊಂದಿರುವವರೂ ಸಹ ಇಂಥ ನಿರ್ಧಾರದಿಂದ ಹಬ್ಬದ ಆಚರಣೆಯಿಂದ ವಂಚಿತರಾಗುವಂತಾಗಿದೆ.
    | ಮಲ್ಲಿಕಾರ್ಜುನ ಚೌಕಸಿ ವಕೀಲರು, ಬಡಿಗವಾಡ

    | ಮಲ್ಲಿಕಾರ್ಜುನ ತಳವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts