More

    ಪಂಪ ಸಾಹಿತ್ಯ ಭವನಕ್ಕೆ ಅನುದಾನದ ಅಭಾವ

    ಲಕ್ಷ್ಮೇಶ್ವರ: ಕನ್ನಡ ಸಾಹಿತ್ಯ ಪರಿಷತ್​ನಿಂದ ನಿರ್ವಣವಾಗುತ್ತಿರುವ ಆದಿ ಕವಿ ಪಂಪ ಸಾಹಿತ್ಯ ಭವನವು ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದೆ.

    50 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ವಣಕ್ಕೆ 2019ರ ಜೂ. 17ರಂದು ಕಸಾಪ ರಾಜ್ಯ ಘಟಕದ ಅಧ್ಯಕ್ಷ ಡಾ. ಮನು ಬಳಿಗಾರ ಭೂಮಿ ಪೂಜೆ ನೆರವೇರಿಸಿದ್ದರು. ಪಟ್ಟಣದ ಹುಬ್ಬಳ್ಳಿ ರಸ್ತೆಗೆ ಹೊಂದಿಕೊಂಡಿರುವ ಈಶ್ವರ ನಗರದ ಪುರಸಭೆ ನಿವೇಶನದಲ್ಲಿ 10 ಲಕ್ಷ ರೂ. ಅನುದಾನದಲ್ಲಿ ಕಾಮಗಾರಿ ಜವಾಬ್ದಾರಿ ಹೊತ್ತ ನಿರ್ವಿುತಿ ಕೇಂದ್ರದವರು ಪಾಯ ಹಾಕಿ, ಅರೆಬರೆ ಕಾಲಂ ತುಂಬಿ ಕೈ ತೊಳೆದುಕೊಂಡಿದ್ದಾರೆ. ಈ ನಿವೇಶನದಲ್ಲಿ ಈಗ ಆಳೆತ್ತರ ಕಸ ಬೆಳೆದು ನಿರ್ಲಕ್ಷಿತ ಪ್ರದೇಶವಾಗಿ ಮಾರ್ಪಟ್ಟಿದೆ.

    ಭವನದ ನಿರ್ಮಾಣ ಕಾರ್ಯ ಸ್ಥಗಿತಗೊಂಡು ಒಂದೂವರೆ ವರ್ಷ ಕಳೆದರೂ ಬುನಾದಿಯಿಂದ ಮೇಲೇಳುವ ಯಾವ ಲಕ್ಷಣಗಳೂ ಗೋಚರಿಸುತ್ತಿಲ್ಲ. ಭೂಮಿ ಪೂಜೆ ನಿರ್ವಣದ ವೇಳೆ ಕಸಾಪ ಅಧ್ಯಕ್ಷ ಹಾಗೂ ಶಾಸಕ ರಾಮಣ್ಣ ಲಮಾಣಿ ಅವರು ಭವನ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ಅನುದಾನ ಕಲ್ಪಿಸುವ ಭರವಸೆ ನೀಡಿದ್ದರು. ಆದರೆ, ಅನುದಾನಕ್ಕಾಗಿ ಈ ಭಾಗದ ಸಂಸದರು, ವಿಧಾನ ಪರಿಷತ್ ಸದಸ್ಯರು ಸೇರಿ ಸಂಬಂಧಪಟ್ಟ ಅನೇಕರಿಗೆ ಮನವಿ ಪತ್ರ ನೀಡಲಾಗಿತ್ತು. ಆದರೆ, ಈವರೆಗೂ ನಯಾಪೈಸೆ ಅನುದಾನ ಲಭ್ಯವಾಗಿಲ್ಲ.

    2005-06ರಲ್ಲಿ ಕಸಾಪ ತಾಲೂಕು ಅಧ್ಯಕ್ಷರಾಗಿದ್ದ ಪ್ರೇಮಕ್ಕ ಬಿಂಕದಕಟ್ಟಿ ಹಾಗೂ ಪ್ರೊ. ಸಿ.ವಿ. ಕೆರಿಮನಿ ಅವರು ಪುರಸಭೆಯಿಂದ ನಿವೇಶನ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 10 ವರ್ಷಗಳ ನಂತರ ಜಿ.ಎಸ್. ಗುಡಗೇರಿ ಅವರು ತಾಲೂಕು ಕಸಾಪ ಅಧ್ಯಕ್ಷರಾಗಿದ್ದ ವೇಳೆ ಈ ನಿವೇಶನದ ಸರಿಯಾದ ದಾಖಲೆಗಳನ್ನು ಸಿದ್ಧಪಡಿಸಿ ಭವನ ನಿರ್ವಣಕ್ಕೆ ಅನುದಾನಕ್ಕಾಗಿ ಮುಂದಡಿ ಇಟ್ಟಿದ್ದರು. 2019ರಲ್ಲಿ ತಾಲೂಕಾಧ್ಯಕ್ಷರಾಗಿ ಆಯ್ಕೆಯಾದ ಡಾ. ಜಯಶ್ರೀ ಹೊಸಮನಿ ಅವರು 10 ಲಕ್ಷ ರೂ. ಅನುದಾನದ ತಂದು ಭೂಮಿಪೂಜೆ ನೆರವೇರಿಸುವಲ್ಲಿ ಯಶಸ್ವಿಯಾಗಿದ್ದರು.

    ಇದೀಗ ಮತ್ತೆ ಅನುದಾನದ ಕೊರತೆಯಿಂದ ಕನ್ನಡ ಸಾಹಿತ್ಯ ಭವನ ನಿರ್ಮಾಣ ಕಾರ್ಯ ನನೆಗುದಿಗೆ ಬಿದ್ದಿದೆ. 15 ವರ್ಷಗಳಿಂದ ಅನೇಕರ ಪ್ರಯತ್ನದ ಫಲವಾಗಿಯೂ ಪುಲಿಗೆರೆ ಪಂಪನ ನೆಲದಲ್ಲಿ ಸಾಹಿತ್ಯ ಭವನ ನಿರ್ಮಾಣ ಪೂರ್ಣಗೊಳ್ಳದಿರುವುದು ದುರ್ದೈವದ ಸಂಗತಿಯಾಗಿದೆ. ಇದು ಕನ್ನಡ ಅಭಿಮಾನಿಗಳು, ಸಾಹಿತಿಗಳು, ಕಸಾಪ ಪದಾಧಿಕಾರಿಗಳಲ್ಲಿ ಬೇಸರ ಮೂಡಿಸಿದೆ.

    ಕನ್ನಡ ಸಾಹಿತ್ಯ, ಸಂಗೀತ, ಕಲೆ, ನಾಟಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ ನೆಲದಲ್ಲಿ 50 ಲಕ್ಷ ರೂ. ವೆಚ್ಚದ ಕನ್ನಡ ಭವನ ನಿರ್ವಣವು ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿರುವುದು ದುರ್ದೈವ ಸಂಗತಿ. ಆದ್ದರಿಂದ ಈ ಭಾಗದ ಶಾಸಕರು, ಸಂಸದರು, ವಿಪ ಸದಸ್ಯರು ಅನುದಾನ ಕಲ್ಪಿಸಿ ಕನ್ನಡದ ಕೆಲಸಕ್ಕೆ ಕೈ ಜೋಡಿಸಬೇಕು.
    | ಎಸ್.ವಿ. ಕಮ್ಮಾರ, ಹಿರಿಯ ಸಾಹಿತಿ

    ಲಕ್ಷ್ಮೇಶ್ವರದಲ್ಲಿ ನಿರ್ವಣಗೊಳ್ಳುತ್ತಿರುವ ಕನ್ನಡ ಸಾಹಿತ್ಯ ಭವನ ನಿರ್ವಣಕ್ಕೆ ಪರಿಷತ್ತಿನ 10 ಲಕ್ಷ ರೂ. ಅನುದಾನದಲ್ಲಿ ಪಾಯ ಹಾಕಿ, ಕಾಲಂ ಅಳವಡಿಸಿದ ಬಗ್ಗೆ ದಾಖಲೆ ಸಲ್ಲಿಸಿ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಸಲ್ಲಿಸಲಾಗಿದೆ. ಶಾಸಕ ರಾಮಣ್ಣ ಲಮಾಣಿ ಅವರು 10 ಲಕ್ಷ ರೂ. ಅನುದಾನಕ್ಕೆ ಜಿಲ್ಲಾಧಿಕಾರಿಗಳಿಗೆ ಒಪ್ಪಿಗೆ ಪತ್ರ ನೀಡಿದ್ದಾರೆ. ಹೆಚ್ಚಿನ ಅನುದಾನಕ್ಕಾಗಿ ವಿಧಾನ ಪರಿಷತ್ ಸದಸ್ಯರಿಗೆ ಮನವಿ ಮಾಡಲಾಗಿದೆ. ಕರೊನಾ ಹಿನ್ನೆಲೆ ಅನುದಾನದ ಲಭ್ಯತೆಯ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿದೆ. ಕಾಮಗಾರಿ ಪುನರಾರಂಭಿಸಲು ನಿರಂತರ ಪ್ರಯತ್ನ ನಡೆದಿದೆ.
    | ಡಾ. ಶರಣು ಗೋಗೇರಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts