More

  ಮೀಸಲಾತಿ ಹೋರಾಟ ಮುಂದುವರಿಕೆ

  ಶಿವಮೊಗ್ಗ: ಮೀಸಲಾತಿ ಹೋರಾಟ ಮುಂದುವರಿಯಲಿದ್ದು, ಮಾ.3ರಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಇದರಲ್ಲಿ ಕನಿಷ್ಠ 50 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದು ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

  ಪಂಚಮಸಾಲಿ, ಗೌಡ, ಮಲೆಗೌಡ, ದೀಕ್ಷೆ ಲಿಂಗಾಯತರಿಗೆ 2ಎ ಮೀಸಲಾತಿ ಹಾಗೂ ಲಿಂಗಾಯತ ಉಪಸಮಾಜಗಳಿಗೆ ಒಬಿಸಿ ಮೀಸಲು ನೀಡುವಂತೆ ಒತ್ತಾಯಿಸಿ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಸಂಖ್ಯೆಯ ದೃಷ್ಟಿಯಿಂದ ಶಿವಮೊಗ್ಗ ಪ್ರತಿಭಟನೆ ಸಣ್ಣದು ಎನಿಸಬಹುದು. ಆದರೆ ಇಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಅದರದ್ದೇ ಆದ ಮಹತ್ವವಿದೆ ಎಂದರು.
  ಮೀಸಲಾತಿಗಾಗಿ ಹಲವು ಬಾರಿ ಹೋರಾಟ ಮಾಡಿದ್ದೇವೆ. ಮಠ ಬಿಟ್ಟು ಸಮಾಜದ ಒಳಿತಿಗಾಗಿ ಹಳ್ಳಿಗಳನ್ನು ಸುತ್ತಿದ್ದೇವೆ. ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕಿಗೂ ಭೇಟಿ ನೀಡಿರುವೆ. ಜನರು ಉತ್ತಮವಾಗಿ ಸ್ಪಂದಿಸಿದ್ದಾರೆ. ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ಸಮುದಾಯಕ್ಕೆ ಮೀಸಲಾತಿ ದೊರೆಯಬೇಕೆಂಬುದೇ ನಮ್ಮ ಗುರಿ ಎಂದರು.
  ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿದ್ದೆವು. ಆದರೆ ಕಾಂಗ್ರೆಸ್ ನಾಯಕರು ಈಗಷ್ಟೇ ನಮ್ಮ ಸರ್ಕಾರ ಬಂದಿದೆ, ಸ್ವಲ್ಪ ಸಮಯ ನೀಡಿ ಎಂದಿದ್ದರು. ಆದರೆ ಇಷ್ಟು ದಿನ ಕಳೆದರೂ ಆ ಬಗ್ಗೆ ಪ್ರಸ್ತಾಪಿಸುತ್ತಲೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
  ಯತ್ನಾಳ್ ಪರ ಬ್ಯಾಟಿಂಗ್: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಾಮಾಣಿಕ ಹಾಗೂ ಭ್ರಷ್ಟಾಚಾರರಹಿತ ರಾಜಕಾರಣಿ. ಅವರು ಉನ್ನತ ಹುದ್ದೆ ಪಡೆಯಬೇಕಿತ್ತು. ಆದರೆ ಅವರನ್ನು ತುಳಿಯುವ ಯತ್ನ ನಡೆದಿದೆ. ಅಧಿವೇಶನ ನಡೆಯುತ್ತಿದ್ದರೂ ಯತ್ನಾಳ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.
  ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ಸಾಗರ ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಪ್ರಮುಖರಾದ ಶಿವಕುಮಾರ್, ಪ್ರೊ. ವಿಜಯಕುಮಾರ್, ಅಜಯಕುಮಾರ್, ಮಹೇಶ್ವರಪ್ಪ, ಬಸವನಗೌಡ್ರು, ರುದ್ರೇಗೌಡ, ಸತೀಶ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
  ಇದಕ್ಕೂ ಮುನ್ನ ಚೌಕಿ ಮಠದಲ್ಲಿ ಶ್ರೀಗಳು ಇಷ್ಟಲಿಂಗ ಪೂಜೆ ನೆರವೇರಿಸಿದರು. ನಂತರ ಶಿವಪ್ಪನಾಯಕ ವೃತ್ತದಿಂದ ಗೋಪಿ ವೃತ್ತದವರೆಗೂ ಮೆರವಣಿಗೆಯಲ್ಲಿ ಬಂದು ಪ್ರತಿಭಟನಾ ಸಭೆಯಲ್ಲಿ ಭಾಗಿಯಾದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts