More

    ಪಂಚಮಸಾಲಿ 2ಎ ಮೀಸಲಾತಿ ವಿಚಾರ, ಡಿ.13 ರಂದು ಬೆಳಗಾವಿಯಲ್ಲಿ ಧರಣಿ-ಮುತ್ತಿಗೆ

    ವಿಜಯಪುರ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟದ ಮುಂದುವರಿದ ಭಾಗವಾಗಿ ಡಿ. 13 ರಂದು ಬೆಳಗಾವಿಯಲ್ಲಿ ಧರಣಿ ಹಾಗೂ ಸುವರ್ಣ ಸೌಧ ಮುತ್ತಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ. ಪಾಟೀಲ ಹೇಳಿದರು.

    ಅಂದು ಬೆಳಗ್ಗೆ 10ಕ್ಕೆ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಜಮಾಯಿಸಿ ಧರಣಿ ನಡೆಸಲಾಗುವುದು. ಬಳಿಕ ಸುವರ್ಣ ಸೌಧ ಚಲೋ ಹಮ್ಮಿಕೊಂಡು, ಅಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು. ಕೂಡಲ ಸಂಗಮದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೂಡ ಭಾಗವಹಿಸಲಿದ್ದಾರೆಂದು ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

    ಈ ಹಿಂದೆ ಬೊಮ್ಮಾಯಿ ಸರ್ಕಾರದಲ್ಲಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಆಗ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕೊಡಬೇಕೆನ್ನುವಷ್ಟರಲ್ಲಿಯೇ ಸರ್ಕಾರ ಪತನಗೊಂಡಿತು. ನಂತರ ಕಾಂಗ್ರೆಸ್ ನ್ಯಾಯ ಕೊಡಿಸಲಿದೆ ಎಂಬ ಭರವಸೆ ಮೇರೆ ಪಂಚಮಸಾಲಿ ಸಮುದಾಯ ಕಾಂಗ್ರೆಸ್ ಬೆಂಬಲಿಸಿತು. ಆದರೆ, ಸಮಾಜದ 11 ಶಾಸಕರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮಾಜಕ್ಕೆ ನ್ಯಾಯ ಕೇಳಲಾಗಿ ನಕಾರಾತ್ಮಕ ಉತ್ತರ ಬಂದಿದೆ. ಆ ಮೂಲಕ ಅವರ ಜಾತ್ಯತೀತತೆಯನ್ನು ಪ್ರಶ್ನಿಸುವಂತಾಗಿದೆ ಎಂದರು.

    ಈಗಾಗಲೇ ಸಿದ್ದರಾಮಯ್ಯ ಅವರು ‘2 ಎ’ ಅಡಿಯಿರುವ ಸಮಾಜವನ್ನು ಎಸ್‌ಟಿಗೆ ಶಿಫಾರಸ್ಸು ಮಾಡಿದ್ದಾರೆ. ಅದಕ್ಕೆ ಸಂತೋಷ ಇದೆ. ಆದರೆ ಪಂಚಮಸಾಲಿ ಸಮಾಜವನ್ನು ‘2 ಎ’ ಗೆ ಶಿಫಾರಸ್ಸು ಮಾಡದೇ ಇರುವುದು ಬೇಸರ ತರಿಸಿದೆ. ಹೀಗಾಗಿ ಹೋರಾಟ ಅನಿವಾರ್ಯವಾಗಿದೆ. ಅಂದು ಜಿಲ್ಲೆಯಿಂದ ಸುಮಾರು 10 ಸಾವಿರ ಜನ ಭಾಗವಹಿಸಲಿದ್ದಾರೆ. ಪ್ರತೀ ತಾಲೂಕಿನಿಂದ ಇಪ್ಪತ್ತು ವಾಹನಗಳು ಹೊರಡಲಿವೆ ಎಂದರು.

    ಮುಖಂಡ ಎಂ.ಎಸ್. ರುದ್ರಗೌಡರ ಮಾತನಾಡಿ, ಶಾಸಕ ಬಸನಗೌಡ ಪಾಟೀಲ ಯತ್ನಾಳರಿಂದಾಗಿ ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಬಲ ಬಂದಿದೆ. ಅಂತ ನಾಯಕನ ಬಗ್ಗೆ ನಮ್ಮದೇ ಸಮಾಜದ ಸುರೇಶ ಬಿರಾದಾರ ಟೀಕಿಸಿರುವುದು ಖಂಡನೀಯ ಎಂದರು.

    ಸುರೇಶ ಬಿರಾದಾರ ಹಾಗೂ ಅಂಥ ಮನೋಭಾವರಿಂದಲೇ ಸಮಾಜಕ್ಕೆ ಹಿನ್ನಡೆಯಾಗುತ್ತಿದೆ. ಯತ್ನಾಳರಿಗೆ ಚುನಾವಣೆಯಲ್ಲಿ 43 ಸಾವಿರ ಮತಗಳು ಕೈತಪ್ಪಿದವೇಕೆ? ಎಂದು ಬಿರಾದಾರ ಪ್ರಶ್ನಿಸಿದ್ದಾರೆ. ಆದರೆ, ನಿಮ್ಮಂಥವರಿಂದಲೇ ಕೈ ತಪ್ಪಿವೆ ಎಂಬುದು ನೆನಪಿರಲಿ. ನೀವು ಎಷ್ಟೇ ಬೈದರೂ ಯತ್ನಾಳರ ಸರಿಸಮ ನಿಲ್ಲಲಾಗಲ್ಲ. ನಿಮ್ಮ ನಡೆಯಿಂದ ಸಮಾಜಕ್ಕೆ ನೋವಾಗುತ್ತಿದೆ. ಇದೇ ವರ್ತನೆ ಮುಂದುವರಿದರೆ ಮುಂದೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

    ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮಾತನಾಡಿ, ಶಾಸಕ ಯತ್ನಾಳರ ಮೇಲೆ ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ. ಅವರು ಯಾವುದೇ ಮುಸಲ್ಮಾನರಿಗೆ ಟೆಂಡರ್ ಕೊಟ್ಟಿಲ್ಲ. ಯಾರು ಕಡಿಮೆ ದರಕ್ಕೆ ಬೇಡಿಕೆ ಸಲ್ಲಿಸಿರುತ್ತಾರೋ ಅವರಿಗೆ ಟೆಂಡರ್ ಆಗಿರುತ್ತದೆ. ಅದರಲ್ಲಿ ಯತ್ನಾಳರ ಪಾತ್ರವೇನಿಲ್ಲ. ಅವರ ಆಪ್ತರು ಸ್ವಂತ ಬಲದ ಮೇಲೆ ಆಸ್ತಿ ಮಾಡಿದ್ದಾರೆ ವಿನಃ ಅಕ್ರಮವಾಗಿ ಅಲ್ಲ. ಹೀಗಾಗಿ ವೃಥಾ ಆರೋಪ ಸಲ್ಲ ಎಂದರು.
    ಮುಖಂಡರಾದ ಶ್ರೀಶೈಲ ಬುಕ್ಕಣ್ಣಿ, ಕುಮಾರಣ್ಣ ಗಡಗಿ, ನಿಂಗನಗೌಡ ಸೋಲಾಪುರ, ಬಿ.ಎಸ್. ಮಾಲಿಪಾಟೀಲ, ಕಿರಣ ಪಾಟೀಲ, ಚಂದ್ರು ಚೌಧರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts